ಪಂಚ ಗ್ಯಾರಂಟಿಗಳೊಂದಿಗೆ ಎಲ್ಲ ಅಭಿವೃದ್ಧಿ ಕಾರ್ಯಗಳ ಮುಂದುವರಿಕೆ. ರಾಜ್ಯ ಅಭಿವೃದ್ಧಿಗೆ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

Source: SO News | By Laxmi Tanaya | Published on 10th September 2023, 12:11 PM | State News | Don't Miss |

ಧಾರವಾಡ : ಬಡವರ ವಿರೋಧಿಗಳು ಪಂಚ ಗ್ಯಾರಂಟಿ ಅನುಷ್ಠಾನ ವಿಷಯದಲ್ಲಿ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಆದರೆ ಸರಕಾರ ಆರ್ಥಿಕವಾಗಿ ಸುಸ್ಥಿರವಾಗಿದ್ದು, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗಿದೆ.  ಪಂಚಗ್ಯಾರಂಟಿಗಳು ಸೇರಿ ರಾಜ್ಯದ ಅಭಿವೃದ್ಧಿಗಾಗಿ ಮುಂದಿನ ವರ್ಷ ಸುಮಾರು 3 ಲಕ್ಷ 80 ಸಾವಿರ ಕೋಟಿ ರೂ. ಗಳ ಬಜೆಟ್ ಮಂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು   ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023 ಉದ್ಘಾಟಿಸಿ, ಮಾತನಾಡಿದರು.

ಪಂಚಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿಗೆ ಹಣದ ಕೊರತೆ ಆಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ. ಸರಕಾರದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರೆಯಲಿವೆ. ಪ್ರಸಕ್ತ ವರ್ಷ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 32 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಮುಂದಿನ ವರ್ಷದಿಂದ ಪ್ರತಿವರ್ಷ ಪಂಚ ಗ್ಯಾರಂಟಿಗಳ ಜಾರಿಗೆ ಸುಮಾರು 56 ಸಾವಿರ ಕೋಟಿ ರೂ.ಗಳು ಬೇಕಾಗುತ್ತದೆ. ಈ ಎಲ್ಲ ಅಗತ್ಯ ಹಣ ಹೊಂದಿಸಲು ಸರಕಾರ ಸಶಕ್ತವಾಗಿದೆ. ಯಾರಿಗೂ ಭಯಬೇಡ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪಂಚ ಗ್ಯಾರಂಟಿಗಳ ವೆಚ್ಚ ಸೇರಿ ಮುಂದಿನ ವರ್ಷದ ಬಜೆಟ್ ಸುಮಾರು 380 ಲಕ್ಷ ಕೋಟಿಗಳಾಗುವ ಅಂದಾಜಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇಂದು ಶೇ.60 ರಷ್ಟು ಜನ ಕೃಷಿ ಮಾಡುತ್ತಿದ್ದಾರೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ ಸಾಕಷ್ಟು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವುದರಿಂದ ಮಳೆ ಕೊರತೆಯಾಗಿ ಸಮಸ್ಯೆ ಆಗುತ್ತಿದೆ. ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು ಎಂದರು.

ಯುವಕರು, ಹೆಚ್ಚುಜನ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ವಿವಿಗಳು ಕಾರ್ಯ ಮಾಡಬೇಕು. ವಿಶ್ವವಿದ್ಯಾಲಯದ ಸಂಶೋಧನೆ, ತಾಂತ್ರಿಕತೆಗಳು ರೈತರ ಜಮೀನುಗಳಿಗೆ ತಲುಪಿದರೆ ಮಾತ್ರ ಸಾರ್ಥಕವಾಗುತ್ತದೆ.  ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯುವಂತೆ ಆಕರ್ಷಕವಾಗಿ ಸಂಘಟಿಸಬೇಕು ಎಂದರು.

ಒಣ ಬೇಸಾಯ ಮಾಡುವ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಒಣಬೇಸಾಯ ಮಾಡಲು ಅಗತ್ಯ ಸುಧಾರಿತ ಹೊಸ ತಳಿಗಳ ಸಂಶೋಧನೆ ಮಾಡಬೇಕು. ಬಿತ್ತಿದ ಯಾವುದೇ ಮುಖ್ಯ ಬೆಳೆ ಹಾಳಾದರೆ, ಅದಕ್ಕೆ ಪರ್ಯಾಯವಾದ ತಕ್ಷಣದ ಬೆಳೆಗಳನ್ನು ಮಾಡಬೇಕು ಎಂಬುದರ ಬಗ್ಗೆ ವಿಜ್ಞಾನಿಗಳು ಆಸಕ್ತಿ ವಹಿಸಿ, ಸಂಶೋಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಲ್ಯಾಬ್ ಟು ಲ್ಯಾಂಡ್ ಅಂದರೆ ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು. ಅಂದಾಗ ಮಾತ್ರ ವಿಜ್ಞಾನಿಗಳ ಸಂಶೋಧನೆಗಳು ಫಲಪ್ರದವಾಗುತ್ತದೆ ಎಂದು ಅವರು ಹೇಳಿದರು.

ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಯೊಜನೆಗಳ ಮರುಜಾರಿ ಘೋಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ರೈತರು ಹೆಚ್ಚಿಗೆ ಇರುವುದರಿಂದ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರಗಳನ್ನು ರೈತರಿಗೆ ನೀಡಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೋರಮಂಗಲ ಚಲ್ಲಘಟ್ಟ(ಕೆಸಿ) ವ್ಯಾಲಿ ಮೂಲಕ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ, ನೀರಾವರಿಗೆ ಅನುಕೂಲ ಮಾಡಲಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ.3 ರಷ್ಟು ಬಡ್ಡಿ ನಿಗದಿಗೊಳಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಹಾದಾಯಿ ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಿದರೆ ಯೋಜನೆ ಅನುಷ್ಠಾನ ಸುಲಭ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇಂದ್ರ ಸರಕಾರ ಗೋವಾ ಸರಕಾರದೊಂದಿಗೆ ಸಮಾಲೋಚಿಸಿ, ಪರಿಸರ ಮತ್ತು ಅರಣ್ಯ ಸಂಬಂಧಿಸಿದ ತಕರಾರು ಪರಿಹರಿಸಿದರೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸಲಿದೆ. ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಅವರು ಹೇಳಿದರು.

ಬೆಣ್ಣಿಹಳ್ಳ ಯೋಜನೆಯನ್ನು ಡಿಪಿಆರ್ ಮಾಡಿಸಿ, ಶೀಘ್ರವಾಗಿ ಜಾರಿಗೊಳಿಸಲಾಗುವುದು. ಧಾರವಾಡ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು 

ಕೃಷಿ ಸಚಿವ ಎನ್. ಚಲುರಾಯಸ್ವಾಮಿ ಅವರು ಮಾತನಾಡಿ, ಅನೇಕ ವೀರರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ. ರೈತರು ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ರಾಜ್ಯ ಸರಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದಾರೆ ಎಂದು ಅವರು ಹೇಳಿದರು.

ಸರಕಾರದ ಆರ್ಥಿಕ ಸುರಕ್ಷತೆ ಕಾಪಾಡಿಕೊಂಡು ಬಡವರ, ಹಿಂದುಳಿದವರ, ರೈತರ, ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಕಾರ ಅನುಷ್ಠಾನಗೊಳಿಸಿದೆ. 

 ಕೃಷಿಭಾಗ್ಯ ಯೋಜನೆ ಮುಂದುವರಿಕೆ ಸರಕಾರ ಆದೇಶಿಸಿದೆ. ಧಾರವಾಡ ಕೃಷಿ ವಿವಿಯು, ರಾಷ್ಟ್ರದ 10 ಉತ್ತಮ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾನಪಡೆದಿದೆ. ಸಂಶೋಧನೆ, ಕೃಷಿ ತಾಂತ್ರಿಕತೆ, ಉತ್ತಮ ಬೀಜ ತಳಿಗಳ ಬಿಡುಗಡೆ ಮಾಡುವ ಮೂಲಕ ರೈತರ ಕಣ್ಮನಿಯಾಗಿದೆ ಎಂದರು. ರಾಜ್ಯ ಸರಕಾರ ರೈತರ ಬೆಳೆವಿಮೆಗಾಗಿ ರೂ.900 ಕೋಟಿ ಮೀಸಲಿಡಲಾಗಿದೆ. ಇದರಿಂದ ಬೆಳೆವಿಮೆ ಮಾಡಿಸಿರುವ ಸುಮಾರು 16 ಲಕ್ಷ ರೈತರು ಲಾಭ ಪಡೆಯಲಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದರು.

ಈ ವರ್ಷ ಸಿರಿಧಾನ್ಯ ಅಂತರಾಷ್ಟ್ರೀಯ ವರ್ಷವಾಗಿರುವುದರಿಂದ  ರಾಜ್ಯ ಸರಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು. ಕಬ್ಬು ಹಾಗೂ ಇತರ ಬೆಳೆಗಳ ಕಟಾವು ತಾಂತ್ರಿಕತೆ ಸುಧಾರಣೆಗಾಗಿ ಐಟಿ ಹಬ್ ಸ್ಥಾಪನೆಗೆ ರಾಜ್ಯ ಸರಕಾರ ರೂ.50 ಕೋಟಿ ಮೀಸಲಿಡಲಾಗಿದೆ. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕಗಳು ಕೊರತೆ ಅಗದಂತೆ ಮುನ್ನಚ್ಚರಿಕೆ ವಹಿಸಿ, ಅಗತ್ಯ ದಾಸ್ತಾನು ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಮಳೆ ಕೊರತೆಯಿಂದಾಗಿ ಮುಂಗಾರು ವಿಫಲವಾಗಿದ್ದು, ಬರಗಾಲ ಘೋಷಣೆಗೆ ಸರಕಾರ ಉಪಸಮಿತಿ ರಚಿಸಿದೆ. ಈಗಾಗಲೇ 196 ತಾಲೂಕುಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಾಗಿದೆ. ವರದಿ ಪರಿಶೀಲಿಸಿ, ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಷ್ಟು ತಾಲೂಕುಗಳು ಬರಪೀಡಿತ ಎಂದು ಸರಕಾರ ಘೋಷಿಸಲಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಮಾತನಾಡಿ,  ರಾಜ್ಯ ಸರಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರಿಗೆ ಅನಕೂಲ ಮಾಡಿದೆ. ಪ್ರಸ್ತುತ ರಾಜ್ಯ ಸರಕಾರ ರೈತರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ ಮತ್ತು 10 ರಿಂದ 15 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 25 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ರೈತರ, ಬಡವರ ಶ್ರೇಯೋಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಕೃಷಿವಿವಿ ಸಮ ಕುಲಾಧಿಪತಿ ಎನ್. ಚಲುವರಾಯಸ್ವಾಮಿ ಅವರು ಕೃಷಿ ವಿವಿಯ ವಿಶೇಷ ಪ್ರಕಟಣೆಗಳನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಿದರು. ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆಯರಿಗೆ, ಪ್ರಗತಿಪರ ರೈತರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ವಿತರಿಸಿ, ಗೌರವಿಸಿದರು.

ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಬಸವರಾಜ ಶಿವಣ್ಣನವರ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ, ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೆÇಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿ.ಪಂ. ಸಿಇಒ ಸ್ವರೂಪ. ಟಿ.ಕೆ., ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋ. ಎಸ್. ಎಸ್. ಅಂಗಡಿ ವಂದಿಸಿದರು. ಡಾ.ಸುರೇಖಾ ಸಂಕನಗೌಡರ ಕಾರ್ಯಕ್ರಮ ನಿರೂಪಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...