ಕಾಂಗ್ರೆಸ್ ಸಮಾವೇಶ: ಮಂಗಳೂರು ಉತ್ತರದಿಂದ 150ಕ್ಕೂ ಅಧಿಕ ಬಸ್‌ಗಳಲ್ಲಿ ಆಗಮಿಸಿದ ಕಾರ್ಯಕರ್ತರು
ಮಂಗಳೂರು: ಅಡ್ಯಾರ್‌ನಲ್ಲಿಂದು ಆಯೋಜಿ ಸಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾ ವೇಶಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ 150ಕ್ಕೂ ಹೆಚ್ಚಿನ ಬಸ್ ಹಾಗೂ ವಿವಿಧ ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್, ಕಾವೂರು, ವಾಮಂಜೂರು ಸೇರಿದಂತೆ ಹಲವೆಡೆಯ ಕಾರ್ಯಕರ್ತರು ಹಾಗೂ ಬೆಂಬಲಿಗರು 150 ಬಸ್‌ಗಳು, 250ಕ್ಕೂ ಹೆಚ್ಚಿನ ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಇನಾಯತ್ ಅಲಿಯವರ ಮಂಗಳೂರಿನ ಕೆಪಿಟಿ ಕಚೇರಿ ಬಳಿ ಜಮಾಯಿಸಿದರು. ಬಳಿಕ ಸಮಾವೇಶ ಆಯೋಜಿಸಿದ್ದ ಸಹ್ಯಾದ್ರಿ ಕಾಲೇಜು ಮೈದಾನದತ್ತ ಪ್ರಯಾಣಿಸಿದರು
ಇನಾಯತ್ ಎಂಎಲ್‌ಸಿಯಾಗಲಿ ಈ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡ ಕಾರ್ಯಕರ್ತರು, “ಚುನಾವಣೆಯಲ್ಲಿ ಸೋತರೆ ಕ್ಷೇತ್ರದತ್ತ ಮುಖ ಮಾಡದ ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ, ಇನಾಯತ್ ಅಲಿ ಇದಕ್ಕೆ ಅಪವಾದದಂತಿದ್ದಾರೆ. ಅವರು ಕ್ಷೇತ್ರದಲ್ಲೇ ಇದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಬಲವರ್ಧನೆ ಮಾಡಿ ಮುನ್ನಡೆಸುತ್ತಿದ್ದಾರೆ. ಅವರಂತಹ ಮಾನವ ಪ್ರೇಮಿಗೆ ಸರಕಾರ ವಿಧಾನ ಪರಿಷತ್ ಸದಸ್ಯತ್ವ ನೀಡಿ ಮತ್ತಷ್ಟು ಜನಸೇವೆಗೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.