ಆಹಾರ ಖರೀದಿ ಜನರ ಆಯ್ಕೆ, ಅವರ ಹಕ್ಕು; ಅಶೋಕ್

ಬೆಂಗಳೂರು: ರಾಜ್ಯದಲ್ಲಿ ವಿವಾದದಸರೂಪ ಪಡೆದುಕೊಂಡಿರುವ 'ಹಲಾಲ್' ಮಾಂಸಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೆಲಕಾಲ ಗಂಭೀರವಾದ ಚರ್ಚೆ ನಡೆಯಿತು. ಅಲ್ಲದೆ, ಶಾಂತಿಯುತ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಸುವ ತಿಳಿಗೇಡಿಗಳ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂತು.
ಬುಧವಾರ ವಿಧಾನಸಭೆಯಲ್ಲಿ 'ಚುನಾವಣಾ ವ್ಯವಸ್ಥೆ ಸುಧಾರಣೆಗಳ ಅಗತ್ಯ' ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಹಿಜಾಬ್ ವಿವಾದ ಮುಗಿಯಿತು, ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿದ್ದು ಆಯಿತು. ಇದೀಗ 'ಹಲಾಲ್' ವಿವಾದ ಪ್ರಾರಂಭ ಮಾಡಲಾಗಿದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ವರ್ಷ ತೊಡಕಿನ ವೇಳೆ ನಾವು 'ಹಲಾಲ್' ಮಾಡಿದ್ದಾರೋ, ಇಲ್ಲವೋ ಎಂದು ನೋಡಲು ಹೋಗುವುದಿಲ್ಲ. ಮಾಂಸದ ಅಂಗಡಿಯಿಂದ ತರುವ ಮಾಂಸವನ್ನು ನಾವು ಪೂಜೆಗೆ ಇಡುವುದಿಲ್ಲ. ಹಬ್ಬದ ವೇಳೆಯಲ್ಲಿ ಹಳ್ಳಿಯ ರೈತರೇ ತಾವು ಸಾಕಿದ ಕುರಿ ಕೊಯ್ದು ಗುಡ್ಡೆ ಮಾಂಸ ಎಂದು ಪಾಲು ಹಾಕುತ್ತಾರೆ. ಇದೀಗ ರಾಜ್ಯದಲ್ಲೇ ಏಕೆ ಇಂತಹ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸಮಾಜದಲ್ಲಿ ಶಾಂತಿ ಕದಡುವ ವಿಚಾರಗಳನ್ನು ಖಾಸಗಿ ಸುದ್ದಿ ಮಾಧ್ಯಮಗಳು ಯಾವುದೇ ಕಾರಣಕ್ಕೂ ಬಿತ್ತರಿಸಬಾರದು. ಹಿಂದೂಗಳ ಜೊತೆಗೆ ವ್ಯಾಪಾರ ವ್ಯವಹಾರ ಸಂಬಂಧ ಇಟ್ಟುಕೊಳ್ಳಿ ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಇಂತಹ ಘಟನೆಗಳನ್ನು ನೋಡಿದರೆ ಭಯ ಆಗುತ್ತದೆ. ಇದನ್ನು ಮಾಡಿದ್ದು ಬಿಜೆಪಿಯವರಲ್ಲ, ಬದಲಿಗೆ ಯಾರೋ ಹಿಂದೂ ಸಮಾಜದ ತಿಳಿಗೇಡಿಗಳು ಮಾಡಿದ್ದಾರೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಡಿ ಎಂದು ಮನವಿ ಮಾಡಿದರು.
ಅವರ ಆಹಾರ ಅವರ ಹಕ್ಕು: ನೀವು ಹೇಗೆ ಹೇಳಿದರೂ ನಮಗೆ(ಬಿಜೆಪಿ) ಹೇಳಿದ್ದು ಎಂದು ಅನ್ನಿಸುತ್ತದೆ. ಆದರೆ, ನಿಮ್ಮ ಮಾತಿಗೆ ನಮ್ಮ ವಿರೋಧವಿಲ್ಲ. ಜನರು ತಮ್ಮ ಆಹಾರವನ್ನು ಎಲ್ಲಿ ಖರೀದಿಸಬೇಕೆಂದು ನಿರ್ಧರಿಸುವುದು ಅವರ ಹಕ್ಕು. ಅವರು ಮುಸ್ಲಿಮ್ ಅಂಗಡಿಯಲ್ಲಿ ಅಥವಾ ಹಿಂದೂ ಅಂಗಡಿಯಲ್ಲೂ ಖರೀದಿ ಮಾಡಬಹುದು. ಇವರಲ್ಲೇ ಖರೀದಿ ಮಾಡಬೇಕೆಂಬುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಆಕ್ಷೇಪಿಸಿದರು.
ಮುಸ್ಲಿಮರು ಮಾಂಸ ಖರೀದಿ ಮಾಡಬೇಕಾದರೆ 'ಹಲಾಲ್' ಮಾಡಿದರೆ ಮಾತ್ರ ಖರೀದಿ ಮಾಡಬೇಕು ಎಂದು ಹೇಳುತ್ತಾರೆ. ನಾವು 'ಹಲಾಲ್ ಮಾಡುವುದಿಲ್ಲ. ನೀವು ಏಕೆ ತಿನ್ನುವುದಿಲ್ಲ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ನಾವು ಎರಡೂ ಸಮುದಾಯಗಳಿಗೆ ಬುದ್ದಿವಾದ ಹೇಳಬೇಕು. ಎರಡೂ ಸಮುದಾಯಗಳು ಪರಸ್ಪರ ಎರಡೂ ಸಮುದಾಯದವರಿಂದ ಖರೀದಿ ಮಾಡಬೇಕು. ಹಾಗಾದರೆ ಮಾತ್ರ ಸಾಮರಸ್ಯ. ಬದಲಾಗಿ ಒಂದು ಕಡೆಯವರಿಗೆ ಬುದ್ಧಿವಾದ ಸರಿಯಲ್ಲ ಎಂದು ಅಶೋಕ್ ಪರೋಕ್ಷವಾಗಿ ಆಕ್ಷೇಪಿಸಿದರು.
'ಹಲಾಲ್' ವೈಜ್ಞಾನಿಕ ಪದ್ಧತಿ: ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಹಲಾಲ್ ಬಗ್ಗೆ ಬಹುತೇಕರಿಗೆ ಅರಿವಿಲ್ಲ. ಇಸ್ಲಾಮ್ ಪದ್ಧತಿ ಪ್ರಕಾರ ಕೋಳಿ, ಕುರಿ, ಮೇಕೆ ವಧೆ ಮಾಡುವ ವೇಳೆ ಕತ್ತಿನ ಬಳಿ ಕತ್ತರಿಸಿ ಅದರ ರಕ್ತ ತೆಗೆದು ಆ ಮಾಂಸವನ್ನು ಸೇವನೆ ಮಾಡುತ್ತಾರೆ. ಇಸ್ಲಾಮ್ ಪ್ರಕಾರ ಹಲಾಲ್ ಮಾಡದ ಮಾಂಸದಲ್ಲಿ ರಕ್ತ ಇದ್ದರೆ ಅದು ಸೇವನೆಗೆ ಅರ್ಹವಲ್ಲ. ಹೀಗಾಗಿ ಕತ್ತಿನ ಒಂದು ಭಾಗ ಕಟ್ ಮಾಡಿ ರಕ್ತ ಎಲ್ಲ ಹೊರ ಹೋಗುವಂತೆ ಮಾಡುತ್ತಾರೆ. ಇಂತಹ ವೈಜ್ಞಾನಿಕವಾಗಿರುವ ವಿಧಾನವನ್ನು ಧಾರ್ಮಿಕವಾಗಿ ಅಳವಡಿಸಿಕೊಂಡಿದ್ದಾರೆ. ಇದನ್ನು ಬೇರೆಯವರ ಮೇಲೆ ಅವರು ಹೇರಿಕೆ ಮಾಡಿಲ್ಲ ಎಂದು ವಿವರಣೆ ನೀಡಿದರು.
ಹಲಾಲ್ ಮಾಡದೇ ಇರುವ ಮಾಂಸವನ್ನು ಮುಸ್ಲಿಮರು ಸೇವಿಸಬಾರದು ಎಂದು ಹೇಳಿದೆ. ಹಿಂದೂಗಳು, ಮುಸ್ಲಿಮೇತರರು ಕೆಲವು ಬಾರಿ ಎಲ್ಲರನ್ನೂ ಮನೆಗೆ ಊಟಕ್ಕೆ ಆಹ್ವಾನಿಸಿದಾಗ ಹಲಾಲ್ ಮಾಡಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಲಾಲ್ ಮಾಡಿಸುವುದಿಲ್ಲ. ದೇವರ ಉತ್ಸವದ ವೇಳೆಯಲ್ಲೂ 'ಹಲಾಲ್' ಮಾಡಿಸುವುದಿಲ್ಲ. ಇದೀಗ ಚುನಾವಣೆ ಗೆಲ್ಲುವುದಕ್ಕೆ ಹೊಸ ಹೊಸ ವಿವಾದ ಹುಡುಕುತ್ತಿದ್ದಾರೆ. ಚುನಾವಣೆಗೆ ಹೆದ್ದಾರಿಯಲ್ಲಿ ಹೋದರೆ ದಟ್ಟಣೆ ಜಾಸ್ತಿ, ಹೀಗಾಗಿ ಬೈಪಾಸ್ ರಸ್ತೆಗಳನ್ನು ಕಂಡುಕೊಳ್ಳುತ್ತಿದ್ದು, ಇದೊಂದು ತಂತ್ರ ಅಷ್ಟೇ. ಆದರೆ, ಇಸ್ಲಾಮ್ ಪ್ರಕಾರ ಹಲಾಲ್ ಕ್ಷೇಮ, ಹಲಾಲ್ ಧರ್ಮ ಎಂದು ರಮೇಶ್ ಕುಮಾರ್ ಬೆಳಕು ಚೆಲ್ಲಿದರು.