ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

Source: SOnews | By Staff Correspondent | Published on 17th April 2024, 7:45 PM | Coastal News |

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ಸಂಭ್ರಮದೊಂದಿಗೆ  ಶಾಂತಿಯುತವಾಗಿ ಸಂಪನ್ನಗೊಂಡಿತು.

ಯುಗಾದಿಯ ಮಾರನೇ ದಿನ ಧ್ವಜಾರೋಹಣ ಮತ್ತು ಗರುಡನ ಪಟ ಕಟ್ಟುವುದರ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಬುಧವಾರ ಸಂಜೆ .೩೦ಕ್ಕೆ ಶ್ರೀ ಹನುಮಂತ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮರಥವನ್ನು ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ದೇವಸ್ಥಾನದ ತಾಂತ್ರಿಕ ರಮಾನಂದ ಅವಬೃತ್, ಮುಖ್ಯ ಅರ್ಚಕರು ಸೇರಿದಂತೆ ಮತ್ತಿತರ ಅರ್ಚಕರು ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಿಕೊಟ್ಟರು. ಬುಧವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಗ್ರಾಮ ದೇವನಾದ ಹನುಮಂತನಿಗೆ ಪೂಜೆ, ಹರಕೆ ಹಾಗೂ ರಥಕಾಣಿಗೆ ಸಲ್ಲಿಸಿದರು. ರಥೋತ್ಸವದಲ್ಲಿ ಭಜನೆ, ಚಂಡೆ ವಾದ್ಯ, ಹುಲಿ ಕುಣಿತ, ತಟ್ಟಿರಾಯ, ಡಿ ಜೆ ಮೂಲಕ ಕುಣಿತ ಜನರ ಗಮನ ಸೆಳೆದವು.

ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಮಾಜಿ ಶಾಸಕ ಜೆ ಡಿ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ನಾಯ್ಕ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಶ್ರೀಧರ ಮೊಗೇರ, ಶಿವರಾಮ ನಾಯ್ಕ, ಪ್ರಮುಖರಾದ ಸುರೇಂದ್ರ ಶ್ಯಾನಭಾಗ, ರಾಜೇಶ ನಾಯಕ, ಬಿಜೆಪಿ ಮುಖಂಡರಾದ ರಾಜೇಶ ನಾಯ್ಕ, ಸುಬ್ರಾಯ ದೇವಡಿಗ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ಭಟ್ಕಳ ಹಾಗೂ ವಿವಿಧ ತಾಲ್ಲೂಕಿನಿಂದ ಬಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬಂದೋಬಸ್ತನಲ್ಲಿದ್ದರು. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗು ಬಂದೋಬಸ್ತ ಏರ್ಪಡಿಸಲಾಗಿತ್ತು. ಬ್ರಹ್ಮರಥೋತ್ಸವ ವೀಕ್ಷಿಸಲು ಊರ ಹಾಗೂ ಪರ ಊರಿನ ಸಾವಿರಾರು ಜನರು ಪಾಲ್ಗೊಂಡಿದ್ದರು.

ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ: ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆಯ ಪ್ರತೀಕವಾಗಿ ಪ್ರತಿವರ್ಷ ರಾಮನವಮಿಯಂದು ನಡೆಯುವ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥ ಎಳೆಯುವ ಪೂರ್ವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯದೊಂದಿಗೆ ಮುಸ್ಲೀಂ ಸಮುದಾಯದ ಚರ್ಕಿನ್ ಕುಟುಂಬ ಹಾಗೂ ಜೈನ ಕುಟುಂಬ ಮತ್ತು ಪ್ರಭು ಅವರು ಕುಟುಂಬಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುವುದರ ಜೊತೆಗೆ ರಥೋತ್ಸವಕ್ಕೆ ಆಹ್ವಾನ ನೀಡಿದರು.  ಇದು ಸಂಪ್ರದಾಯವಷ್ಟೇ ಅಲ್ಲದೆ ಇಲ್ಲಿನ ಸರ್ವಧರ್ಮಿಯರನ್ನು ಒಟ್ಟಿಗೆ ಬಾಳುವ ಮಂತ್ರವಾಗಿದೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಭಾವೈಕ್ಯತೆಯ ಸಂಕೇತವಾಗಿದೆ.

ರಥೋತ್ಸವದ ಸಂದರ್ಭದಲ್ಲಿ ಮುಸ್ಲೀಮರು ರಸ್ತೆ ಬದಿಯಲ್ಲಿ ಹಾಗೂ ತಮ್ಮ ಮನೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ರಥೋತ್ಸವವನ್ನು ವೀಕ್ಷಿಸುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಮನೆ ಕೌಂಪೌಂಡ್ ಗಳಲ್ಲಿ ರಥೋತ್ವವಕ್ಕೆ ಬರುವ ಜನರು ದ್ವಿಚಕ್ರವಾಹನ ನಿಲ್ಲಿಸಲು ವ್ಯವಸ್ಥೆಯನ್ನು ಮಾಡುತ್ತಾರೆ. ಇದು ಇಲ್ಲಿನ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಗುರುವಾರ ಅಶ್ವವಾಹನೋತ್ಸವ, ಚೂರ್ಣೊತ್ಸವ, ಅವಭೃತ ಸ್ನಾನದೊಂದಿಗೆ ಜಾತ್ರಾ ಧಾರ್ಮಿಕ ಉತ್ಸವಗಳು ಮುಕ್ತಾಯವಾಗಲಿದೆ. ರಾತ್ರಿ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

Read These Next