ಲಸಿಕೆ ನೀತಿಯಲ್ಲಿ ಎಡವುತ್ತಿರುವ ಕೇಂದ್ರ: ಸುಪ್ರೀಮ್ ಚಾಟಿ, ಎಲ್ಲಾ ವ್ಯಾಕ್ಸಿನ್ ನೀವೇಕೆ ಖರೀದಿಸಿ ರಾಜ್ಯಗಳಿಗೆ ನೀಡಬಾರದೆಂದು ಪ್ರಶ್ನಿಸಿದ ನ್ಯಾಯಾಲಯ

Source: S.O. News service | By S O News | Published on 2nd May 2021, 2:46 PM | National News |

ನವದೆಹಲಿ: ಭಾರತದಲ್ಲಿ ಕೊರೋನಾ ಕೇಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ದಿನವೊಂದಕ್ಕೆ 4 ಲಕ್ಷ ಜನ ಸೋಂಕಿಗೆ ಒಳಗಾದರೆ, ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮೇ 01 ರಿಂದ 18 ವರ್ಷದಿಂದ 45 ವರ್ಷದವರಿಗೆ ಕೊರೋನಾ ಲಸಿಕೆ ಕಡ್ಡಾಯ ಎಂದು ಘೋಷಿಸಿದ್ದರು.

ಈ ಪ್ರಕಾರ ಶನಿವಾರದಿಂದ ದೇಶದೆಲ್ಲೆಡೆ ಕೊರೋನಾ ಲಸಿಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೆ ರಾಜ್ಯಗಳಿಗೆ ಅಗತ್ಯವಾದ ಲಸಿಕೆ ಪೂರೈಕೆ ಮಾಡದ ಕಾರಣ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿಲ್ಲ. ಹಲವೆಡೆ ಆರಂಭವೇ ಆಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಎದುರು 10 ಪ್ರಮುಖ ಪ್ರಶ್ನೆಗಳನ್ನಿಟ್ಟಿರುವ ಸುಪ್ರೀಂ ಕೋರ್ಟ್, “ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅರಿತು ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಹಾಗಾದಾಗ ಅದು ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಮಾಣದಲ್ಲಿ ಹಂಚಬಹುದಲ್ಲವೇ?” ಎಂದು ಹೇಳಿದೆ.

ಕೋವಿಡ್ ಲಸಿಕೆಯ ಉತ್ಪಾದನೆ, ದರನಿಗಧಿ ಮತ್ತು ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಸ್ವಯಂ ವಿಚಾರಣೆಯನ್ನು ಕೈಗತ್ತಿಕೊಂಡಿರುವ ಜಸ್ಟೀಸ್ ಚಂದ್ರಚೂಡ್‌ರ ನೇತೃತ್ವದ ಪೀಠ ಹಲವು ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವುತ್ತಿರುವುದನ್ನು ಬೊಟ್ಟು ಮಾಡಿ ತೋರಿಸಿದೆ.

ಲಸಿಕೆಯ ದರ ನಿಗದಿ ಮತ್ತು ವಿತರಣೆಯ ನಿರ್ಧಾರವನ್ನು ತಯಾರಿಕ ಕಂಪನಿಗಳಿಗೆ ಬಿಡಬಾರದು. ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಈ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು ಮತ್ತು ತನ್ನ ಅಧಿಕಾರ ಬಳಸಿ ಕಾರ್ಯಗತಗೊಳಿಸಬೇಕು ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾರಿಗೆ ಜಸ್ಟೀಸ್ ಚಂದ್ರಚೂಡ್ ತಿಳಿಸಿದ್ದಾರೆ.

ಅಮೇರಿಕಾಕ್ಕೆ ಕಡಿಮೆ ಹಣ, ನಮಗೇಕು ಹೆಚ್ಚು

ಅಸ್ಪಜೆನಕಾ ಕಂಪನಿಯು ಅಮೆರಿಕದ ನಾಗರಿಕರಿಗೆ ಅತಿ ಕಡಿಮೆ ಬೆಲೆಗೆ ಲಸಿಕೆ ನೀಡುತ್ತಿದೆ. ಆದರೆ ನಾವು ಮಾತ್ರ ಏಕೆ ಹೆಚ್ಚು ಪಾವತಿ ಮಾಡಬೇಕು? ತಯಾರಕರು ಕೇಂದ್ರ ಸರ್ಕಾರಕ್ಕೆ ಅಂದರೆ ನಿಮಗೆ 150ರು. ಡೋಸ್ ನೀಡುತ್ತಾರೆ. ಆದರೆ ರಾಜ್ಯಗಳು 300 ಅಥವಾ 400 ರು. ಭರಿಸಬೇಕು. ದೇಶವೇಕೆ ಇಷ್ಟು ಹಣ ಪಾವತಿ ಮಾಡಬೇಕು ಎಂದು ಜಸ್ಟೀಸ್ ರವೀಂದ್ರ ಭಟ್ ಪ್ರಶ್ನಿಸಿದ್ದಾರೆ.

ಪೇಟೆಂಟ್ ಬಳಕೆಗೆ ಅಧಿಕಾರ ನೀಡಬಾರದೇಕೆ?

ರೆಮೈಸಿವಿರ್, ಫಾಸಿಪುರಾವಿರ್ ಮತ್ತು ಟೊಸಿಲಿಜುಮಾಬ್‌ ಮುಂತಾದ ಔಷಧಗಳ ವಿಷಯದಲ್ಲಿ ಪೇಟೆಂಟ್ ಕಾಯ್ದೆಯ ಸೆಕ್ಷನ್ 100 ರ ಅಡಿಯಲ್ಲಿ ಸರ್ಕಾರಿ ಉದ್ದೇಶಗಳಿಗಾಗಿ ಪೇಟೆಂಟ್ ಬಳಸಲು ಉನ್ನತ ನ್ಯಾಯಾಲಯ ಏಕೆ ಅಧಿಕಾರ ನೀಡಬಾರದು? ಅಥವಾ ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ರ ಅಡಿಯಲ್ಲಿ ಕಡ್ಡಾಯ ಪರವಾನಗಿಗಳನ್ನು ಏಕೆ ನೀಡಬಾರದು? ವಿಶೇಷವಾಗಿ ಅಂತಹ ನಿರ್ದೇಶನವು ಕಾನೂನು ಕ್ರಮಗಳ ಭಯವಿಲ್ಲದೆ ಈ ಔಷಧಿಗಳನ್ನು ತಯಾರಿಸಲು ಜೆನೆರಿಕ್ಸ್‌ಗೆ ಅನುವು ಮಾಡಿಕೊಡುತ್ತದೆ ಎಂದು ಸುಪ್ರೀಂ ತಿಳಿಸಿದೆ

ನಮ್ಮಲ್ಲಿ ಬಡವರು, ಅಂಚಿಗೆ ತಳ್ಳಲ್ಪಟ್ಟವರಿದ್ದಾರೆ

“ಲಸಿಕೆಯ ಬೆಲೆ ಸಮಸ್ಯೆಗಳು ತೀರಾ ಗಂಭೀರವಾದ ವಿಷಯವಾಗಿದೆ. ಈ ದೇಶದ ಬಹುಸಂಖ್ಯಾತರು ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಾಗಿವೆ. ನಮ್ಮಲ್ಲಿ ಖಾಸಗಿ ವಲಯದ ಮಾದರಿ ಸಾಧ್ಯವಿಲ್ಲ. ಹಾಗಾಗಿ ನಾವು ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಅನುಸರಿಸಬೇಕು” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ರಾಜ್ಯಗಳಿಗೆ ಯಾವಾಗ ಲಸಿಕೆ ನೀಡುತ್ತೀರಿ?

ಕೇಂದ್ರ ಸರ್ಕಾರವು ಖರೀದಿಸುವ ಶೇ.50 ರಷ್ಟು ಲಸಿಕೆಗಳನ್ನು ರಾಜ್ಯಗಳಿಗೆ ಯಾವಾಗ ನೀಡುತ್ತೀರಿ? ಅಲ್ಲದೇ ಕೇಂದ್ರ ಮತ್ತು ರಾಜ್ಯಗಳಿಗೆ ಲಸಿಕೆ ಬೆಲೆಯಲ್ಲಿನ ವ್ಯತ್ಯಾಸಕ್ಕೆ ತರ್ಕವೇನು? ಎಂದು ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.


 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...