ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆ ವಿರೋಧಿಸಿ ಭಟ್ಕಳದಲ್ಲಿ ಸಿಐಟಿಯು ನಿಂದ ಸರಕಾರಕ್ಕೆ ಮನವಿ

Source: S O News Service | By I.G. Bhatkali | Published on 26th September 2020, 11:56 PM | Coastal News |

 ಭಟ್ಕಳ: ರಾಜ್ಯ ಸರಕಾರ ಜಾರಿಗೆ ತರುತ್ತಿರುವ ಕರ್ನಾಟಕ ಭೂಸುಧಾರಣಾ ತಿದ್ದುಪಡಿ, ಎಪಿಎಮ್‍ಸಿ ಕಾಯ್ದೆ ತಿದ್ದುಪಡಿ ಹಾಗೂ ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರೇ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನಸಮೂಹಗಳ ಮೇಲೆ ಅತ್ಯಂತ ಗಂಭೀರ ಸ್ವರೂಪದ ದುಷ್ಪರಿಣಾಮವನ್ನು ಬೀರಲಿದ್ದು, ಸರಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ಕಿಸಾನ್ ಸಭಾ, ಕಾರ್ಮಿಕ ಸಂಘಟನೆ ಮತ್ತು ಸಿಐಟಿಯು ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದವು.

ಈ ಸುಗ್ರಿವಾಜ್ಞೆಗಳು ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ತೀವೃಗೊಳಿಸುವುದಲ್ಲದೇ ದಲಿತ, ಅಲ್ಪಸಂಖ್ಯಾತ ಮಹಿಳೆಯರನ್ನು ಇನ್ನಷ್ಟು ಸಂಕಟಕ್ಕೆ ಈಡುಮಾಡಲಿವೆ. ಈಗಾಗಲೇ ಕೊರೊನಾ ಸಾಕ್ರಾಮಿಕ ರೋಗದಿಂದಾಗಿ ಜನರು ನಲುಗಿದ್ದು, ತಮ್ಮ ಪ್ರಜಾಸತ್ತಾತ್ಮಕ ವಿರೋಧವನ್ನು ದಾಖಲಿಸಲಾಗದ ಬಿಕ್ಕಟ್ಟಿನ ಸಮಯದಲ್ಲಿ ಇಂತಹ ಸುಗ್ರಿವಾಜ್ಞೆಗಳನ್ನು ತರುವುದು ಅಪ್ರಜಾಸತ್ತಾತ್ಮಕವಾಗುತ್ತದೆ. ಸಾರ್ವಭೌಮತ್ವ, ಸಮಾನತೆ, ಸಾಮಾಜಿಕ ನ್ಯಾಯ, ಒಕ್ಕೂಟ ತತ್ವ ಮೊದಲಾದ ಸಾಂವಿಧಾನಿಕ ಮೂಲಭೂತ ಆಶಯ ಹಾಗೂ ತತ್ವಗಳಿಗೆ ಈ ಸುಗ್ರಿವಾಜ್ಞೆಗಳು ವಿರುದ್ಧವಾಗಿವೆ. ಕೇಂದ್ರ ಸರಕಾರವು ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳ ಸುಪರ್ದಿಗೆ ಒಪ್ಪಿಸುವ ಉದ್ದೇಶವನ್ನು ಹೊಂದಿದೆ, ಕರ್ನಾಟಕ ಸರಕಾರ ಇದನ್ನು ಅರಿತುಕೊಂಡು ಸುಗ್ರಿವಾಜ್ಞೆಗಳು ಕಾನೂನು ಆಗಿ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಹಸೀಲ್ದಾರ ಎಸ್.ರವಿಚಂದ್ರ ಮನವಿಯನ್ನು ಸ್ವೀಕರಿಸಿದರು. ಸಿಐಟಿಯು ಪ್ರಮುಖರಾದ ಪುಂಡಲೀಕ ನಾಯ್ಕ, ಶ್ರೀಧರ ನಾಯ್ಕ, ಜಿ.ಎನ್.ರೇವಣಕರ್, ಭಟ್ಕಳ ಅಂಗನವಾಡಿ ನೌಕರರ ಸಂಘದ ಪ್ರಮುಖರಾದ ಪುಷ್ಪಾವತಿ ನಾಯ್ಕ, ಪದ್ಮಾವತಿ ಡಿ. ನಾಯ್ಕ, ಜಯಲಕ್ಷ್ಮೀ ನಾಯ್ಕ, ಶಾಂತಿ ಮೊಗೇರ, ಅಕ್ಷರ ದಾಸೋಹ ನೌಕರರ ಸಂಘದ ಪ್ರಮುಖರಾದ ನೇತ್ರಾವತಿ ನಾಯ್ಕ, ಮಮತಾ ನಾಯ್ಕ, ಕೋಮಲ ದೇವಡಿಗ ಮೊದಲಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...