ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ವಾರ್ಷಿಕ 24ಸಾವಿರ ರೂ.ಗಳ ಆರ್ಥಿಕ ನೆರವು -ಪ್ರಿಯಾಂಕ ವಾಧ್ರಾ

Source: SOnews | By Staff Correspondent | Published on 16th January 2023, 9:11 PM | State News |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳು 2000 ರೂ.ಗಳಂತೆ ವಾರ್ಷಿಕ 24ಸಾವಿರ ರೂ.ಗಳ ಆರ್ಥಿಕ ನೆರವು ಒದಗಿಸುವ ‘ಗೃಹ ಲಕ್ಷ್ಮಿ ಯೋಜನೆ’ ಜಾರಿಗೊಳಿಸಲಾಗುವುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi Vadra)  ಘೋಷಿಸಿದ್ದಾರೆ.

ಸೋಮವಾರ ಬೆಂಗಳೂರು ಅರಮನೆ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ನಾ ನಾಯಕಿ’ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವೆ ಹೆಮ್ಮೆಪಡುವಂತೆ ರಾಜ್ಯವನ್ನು ಕಟ್ಟಿದ್ದೀರಿ. ವಿಶ್ವದ ಎಲ್ಲೆಡೆ ನಿಮ್ಮ ಪರಿಶ್ರಮ ಗುರುತಿಸಲಾಗುತ್ತಿದೆ. ಐಟಿ-ಬಿಬಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೀರಿ. ನಿಮ್ಮ ಕುಟುಂಬಕ್ಕೆ ನೀವು ಬೆಂಬಲ ನೀಡದಿದ್ದರೆ ಈ ರಾಜ್ಯ ಬೆಳೆಯಲು ಆಗುತ್ತಿರಲಿಲ್ಲ ಎಂದರು.

ನನ್ನ ಅಜ್ಜಿ ಇಂದಿರಾಗಾಂಧಿ ಹಾಗೂ ನನ್ನ ತಾಯಿ ಸೋನಿಯಾಗಾಂಧಿ ನನ್ನ ಜೀವನದಲ್ಲಿ ನಾನು ಕಂಡಂತಹ ಪ್ರಬಲ ಮಹಿಳೆಯರು. ಇದರ ಜೊತೆಗೆ ಇನ್ನೂ ನೂರಾರು ಮಹಿಳೆಯರನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ. ಇವರೆಲ್ಲರಿಂದ ನಾನು ‘ಜೀವನದಲ್ಲಿ ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಅದು ಮನೆಯಲ್ಲಾಗಲಿ, ಕೆಲದ ವಿಚಾರದಲ್ಲಾಗಲಿ, ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ’ ಎಂಬುದನ್ನು ಕಲಿತಿದ್ದೇನೆ ಎಂದು ಅವರು ಹೇಳಿದರು.

ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಮಯ ಇದಲ್ಲವೇ? ನಿಮ್ಮ ಜೀವನದಲ್ಲಿ ನಿಮಗೆ ಶಿಕ್ಷಣ, ಉದ್ಯೋಗ, ಮಕ್ಕಳಿಗೆ ಭವ್ಯ ಭವಿಷ್ಯ ನಿರ್ಮಾಣ ಮಾಡಬೇಕಲ್ಲವೇ? ಇವೆಲ್ಲವನ್ನು ನಿಮಗೆ ಯಾರು ನೀಡುತ್ತಾರೆ? ಈ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದೀರಿ. ನಿಮ್ಮ ಧೈರ್ಯ ಹಾಗೂ ಶಕ್ತಿ ಅರೆಯಬೇಕು ಎಂದು ಪ್ರಿಯಾಂಕಾ ಗಾಂಧಿ ಕರೆ ನೀಡಿದರು. 

ನಿಮ್ಮ ದೊಡ್ಡ ಶಕ್ತಿ ರಾಜಕೀಯ. ರಾಜಕೀಯ ಪಕ್ಷಗಳು ಒಂದು ವರ್ಗದ ಓಲೈಕೆಗೆ ಮುಂದಾಗುತ್ತಾರೆ. ಆದರೆ ಮಹಿಳೆಯರ ಬಗ್ಗೆ ವಿಚಾರ ಮಾಡುವುದಿಲ್ಲ. ನೀವು ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಹಕ್ಕು ಸಮಾನತೆಗೆ ಆದ್ಯತೆ ನೀಡುವಂತೆ ಮಾಡಬೇಕು. ಬಿಜೆಪಿ ಆಡಳಿತದಲ್ಲಿ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡಿದ್ದೀರಾ? ಬೆಲೆಗಳು ಇಳಿಕೆಯಾಗಿವೆಯೇ? ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ವಿಚಾರಗಳಿವೆಯೇ? ನೀವು ಸಂತೋಷವಾಗಿದ್ದೀರಾ? ಎಂದು ಅವರು ಪ್ರಶ್ನಿಸಿದರು.

ಮುಂದಿನ ಕೆಲ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಕರ್ನಾಟಕದಲ್ಲಿ ಮಹಿಳೆಯರ ಪರಿಸ್ಥಿತಿ ನಿಜಕ್ಕೂ ನಾಚಿಕೆಗೇಡಿನ ವಿಚಾರ. ನಿಮ್ಮ ಸಚಿವರು ಉದ್ಯೋಗ ನೀಡಲು 40 ಪರ್ಸೆಂಟ್ ಲಂಚ ಪಡೆಯುತ್ತಿದ್ದಾರೆ ಎಂದು ಕೇಳಿದೆ. 1.50 ಲಕ್ಷ ಕೋಟಿ ರೂ.ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ 8 ಸಾವಿರ ಕೋಟಿ ರೂ.ಬಜೆಟ್ ಇದ್ದರೆ ಅದರಲ್ಲಿ 3200 ಕೋಟಿ ರೂ.ಇವರ ಜೇಬಿಗೆ ಹೋಗುತ್ತದೆ. ಪಿಎಸ್ಸೈ ಹಗರಣದಂತೆ ಹಲವು ನೇಮಕಾತಿ ಅಕ್ರಮಗಳಾಗಿವೆ ಎಂದು ಅವರು ಹೇಳಿದರು.

ಚಾಲಕರ ಪರವಾನಿಗೆ, ಪಡಿತರ ಪಡೆಯಲು ಲಂಚ ನೀಡಬೇಕು. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗಿದ್ದು, ಪ್ರತಿನಿತ್ಯ ಮಹಿಳೆಯರ ಮೇಲೆ 46 ಅಪರಾಧ ನಡೆಯುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಎಷ್ಟಕ್ಕೆ ಪಡೆಯುತ್ತಿದ್ದಿರಿ, ಈಗ ಅದು ಎಷ್ಟಾಗಿದೆ ಎಂದು ನಿಮಗೆ ಗೊತ್ತಿದೆ. ಜೀವನಸಾಗಿಸುವುದು ದುಬಾರಿಯಾಗಿದೆ. ಮಕ್ಕಳ ಶುಲ್ಕವಾಗಲಿ, ಮದುವೆ ಸಮಾರಂಭವಾಗಲಿ ಎಲ್ಲವೂ ದುಬಾರಿ. ಆದರೂ ಸರಕಾರದ ಹೊಣೆಗಾರಿಕೆಯನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. 

ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಹನೀಯರ ವಿಚಾರವನ್ನು ತೆಗೆಯುವ ಮೂಲಕ ಸರಕಾರ ಜನರ ಗಮನ ಬೇರೆಡೆ ಸೆಳೆಯುತ್ತಿದೆ. ಇಡೀ ಆಡಳಿತ ಯಂತ್ರ ಕೆಲವು ಬಂಡವಾಳ ಶಾಹಿಗಳ ಹಿತ ಕಾಯಲು ಇದೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದರೆ, ಉಳಿದ ಭಾರತ ದಿನನಿತ್ಯ ಬಡವಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. 

ಕಾಂಗ್ರೆಸ್ ಸರಕಾರ ಅನ್ನಭಾಗ್ಯದ ಮೂಲಕ 3.80 ಕೋಟಿ ಜನರಿಗೆ ಅಕ್ಕಿ, ಬೇಳೆಯಂತಹ ದಿನಸಿ ನೀಡಿದೆ. ಇಂದಿರಾ ಕ್ಯಾಂಟೀನ್, ಕ್ಷೀರ ಭಾಗ್ಯ, ಮಾತೃಪೂರ್ಣದಂತಹ ಕಾರ್ಯಕ್ರಮಗಳನ್ನು ನೀಡಿತ್ತು. ಸ್ವಸಹಾಯಕ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಂದತಹ ಕಾರ್ಯಕ್ರಮ ನೀಡಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.

ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.

ನಿಮ್ಮ ಸಮಾಜ, ರಾಜ್ಯದ ಬದಲಾವಣೆ ತರುವ ಶಕ್ತಿ ನಿಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಾಗಿ ನಿಮ್ಮ ನಾಯಕರು ನಿಮ್ಮ ಬಳಿಗೆ ಬಂದಾಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕೇಳುವುದಾಗಿ ನನಗೆ ಮಾತು ಕೊಡಿ. ಉತ್ತರಪ್ರದೇಶದಲ್ಲಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಹಲವರು ನಮ್ಮನ್ನು ನೋಡಿ ನಕ್ಕರು. ಆದರೆ ಈಗ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರ ಆಗತ್ಯವನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಎಐಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ, ರಾಜ್ಯಾಧ್ಯಕ್ಷೆ ಡಾ. ಬಿ.ಪುಷ್ಪಾ ಅಮರನಾಥ್, ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ, ಮಾಜಿ ಸಚಿವರಾದ ರಾಣಿ ಸತೀಶ್, ಮೋಟಮ್ಮ, ಉಮಾಶ್ರೀ, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್, ರೂಪಕಲಾ, ಕನೀಝ್ ಫಾತಿಮಾ, ಮುಖಂಡರಾದ ಜಲಜಾ ನಾಯ್ಕ್, ಲಾವಣ್ಯ ಬಲ್ಲಾಳ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತಿಜ್ಞೆ ಬೋಧಿಸಿದ ಸೌಮ್ಯಾರೆಡ್ಡಿ:

ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಮ್ಮ ದೇಶದ ಸಂವಿಧಾನಕ್ಕೆ ಸದಾ ಬದ್ಧರಾಗಿರುತ್ತೇವೆ. ಸಮಾಜದಲ್ಲಿ, ಸೌಹಾರ್ದತೆ, ಸಮಾನತೆ ಮೂಡಿಸಲು, ಪಕ್ಷದ ಸಂವಿಧಾನ, ತತ್ವ ಸಿದ್ಧಾಂತ, ಜಾತ್ಯತೀತ ನಿಲುವು, ಸಾಮಾಜಿಕ ನ್ಯಾಯಗಳನ್ನು ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇವೆ. ಮಹಿಳೆ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಕೃಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಪ್ರತಿ ಮನೆಯ ಹೆಣ್ಣಿಗೂ ತಲುಪಿಸುವ ಜವಾಬ್ದಾರಿ ನಮ್ಮದು. ದ್ವೇಷ ಬಿತ್ತು, ದ್ವೇಷವನ್ನೇ ಬೆಳೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಮ್ಮ ಹೋರಾಟ. ಈ ಸಮರಕ್ಕೆ ನಾವು ಸಿದ್ಧ. ರಾಜಕೀಯವಾಗಿ ಮಹಿಳಾ ಮೀಸಲಾತಿಗೆ ಧ್ವನಿ ಎತ್ತಿದ ಸೋನಿಯಾ ಗಾಂಧಿ ಅವರ ಕನಸು ನನಸಾಗಿಸುತ್ತೇವೆ. ಮಹಿಳೆಯರಲ್ಲಿ ಸ್ವಮೌಲ್ಯದ ಬಗ್ಗೆ ಜಾಗೃತಿ ಮೂಡಿಸಿ, ಸಬಲೀಕರಣಗೊಳಿಸುವ ಕಾಂಗ್ರೆಸ್ ಸಿದ್ಧಾಂತಕ್ಕೆ ನಾವು ಬದ್ಧ, ಶಕ್ತಿಯುತ ಸ್ತ್ರೀ ಸಮಾಜ ನಿರ್ಮಾಣ, ಇದೇ ನಮ್ಮ ವಾಗ್ದಾನ. ಸಶಕ್ತ ಮಹಿಳೆ, ಸಶಕ್ತ ಭಾರತ, ಇದೇ ನಮ್ಮ ಧ್ಯೇಯ. ಇದೇ ನಮ್ಮ ಪ್ರತಿಜ್ಞೆ ಎಂದು ಶಾಸಕಿ ಸೌಮ್ಯಾ ರೆಡ್ಡಿ ಪ್ರತಿಜ್ಞೆ ಬೋಧಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...