ಕಾರವಾರ: ಹಣತೆಯ ಬೆಳಕಿನಲ್ಲಿ ಜಾಗೃತಿ ಮೂಡಿಸಿದ ಮತದಾರರ ಪಟ್ಟಿ ಪರಿಷ್ಕರಣೆ

Source: S O News | By I.G. Bhatkali | Published on 8th November 2023, 10:52 PM | Coastal News |

ಕಾರವಾರ: ಕಾರವಾರದ ರವೀಂದ್ರನಾಥ ಕಡಲ ತೀರದಲ್ಲಿ , ರಾತ್ರಿಯ ಕತ್ತಲು ಆರಂಭವಾಗುವ  ಸಮಯದಲ್ಲಿ,  ಬೆಳಗುವ ದೀಪಗಳ ಸಾಲಿನಲ್ಲಿ ಮೂಡಿದ ಭಾರತ ಭೂಪಟದ ಚಿತ್ರಣ ಹಾಗೂ ಆಕರ್ಷಕ ಮರಳು ಶಿಲ್ಪದ ರಚನೆ  ಸಾರ್ವಜನಿಕರ ಕಣ್ಮನ ಸೆಳೆಯುವುದರ ಜೊತೆಗೆ ವಿಶಿಷ್ಠ ಮತ್ತು ಅತ್ಯಾಕರ್ಷವಾಗಿ ಸಾರ್ವಜನಿಕರಿಗೆ ಮತದಾರರ ಜಾಗೃತಿ ಸಂದೇಶವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ ಕೇಂದ್ರದ ಮೂಲಕ ನಡೆದ  ಮತದಾರರ ಪಟ್ಟಿಯ ವಿಶೆಷ ಪರಿಷ್ಕರಣೆ  ಕುರಿತು ಜಾಗೃತಿ ಇಮದು ಸಂಜೆ ನಡೆದ ಕಾರ್ಯಕ್ರಮದಲ್ಲಿ ,ಮರಳು ಶಿಲ್ಪದಲ್ಲಿ ಮೂಡಿದ್ದ  ಮತದಾನ ಮಾಡುವ ಕೈ ಬೆರಳಿನ ಗುರುತು ಹಾಗೂ ಭಾರತ ಭೂಪಟದಲ್ಲಿನ ಕರ್ನಾಟಕ ಭೂಪಟದಲ್ಲಿ ಹಣತೆ ಹಚ್ಚುವ ಮೂಲಕ  ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ರದ್ದುಪಡಿಸುವಿಕೆ ಕುರಿತಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮವು  ನವೆಂಬರ್ 18 ಮತ್ತು 19 ರಂದು ಜಿಲ್ಲೆಯಾದ್ಯಂತ ನಡೆಯಲಿದ್ದು,  1-1 -2024 ಕ್ಕೆ 18 ವರ್ಷ ತುಂಬುವ ಎಲ್ಲಾ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೆರ್ಪಡೆ ಮಾಡುವ ಮೂಲಕ ತಮ್ಮ ಹಕ್ಕು ಚಲಾವಣೆಯ ಅಧಿಕಾರ ಪಡೆಯುವಂತೆ ತಿಳಿಸಿದರು.   

ಅಲ್ಲದೆ ಇದುವರೆಗೂ ಮತದಾರರ ಪಟ್ಟಿಗೆ ಸೇರ್ಪಡೆ ಆಗದೇ  ಇರುವವರು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು, ತಪ್ಪುಗಳಾಗಿದ್ದಲ್ಲಿ ಸರಿಪಡಿಸಿಕೊಳ್ಳುವುದು ಹಾಗೂ  ಮೃತಪಟ್ಟಿದಲ್ಲಿ  ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದು ಕೂಡಾ ಈ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ನಡೆಯಲಿದೆ. 

ಮತದಾರರು ತಮ್ಮ ವ್ಯಾಪ್ತಿಯ ಬಿ.ಎಲ್.ಓ ಗಳನ್ನು ಸಂಪರ್ಕಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ ಹಾಗೂ ಈಗಾಗಲೇ ಪ್ರಕಟಿಸಿರುವ ಕರಡು  ಮತದಾರರ ಪಟ್ಟಿಯನ್ನು ಪರಿಶೀಲಿಸಿ, ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು. 

ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಕಾಂದೂ ಮಾತನಾಡಿ,  ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ  ಮುಂದಿನ ದಿನಗಳಲ್ಲಿ  ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈಲ್ಲೆಯ ಎಲ್ಲಾ ಮತದಾರರು ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ತಮ್ಮ ಅಧಿಕಾರ ಚಲಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಇದ್ದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...