ಅಸ್ಸಾಮ್: ನಕಲಿ ಎನ್‌ಕೌಂಟರ್; ಇಬ್ಬರು ಪೊಲೀಸರು ತಪ್ಪಿತಸ್ಥರು; ಅಸ್ಸಾಮ್ ಮಾನವಹಕ್ಕುಗಳ ಆಯೋಗ

Source: Vb | By I.G. Bhatkali | Published on 8th February 2023, 9:16 AM | National News |

ಗುವಾಹಟಿ: 2021ರಲ್ಲಿ ಕಳ್ಳತನದ ಆರೋಪದಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಪ್ರಕರಣದಲ್ಲಿ ಇಬ್ಬರು ಪೊಲೀಸರು ತಪ್ಪಿತಸ್ಥರು ಎಂದು ಅಸ್ಸಾಮ್ ಮಾನವಹಕ್ಕುಗಳ ಆಯೋಗ ಸೋಮವಾರ ತಿಳಿಸಿದೆ.

ಪೊಲೀಸರ ಗುಂಡಿಗೆ ಬಲಿಯಾದ ಬಾಬು ಎಂಬವರ ಪತ್ನಿಗೆ ಎರಡು ತಿಂಗಳಲ್ಲಿ 7 ಲಕ್ಷ ರೂಪಾಯಿ ನೀಡಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಆಯೋಗವು ಅಸ್ಸಾಮ್ ಸರಕಾರಕ್ಕೆ ನಿರ್ದೇಶನ ನೀಡಿದೆ.

ಮುಹಮ್ಮದ್ ಆಶಾ ಬಾಬು 2021 ಆಗಸ್ಟ್ 11ರಂದು ಪೊಲೀಸ್ ಕಸ್ಟಡಿಯಲ್ಲಿರುವಾಗ ಮೃತರಾಗಿದ್ದಾರೆ ಹಾಗೂ ಅವರನ್ನು ಅದಕ್ಕಿಂತ ಒಂದು ದಿನ ಮೊದಲು ಬಂಧಿಸಲಾಗಿತ್ತು ಎಂಬುದಾಗಿ ಡರಂಗ್ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದ ಬಳಿಕ ಮಾನವಹಕ್ಕುಗಳ ಆಯೋಗವು ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಶಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಬಾಬು ಅವರನ್ನು ಧರಿ ನದಿಯ ದಂಡೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಖರುಪೇಟಿಯ ಪೊಲೀಸ್ ಇನ್‌ಸ್ಪೆಕ್ಟರ್ ಅಚ್ಯುತ್ ದತ್ತ ಮತ್ತು ಠಾಣಾಧಿಕಾರಿ ಅಭಿಜಿತ್‌ ಕಾಕೋಟಿ ಹೇಳಿದ್ದಾರೆ. ಶೋಧದ ವೇಳೆ, ಬಾಬು ತಪ್ಪಿಸಿಕೊಂಡು ಹೋಗಲು ಯತ್ನಿಸಿದರು ಮತ್ತು ಪೊಲೀಸ್ ಅಧಿಕಾರಿಗಳತ್ತ ಗುಂಡು ಹಾರಿಸಿದರು; ಆಗ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿ ಗುಂಡು ಹಾರಿಸಿದಾಗ ಬಾಬು ಮೃತಪಟ್ಟಿದ್ದಾರೆ ಎಂದು ಈ ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ ಎಂದು ಆಯೋಗ ತನ್ನ ಆದೇಶದಲ್ಲಿ ಹೇಳಿದೆ ಬಾಬು ಪಟ್ಟಿ ಮನುವಾರ ಬೇಗಮ್ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ, ಕಾಯಿಲೆಯಿಂದಾಗಿ ಮಲಗಿದ್ದ ತನ್ನ ಗಂಡನನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದಿದ್ದರು ಎಂದು ಆರೋಪಿಸಿದ್ದರು.

ಕುಟುಂಬ ಸದಸ್ಯರಿಗೆ ಆಸ್ಪತ್ರೆಯಲ್ಲಿ ಅವರ ಮುಖವನ್ನು ಮಾತ್ರ ನೋಡಲು ಅವಕಾಶ ನೀಡಲಾಗಿತ್ತು ಎಂದು ಮನುವಾರ ಹೇಳಿದ್ದಾರೆ. ಆದರೆ, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಬಳಿಕ ನೋಡಿದಾಗ ದೇಹದ ತುಂಬೆಲ್ಲಾ ಗಾಯಗಳಿದ್ದವು, ಹೊಟ್ಟೆಯಲ್ಲಿ ಗುಂಡಿನ ಗಾಯಗಳಿದ್ದವು, ಕೈಬೆರಳುಗಳ ಮೂಳೆಗಳು ಮುರಿದಿದ್ದವು ಮತ್ತು ಗುಪ್ತಾಂಗವನ್ನು ಕತ್ತರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಎನ್‌ ಕೌಂಟರ್ ನಡೆದಿದೆ ಎನ್ನಲಾದ ಸ್ಥಳದಲ್ಲಿ ಬಾಬು ಅವರ ಮೃತದೇಹದ ಸಮೀಪವಿದ್ದ ಪಿಸ್ತೂಲಿನಲ್ಲಿ ಅವರ ಬೆರಳಚ್ಚು ಇರಲಿಲ್ಲ ಎನ್ನುವುದು ನಮ್ಮ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮಾನವ ಹಕ್ಕುಗಳ ಆಯೋಗವು ತಿಳಿಸಿದೆ.

“ನಮ್ಮ ಅಭಿಪ್ರಾಯದ ಪ್ರಕಾರ, ಬಾಬು ಪೊಲೀಸ್ ಕಸ್ಟಡಿಯಲ್ಲಿರುವಾಗ ಅವರನ್ನು ಇಬ್ಬರು ಆರೋಪಿ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದಿದ್ದಾರೆ ಎನ್ನುವುದು ಮೇಲೆ ಪ್ರಸ್ತಾವಿಸಲಾಗಿರುವ ಸನ್ನಿವೇಶಗಳು ಸಾಬೀತುಪಡಿಸಿವೆ' ಎಂದು ಆಯೋಗ ಹೇಳಿದೆ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...