ಮಂಗಳೂರಿನಲ್ಲಿ‌ ರ್ಯಾಗಿಂಗ್ ನಡೆಸಿದ ಒಂಬತ್ತು ವಿದ್ಯಾರ್ಥಿಗಳ ಬಂಧನ.

Source: SO News | By Laxmi Tanaya | Published on 22nd January 2021, 7:18 PM | Coastal News |

ಮಂಗಳೂರು : ನಗರ ಹೊರವಲಯದ ವಳಚ್ಚಿಲ್‌ ಶ್ರೀನಿವಾಸ್ ಕಾಲೇಜಿನ ಕಿರಿಯ ವಿದ್ಯಾರ್ಥಿಯೋರ್ವನಿಗೆ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ 9 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

  ಶ್ರೀನಿವಾಸ್ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಾ ಕಲಿಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ರ‍್ಯಾಗಿಂಗ್ ಗೆ ಒಳಗಾಗಿದ್ದು, ಅದೇ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ. ಆರೋಪಿಗಳೆಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿ ತೃತೀಯ ಬಿ ಫಾರ್ಮಾದ ಜಿಷ್ಣು, ಶ್ರೀಕಾಂತ ಪಿ.ವಿ, ಅಶ್ವಂತ್, ಸಯಂತ್, ಅಭಿರತ್ ರಾಜೀವ್, ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ., ಜಿಷ್ಣು, ಮುಕ್ತಾರ್ ಅಲಿ, ಮುಹಮ್ಮದ್ ರಝೀಮ್ ಕೆ. ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಶನರ್ ಶಶಿಕುಮಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಜನವರಿ 10ರಂದು ತರಗತಿ ಮುಗಿಸಿ ಮಧ್ಯಾಹ್ನ 2 ಗಂಟೆಗೆ ತನ್ನ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಹಿರಿಯ ಈ ಆರೋಪಿತ ವಿದ್ಯಾರ್ಥಿಗಳು ತಲೆಕೂದಲು ಹಾಗೂ ಮೀಸೆ ತೆಗೆಸಿ ಬರುವಂತೆ ಗದರಿಸಿದ್ದಲ್ಲದೆ, ಓರ್ವ ಕೆನ್ನೆಗೆ ಬಾರಿಸಿದ್ದಾನೆ. ನಂತರ ಜನವರಿ 12ರಂದು ಅಪರಾಹ್ನ ಅದೇ ವಿದ್ಯಾರ್ಥಿಗಳು ಮೀಸೆ ಹಾಗೂ ತಲೆ ಕೂದಲು ತೆಗೆಯದೆ ಬಂದ ಕಾರಣ ಬೈದು, ಮೀಸೆ ತಲೆ ಕೂದಲು ತೆಗೆಯದಿದ್ದರೆ ತಾವೇ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾಗಿ ರ‍್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಪೊಲೀಸ್ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಕಾಲೇಜಿಗೆ ತೆರಳಿದ ಕಮಿಷನರ್ ಅವರು ರ್ಯಾಗಿಂಗ್ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...