ಕಾರವಾರ: ತಾಲೂಕು ಆಸ್ಪತೆಗಳಲ್ಲಿ ಅರವಳಿಕೆ ತಜ್ಞರನ್ನು ನೇಮಿಸಿ: ರಿತೀಶ್ ಕುಮಾರ್ ಸಿಂಗ್

Source: S O News | By I.G. Bhatkali | Published on 23rd November 2023, 8:43 PM | Coastal News |

ಕಾರವಾರ:  ಜಿಲ್ಲೆಯ ಹಳಿಯಾಳ, ಜೊಯಿಡಾ, ದಾಂಡೇಲಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅನಸ್ತೇಶಿಯ ತಜ್ಞರ ಕೊರತೆಯಿಂದ, ರೋಗಿಗಳು ತೊಂದರೆ ಅನುಭವಿಸುತ್ತಿದ್ದು ಅತ್ಯಂತ ತುರ್ತಾಗಿ ಅವಶ್ಯವಿರುವೆಡೆಗಳಲ್ಲಿ ಅನಸ್ತೇಶಿಯ ತಜ್ಞರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಹಲವು ಹೆರಿಗೆಗಳು ನಡೆಯುತ್ತಿದ್ದು, ಅರವಳಿಕೆ ತಜ್ಞರ ಕೊರತೆಯಿಂದ ರೋಗಿಗಳು ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದು ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಇದನ್ನು ತಪ್ಪಿಸಲು ತಾಲೂಕು ಆಸ್ಪತ್ರೆಗಳಲ್ಲಿ ಅರವಳಿಕೆ ತಜ್ಞರ ಸೇವೆ ಒದಗಿಸುವ ಕುರಿತಂತೆ ಕ್ರಿಮ್ಸ್ ನಲ್ಲಿನ ಅನಸ್ತೇಶಿಯ ತಜ್ಞರನ್ನು ನಿಯೋಜಿಸುವಂತೆ ಕ್ರಿಮ್ಸ್ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲೂಕು ಆಸ್ಪತ್ರೆಗಳಲ್ಲಿರುವ ಇತರೆ ವೈದ್ಯರಿಗೆ ಅರವಳಿಕೆ ನೀಡುವ ಕುರಿತಂತೆ ಅಗತ್ಯವಿರುವ ತರಬೇತಿ ನೀಡಿ, ಅವರ ಸೇವೆಯನ್ನು ಪಡೆಯುಂತೆ ಡಿಹೆಚ್‌ಓ ಗೆ ಸೂಚಿಸಿದರು.

ಪ್ರಸ್ತುತ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆಗಳಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳಿಗೆ ಗೊಂದಲವಿದೆ ಆದ್ದರಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ, ಪ್ರಾಂಶುಪಾಲರು ಮತ್ತು ಮುಖ್ಯೋಪಧ್ಯಾಯರ ಮೂಲಕ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿ, ಅವರಲ್ಲಿನ ಗೊಂದಲಗಳನ್ನು ನಿವಾರಿಸುವಂತೆ ಡಿಡಿಪಿಯು ಮತ್ತು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ದಾಂಡೇಲಿಯಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಸಂಚಾರ ದುಸ್ತರವಾಗಿದೆ ಕೂಡಲೇ ಅಲ್ಲಿನ ಅಗತ್ಯ ರಿಪೇರಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ ಅವರು, ನೀರು ಸರಬರಾಜು ಮತ್ತು ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳುವ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕುರಿತಂತೆ ಅಭ್ಯರ್ಥಿಗಳಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಶೀಘ್ರದಲ್ಲಿ ನೇಮಕಾತಿ ಆದೇಶ ನೀಡುವಂತೆ ಡಿಡಿಪಿಐ ಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬರ ಘೋಷಣೆಯಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಬರ ಪರಿಹಾರದ ಮೊತ್ತವು ರೈತರಿಗೆ ಸಮರ್ಪಕವಾಗಿ ತಲುಪುವ ನಿಟ್ಟಿನಲ್ಲಿ ಫ್ರೂಟ್ಸ್ ತಂತ್ರಾAಶದಲ್ಲಿ 100% ನೊಂದಣಿ ಕಾರ್ಯಗಳನ್ನು ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next