ಧಾರವಾಡ : ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮ ಮೂಲಕ ರಾಜ್ಯದಲ್ಲಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಅನೀಮಿಯಾದಿಂದ ಬಳಲುತ್ತಿರುವುದನ್ನು ತಡೆಗಟ್ಟುವುದು ಮುಖ್ಯ ಉದ್ದೇಶವಾಗಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ತಾಲೂಕಾ ಅರೋಗ್ಯಾಧಿಕಾರಿಗಳ ಕಚೇರಿ ಹಾಗೂ ಜೆ.ಎಸ್.ಎಸ್ ಹುಕ್ಕೇರಿಕರ್ ಪಿಯುಸಿ ಕಾಲೇಜಿನ ಸಹಯೋಗದಲ್ಲಿ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ರಾಜ್ಯದಲ್ಲಿ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವು ನವೆಂಬರ್ 22, 2023 ರಿಂದ ಅನುಷ್ಟಾನಗೊಂಡಿದ್ದು, ಉತ್ತಮ ಆಹಾರ ಸೇವನೆ ಮಾಡಿ, ಅನೀಮಿಯಾ ದಿಂದ ದೂರವಿರಬೇಕು.
ಅನೀಮಿಯಾ ಹೆಚ್ಚಾದಂತೆ ಮಕ್ಕಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರವು ಪರೀಕ್ಷೆ-ಚಿಕಿತ್ಸೆ ಉಚಿತ, ಅನೀಮಿಯಾ ಮುಕ್ತ ಖಚಿತ ಎಂಬ ಘೋಷವಾಕ್ಯದೊಂದಿಗೆ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಎಂದರು.
ಗರ್ಭಿಣಿ ಮಹಿಳೆಯರು ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಸರ್ಕಾರಿ, ಅನುದಾನಿತ ಪಿಯು ಕಾಲೇಜುಗಳ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಎಚ್.ಬಿ ಲೆವೆಲ್ ಪರೀಕ್ಷಿಸಲಾಗುತ್ತದೆ. ಅನೀಮಿಯಾದಿಂದ ಬಳಲುತ್ತಿರುವ ಮಕ್ಕಳಿದ್ದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಉಚಿತ ಪರೀಕ್ಷೆ ಮಾಡಿಸಿಕೊಂಡು, ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ಅವರು ಮಾತನಾಡಿ, ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವು ಸದೃಡ ಭಾರತ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸುತ್ತದೆ. ಸರಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಪಿಯು ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಎಚ್.ಬಿ. ಲೆವೆಲ್ ಪರೀಕ್ಷೆ ಮಾಡಲಾಗುತ್ತದೆ. ಮಕ್ಕಳು ಅನೀಮಿಯಾದಿಂದ ಬಳಲುತ್ತಿದ್ದಲ್ಲಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಹೆಚ್.ಓ. ಅಧಿಕಾರಿ ಡಾ. ಸುಜಾತಾ ಹಸವಿಮಠ ಅವರು ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ ಸರಕಾರಿ, ಅನುದಾನಿತ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಎಲ್ಲ ಆರ್.ಬಿ.ಎಸ್.ಕೆ ತಂಡಗಳು ನವೆಂಬರ್ 22 ರಿಂದ 28 ರವರೆಗೆ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ 90 ಕಾಲೇಜುಗಳಲ್ಲಿ ಉಚಿತ ತಪಾಸಣೆ ಕೈಗೊಂಡು 10,524 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿವೆ. ಜಿಲ್ಲೆಯಲ್ಲಿ ಅಂದಾಜು 168 ಸರಕಾರಿ ಮತ6ತು ಅನುದಾನಿತ ಪಿಯು ಕಾಲೇಜುಗಳಲ್ಲಿ 27,000 ವಿದ್ಯಾರ್ಥಿಗಳಿದ್ದಾರೆ ಎಂದು ಅವರು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳ ತಪಾಸಣೆ ಪೂರ್ಣಗೊಂಡ ತಕ್ಷಣ ಪ್ರಾಥಮಿಕ,ಪ್ರೌಢ ಮತ್ತು ಅಂಗನವಾಡಿ ಕೇಂದ್ರಗಳ ಮಕ್ಕಳ ತಪಾಸಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಹುಕ್ಕೇರಿಕರ್ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಶಾನಭಾಗ, ತಾಲೂಕಾ ಆರೋಗ್ಯಾಧಿಕಾರಿ ಡಾ.ತನುಜಾ ಕೆ.ಎನ್, ಮದಾರಮಡ್ಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರುಣಾ ಅಸ್ಪೀಕರ್ ಅವರು ಉಪಸ್ಥಿತರಿದ್ದರು.
ಕವಿತಾ ಗಾರ್ಗಿ ಕಾರ್ಯಕ್ರಮ ನಿರೂಪಿಸಿದರು. ಆರ್.ಬಿ.ಎಸ್.ಕೆ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.