ಆಹಾರ ಪೂರೈಕೆಯಲ್ಲಿ ಅಕ್ರಮ ಆರೋಪ – ಸಚಿವೆ ಹೆಬ್ಬಾಳ್ಕರ್ ವಿರುದ್ದ ತನಿಖೆಗೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ

Source: SO News | By Laxmi Tanaya | Published on 24th November 2023, 10:57 PM | Coastal News |

ಉಡುಪಿ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ಸರಬರಾಜಿನಲ್ಲಿ ಅಕ್ರಮದ ಆರೋಪ ಹೊತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತನಿಖೆ ನಡೆಸುವಂತೆ  ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಆಗ್ರಹಿಸಿದೆ. ಈ ಸಂಬಂಧ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಬಡ ಮಕ್ಕಳ ಅಪೌಷ್ಟಿಕತೆಯ ನಿವಾರಣೆ ಸದುದ್ದೇಶದಿಂದ ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿ ಹಲವಾರು ವರ್ಷಗಳಿಂದ ಜಾರಿ ಮಾಡಿಕೊಂಡು ಬರಲಾಗುತ್ತಿದೆ. ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ಸರಬರಾಜನ ಟೆಂಡರ್ ನಲ್ಲಿ ಭ್ರಷ್ಟಾಚಾರ ಎಸೆಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿರುತ್ತದೆ. ದೂರಿನಲ್ಲಿ ಸುಮಾರು 600 ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರದ ಆರೋಪ ದಾಖಲಾಗಿದೆ. ಈ ಹಿಂದೆ ಸರಕಾರದಿಂದ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟ ಸಂಸ್ಥೆಯೊಂದರ ಕೃಪಾಪೋಷಿತ ಸ್ವ ಸಹಾಯ ಸಂಘಗಳಿಗೆ ಅಕ್ರಮವಾಗಿ ಟೆಂಡರ್ ಅಂತಿಮಗೊಳಿಸಿದ ಆರೋಪ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರದ ಸರಬರಾಜಿನಲ್ಲಿ ಭ್ರಷ್ಟಾಚಾರವೆಸಗಿದ ಗಂಭೀರ ಆರೋಪ ಲಕ್ಷ್ಮಿ ಹೆಬ್ಬಾಳ್ಕರ್  ಮೇಲಿದ್ದು ಈ ಬಗ್ಗೆ ಸರಕಾರದಿಂದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಪದಾಧಿಕಾರಿಗಳಾದ ಗೀತಾಂಜಲಿ ಸುವರ್ಣ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಮಾಯಾ ಕಾಮತ್, ಸುಜಲ ಸತೀಶ್, ಅಶ್ವಿನಿ ಶೆಟ್ಟಿ, ಸುಧಾ ಪೈ, ಸುಗುಣ, ಸುಜಾತ, ಚಂದ್ರಿಕಾ, ಸುಮಾ, ನೀರಜ ಶೆಟ್ಟಿ, ಲಕ್ಷ್ಮೀ ಹೆಬ್ಬಾರ್, ಶ್ರೀ ದೇವಿ, ರಾಧಿಕಾ, ಜ್ಯೋತಿ, ಪ್ರತಿಮಾ ನಾಯಕ್, ಆಶಾ ಹೆಗಡೆ ಉಪಸ್ಥಿತರಿದ್ದರು.

Read These Next