ಕಾರವಾರ: ಬರಪರಿಹಾರ ಕಾಮಗಾರಿಗಳಿಗೆ 5.70ಕೋಟಿ ರೂ. ಬಿಡುಗಡೆ: ಸಚಿವ ಆರ್.ವಿ.ದೇಶಪಾಂಡೆ

Source: varthabhavan | By Arshad Koppa | Published on 22nd February 2017, 8:24 AM | Coastal News |

ಕಾರವಾರ ಫೆಬ್ರವರಿ 20 : ಜಿಲ್ಲೆಯ 7ತಾಲೂಕುಗಳನ್ನು ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬರಪರಿಹಾರ ಕಾಮಗಾರಿಗಳಿಗಾಗಿ ಇನ್ನೂ 5.70 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ತಿಳಿಸಿದರು.


ಅವರು ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಬರಪರಿಹಾರ ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸಿದರು.


ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಈ ಬಾರಿ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದ್ದು, ಇದನ್ನು ಎದುರಿಸಲು ಸರ್ವಸಿದ್ಧತೆ ಮಾಡಲಾಗಿದೆ. ಹಳಿಯಾಳ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ಭಟ್ಕಳ, ಹೊನ್ನಾವರ ಮತ್ತು ಜೊಯಿಡಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಅನುದಾನ ಬಿಡುಗಡೆ: ಬರಪರಿಹಾರ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ. ಪ್ರತಿ ತಹಶೀಲ್ದಾರ್ ಬಳಿ ತುರ್ತು ಕಾಮಗಾರಿಗಳಿಗೆ 20ರಿಂದ 30ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಬರಪೀಡಿತ ತಾಲೂಕುಗಳಿಗೆ ತಲಾ 60ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ ತಾಲೂಕುಗಳಿಗೆ ಕುಡಿಯುವ ನೀರು, ಮೇವು ಪೂರೈಕೆ ಇತ್ಯಾದಿಗಳಿಗೆ 40ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.


ಇದನ್ನು ಹೊರತುಪಡಿಸಿ ಜಿಲ್ಲಾಧಿಕಾರಿ ಖಾತೆಗೆ ಕುಡಿಯುವ ನೀರಿನ ಕಾಮಗಾರಿಗಳಿಗೆ 1.60ಕೋಟಿ ರೂ, ಮೇವು ಪೂರೈಕೆಗೆ 80ಲಕ್ಷ ರೂ ಸೇರಿದಂತೆ 3.60ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್‍ನಿಂದ 3.20ಕೋಟಿ ರೂ. ಪ್ರಸ್ತಾವನೆ ಸ್ವೀಕರಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತ್‍ಗಳಿಗೆ ಕುಡಿಯುವ ನೀರಿನ ತುರ್ತು ಕಾರ್ಯಗಳಿಗೆ ತಲಾ 1.5ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದ್ದು, 8086ಮೇವಿನ ಕಿಟ್ ಪೂರೈಕೆ ಮಾಡಲಾಗಿದೆ ಎಂದು ಹೇಳಿದರು.
ಶಿಸ್ತು ಕ್ರಮ: ಬರಪರಿಹಾರ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ವಹಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಎಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ನಿರಂತರ ಭೇಟಿ ನೀಡಿ ಕುಡಿಯುವ ನೀರು, ಹಾಗೂ ಮೇವಿನ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು. ಎಲ್ಲಾ ಪ್ರಮುಖ ಕಚೇರಿಗಳಲ್ಲಿ ಸ್ಪಂದನ ಕೋಶಗಳನ್ನು ತೆರೆಯಬೇಕು. ಕುಡಿಯುವ ನೀರಿನ ಬಗ್ಗೆ ಜನರಿಂದ ಅಹವಾಲು ಬಂದ ತಕ್ಷಣ ಸ್ಪಂದಿಸಬೇಕು ಎಂದು ಅವರು ಸೂಚನೆ ನೀಡಿದರು.

ರಸ್ತೆಗಳಿಗೆ ಪಂಪನ ಹೆಸರು: ನಿನ್ನೆ ಮುಕ್ತಾಯವಾದ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ನಾಡಿನ ಹಿರಿಯ ಕವಿ ಬಿ.ಎ.ಸನದಿ ಅವರು ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಪಂಪ ಮಹಾಕವಿ ಹೆಸರು ಇಡಲು ಮನವಿ ಮಾಡಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು. ಶಿರಸಿ-ಬನವಾಸಿ ರಸ್ತೆಗೆ ಪಂಪ ಮಹಾಕವಿ ಹೆಸರು ಇಡಲು ಈಗಾಗಲೇ ಉತ್ಸವದಲ್ಲಿ ಘೋಷಣೆ ಮಾಡಲಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಗ್ರಾಮಪಂಚಾಯತ್‍ಗಳಲ್ಲಿ ಕ್ರೀಡಾಂಗಣ: ಮಕ್ಕಳ ಸಮಗ್ರ ಬೆಳವಣ ಗೆಗೆ ಪೂರಕವಾಗಿ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಗಳಲ್ಲಿ ಲಭ್ಯವಿರುವ ಜಮೀನು ಗುರುತಿಸಲು ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯ 15ದಿನಗಳ ಒಳಗಾಗಿ ಕ್ರೀಡಾಂಗಣ ನಿರ್ಮಾಣ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿ, ಮುಂದಿನ 3ತಿಂಗಳ ಒಳಗಾಗಿ ಕಾಮಗಾರಿ ಆರಂಭವಾಗಬೇಕು ಎಂದು ಹೇಳಿದರು.

ಅಂಗನವಾಡಿಗಳಿಗೆ ಬಿಸ್ಕೀಟ್: ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಹಲವಾರು ಜನಪರ ಕಾರ್ಯಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಜಿಲ್ಲೆಯ ಅಂಗನವಾಡಿಗಳಲ್ಲಿ 43ಸಾವಿರ ಮಕ್ಕಳಿದ್ದು, ಅವರಿಗೆ ವಾರಕ್ಕೊಮ್ಮೆ ಪ್ರೊಟೀನ್‍ಯುಕ್ತ ಬಿಸ್ಕೀಟ್ ಪಾಕೇಟ್ ಒದಗಿಸಲು ಬ್ರಿಟಾನಿಯಾ ಕಂಪೆನಿ ಒಪ್ಪಿಕೊಂಡಿದೆ. ಎಪ್ರಿಲ್ ತಿಂಗಳಿನಿಂದ ಕಂಪೆನಿ ಬಿಸ್ಕಿಟ್ ಒದಗಿಸಲಿದೆ. ಇದೇ ರೀತಿ ಎಲ್ಲಾ ಅಂಗನವಾಡಿಗಳಿಗೆ ಆಟಿಕೆ ಸಾಮಾಗ್ರಿಗಳನ್ನು ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಉಪಾಧ್ಯಕ್ಷ ಸಂತೋಷ ಶಂಕರ ರೇಣಕೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ವಿನಾಯಕ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...