ಭಟ್ಕಳ :ಮೊದಲ ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ:ಪರಿಹಾರಕ್ಕೆ ಸುನೀಲ್ ನಾಯ್ಕ ಸೂಚನೆ

Source: so news | By MV Bhatkal | Published on 22nd June 2018, 9:28 PM | Coastal News |

ಭಟ್ಕಳ : ಮುಂದಿನ ಕೆಡಿಪಿ ಸಭೆಯಲ್ಲಿ ಆಯಾ ಇಲಾಖೆಯ ಪ್ರಥಮ  ಧಿಕಾರಿಗಳೇ ಸಭೆಗೆ ಹಾಜರಾಗಬೇಕೆಂದು ಶಾಸಕ ಸುನೀಲ್ ನಾಯ್ಕ ಸಭೆಯಲ್ಲಿ ಠರಾವು ಮಾಡುವಂತೆ ಗುರುವಾರದಂದು ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಮೊಟ್ಟ ಮೊದಲ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಸುನಿಲ ನಾಯ್ಕ ಆದೇಶ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯಿಂದ ವರದಿ ವಾಚನವನ್ನು ಆರಂಭಿಸಿದ ಶಾಸಕ ಸುನಿಲ ಇಲ್ಲಿನ ಬೆಳಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬರುವಂತಹ ರೋಗಿಗಳ ತಪಾಸಣೆಗೆ ವೈದ್ಯರಿಲ್ಲದೇ ಸ್ಟಾಫ್ ನರ್ಸ್‍ನಲ್ಲಿ ಆಸ್ಪತ್ರೆ ನಡೆಸುತ್ತಿದ್ದೀರಿ. ಅದೇ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಜೆ 4.30 ಕ್ಕೆ ಮುಚ್ಚಲಾಗುತ್ತಿದ್ದು, ಅದರ ಬಳಿಕ ಬರುವಂತಹ ರೋಗಿಗಳಿಗೆ ತುರ್ತು ಸೇವೆಗೆ ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಶಾಸಕ ಸುನಿಲ್ ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್ ಅವರಿಗೆ ಪ್ರಶ್ನಿಸಿದರು. ಆಸ್ಪತ್ರೆ ಅಭಿವೃದ್ಧಿಯತ್ತ ಗಮನ ಹರಿಸುವಂತೆ ಲಿಖಿತ ರೂಪದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ವರದಿ ಮಾಡುವಂತೆ ಸೂಚನೆ ನೀಡಿದರು.
ಇನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನಕರ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ವಿವರಿಸಿದ್ದು, ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆಯನ್ನು ನೀಡುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಕಾರ್ಯ ನಿರ್ವಹಿಸದೇ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದಿದ್ದು ಒಂದು ವೇಳೆ ಅಂತ ಸಮಸ್ಯೆಯಾಗಿದ್ದಲ್ಲಿ ಅದಕ್ಕೆ ವೈದ್ಯರುಗಳೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಕೆಯನ್ನು ನೀಡಿದರು. ಅದೇ ರೀತಿ ತಾಲೂಕ ಆಸ್ಪತ್ರೆಯಲ್ಲಿ ಇನ್ನೂ ತನಕ ಜನೌಷಧಿ ಕೇಂದ್ರ ಆಗದೇ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದ್ದು ಇದಕ್ಕೆ ನಮ್ಮಲ್ಲಿ ಈಗಾಗಲೇ ಜನೌಷಧಿ ಕೇಂದ್ರದ ತಯಾರಿ ಜೊತೆಗೆ ಟೆಂಡರ್ ಕರೆಯಲಾಗಿದ್ದು ಎಲ್ಲ ರೀತಿಯ ವ್ಯವಸ್ಥೆ ತಯಾರಾಗಿದೆ. ಇನ್ನೇನಿದ್ದರೂ ಈ ಬಗ್ಗೆ ಶೀಘ್ರದಲ್ಲಿಯೇ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು. 
ಇನ್ನು ಕೃಷಿ ಇಲಾಖೆ ಅಧಿಕಾರಿಗೆ ನಗರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯಕ್ರಮವನ್ನು ಹೆಚ್ಚಾಗಿ ಮಾಡುವಂತೆ ಸೂಚನೆ ನೀಡಿ ನೀಡಿದ್ದು, ಕೇವಲ ಪ್ರಚಾರ ಮಾಡಿದರೆ ಏನೂ ಪ್ರಯೋಜನವಿಲ್ಲ ಕಾರ್ಯಕ್ರಮ ಹಾಗೂ ಸರಿಯಾದ ಮಾಹಿತಿಯನ್ನು ನೀಡುವುದರ ಮೂಲಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಸೂಚನೆ ನೀಡಿದರು. ಭಟ್ಕಳ ಮಲ್ಲಿಗೆ ಬೆಳೆಗೆ ಹೆಸರುವಾಸಿಯಾಗಿದ್ದು ಈ ಬೆಳೆಯ ಬಗ್ಗೆ ಹೆಚ್ಚಿನ ಉತ್ತೇಜನ ಹಾಗೂ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕೆಂದು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
2017-18 ನೇ ಸಾಲಿನಲ್ಲಿ ಇಲ್ಲಿನ ತೆರ್ನಮಕ್ಕಿ ಶಾಲೆಯಲ್ಲಿ ಅಡುಗೆ ಸಹಾಯಕಿಯೋರ್ವರು ಅಡುಗೆ ವೇಳೆ ಕುಕ್ಕರ್ ಸಿಡಿದು ಆಸ್ಪತ್ರೆಗೆ ಸೇರಿದ್ದು ಇದರ ಖರ್ಚು ಇಷ್ಟು ವರ್ಷವಾದರು ಸಹ ಅಕ್ಷರ ದಾಸೋಹ ಇಲಾಖೆಯಿಂದ ನೀಡದಿರುವ ಬಗ್ಗೆ ಅಧಿಕಾರಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ಹಾಗೂ ಈ ಬಗ್ಗೆ ಶೀಘ್ರದಲ್ಲಿಯೇ ಸಹಾಯಕಿಗೆ ಹಣವನ್ನು ನೀಡಲು ಸೂಚನೆಯನ್ನು ನೀಡಿದರು.
ಹಾಗೂ ಇಲ್ಲಿನ ಹೆರಾಡಿ ಎಂಬ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆ ಇದ್ದು, ಈ ಗ್ರಾಮ ಅರ್ಧ ಹೊನ್ನಾವರ ಅರ್ಧ ಭಟ್ಕಳ ತಾಲೂಕಿಗೆ ಬರಲಿದ್ದು, ಈ ಬಗ್ಗೆ ಸ್ಥಳೀಯರು ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ ಇಲಾಖೆಗೆ ಕೇಳಿದರೆ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಶಾಸಕರಿಗೆ ಈ ಬಗ್ಗೆ ದೂರನ್ನು ನೀಡಿದ್ದÀನ್ವಯ ಶಾಸಕ ಸುನಿಲ್ ನಾಯ್ಕ ನೇತೃತ್ವದಲ್ಲಿ ಹೊನ್ನಾವರ ಹಾಗೂ ಭಟ್ಕಳ ಹೆಸ್ಕಾಂ ವಿಭಾಗದ ಅಧಿಕಾರಿಗಳನ್ನು ಕರೆಯಲಿದ್ದೇನೆ ಈ ಸಭೆಗೆ ಹಾಜರಾಗಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ತಿಳಿಸಿದರು.  
ಕೆಲ ದಿನಗಳಿಂದ ಭಟ್ಕಳದಿಂದ ಹೊನ್ನಾವರಕ್ಕೆ ಬೆಳಿಗ್ಗೆ 7 ತೆರಳಬೇಕಾದ ಬಸ್ಸು ವಿಳಂಬವಾದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳು ಶಾಸಕರಿಗೆ ದೂರವಾಣಿ ಕರೆ ಮೂಲಕ ದೂರನ್ನು ನೀಡಿದ್ದು, ಈ ಬಗ್ಗೆ ಸಭೆಯಲ್ಲಿ ಹಾಜರಾಗಿದ್ದ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರವರಿಗೆ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜಿಗೆ ತೆರಳಲು ತಡವಾಗದಂತೆ ಬಸ್ಸನ್ನು ಬೇಗನೆ ಬಿಡಲು ತಾಕೀತು ಮಾಡಿದರು.
ಜಿಲ್ಲೆಯನ್ನು ಕಾಡುತ್ತಿರುವ ಅತಿಕ್ರಮಣ ಸಮಸ್ಯೆ ಬಗ್ಗೆ ಮಾತನಾಡಿದ ಶಾಸಕ ಸುನಿಲ್ ನಾಯ್ಕ ‘ಹೊಸ ಅತಿಕ್ರಮಣದಾರರಿಗೆ ಇಲಾಖೆ ನೀಡುತ್ತಿರುವ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಜನಪ್ರತಿನಿಧಿಯಾಗಿ ನನ್ನ ಯಾವುದೇ ಅಭ್ಯಂತರವಿಲ್ಲ. ಆದರೆ ಈಗಾಗಲೇ ಹಲವು ವರ್ಷಗಳಿಂದ ಹಳೆ ಅತಿಕ್ರಮಣದಾರರು ತಮ್ಮ ಮನೆ ರಿಪೇರಿಗೆ ಇಲಾಖೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಸುನೀಲ್ ನಾಯ್ಕ ಸೂಚಿಸುವುದರೊಂದಿಗೆ ಅತಿಕ್ರಮಣದಾರರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಿ ಮನೆ ರಿಪೇರಿಗೆ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈಗಾಗಲೇ ಮಳೆಗಾಲ ಆರಂಭವಾಗಿದ್ದು ಒಂದು ವೇಳೆ ನೆರೆ ಹಾವಳಿ ಸಂಭವಿಸಿದರೆ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಹಸೀಲ್ದಾರ್ ಬಳಿ ಪ್ರಶ್ನಿಸಿದಾಗ ಈಗಾಗಲೇ ನೆರೆಹಾವಳಿ ಮುಂಜಾಗೃತವಾಗಿ ಈಜುಗಾರರು ಹಾಗೂ ಜೆಸಿಬಿ ಆಪರೇಟರ್ ಗಳ ಮೊಬೈಲ್ ನಂಬರನ್ನು ಪಡೆದಿದ್ದು ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ತಯಾರಿಯನ್ನು ಇಲಾಖೆಯಿಂದ ತೆಗೆದುಕೊಳ್ಳಲಾಗಿದೆ ಎಂದರು.
ನೆರೆಹಾವಳಿ ವೇಳೆ ಜನ ಸಂಪರ್ಕಕ್ಕೆ ಎಲ್ಲಾ ಪಂಚಾಯತ್ ಪಿಡಿಒ ಹೆಸರು ಹಾಗೂ ಮೊಬೈಲ್ ನಂಬರ್ ಜೊತೆಗೆ ಗ್ರಾಮ ಲೆಕ್ಕಾಧಿಕಾರಿ ನಂಬರ್ ಹೆಸರು ಆಯಾ ಗ್ರಾ.ಪಂ. ಹೊರಗಡೆ ನಮೂದಿಸುವಂತೆ ಶಾಸಕ ಸುನೀಲ್ ತಿಳಿಸಿದರು. 
ಇದೇ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನ ಹಿರಿಯ ನಾಗರಿಕ ಕಲ್ಯಾಣ ಇಲಾಖೆಯ 2016-17ನೇ ಸಾಲಿನ ವಿಕಲಚೇತನ ವಿದ್ಯಾರ್ಥಿಗೆ ಶಾಸಕ ಸುನಿಲ ಉಚಿತ ಲ್ಯಾಪ ಟಾಪ್ ವಿತರಣೆ ಮಾಡಿದರು. 
ಸಭೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳಾದ ತಾಲುಕು ಪಂಚಾಯ್ತಿ ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಟ್ಟಪ್ಪ ನಾಯ್ಕ ಸೇರಿದಂತೆ ಇನ್ನುಳಿದ ಕಾಂಗ್ರೆಸ್ ಸದಸ್ಯರು ಗೈರು ಹಾಜರಿದ್ದರು. 
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ, ತಹಸೀಲ್ದಾರ್ ವಿ.ಪಿ.ಕೊಟ್ರಳ್ಳಿ, ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗಮ್ಮ ಗೊಂಡ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...