“ವಿಶ್ವ ಓಝೋನ ದಿನಾಚರಣೆ”; ರಾಷ್ಟ್ರ ಮಟ್ಟದ ವಿದ್ಯಾರ್ಥಿಗಳ ವಿಚಾರ ಸಂಕಿರಣ

Source: sonews | By Staff Correspondent | Published on 16th September 2019, 10:38 PM | State News |

ಬೆಳಗಾವಿ: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕತಂತ್ರಜ್ಞಾನ ವಿಭಾಗಗಳ ಮತ್ತು ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕದ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಓಝೋನ ದಿನಾಚರಣೆ”ಯ ಅಂಗವಾಗಿ ಒಂದು ದಿನದ ರಾಷ್ಟ್ರ ಮಟ್ಟದ ವಿದ್ಯಾರ್ಥಿಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ಸರ್.ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಜರುಗಿತು.
    
ಸಸಿಗೆ ನೀರುಣಿಸುವ ಮೂಲಕ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಹಸಿರು ಸಂರಕ್ಷಣಾ ಸಂಘಟನೆಯ ಸಂಸ್ಥಾಪಕ ಸದಸ್ಯರು ಮತ್ತು ಬೆಳಗಾವಿಯ ಕೈಗಾರಿಕಾ ನಿರ್ವಹಣಾ ವ್ಯವಸ್ಥೆಯ ಸಲಹೆಗಾರರೂ ಆದ ಶ್ರೀ. ಜಯದೀಪ ಲೆಂಗಡೆ ಅವರು ಮಾತನಾಡುತ್ತಾ, ಜಾಗತಿಕವಾಗಿ ಪ್ರತಿದಿನ 02.5 ಲಕ್ಷ ಲಾರಿ ತ್ಯಾಜ್ಯವಸ್ತು ಸೃಷ್ಟಿಯಾಗುತ್ತದೆ.  ಬೆಳಗಾವಿಯಲ್ಲಿ ಪ್ರತಿದಿನ 60 ಲಾರಿ ತ್ಯಾಜ್ಯವಸ್ತು ನಿರ್ಮಾಣವಾಗುತ್ತದೆ.  ಪ್ರತಿವ್ಯಕ್ತಿ ಪ್ರತಿದಿನ 500 ಗ್ರಾಂ ತ್ಯಾಜ್ಯವಸ್ತು ಸೃಷ್ಟಿಸುತ್ತಾನೆ.  ಇದರಿಂದ ಪರಿಸರ, ಭೂಮಿ, ಸಸಿವೃಕ್ಷಗಳ ಮೇಲೆ ದುಷ್ಪರಿಣಾಮವಾಗುತ್ತದೆ.  ತ್ಯಾಜ್ಯವಸ್ತುಗಳನ್ನು ಸೃಷ್ಟಿಸುವದರಿಂದ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.  ಪ್ರತಿ ವ್ಯಕ್ತಿಯು ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕು.  ಪ್ರತಿನಾಗರೀಕನು ಜೀವನ ಶೈಲಿಯನ್ನು ಬದಲಾವಣೆಮಾಡಿಕೊಳ್ಳಬೇಕು.  ಪ್ರತಿವ್ಯಕ್ತಿಯು ಪರಿಸರಕ್ಕೆ ಗೌರವ ಸಲ್ಲಿಸಬೇಕು.  ಪರಿಸರ ಸಂರಕ್ಷಣೆಯಲ್ಲಿ ಪ್ರತಿ ನಾಗರೀಕನು ಷಟ್‍ಸೂತ್ರಗಳಾದ  ಪ್ಲಾಸ್ಟಿಕ್ ವಸ್ತುಗಳ ತಿರಸ್ಕಾರ, ಪ್ಲಾಸ್ಟಿಕ್ ಸಂಪನ್ಮೂಲಗಳ ಅಲ್ಪಬಳಕೆ, ಪ್ರತಿ ವಸ್ತುಗಳ ಮರುಬಳಕೆ, ವಸ್ತುಗಳ ದುರಸ್ತಿ, ಮರು ಉಪಯೋಗ, ಮತ್ತು ವಸ್ತುಗಳ ವಿಭಜಿಸುವಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮುಂದಿನ ಭವಿಷ್ಯದ ಜನಾಂಗಕ್ಕೆ ಶುದ್ಧಪರಿಸರವನ್ನು ಸಂರಕ್ಷಿಸಿದಂತಾಗುತ್ತದೆ ಎಂದು ಕರೆನೀಡಿದರು.    
    
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಮಾತನಾಡುತ್ತಾ, ವ್ಯಕ್ತಿಯು ಸಾಮಾನ್ಯ ಬದುಕನ್ನು ನಡೆಸಬೇಕು.  ಓಝೋನ ನಾಗರೀಕನಿಗೆ ಆರೋಗ್ಯ ಮತ್ತು ಪೌಷ್ಠಿಕಾಂಶಗಳನ್ನುಳ್ಳ ಕಿರಣಗಳಿಂದ ಕೂಡಿರುತ್ತದೆ. ಓಝೋನ ಕಿರಣಗಳು ಜೀವನದ ಬೆಳವಣಿಗೆಗೆ ಪೂರಕವಾಗಿರುತ್ತವೆ. ಕೈಗಾರಿಕೆಗಳು ಸಿ.ಎಪ್.ಸಿ.ಯನ್ನು ಅಲ್ಪಪ್ರಮಾಣದಲ್ಲಿ ಬಳಸಿ ಅಲ್ಪವಸ್ತುಗಳನ್ನು ತಯಾರಿಸಿದಾಗ ಪರಿಸರದಲ್ಲಿ ಸ್ಥಿರತೆಯನ್ನು ಸಂರಕ್ಷಿಸಿದಂತೆ ಆಗುತ್ತದೆ ಎಂದು ನುಡಿದರು. 
    
ಪ್ರಾರಂಭದಲ್ಲಿ ಕುಮಾರ ಪ್ರತೀಕ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.  ಕುಮಾರಿ. ಕಾಮಾಕ್ಷಿ ನಾಯ್ಕ ಸರ್ವರನ್ನು ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.  ಪ್ರೊ. ಆರ್.ಆರ್. ವಡಗಾವಿ ಮಹಾವಿದ್ಯಾಲಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ. ಪೃಥ್ವಿರಾಜ ಚವ್ಹಾಣ ವಂದಿಸಿದರು.  ಕುಮಾರಿ. ವೈಶಾಲಿ ಮತ್ತು ಕುಮಾರಿ. ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Read These Next