ಭಟ್ಕಳ:ಇಲ್ಲಿನ ಸಾ್ಗರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಎದುರು ಬೈಕ್ ಸವಾರರೊಬ್ಬರಿಗೆ ಕಾಡು ಹಂದಿಗಳ ಹಿಂಡು ಅಡ್ಡ ಬಂದಿದ್ದಲ್ಲದೇ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.
ಮಾರುಕೇರಿಯ ಕೋಟಖಂಡದ ಕಲ್ಲಬ್ಬೆ ನಿವಾಸಿ ಗೋಪಾಲ ಮಾದೇವ ಪ್ರಭು ಎನ್ನುವವರೇ ಕಾಡು ಹಂದಿ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಇವರು ಅ. 3 ರಂದು ರಾತ್ರಿ 10.30 ಗಂಟೆಗೆ ಪಟ್ಟಣದಿಂದ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಸಾಗರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ದಿಢೀರ್ ಹಂದಿಗಳ ಹಿಂಡು ಅಡ್ಡ ಬಂದಿದ್ದಲ್ಲದೇ, ಆಯತಪ್ಪಿ ಬಿದ್ದಿರುವ ಇವರಿಗೆ ದಾಳಿ ಮಾಡಿ ಎರಡು ಕೈ, ಮುಖ, ಹಣೆ ಮುಂತಾದ ಭಾಗಗಳಿಗೆ ಗಾಯಗೊಳಿಸಿದೆ. ಅಂದು ಎಚ್ಚರ ತಪ್ಪಿ ಬಿದ್ದಿದ್ದ ಇವರನ್ನು ದಾರಿಹೋಕ ಯಾರೋ ವ್ಯಕ್ತಿಗಳು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.