‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!?

Source: sonews | By Staff Correspondent | Published on 28th March 2020, 11:59 PM | State News | Special Report | Don't Miss |

ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ಸಮುದಾಯದವರು’ ಎಂಬ ತಲೆಬರಹದ ವರದಿಯ ಕುರಿತಂತೆ ನಾಡಿನ ವಿವಿಧ ಸಂಘಟನೆಗಳು, ಪ್ರಜ್ಞಾವಂತರು ತೀವ್ರ ಆಘಾತ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಸಂಘಟನೆಗಳು ಈ ವರದಿಯ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿವೆ.

ಕರ್ನಾಟಕದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ಮೂವರು ಒಂದೇ ಸಮುದಾಯಕ್ಕೆ ಸೇರಿದವರೆಂಬುದನ್ನೇ ಸಬೂಬಾಗಿಸಿಕೊಂಡು ಈ ಪತ್ರಿಕೆಯು ಸಂಪೂರ್ಣ ಕೊರೋನ ಸೋಂಕಿನ ಸಮಸ್ಯೆಯನ್ನು ಒಂದು ಸಮುದಾಯದ ಕೊರಳಿಗೆ ಕಟ್ಟಲು ಶ್ರಮಿಸಿದೆ. ಇದು ತೀರಾ ಅಮಾನುಷ ಹಾಗೂ ಬೇಜವಾಬ್ದಾರಿತನದ ವರ್ತನೆ ಎಂದು ವಿವಿಧ ಸಂಘಟನೆಗಳ ಮುಖಂಡರು ಟೀಕಿಸಿದ್ದಾರೆ. ದೇಶದಲ್ಲಿ ಒಟ್ಟು 21 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದು, ಅವರೆಲ್ಲ ಬೇರೆ ಬೇರೆ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಅವರಲ್ಲಿ ಇಬ್ಬರು ವಿದೇಶಿಯರೂ ಸೇರಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಇಡೀ ದೇಶವೇ ಜಾತಿ, ಧರ್ಮಗಳನ್ನು ಬದಿಗಿಟ್ಟು, ಒಂದಾಗಿ ಕೊರೋನ ವಿರುದ್ಧ ಸೆಣಸಾಡಬೇಕಾದ ಈ ಸಂದರ್ಭದಲ್ಲಿ, ಈ ಪತ್ರಿಕೆ ಕೊರೋನ ಹೆಸರಲ್ಲಿ ಸಮಾಜದಲ್ಲಿ ಕೋಮು ವೈಷಮ್ಯ ಹಬ್ಬಿ ಜನರಲ್ಲಿ ಪರಸ್ಪರ ದ್ವೇಷ ಹಾಗೂ ಅಪನಂಬಿಕೆ ಹಂಚಲು ಹೊರಟಿರುವುದು ತೀರಾ ಹೀನ ಕೃತ್ಯವಾಗಿದೆ. ಈ ಪತ್ರಿಕೆಯ ಮನಸ್ಥಿತಿ ಕೊರೋನ ವೈರಸ್‌ ನಷ್ಟೇ ಅಪಾಯಕಾರಿ ಎಂದು ಹಲವು ಪ್ರಮುಖರು ಖೇದ ವ್ಯಕ್ತಪಡಿಸಿದ್ದಾರೆ.

ವಾಸ್ತವ ಏನು?

ಜಗತ್ತಿನ ಹೆಚ್ಚಿನ ಎಲ್ಲ ವಾರ್ತಾ ಸಂಸ್ಥೆಗಳು ತಿಳಿಸಿರುವ ಪ್ರಕಾರ ಜಗತ್ತಿನೆಲ್ಲೆಡೆಯಿಂದ ಮುಸ್ಲಿಮರು ಯಾತ್ರೆಗೆ ಹೋಗುವ ಸೌದಿ ಅರೇಬಿಯದ ಮಕ್ಕಾ ಮತ್ತು ಮದೀನಾ ನಗರಗಳಲ್ಲಿರುವ ಪವಿತ್ರ ಮಸೀದಿಗಳನ್ನು ಈ ವರ್ಷ ಫೆಬ್ರವರಿ 26ರಂದೇ ಮುಚ್ಚಲಾಗಿದೆ. ಕೊರೋನ ಸೋಂಕಿನ ಸಮಸ್ಯೆ ಸಂಪೂರ್ಣ ಬಗೆಹರಿಯುವ ತನಕ ಅವುಗಳನ್ನು ತೆರೆಯಲಾಗುವುದಿಲ್ಲ ಮತ್ತು ಅಲ್ಲಿ ಯಾವ ಯಾತ್ರಿಕರಿಗೂ ಪ್ರವೇಶ ನೀಡಲಾಗುವುದಿಲ್ಲ ಎಂದು ಘೋಷಿಸಲಾಗಿದೆ. ಈ ರೀತಿ, ಒಂದು ತಿಂಗಳ ಹಿಂದೆಯೇ ಮುಚ್ಚಲಾದ ಒಂದು ಧಾರ್ಮಿಕ ಕೇಂದ್ರವನ್ನು ಇತ್ತೀಚಿನ ಸೋಂಕುಗಳಿಗಾಗಿ ದೂಷಿಸುವುದು ತೀರಾ ರೋಗಗ್ರಸ್ತ ಮಾನಸಿಕತೆಯನ್ನಷ್ಟೇ ಬಿಂಬಿಸುತ್ತದೆ. ಕೊಲ್ಲಿ ದೇಶಗಳಿಂದ ಭಾರತಕ್ಕೆ ಬರುವ ಒಂದು ನಿರ್ದಿಷ್ಟ ಸಮುದಾಯದ ಜನರು ಕೊರೋನ ವೈರಸ್ ತರುತ್ತಾರೆ ಎಂಬರ್ಥದ ವದಂತಿ ಹರಡುತ್ತಿರುವವರು ದಯವಿಟ್ಟು ಗಮನಿಸಬೇಕು;

 ಕೊಲ್ಲಿ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಸೌದಿ ಅರೇಬಿಯ, ಯುಎಇ, ಒಮಾನ್, ಕುವೈತ್ , ಖತರ್ ಮತ್ತು ಬಹರೈನ್ ಗಳಲ್ಲಿ ಒಂದು ಕೋಟಿಗೂ ಹೆಚ್ಚು ಭಾರತೀಯರು ಉದ್ಯೋಗ ಅಥವಾ ವ್ಯಾಪಾರೋದ್ಯಮಗಳಲ್ಲಿ ತೊಡಗಿದ್ದಾರೆ. ಅವರೆಲ್ಲ ಕೇವಲ ಯಾವುದಾದರೂ ಒಂದು ಸಮುದಾಯದ ಭಾರತೀಯರಲ್ಲ. ಎಲ್ಲ ಜಾತಿ, ಧರ್ಮಗಳ ಭಾರತೀಯರೂ ಅವರಲ್ಲಿದ್ದಾರೆ. ಸೌದಿ ಅರೇಬಿಯದಲ್ಲಿ 41.24 ಲಕ್ಷ, ಯುಎಇಯಲ್ಲಿ 38.60 ಲಕ್ಷ, ಒಮಾನ್‌ ನಲ್ಲಿ 8.40 ಲಕ್ಷ, ಕುವೈತ್‌ ನಲ್ಲಿ 7.80 ಲಕ್ಷ, ಕತರ್‌ ನಲ್ಲಿ 6.70 ಲಕ್ಷ , ಮತ್ತು ಬಹರೈನ್‌ ನಲ್ಲಿ 1.70 ಲಕ್ಷ ಅನಿವಾಸಿ ಭಾರತೀಯರು ದುಡಿಯುತ್ತಿದ್ದಾರೆ. ಅವರೆಲ್ಲ ಮುಸ್ಲಿಮರಲ್ಲ. ಈ ಪೈಕಿ ಕನಿಷ್ಠ 30 ಲಕ್ಷ ಮಂದಿ ಭಾರತೀಯರಂತೂ ಖಂಡಿತ ಮುಸ್ಲಿಮರಲ್ಲ. ಯುಎಇಯಲ್ಲಿರುವ ಭಾರತೀಯರ ಪೈಕಿ 14 ಲಕ್ಷಕ್ಕೂ ಹೆಚ್ಚಿನವರು ಹಿಂದೂಗಳು. ಕತರ್‌ ನಲ್ಲಿರುವ ಭಾರತೀಯರ ಪೈಕಿ 3.51 ಲಕ್ಷ ಮಂದಿ ಹಿಂದೂಗಳು. ಕುವೈತ್‌ ನಲ್ಲಿರುವ ಭಾರತೀಯರ ಪೈಕಿ 3.50 ಲಕ್ಷ ಮಂದಿ ಹಿಂದೂಗಳು. ಒಮಾನ್‌ನಲ್ಲಿರುವ ಭಾರತೀಯರ ಪೈಕಿ 2.60 ಲಕ್ಷ ಮಂದಿ ಹಿಂದೂಗಳು. ಬಹರೈನ್‌ನಲ್ಲಿರುವ ಭಾರತೀಯರ ಪೈಕಿ 1.5 ಲಕ್ಷ ಮಂದಿ ಹಿಂದೂಗಳು.

ಅನಿವಾಸಿ ಭಾರತೀಯರ ಪೈಕಿ ಯಾರೊಬ್ಬರೂ ಕೊರೋನ ವೈರಸ್‌ಅನ್ನು ಆಮದು ಮಾಡಲಿಕ್ಕಾಗಿ ಹೊರದೇಶಗಳಿಗೆ ಹೋದವರಲ್ಲ. ಹೊಟ್ಟೆಪಾಡಿಗಾಗಿ ಹೋದವರು ಮತ್ತು ದೊಡ್ಡ ಪ್ರಮಾಣದಲ್ಲಿ ತಮ್ಮ ಬೆವರಿನ ಗಳಿಕೆಯನ್ನು ವಿದೇಶಿ ಕರೆನ್ಸಿಯ ರೂಪದಲ್ಲಿ ಭಾರತಕ್ಕೆ ಕಳುಹಿಸುವ ಮೂಲಕ ನಮ್ಮ ದೇಶದ ಆರ್ಥಿಕತೆಗೆ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವವರು.

2018ರಲ್ಲಿ ನಮ್ಮ ದೇಶವು ತನ್ನ ಅನಿವಾಸಿ ಪ್ರಜೆಗಳ ಮೂಲಕ 6 ಲಕ್ಷ ಕೋಟಿ ರೂಪಾಯಿ ವಿದೇಶಿ ವಿನಿಮಯ ಗಳಿಸಿ ವಿಶ್ವದಾಖಲೆ ಮಾಡಿತ್ತು. ಆ ಪೈಕಿ ಶೇ. 27 ಮೊತ್ತವು ಯುಎಇ ಎಂಬ ಒಂದೇ ಕೊಲ್ಲಿ ದೇಶದಿಂದ ಬಂದಿದ್ದರೆ ಸುಮಾರು ಶೇ.12 ಮೊತ್ತವು ಸೌದಿ ಅರೇಬಿಯ ಎಂಬ ಇನ್ನೊಂದು ಕೊಲ್ಲಿ ದೇಶದ ಅನಿವಾಸಿ ಭಾರತೀಯರಿಂದ ಬಂದಿತ್ತು.

ವಿವಿಧ ಕೊಲ್ಲಿ ದೇಶಗಳಿಂದ ಭಾರತಕ್ಕೆ ಬರುವವರು ಕೊರೋನ ತರುತ್ತಾರೆ ಎಂಬ ವಿಷ ವದಂತಿಯಲ್ಲೂ ಯಾವುದೇ ಹುರುಳಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಭಾರತದಲ್ಲಿನ ನಿತ್ಯದ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದು ಆ ಕುರಿತು ವರದಿಗಳನ್ನೂ ಪ್ರಕಟಿಸುತ್ತಿರುತ್ತದೆ. ಮಾರ್ಚ್ 14ರ WHO ವರದಿ ಪ್ರಕಾರ ಫೆಬ್ರವರಿ ತಿಂಗಳ ಆರಂಭದಿಂದ ಮಾರ್ಚ್ ಮಧ್ಯದವರೆಗೆ ಭಾರತದ 30 ನಿರ್ದಿಷ್ಟ ವಿಮಾನ ನಿಲ್ದಾಣಗಳಲ್ಲಿ ವಿವಿಧ ಹೊರದೇಶಗಳಿಂದ 10,876 ವಿಮಾನಗಳು ಬಂದಿಳಿದಿವೆ ಮತ್ತು ಅವುಗಳ ಮೂಲಕ ವಿವಿಧ ಹಿನ್ನೆಲೆಯ 11,71,061 ಮಂದಿ ಭಾರತಕ್ಕೆ ಬಂದಿದ್ದಾರೆ. ಅಂದರೆ ಸುಮಾರು 11 ಸಾವಿರ ವಿಮಾನಗಳಲ್ಲಿ ಸುಮಾರು 12 ಲಕ್ಷ ಮಂದಿ ವಿವಿಧ ಹೊರದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಇವರೆಲ್ಲಾ ಕೊಲ್ಲಿ ದೇಶಗಳಿಂದ ಬಂದವರಲ್ಲ. ಫೆಬ್ರವರಿ 5ರ WHO ವರದಿ ಪ್ರಕಾರ 2,528 ಮಂದಿ ಚೀನಾದಿಂದ ಭಾರತಕ್ಕೆ ಬಂದಿದ್ದಾರೆ. ಫೆಬ್ರವರಿ 13ರ WHO ವರದಿ ಪ್ರಕಾರ ಚೀನಾ, ಹಾಂಗ್ ಕಾಂಗ್, ಜಪಾನ್, ಕೊರಿಯ, ಥಾಯ್‌ ಲ್ಯಾಂಡ್ ಮತ್ತು ಸಿಂಗಾಪುರಗಳಿಂದ 2,315 ವಿಮಾನಗಳು ಭಾರತಕ್ಕೆ ಬಂದಿದ್ದು, ಅವುಗಳ ಮೂಲಕ 2,51,445 ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಫೆಬ್ರವರಿ 28ರ WHO ವರದಿ ಪ್ರಕಾರ ಇಂಡೋನೇಶ್ಯ, ನೇಪಾಳ, ಮಲೇಶ್ಯ, ವಿಯೆಟ್ನಾಮ್, ಚೀನಾ, ಹಾಂಗ್‌ಕಾಂಗ್, ರಿಪಬ್ಲಿಕ್ ಆಫ್ ಕೊರಿಯ, ಸಿಂಗಾಪುರ್ ಮತ್ತು ಥಾಯ್‌ಲ್ಯಾಂಡ್‌ಗಳಿಂದ ಭಾರತಕ್ಕೆ 4,787 ವಿಮಾನಗಳು ಬಂದಿದ್ದು, 4,82,927 ಮಂದಿ ಪ್ರಯಾಣಿಕರು ಆ ವಿಮಾನಗಳ ಮೂಲಕ ಭಾರತಕ್ಕೆ ಬಂದಿದ್ದಾರೆ. ಈ ಪೈಕಿ ಯಾವುದೂ ಕೊಲ್ಲಿ ದೇಶವಲ್ಲ ಎಂಬುದು ಗಮನಾರ್ಹ.

ಜಗತ್ತಿನೆಲ್ಲೆಡೆ, ಮುಸ್ಲಿಮ್ ವಿದ್ವಾಂಸರು, ಮುಫ್ತಿಗಳು, ವಿವಿಧ ಮುಸ್ಲಿಂ ಸಂಘನೆಗಳ ನೇತಾರರು, ಮುಸ್ಲಿಂ ಮದ್ರಸಗಳ ಹಾಗೂ ಇಸ್ಲಾಮಿ ವಿದ್ಯಾಪೀಠಗಳ ಮುಖ್ಯಸ್ಥರು ಕೊರೋನ ವೈರಸ್ ಅನ್ನು ಒಂದು ಸಾಮೂಹಿಕ ಪಿಡುಗೆಂದು ಪರಿಗಣಿಸಿ ಅದರ ವಿರುದ್ಧ ಸರ್ವ ಸಾಧ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ತಜ್ಞ ವೈದ್ಯರ ಸಲಹೆಗಳನ್ನು ಅನುಸರಿಸರಿಸಬೇಕು, ಸರಕಾರ ಹೇರುವ ನಿರ್ಬಂಧಗಳನ್ನು ಪಾಲಿಸಬೇಕು, ಆರೋಗ್ಯ ಇಲಾಖೆಗಳು ನೀಡುವ ಎಚ್ಚರಿಕೆಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಪದೇ ಪದೇ ಜನತೆಗೆ ಮನವಿ ಮಾಡಿದ್ದಾರೆ. ಜಗತ್ತಿನೆಲ್ಲೆಡೆ ಮತ್ತು ವಿಶೇಷವಾಗಿ ಭಾರತದಲ್ಲಿ ಎಲ್ಲ ಮಸೀದಿಗಳಲ್ಲಿ ಈ ಕುರಿತು ಮೌಖಿಕವಾಗಿಯೂ ಲಿಖಿತರೂಪದಲ್ಲೂ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ಪ್ರಕ್ರಿಯೆ ಜನವರಿ ಕೊನೆಯಲ್ಲೇ ಆರಂಭವಾಗಿದ್ದು ಈಗಲೂ ಮುಂದುವರಿದಿದೆ. ಹೌದು, ಗೋಮೂತ್ರ ಅಥವಾ ಸೆಗಣಿಯ ಮೂಲಕ ಕೊರೋನ ವೈರಸ್‌ ಗೆ ಪರಿಹಾರ ಪಡೆಯಬೇಕೆಂದು ಮಾತ್ರ ಅವರು ಯಾರೂ ಸೂಚಿಸಿದ್ದಿಲ್ಲ. ಚಪ್ಪಾಳೆ ತಟ್ಟುವ ಮೂಲಕ ಅಥವಾ ತಟ್ಟೆಗಳನ್ನು ಬಡಿಯುವ ಮೂಲಕ ಕೊರೋನ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಕೂಡಾ ಅವರು ಯಾರೂ ಹೇಳಿಲ್ಲ.

ಯಾವುದೇ ಸ್ವರೂಪದ ಸೋಂಕು ರೋಗ ತಗಲಿರುವವರು ತಾವಿರುವ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಾರದು ಮತ್ತು ಆ ಮೂಲಕ ರೋಗ ಪ್ರಸಾರಕ್ಕೆ ಕಾರಣರಾಗಬಾರದು ಎಂದು ಪ್ರವಾದಿ ಮುಹಮ್ಮದ್(ಸ) ನೀಡಿದ್ದ ಕಟ್ಟೆಚ್ಚರದ ಮಾತನ್ನು ಎಲ್ಲ ಮಸೀದಿಗಳಲ್ಲಿ ಜನರಿಗೆ ಹೇಳಲಾಗಿದೆ. ಸಾಮೂಹಿಕ ಸೋಂಕು ವ್ಯಾಪಿಸುತ್ತಿರುವ ಪ್ರದೇಶಗಳಲ್ಲಿ ಆರಾಧನೆಗಳನ್ನು ಮಸೀದಿಯ ಬದಲು ಮನೆಗಳಲ್ಲೇ ಸಲ್ಲಿಸಬೇಕೆಂದು ಕೂಡ ಎಲ್ಲ ಮಸೀದಿಗಳಲ್ಲಿ ಜನರಿಗೆ ಪದೇ ಪದೇ ತಿಳಿಸಲಾಗಿದೆ. ಸಂಪೂರ್ಣ ಜಾಗತಿಕ ಮುಸ್ಲಿಮರ ಶ್ರದ್ಧಾಕೇಂದ್ರವಾಗಿರುವ ಮಕ್ಕಾದಲ್ಲಿರುವ ಮಸೀದಿಯನ್ನೇ ಫೆಬ್ರವರಿ 26ರಿಂದ ಅನಿರ್ದಿಷ್ಟಾವಧಿಗಾಗಿ ಮುಚ್ಚಲಾಗಿದೆ ಎಂದ ಮೇಲೆ ಈ ಕುರಿತು ಯಾವುದೇ ಸಂದೇಹಕ್ಕೆ ಎಡೆ ಎಲ್ಲಿದೆ?. ಇಷ್ಟಿದ್ದೂ ಮಾನವೀಯತೆ ಮತ್ತು ಸಾಮಾಜಿಕ ಸಂವೇದನೆಯ ಸರ್ವ ಮೇರೆಗಳನ್ನು ಮೀರಿ, ಕೊರೋನವನ್ನು ಸಮಾಜವನ್ನು ವಿಂಗಡಿಸುವ ಅಸ್ತ್ರವಾಗಿ ಬಳಸಲು ಹೊರಟ ವಿಘ್ನ ಸಂತೋಷಿಗಳ ಘೋರ ಮನಸ್ಥಿತಿ ಕೊರೋನಗಿಂತಲೂ ಮಾರಕ ಎಂಬುದನ್ನು ಸಮಾಜವು ಮನಗಾಣಬೇಕಾಗಿದೆ. ಕೊರೋನ ಸೋಂಕಿನಿಂದ ಮಾತ್ರವಲ್ಲ, ಇಂಥವರ ಸೋಂಕಿನಿಂದಲೂ ಸಮಾಜವನ್ನು ರಕ್ಷಿಸಬೇಕಾಗಿದೆ.

ಕೃಪೆ:vbnewsonline.in

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...