ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಡಬ್ಲ್ಯುಎಚ್‌ಒ ಎಚ್ಚರಿಕೆ; ಕೆಮ್ಮಿನ ನಾಲ್ಕು ಸಿರಪ್‌ಗಳ ಕುರಿತು ಕೇಂದ್ರದ ತನಿಖೆ

Source: Vb | By I.G. Bhatkali | Published on 7th October 2022, 10:39 PM | National News | Global News |

ಹೊಸದಿಲ್ಲಿ: ಹರ್ಯಾಣದ ಔಷಧಿ ಕಂಪೆನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್‌ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ಸಂಬಂಧವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಔಷಧಿಗಳ ಕುರಿತು ತನಿಖೆಯನ್ನು ಆರಂಭಿಸಿದೆ.

ಡಬ್ಲ್ಯುಎಚ್‌ಒ ಸೆ.29ರಂದು ಈ ಕೆಮಿನ ಸಿರಪ್‌ಗಳ ಕುರಿತು ಭಾರತೀಯ ಔಷಧಿಗಳ ಮಹಾನಿಯಂತ್ರಕ (ಡಿಸಿಜಿಐ)ರಿಗೆ ಎಚ್ಚರಿಕೆಯನ್ನು ನೀಡಿದ್ದು, ತಕ್ಷಣ ಹರ್ಯಾಣ ನಿಯಂತ್ರಕ ಪ್ರಾಧಿಕಾರದ ಜೊತೆ ಚರ್ಚಿಸಿ ವಿಕೃತ ತನಿಖೆಯನ್ನು ಆರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿನ ಉನ್ನತ ಮೂಲಗಳು ತಿಳಿಸಿವೆ.

ಹರ್ಯಾಣದ ಸೋನೆಪತ್‌ ನಲ್ಲಿರುವ ಮೇಡನ್ ಫಾರ್ಮಾಕ್ಯೂಟಿಕಲ್ ಲಿ. ಈ ಕೆಮ್ಮಿನ ಸಿರಪ್‌ಗಳನ್ನು ತಯಾರಿಸಿದ್ದು, ಸದ್ಯಕ್ಕೆ ಲಭ್ಯ ಮಾಹಿತಿಗಳಂತೆ ಕಂಪೆನಿಯು ಗ್ಯಾಂಬಿಯಾಕ್ಕೆ ಮಾತ್ರ ಅವುಗಳನ್ನು ರಫ್ತು ಮಾಡಿರುವಂತೆ ಕಂಡುಬಂದಿದೆ ಎಂದು ಈ ಮೂಲಗಳು ತಿಳಿಸಿದವು.

ಆರೋಪಗಳಿಗೆ ಕಂಪೆನಿಯು ಇನೂ ಪ್ರತಿಕ್ರಿಯಿಸಿಲ್ಲ. ದಿಲ್ಲಿಯ ಪೀತಮ್‌ ಪುರದಲ್ಲಿರುವ ಕಂಪೆನಿಯ ಆಡಳಿತ ಕಚೇರಿಯು ಗುರುವಾರ ಬಾಗಿಲು ಮುಚ್ಚಿಕೊಂಡಿತ್ತು. ಈ ಸಿರಪ್‌ಗಳು ಗ್ಯಾಂಬಿಯಾದ ಹೊರಗೂ ವಿತರಣೆಯಾಗಿರಬಹುದು ಮತ್ತು ಜಾಗತಿಕ ಮಾರುಕಟ್ಟೆಯನ್ನು ತಲುಪಿರುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿದೆ. ಮಕ್ಕಳಲ್ಲಿ ಮೂತ್ರಪಿಂಡಗಳಿಗೆ ತೀವ್ರ ಹಾನಿ ಹಾಗೂ 66 ಸಾವುಗಳಿಗೂ ಈ ನಾಲ್ಕು ಶೀತ ಮತ್ತು ಕೆಮ್ಮಿನ ಸಿರಪ್‌ಗಳಿಗೂ ಸಂಬಂಧವಿರುವ ಹೆಚ್ಚಿನ ಸಾಧ್ಯತೆಯಿದೆ ಎಂದುಡಬ್ಲ್ಯುಎಚ್‌ ಒ ಮುಖ್ಯಸ್ಥ ಟೆಡೋಸ್ ಅಧನಾಮ್ ಗೇಬ್ರಿಯೇಸಸ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು. 

ಮಕ್ಕಳ ಸಾವುಗಳು ಯಾವಾಗ ಸಂಭವಿಸಿದ್ದವು ಎನ್ನುವ ಬಗ್ಗೆ ವಿವರಗಳನ್ನು ಡಬ್ಲ್ಯುಎಚ್‌ಒ ಒದಗಿಸಿಲ್ಲ. ಉತ್ಪನ್ನಗಳ ತಯಾರಕರನ್ನು ದೃಢೀಕರಿಸಿ ಲೇಬಲ್‌ಗಳ ಚಿತ್ರಗಳನ್ನು ಅದು ಇನ್ನೂ ಹಂಚಿಕೊಂಡಿಲ್ಲ ಎಂದು ಮೂಲಗಳು ತಿಳಿಸಿದವು.

ನಾಲ್ಕು ಕೆಮ್ಮಿನ ಸಿರಪ್‌ಗಳ ಸ್ಯಾಂಪಲ್‌ಗಳನ್ನು ಕೇಂದ್ರ ಮತ್ತು ಪ್ರಾದೇಶಿಕ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಎರಡು ದಿನಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಶಿಷ್ಟಾಚಾರದಂತೆ ಭಾರತದಿಂದ ರಫ್ತಾಗುವ ಯಾವುದೇ ಔಷಧಿಯನ್ನು ಅದನ್ನು ಸ್ವೀಕರಿಸುವ ದೇಶವು ಪರೀಕ್ಷೆಗೊಳಪಡಿಸುತ್ತದೆ. ಗ್ಯಾಂಬಿಯಾದಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಔಷಧಿಯು ದೋಷಯುಕ್ತವಾಗಿದೆ ಎಂದು ಯಾಕೆ ಪತ್ತೆಯಾಗಿರಲಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಅವುಗಳನ್ನು ಪರೀಕ್ಷೆಗೊಳಪಡಿಸದೆ ಗ್ಯಾಂಬಿಯಾದಲ್ಲಿ ಬಳಸಲಾಗಿತ್ತೇ ಎನ್ನುವ ಬಗ್ಗೆ ಡಬ್ಲ್ಯುಎಚ್‌ ಒ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿದವು.

ಡಬ್ಲ್ಯುಎಚ್‌ಒ ಎಚ್ಚರಿಕೆಯಂತೆ ಪ್ರೊಮೆಥಾಝನ್ ಓರಲ್ ಸೊಲ್ಯೂಷನ್, ಕೊಫೆಕ್ಸ್‌ ಮಾಲಿನ್ ಬೇಬಿ ಕಾಫ್ ಸಿರಪ್, ಮೆಕಾಫ್ ಬೇಬಿ ಕಫ್ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಇವು ಅಪಾಯಕಾರಿ ಯಾಗಿರ ಬಹುದಾದ ನಾಲ್ಕು ಉತ್ಪನ್ನಗಳಾಗಿವೆ. ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಯಾರಕರು ಈವರೆಗೆ ಯಾವುದೇ ಗ್ಯಾರಂಟಿಯನ್ನು ನೀಡಿಲ್ಲ ಎಂದು ಎಚ್ಚರಿಕೆಯಲ್ಲಿ ಹೇಳಿರುವ ಡಬ್ಲ್ಯುಎಚ್‌ಒ, ನಾಲ್ಕೂ ಉತ್ಪನ್ನಗಳ ಸ್ಯಾಂಪಲ್‌ಗಳ ಪ್ರಯೋಗಾಲಯ ವಿಶ್ಲೇಷಣೆಯು ಅವುಗಳು ಅಧಿಕ ಪ್ರಮಾಣದಲ್ಲಿ ಡೈಎಥಿಲೀನ್ ಗೈಕಾಲ್ ಮತ್ತು ಎಥಿಲೀನ್ ಕೈಕಾಲ್‌ನ್ನು ಒಳಗೊಂಡಿರುವುದನ್ನು ದೃಢಪಡಿಸಿದೆ ಎಂದು ತಿಳಿಸಿದೆ.

ಈ ರಾಸಾಯನಿಕಗಳು ಮನುಷ್ಯರಿಗೆ ಮಾರಕವಾಗಿದ್ದು, ಸಾವಿಗೂ ಕಾರಣವಾಗಬಲ್ಲವು. ಹೊಟ್ಟೆನೋವು, ವಾಂತಿ, ಭೇದಿ, ಮೂತ್ರ ವಿಸರ್ಜನೆ ಸಮಸ್ಯೆ, ತಲೆನೋವು, ಮಾನಸಿಕ ತುಮುಲ ಮತ್ತು ಸಾವಿಗೆ ಕಾರಣವಾಗಬಹುದಾದ ತೀವ್ರ ಮೂತ್ರಪಿಂಡ ಹಾನಿ ಇವು ಈ ರಾಸಾಯನಿಕಗಳ ವಿಷಕಾರಿ ಪರಿಣಾಮಗಳಲ್ಲಿ ಸೇರಿವೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...