ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

Source: S.O. News Service | Published on 18th July 2019, 7:58 PM | State News | Don't Miss |

ಬೆಂಗಳೂರು: ವಿಶ್ವಾಸಮತ ಯಾಚನೆ ವಿಚಾರದಲ್ಲಿ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರ ಹಾಗೂ ಬಿಜೆಪಿ ನಡುವೆ ಗದ್ದಲ ಉಂಟಾಗಿದ್ದರಿಂದ ಸ್ಪೀಕರ್​ ರಮೇಶ್​ಕುಮಾರ್​ ಅನುಪಸ್ಥಿತಿಯಲ್ಲಿ ಡೆಪ್ಯೂಟಿ ಸ್ಪೀಕರ್ ಜೆ.ಕೆ. ಕೃಷ್ಣಾರೆಡ್ಡಿ​ ಅವರು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.
ವಿಶ್ವಾಸಮತ ಯಾಚನೆಗೆ ನಿಗದಿಯಾಗಿದ್ದ ಇಂದಿನ ದಿನ ದೋಸ್ತಿ ಸರ್ಕಾರ ಹಾಗೂ ಪ್ರತಿಪಕ್ಷ ನಡುವಿನ ಗದ್ದಲಕ್ಕೆ ವೇದಿಕೆಯಾಯಿತು. ವಿಶ್ವಾಸಮತ ಯಾಚನೆ ಬದಿಗಿಟ್ಟು ವಿಪ್​ ವಿಚಾರವನ್ನು ಕೈಗೆತ್ತಿಕೊಂಡ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್​ ತೀರ್ಪಿನಲ್ಲಿಯೇ ಗೊಂದಲವಿದೆ. ಮೊದಲು ವಿಪ್​ ವಿಚಾರ ಸ್ಪಷ್ಟ ಆಗೋವರೆಗೂ ವಿಶ್ವಾಸಮತ ಮಂಡನೆಯಾಗಬಾರದೆಂದು ಆಗ್ರಹಿಸಿದರು. ಇದು ಬಿಜೆಪಿ ಸದಸ್ಯರ ಆಕ್ರೋಶಕ್ಕೂ ಕಾರಣವಾಯಿತು. ಆದರೆ, ಸಿದ್ದರಾಮಯ್ಯ ಎತ್ತಿದ ಕ್ರಿಯಾಲೋಪವನ್ನು ಸ್ಪೀಕರ್​ ರಮೇಶ್​ಕುಮಾರ್​ ಅವರು ಬೆಂಬಲಿಸಿದರು.
ಸ್ಪೀಕರ್​ ತೀರ್ಮಾನದಿಂದ ಅಸಮಾಧಾನಗೊಂಡ ಬಿಜೆಪಿ ರಾಜಭವನ ತೆರಳಿ ರಾಜ್ಯಪಾಲರಾದ ವಜುಭಾಯಿ ಆರ್​. ವಾಲಾರಿಗೆ ದೂರು ನೀಡಿದರು. ತಕ್ಷಣ ರಾಜ್ಯಪಾಲರು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸಿ ಎಂದು ಸ್ಪೀಕರ್​ಗೆ ಸಂದೇಶ ರವಾನಿಸಿದರು. ಆದರೆ, ಸ್ಪೀಕರ್​ ಶೀಘ್ರವಾಗಿ ನಿರ್ಧಾರಕ್ಕೆ ಬರಲು ಆಗುವುದಿಲ್ಲ ಎಂದು ತಿರಸ್ಕರಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಲಾಪದ ನಡುವೆ ಗದ್ದಲ ಸೃಷ್ಟಿಸಿತು. ಭೋಜನ ವಿರಾಮದವರೆಗೂ ಸೂಸೂತ್ರವಾಗಿ ನಡೆದುಕೊಂಡು ಬಂದ ಕಲಾಪ, ಮಧ್ಯಾಹ್ನದ ನಂತರ ಮೂರು ಬಾರಿ ಮುಂದೂಡಲಾಯಿತು.
ಕಲಾಪದ ನಡುವೆ ಕಾಂಗ್ರೆಸ್​ನ ಶ್ರೀಮಂತ್​ ಪಾಟೀಲ್​ ಅವರ ಜತೆಯಲ್ಲಿ ಬಿಜೆಪಿಯ ಲಕ್ಷ್ಮಣ್​ ಸವದಿ ಇರುವ ಫೋಟೊವನ್ನು ದೋಸ್ತಿ ಸರ್ಕಾರ ಪ್ರದರ್ಶಿಸಿ ಆಪರೇಷನ್​ ಕಮಲವನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಆದರೆ, ವಿಶ್ವಾಸಮತ ಯಾಚನೆಗೆ ಪಟ್ಟುಬಿಡದ ಬಿಜೆಪಿ ಇಂದು ರಾತ್ರಿ 12 ಗಂಟೆಯಾದರೂ ಪರವಾಗಿಲ್ಲ ವಿಶ್ವಾಸಮತ ಮಂಡನೆ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ದೋಸ್ತಿ ಸರ್ಕಾರ ಒಪ್ಪದಿದ್ದರಿಂದ ಗದ್ದಲ ಉಂಟಾಗಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಇದರ ನಡುವೆ ದೋಸ್ತಿ ಸರ್ಕಾರ ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಮರುಪರಿಶೀಲಿಸಲು ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದು, ಬಿಜೆಪಿಯೂ ಕೂಡ 24 ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
ಪರಿಷತ್ ಕಲಾಪವೂ ಮುಂದೂಡಿಕೆ
ಬಹುಮತ ಇಲ್ಲದಿದ್ದರೂ ಸದನ ನಡೆಸುತ್ತಿರುವುದು ಸರಿ ಅಲ್ಲ ಎಂದು ಆರೋಪಿಸಿ ವಿಧಾನ ಪರಿಷತ್​ ಕಲಾಪದಲ್ಲೂ ಬಿಜೆಪಿ ಧರಣಿ ನಡೆಸಿತು. ದೋಸ್ತಿ ಸರ್ಕಾರ ಹಾಗೂ ಬಿಜೆಪಿ ನಡುವಿನ ಗದ್ದಲದಿಂದ ಪರಿಸ್ಥಿತಿ ತಿಳಿಯಾಗದಿದ್ದನ್ನು ಮನಗಂಡು ಸಭಾಪತಿ ಅವರು ನಾಳೆ ಮಧ್ಯಾಹ್ನ 12 ಗಂಟೆಗೆ ಕಲಾಪವನ್ನು ಮುಂದೂಡಿದರು.

Read These Next

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಸುಗಮ ಮತದಾನಕ್ಕೆ ಸರ್ವ ಸಿದ್ಧತೆ

ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಸುಗಮ ಮತದಾನಕ್ಕೆ ಸರ್ವ ಸಿದ್ಧತೆ

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’