ಪೊಲೀಸ್ ಸುಧಾರಣೆಯ ಕುರಿತಾದ ಹೊಸ ನೀತಿಗೇನಾಯಿತು?

Source: sonews | By Staff Correspondent | Published on 12th May 2019, 10:04 PM | Special Report | Don't Miss |

ಸಾಮುದಾಯಿಕ ಪೊಲೀಸ್ ನೀತಿಗಳು ಪ್ರಧಾನವಾಗಿ ನಾಗರಿಕರಿಗೆ ಉತ್ತರದಾಯಿತ್ವ ಹೊಂದಿರುವಂತಿರಬೇಕು.

ತನ್ನ ಸಮುದಾಯ ಪೊಲೀಸ್ ವ್ಯವಸ್ಥೆಯ ಬಗೆಗಿನ ಪ್ರಯತ್ನಗಳ ಭಾಗವಾಗಿ ಮಹಾರಾಷ್ಟ್ರ ಪೊಲೀಸರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅನುಸರಿಸಲಾಗುತ್ತಿದ್ದ ಅಥವಾ ಅನುಸರಿಸಲಾಗುತ್ತಿರುವ ಅತ್ಯುತ್ತಮ ಪೊಲೀಸ್ ಕಾರ್ಯ ವಿಧಾನಗಳನ್ನು ರಾಜ್ಯದ್ಯಾಂತ ಸಾರ್ವತ್ರೀಕರಿಸುವ  ತೀರ್ಮಾನವನ್ನು ಮಾಡಿದೆ. ಇವುಗಳಲ್ಲಿ ಮುಂಬೈನ ಪೊಲೀಸ್ ದೀದಿ (ಪೊಲೀಸಕ್ಕ) ಕಾರ್ಯಕ್ರಮ, ಪೂನಾ ಮತ್ತು ನಾಗ್ಪುರ ಪೊಲೀಸರ  ಭರೋಸಾ ಸೆಲ್ (ಭರವಸೆ ಕೋಶ)ಗಳೂ ಸೇರಿಕೊಂಡಿವೆ. ಮೇಲ್ನೋಟಕ್ಕೆ ನೋಡಿದರೆ ಇವೆಲ್ಲಾ ಸ್ವಾಗತಾರ್ಹ ಕ್ರಮಗಳಂತೆ ಕಾಣುತ್ತವೆ. ಆದರೆ ಇದರ ಬಗ್ಗೆ ಒಬ್ಬ ಹಿರಿಯ ಪೊಲೀಸ್ ಆಧಿಕಾರಿ ಮಾಡಿರುವ ಟಿಪ್ಪಣಿಯಂತೆ ಇಂಥಾ ಯೋಜನೆಗಳನ್ನು ಪ್ರಾರಂಭಿಸಿದ ಪೊಲೀಸ್ ಆಧಿಕಾರಿಗಳು ಬೇರೆಡೆಗೆ ವರ್ಗಾವಣೆಗೊಂಡ ನಂತರದಲ್ಲಿ ಕಾರ್ಯಕ್ರಮಗಳು ಸಹ ನಿಂತುಹೋದವು ಎಂಬ ಅಂಶವನ್ನು ಗಮನಿಸಬೇಕು. ಸ್ಪಷ್ಟವಾಗಿ ಕಾಣುವಂತೆ ಇಂಥಾ ಪ್ರಯತ್ನಗಳ ಹಿಂದಿರುವ ಆಲೋಚನೆ ಮತ್ತು ಸದುದ್ದೇಶಗಳು ಇಡೀ ಪೊಲೀಸ್ ವ್ಯವಸ್ಥೆಯ ಸಾಂಸ್ಥಿಕ ಸಂಸ್ಕೃತಿಯಾಗುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಂಥಾ ಯೋಜನೆಗಳು ಭಾರತದ ಪೊಲೀಸ್ ವ್ಯವಸ್ಥೆಯನ್ನು ಹಿಂದಿನಿಂದಲೂ ಬಾಧಿಸುತ್ತ ಬಂದಿರುವ ಮತ್ತು ಈಗಲೂ ಭಾದಿಸುತ್ತಲೇ ಇರುವ ಮಹತ್ವದ ವಿಷಯಗಳನು ಸರಿಪಡಿಸುವತ್ತ ಮುಖಮಾಡಿದ್ದವು. ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆಬೇರೆ ಸ್ಥಾಯಿಗಳಲ್ಲಿದ್ದರೂ ಒಟ್ಟಾರೆಯಾಗಿ ದೇಶದ ಪೊಲೀಸರ ಇಮೇಜನ್ನು ಮತ್ತು ಪೊಲೀಸ್ ಪಡೆಗಳ ಸಾಮರ್ಥ್ಯವನ್ನು ಪ್ರಮುಖ ಸುಧಾರಣೆಗಳ ಮೂಲಕ ದೀರ್ಘಾವಧಿಯಲ್ಲಿ ಹೆಚ್ಚಿಸುವ ಅಗತ್ಯವಂತೂ ಇದ್ದೇ ಇದೆ.

ಪೊಲೀಸರು ಮಾನವ ಹಕ್ಕುಗಳನ್ನು ಕಾಪಾಡುವುದರಲ್ಲಿರುವ ಕೊರತೆ ಮತ್ತು ಮಾಡುವ ಉಲ್ಲಂಘನೆಗಳು ದಿನನಿತ್ಯ ಮಾಧ್ಯಮಗಳಲ್ಲಿ ಬರುವ ಸರಕೇ ಆಗಿದ್ದು ಇಲ್ಲಿ ಅದನ್ನು ಪಟ್ಟಿ ಮಾಡುವ ಅಗತ್ಯವಿಲ್ಲ. ಈಗ ಪೊಲೀಸ್ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳೇನು ಮತ್ತು ಅದನ್ನು ಪರಿಹರಿಸಲು ಮಾಡಬೇಕಾದುದೇನು ಎಂಬುದರ ಬಗ್ಗೆ ಗಮನಹರಿಸಬೇಕು. ಭಾರತದಲ್ಲಿ ಪ್ರತಿ ಸಾವಿರ ನಾಗರಿಕರಿಗೆ ಕೇವಲ .೨ರಷ್ಟು ಪೊಲೀಸರಿದ್ದು ಇದು ವಿಶ್ವಸಂಸ್ಥೆ ನಿಗದಿ ಮಾಡಿರುವ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಕಡಿಮೆ ಎಂಬುದನ್ನು ಹಲವಾರು ವರದಿಗಳು ಹೇಳುತ್ತಲೇ ಇವೆ. ಎಲ್ಲಾ ರಾಜ್ಯಗಳಲ್ಲೂ ಉನ್ನತ ಪೊಲೀಸ್ ಅಧಿಕಾರಿಗಳ (ಐಪಿಎಸ್) ಮಟ್ಟದ ಸ್ಥಾನಗಳನ್ನು ಬಿಟ್ಟರೆ ಇತರ ಎಲ್ಲಾ ಸ್ಥಾನಗಳಲ್ಲಿ ದೊಡ್ಡ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಹೆಚ್ಚುವರಿ ಕಾಲಾವಧಿ ದುಡಿಮೆ, ರಜೆಯಿಲ್ಲದಿರುವುದು, ದೀರ್ಘ ಕೆಲಸಾವಧಿಗಳಿಂದಾಗಿ ಪೂರಕವಲ್ಲದ ಆಹಾರಾಭ್ಯಾಸಗಳು, ಸೂಕ್ತವಾದ ವಸತಿಯಿಲ್ಲದಿರುವುದು..ಇವೇ ಇನ್ನಿತ್ಯಾದಿಗಳು ಪೊಲೀಸರು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳು. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕೇರಳ ಮತ್ತು ಮುಂಬೈನಲ್ಲಿ ಜಾರಿ ಮಾಡಲಾಗಿರುವ ಎಂಟು ಗಂಟೆ ಪಾಳಿಯನ್ನು ಅಲ್ಲಿನ ಪೊಲೀಸರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಪೊಲೀಸ್ ವ್ಯವಸ್ಥೆ ಮತ್ತು ಅದರ ತರಬೇತಿಯಲ್ಲಿರುವ ಶ್ರೇಣೀಕರಣದಲ್ಲಿನ ವಸಾಹತುಶಾಹಿ ಪಳೆಯುಳಿಕೆಗ ಬಗ್ಗೆ ಹೆಚ್ಚು ಹೇಳದಿದ್ದರೆ ಒಳ್ಳೆಯದು.

ಇವಲ್ಲದೆ ಪೋಲಿಸ್ ಪಡೆಗಳಲ್ಲಿ ಜಾತಿ ಮತ್ತು ಧಾರ್ಮಿಕ ವೈವಿಧ್ಯಗೆಳ ಕೊರತೆ ಇರುವುದು ಮತ್ತು ಮಹಿಳಾ ಸಿಬ್ಬಂದಿಗಳ ಬಗ್ಗೆ ಮತ್ತು ಸಹಾಯಕ ಇನ್ಸ್ಪೆಕ್ಟರ್ಗಳ ಬಗೆಗಿನ ಧೋರಣೆಗಳಂಥ ಅಂತರಿಕ ಸಮಸ್ಯೆಗಳೂ ಸಾಕಷ್ಟಿವೆ. ಬಹಳಷ್ಟು ಪ್ರಮುಖ ಅಪರಾಧಗಳಿಗೆ ಶಿಕ್ಷೆ ದೊರೆಯದೇ ಹೋಗಲು ಕಳಪೆ ತನಿಖೆ, ವಿಧಿ ವಿಜ್ನಾನ ಕೌಶಲ್ಯ ಮತ್ತು ಸಾಧನಗಳ ಕೊರೆತೆಗಳೇ ಕಾರಣವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಈಗ ಹಾಲಿ ನಡೆಯುತ್ತಿರುವ ಚುನಾವಣೆಗೆಂದು ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಗಳಲ್ಲಿ ಬಹಳಷ್ಟು ಪಕ್ಷಗಳು ತಾವು ಕೈಗೊಳ್ಳಲಿರುವ ಕಾರ್ಯಕ್ರಮಗಲ್ಲಿ  ಪೊಲೀಸ್ ಸುಧಾರಣೆಯನ್ನು ಪ್ರಮುಖವಾಗಿ ಪಟ್ಟಿ ಮಾಡಿವೆ. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಹತ್ತು ರಾಜ್ಯಗಳಲ್ಲಿ ಸಿಬ್ಬಂದಿಗಳನ್ನು ಭರ್ತಿ ಮಾಡುವ ಮತ್ತು ಅಪರಾಧಗಳ ತನಿಖೆಯಲ್ಲಿ ಅತ್ಯಾಧುನಿಕ ತಂತ್ರಜ್ನಾವನ್ನು ಬಳಕೆ ಮಾಡುವಂಥ ಹಲವು ಪ್ರಮುಖ ಪೊಲೀಸ್ ಸುಧಾರಣೆಗಳು ಜಾರಿಯಾಗಿವೆಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಪ್ರಖ್ಯಾತ ಪ್ರಕಾಶ್ ಸಿಂಗ್ ಪ್ರಕರಣ ಮತ್ತು ಅದರ ಬಗ್ಗೆ ಸುಪ್ರೀಂ ಕೋರ್ಟು ನೀಡಿದ ನಿರ್ದೇಶನಗಳು, ರಾಷ್ಟ್ರೀಯ ಪೊಲೀಸ್ ಅಯೋಗದ ಐದು ವರದಿಗಳು ಮತ್ತು ಹಲವಾರು ಗಣ್ಯ ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನೀಡಲಾದ ವರದಿಗಳ ಬಗ್ಗೆ ಪದೇಪದೇ ಉಲ್ಲೇಖ ಮಾಡಲಾಗುತ್ತಿದ್ದರೂ ಪರಿಣಾಮಮಾತ್ರ ಶೂನ್ಯವಾಗಿದೆ.

ಎಲ್ಲಾ ವಿಷಯಗಳತ್ತ ತುರ್ತಾಗಿ ಗಮನಹರಿಸಬೇಕಾಗಿದೆಯೆಂಬುದು ನಿಜ. ಆದರೂ ಅವುಗಳಲ್ಲಿ ಪೊಲೀಸರು ವಿಶಾಲ ಜನಸಮುದಾಯಕ್ಕೆ ಉತ್ತರದಾಯಿತ್ವವನ್ನು ಹೊಂದಿರುವುದು ಮತ್ತು ಅಲಕ್ಷಿತ ಸಮುದಾಯಗಳು, ದಲಿತರು ಮತ್ತು ಆದಿವಾಸಿ ದೂರುದಾರರ ಬಗ್ಗೆ ಪೊಲೀಸರ ಧೋರಣೆ ಸುಧಾರಣೆಯಾಗುವುದು ಅತ್ಯಂತ ಜರೂರಿನದಾಗಿದೆ. ಸತತವಾಗಿ ಪ್ರಸ್ತಾಪಿಸಲ್ಪಡುವ ಮತ್ತೊಂದು ವಿಷಯವೆಂದರೆ ಪೊಲೀಸರ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಮಧ್ಯಪ್ರವೇಶ ಮತ್ತು ಪೊಲೀಸ್ ಪಡೆಗಳ ಮೇಲೆ ರಾಜಕೀಯ ಕಾರ್ಯಾಂಗದ ನಿಯಂತ್ರಣ. ಇದು ವಾಸ್ತವ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗು ಇತತರು ಕೊಟ್ಟಿರುವ ವಿವಿಧ ಶಿಪಾರಸ್ಸುಗಳನ್ನು ಪರಿಶೀಲಿಸುವ ಅಗತ್ಯವಿದೆ. ಆದರೂ ಮುಖ್ಯವಾದ ವಿಷಯ ಇದಲ್ಲ. ಹಲವಾರು ವಕೀಲ-ಕಾರ್ಯಕರ್ತರು ಎತ್ತಿ ತೋರಿಸಿರುವಂತೆ ರಾಜಕೀಯ ವರ್ಗಗಳು ತಮ್ಮ ಆದೇಶಗಗೆ ಮತ್ತು ಒತ್ತಡಗಳಿಗೆ ಮಣಿಯುವಂಥ  ಪೊಲೀಸ್ ಮುಖ್ಯಸ್ಥರನ್ನೇ ನೇಮಕ ಮಾಡಿಕೊಳ್ಳುವುದು ಅಪರೂಪವೇನಲ್ಲ.

ಹೀಗೆ ಸಮಾಜದ ದುರ್ಬಲ ಮತ್ತು ಅಲಕ್ಷಿತ ವರ್ಗಗಳ ಬಗ್ಗೆ  ಪೊಲೀಸ್ ವ್ಯವಸ್ಥೆಯ ಕೆಳಹಂತದಿಂದ ಮೇಲ್ ಹಂತದವರೆಗೆ ಇದೇ ಬಗೆಯ ಧೋರಣೆಯಿದೆ. ಭರೋಸಾ ಸೆಲ್ ಮತ್ತು ಪೊಲೀಸ್ ದೀದಿ ಕಾರ್ಯಕ್ರಗಳ ಮೂಲಕ ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವುದು ಪೊಲೀಸ್ ವ್ಯವಸ್ಥೆಯಲ್ಲಿರುವ ಮೂಲ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವುದೇ? ಏನು ಮಾಡಿದರೆ ಪೊಲೀಸ್ ವ್ಯವಸ್ಥೆಯು ಸಾಮಾನ್ಯ ನಾಗರಿಕರಿಗೆ ಉತ್ತರದಾಯಿಗಳಾಗಿರಬೇಕೆಂಬ ಕರ್ತವ್ಯದ ಬಗ್ಗೆ ಜಾಗೃತಗೊಂಡು ಅದನ್ನು ಅದರ ದೈನಂದಿನ ಕಾರ್ಯ ನಿರ್ವಹಣೆಯಲ್ಲೂ ಪ್ರತಿಫಲನಗೊಳ್ಳುವಂತೆ ಮಾಡಬಹುದು? ಬಹ ಕಾಲದಿಂದ ಖಾಕಿಯೆಂದರೆ ತಮ್ಮ ತಪ್ಪುಗಳ ಬಗ್ಗೆ ಶಿಕ್ಷೆಯಿರದ ವ್ಯವಸ್ಥೆಯೆಂದಾಗಿಬಿಟ್ಟಿದ್ದು ನಾಗರಿಕರು ಪೊಲಿಸರನ್ನು ಪ್ರಶ್ನಿಸದಂತಾಗಿಬಿಟ್ಟಿದೆ. ಮತ್ತು ಪೊಲಿಸ್ ದೀದಿಯಂಥ ಕಾರ್ಯಕ್ರಮಗಳು ಹೆಣ್ಣೆಂದರೆ ಕೇವಲ ಪೊರೆಯುವ ಮತ್ತು ಆರೈಕೆ ಮಾಡುವ ಕೆಲಸಕ್ಕೆ ಮಾತ್ರ ಯೋಗ್ಯಳೆಂದು ಮಾತ್ರವಲ್ಲದೆ ದುರ್ಬಲ ಮತ್ತು ಅಗತ್ಯವಿರುವಷ್ಟು ಆಕ್ರಮಣಶೀಲಳಲ್ಲವೆಂಬ ಅಭಿಪ್ರಾಯವನ್ನು ಗಟ್ಟಿಗೊಳಿಸುವಂತಿದೆ. ಐಪಿಎಸ್ ಸ್ಥಾನಮಾನದ ಅಧಿಕಾರಿಗಳನ್ನು ಹೊರತುಪಡಿಸಿ ಇತರ ಮಹಿಳಾ ಪೊಲೀಸ್ ಸಿಬ್ಬಂದಿಗಳ ಬಗ್ಗೆ ನಾಗರಿಕರ ಮತ್ತು ಪುರುಷ ಪೊಲೀಸ್ ಸಿಬ್ಬಂದಿಗಳ ಧೋರಣೆಯು ಅಷ್ಟೇನೂ ಪ್ರಶಂಸಾರ್ಹವಾಗಿಲ್ಲ್ಲ. ತರಬೇತಿ, ಹುದ್ದೆ ನೇಮಕಾತಿಗಳ ಬಗ್ಗೆಯೂ ತುರ್ತು ಗಮನ ನೀಡುವ ಅಗತ್ಯವಿದೆ.

ಪೊಲೀಸ್ ವ್ಯವಸ್ಥೆಯು ಸಮುದಾಯಕ್ಕೆ ಒಂದು ಸುರಕ್ಷಿತ ಪರಿಸರವನ್ನು ನೀಡುತ್ತದೆ ಅಥವಾ ನೀಡಬೇಕು. ಪರಿಣಿತರು ಗುರುತಿಸಿರುವಂತೆ ಪೊಲೀಸ್ ವ್ಯವಸ್ಥೆಯು ನಾಗರಿಕರ ವಿರುದ್ಧ ಬಲವನ್ನು ಪ್ರಯೋಗಿಸಿ ಅವರ ಸ್ವಾತಂತ್ರ್ಯಗಳಿಗೆ ಕಡಿವಾಣ ಹಾಕುವ ಏಕಮಾತ್ರ ಸೈನಿಕೇತರ ಸಂಸ್ಥೆಯಾಗಿದೆ. ಅಂಥ ಅಧಿಕಾರಿವನ್ನು ಅದು ತನ್ನ ನೈತಿಕ ಮತ್ತು ಸಾಮಾಜಿಕ ಪ್ರಜ್ನಾವಂತಿಕೆಯ ಮೂಲಕ ತಾನೇ ಕಡಿವಾಣದಲ್ಲಿಟ್ಟುಕೊಳ್ಳಬೇಕು. ಮಹಾರಾಷ್ಟ್ರ ಪೊಲೀಸರು ಅತ್ಯುತ್ತಮ ಸಮುದಾಯ ಆಚರಣಾ ವಿಧಾನಗಳನ್ನು ಸಾರ್ವತ್ರಿಕವಾಗಿ ಸಾಂಸ್ಥೀಕರಿಸುವಾಗ  ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...