ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ತಾತ್ವಿಕತೆಯೇನು?

Source: sonews | By Staff Correspondent | Published on 1st October 2018, 11:30 PM | National News |

ಭಾರತೀಯ ಪರೀಕ್ಷಾ ವ್ಯವಸ್ಥೆಯು ಯಶಸ್ಸಿಗಿಂತ ಜಾಸ್ತಿ ವೈಫಲ್ಯಗಳನ್ನೇ ಉತ್ಪಾದಿಸುತ್ತದೆ.

ಸ್ಪರ್ಧಾತ್ಮಕವಾದ ಯಾವುದೇ ಪರೀಕ್ಷೆಗಳು ಯಶಸ್ಸು ಮತ್ತು ವೈಫಲ್ಯವೆಂಬ ಎರಡು ಪರಸ್ಪರ ವಿರುದ್ಧವಾದ ವಾಸ್ತವತೆಗಳನ್ನು ಹೊಂದಿರುತ್ತದೆ. ಹಾಗೆಂದು ಎಲ್ಲಾ ಪರೀಕ್ಷೆಗಳಲ್ಲೂ ಒಂದೇ ಬಗೆಯ ತೀವ್ರತೆಯೇನೂ ಇರುವುದಿಲ್ಲ. ಪರೀಕ್ಷೆಗಳನ್ನು ಸ್ಪರ್ಧಾತ್ಮಕಗೊಳಿಸಿದಾಗ ಮಾತ್ರ ಅವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಹಾಗೆ ನೋಡಿದರೆ ಸಾರ್ವಜನಿಕರು ಕನಸಿನ ಗುರಿಯೆಂದು ಭಾವಿಸುವ ಆಡಳಿತಾತ್ಮಕ ಸೇವೆಗಳು, ವೈದ್ಯಕೀಯ, ಮೇನೇಜ್ಮೆಂಟ್, ಮತ್ತು ಸಾಫ್ಟ್ವೇರ್ ಇಂಜನಿಯರಿಂಗ್ ಕ್ಷೇತ್ರಗಲ್ಲಿ ಪ್ರವೇಶ ಪಡೆದುಕೊಳ್ಳಲು ಎದುರಿಸುವ ಪರೀಕ್ಷೆಗಳಲ್ಲಿ ತೀವ್ರತೆಗಳು ನಿಜಕ್ಕೂ ಹೆಚ್ಚಿರುತ್ತದೆ. ಗುರಿಯನ್ನು ತಲುಪುವ ಬಯಕೆಗಳನ್ನು ಇಟ್ಟುಕೊಂಡಿರುವವರಂತೂ ಬಾಲ್ಯದಿಂದಲೇ ಇಂಥಾ ಸ್ಪರ್ಧಾ ಸನ್ನಿಗೆ ಗುರಿಯಾಗಿರುತ್ತಾರೆ.

ತಮ್ಮ ಕನಸಿನ ಗಮ್ಯ ಸ್ಥಾನವನ್ನು ಸೇರಬೇಕೆಂದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಪ್ರವೇಶ ಪಡೆದುಕೊಳುವುದು ಅನಿವಾರ್ಯವಾದ್ದರಿಂದ ಇರುವ ಹಲವು ನೂರು ಅಥವಾ ಕೆಲವು ಸಾವಿರ ಸ್ಥಾನಾವಕಾಶಗಳಿಗೆ ಲಕ್ಷಾಂತರ ಮಂದಿ ಸ್ಪರ್ಧಿಸುತ್ತಾರೆ. ಇಲ್ಲಿ ಪರೀಕ್ಷೆಗಳು ಹಲವರನ್ನು ಸೋಸಿ ತೆಗೆದು ಕೆಲವರಿಗೆ ಮಾತ್ರ ಅವಕಾಶ ಕೊಡುವ ವ್ಯವಸ್ಥೆಯಾಗಿ ಕೆಲಸ ಮಾಡುವುದರಿಂದ ಅದು ಯಶಸ್ಸಿಗಿಂತ ಹೆಚ್ಚು ವೈಫಲ್ಯಗಳನ್ನೇ ಉತ್ಪಾದಿಸುತ್ತದೆ. ಉದಾಹರಣೆಗೆ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ), ಗ್ರಾಜುಯೇಟ್ ರೆಕಾರ್ಡ್ ಎಕ್ಸಾಮಿನೇಷನ್ (ಜಿಆರ್), ಗ್ರಾಜುಯೇಟ್ ಮ್ಯಾನೇಜ್ಮೆಂಟ್ ಅಡ್ಮಿಷನ್ ಟೆಸ್ಟ್ (ಜಿಎಂಎಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್ (ಐಐಟಿಜೆಇಇ) ಮತ್ತು ನ್ಯಾಶನಲ್ ಎಲಿಜಿಬಿಲಿಟಿ ಅಂಡ್ ಎಂಟ್ರನ್ಸ್ ಟೆಸ್ಟ್ (ಎನ್ಇಇಟಿ)ಗಳ ಆಶ್ರಯದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲಭ್ಯವಿರುವ ಕೆಲವು ಸಾವಿರ ಸ್ಥಾನಗಳಿಗೆ ಹಲವು ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ.

ಹೀಗಾಗಿ ವಿದ್ಯಮಾನಗಳಿಂದ ಒಂದು ಪ್ರಶ್ನೆ ಎದುರಾಗುತ್ತದೆ. ಇಂಥಾ ಪರೀಕ್ಷಾ ವ್ಯವಸ್ಥೆಗಳು ಯಶಸ್ಸಿಗಿಂತ ಹೆಚ್ಚು ವೈಫಲ್ಯವನ್ನೇ ಹುಟ್ಟುಹಾಕುತ್ತಿದ್ದರೂ ಪ್ರತಿವರ್ಷ ಹೆಚ್ಚೆಚ್ಚು ಅಭ್ಯರ್ಥಿಗಳೇಕೆ ಪರೀಕ್ಷೆಗಳಿಗೆ ಹಾಜರಾಗಲು ಸಿದ್ಧರಾಗುತ್ತಿದ್ದಾರೆ? ಹಾಗೆಯೇ ಪರೀಕ್ಷೆಗಳಲ್ಲಿ ಸಂಭವಿಸುತ್ತಿರುವ ವೈಫಲ್ಯಗಳ ಪ್ರಮಾಣ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರಗಳೇಕೆ ಕಳವಳಗೊಳ್ಳುತ್ತಿಲ್ಲ?

ಪ್ರಾಯಶಃ ಇಷ್ಟೊಂದು ಜನರು ಪರೀಕ್ಷೆಗಳಲ್ಲಿ ವ್ಯಕ್ತಿಗತ ವೈಫಲ್ಯವನ್ನೂ ಮತ್ತು ಹತಾಷೆಯನ್ನೂ ಎದುರಿಸುತ್ತಿದ್ದರೂ ಅದೊಂದು ದೊಡ್ಡ ಸಾಮಾಜಿಕ ಸಂಕ್ಷೋಭೆಯಾಗದಂತೆ ಪರೀಕ್ಷೆಗಳ ಹಿಂದಿರುವ ತಾತ್ವಿಕತೆಯೇ ತಡೆದಿದೆ. ಪರೀಕ್ಷೆ ಎಂಬ ಆಲೋಚನೆಯು ಸ್ಪರ್ಧಾರ್ಥಿಗಳಲ್ಲಿ ಹತಾಷೆಯ ಬದಲು ಭರವಸೆಯನ್ನೇ ಹುಟ್ಟಿಸುತ್ತಲಿದೆ. ವಾಸ್ತವವಾಗಿ ನೋಡುವುದಾದರೆ ಪರೀಕ್ಷೆಗಳಿಗೆ ಭರವಸೆ ಮತ್ತು ಹತಾಷೆಗಳ ನಡುವಿನ ಒತ್ತಡವನ್ನು ಸಮತೋಲನದಿಂದ ನಿಭಾಯಿಸುವ ಇರಾದೆ ಇದೆ. ಪರೀಕ್ಷೆಗಳು ಮೇಲ್ಚನೆಯನ್ನು ಪಡೆದುಕೊಳ್ಳಬೇಕೆಂಬ (ಪೊಸೆಸೀವ್ ಕೆರಿಯರಿಸಮ್) ತೀವ್ರ ತುಡಿತವುಳ್ಳ ಸ್ಪರ್ಧಿಗಳನ್ನು: ಇಂದು ನಾನು ಯಶಸ್ವಿಯಾಗಿರಬಹುದು. ನಾಳೆ ಖಂಡಿತಾ ನೀನೂ ಕೂಡಾ ಯಶಸ್ವಿಯಾಗುತ್ತೀ ಎಂದು ಹುರಿದುಂಬಿಸುತ್ತವೆ. ಬಗೆಯ ಭರವಸೆಯ ಒಂದು ಕಿರಣವೂ ಸಹ ಹತಾಷೆಯ ವಿನಾಶಕಾರಿ ಶಕ್ತಿಯನ್ನು ನಿಸ್ಸಾರಗೊಳಿಸಿಬಿಡುತ್ತದೆ. ಜೀವನದಲ್ಲಿ ಯಶಸ್ಸನ್ನು ಕಂಡ ವ್ಯಕ್ತಿಗಳ ಸುತ್ತಾ ಸಂಘಟಿಸಲಾಗುವ ಎಲ್ಲಾ ಕಾರ್ಯಕ್ರಮಗಳು ತತ್ವಕ್ಕೆ ಜಾಹಿರಾತು ನೀಡುತ್ತವೆ. ಮತ್ತು ಸಾರಾಂಶದಲ್ಲಿ ಮೇಲ್ಚನೆಯನ್ನು ಶತಾಯಗತಾಯ ಸಾಧಿಸಲೇಬೇಕೆಂಬ ತತ್ವವನ್ನು ಸಾರುತ್ತವೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂತರ್ಗತವಾಗಿರುವ ತರ್ಕಬದ್ಧತೆಯ ಅಂಶವನ್ನು ಮುಂದುಮಾಡಿ  ಹಾತಾಷೆಯನ್ನು ಶಮನಗೊಳಿಸಿ ಸಮತೋಲನ ಸ್ಥಿತಿಗಿಳಿಯುವಂತೆ ಮಾಡುತ್ತದೆ. ಪರೀಕ್ಷೆಗಳು ಎಷ್ಟರಮಟ್ಟಿಗೆ ಪಾರದರ್ಶಕ ಮತ್ತು ನಿಯಮಬದ್ಧ ಎಂದು ಹೇಳಿಕೊಳ್ಳಲಾಗುತ್ತದೋ ಅಷ್ಟೇ ಮಟ್ಟಿಗೆ ತರ್ಕಬದ್ಧವೂ ಆಗಿವೆಯೆಂದು ಗ್ರಹಿಸಲಾಗಿದೆ. ಹೀಗಾಗಿ ಸಾಕಷ್ಟು ಮುಕ್ತವಾಗಿಯೇ ನಡೆಯುವ ಪರೀಕ್ಷೆಗಳು ಅವುಗಳ ಬಗ್ಗೆ ಒಂದು ವಿಶ್ವಾಸವನ್ನೂ ಮೂಡಿಸುತ್ತವೆ ಮತ್ತು ಅಂಥಾ ವಿಶ್ವಾಸವೇ ಅಂತಿಮವಾಗಿ ತಮ್ಮ ತಮ್ಮ ವೈಫಲ್ಯಗಳ ತರ್ಕಬದ್ಧತೆಯನ್ನೂ ಗ್ರಹಿಸುವಂತೆ ಮಾಡುತ್ತವೆ.

ಇದರ ಅರ್ಥವೇನೆಂದರೆ ಪರೀಕ್ಷೆಗಳಲ್ಲಿ ವಿಫಲರಾಗುವ ಅಭ್ಯರ್ಥಿಗಳು ಅದಕ್ಕೆ ತಮ್ಮನ್ನು ಮಾತ್ರ ಹೊಣೆಯಾಗಿಸಿಕೊಳ್ಳುತ್ತಾರೆ ಮತ್ತು ಅದರಿಂದಾಗಿ ಪದೇಪದೇ ಪರೀಕ್ಷೆಯಲ್ಲಿ ಪಾಸಾಗುವ ಪ್ರಯತ್ನಪಡುತ್ತಾರೆ. ಹಾಗೂ ಪದೇಪದೇ ಅನುತ್ತೀರ್ಣಗೊಳ್ಳುತ್ತಲೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂಥಾ ದುರಂತ ಮಾರ್ಗವನ್ನು ಹಿಡಿಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿರುವ ತರ್ಕಬದ್ಧ ಕಾರಣಗಳು ಭರವಸೆ ಮತ್ತು ಹತಾಷೆಗಳ ನಡುವೆ ಸಮತೋಲನ ಉಂಟುಮಾಡಲು ಬೇಕಾದ ಭೂಮಿಕೆಯನ್ನು ಒದಗಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಆಶೋತ್ತರಗಳಿಗಿಂತ ಸ್ಪರ್ಧೆಯ ಹಿಂದಿನ ತಾತ್ವಿಕತೆಯ ವಾಹಕರಾಗಿಬಿಡುತ್ತಾರೆ.

ರೀತಿಯಲ್ಲಿ ಯಶಸ್ಸು ಅಥವಾ ವೈಫಲ್ಯಗಳಿಗೆ ಆಯಾ ವ್ಯಕ್ತಿಗಳನ್ನೇ ಹೊಣೆ ಮಾಡುವ ಮೂಲಕ ವಿವಿಧ ಬಗೆಯ ಅವಕಾಶಗಳನ್ನು ಪಡೆದುಕೊಳ್ಳಬಲ್ಲ ವ್ಯವಸ್ಥೆಯನ್ನು ಮತ್ತು ಯೋಗ್ಯವಾದ ಉದ್ಯೋಗಗಳನ್ನು ಸೃಷ್ಟಿಸಬೇಕಾದ ತನ್ನ ಹೊಣೆಗಾರಿಕೆಯಿಂದ ಸರ್ಕಾರಗಳು

ಜಾರಿಕೊಳ್ಳುತ್ತಿವೆ. ಭಾರತದ ನಿರುದ್ಯೋಗಿ ಯುವಕರಲ್ಲಿ ನಿಧಾನವಾಗಿ ಅಸಮಾಧಾನವು ಮಡುಗಟ್ಟುತ್ತಿದ್ದು ಅದರ ಬಗ್ಗೆ ಕೂಡಲೇ ಗಮನಹರಿಸದಿದ್ದರೆ ಯುವಜನತೆಯ ಆಕ್ರೋಶವು ಅಪಾಯಕಾರಿ ಮಟ್ಟವನ್ನು ಮುಟ್ಟಬಹುದು. ಆದರೆ ಸಾಧ್ಯತೆಯ ಬಗ್ಗೆಯೂ ಸರ್ಕಾರಕ್ಕೆ ಯಾವುದೇ ಕಾಳಜಿಯಿದ್ದಂತಿಲ್ಲ. ಯೋಗ್ಯವಾದ ಉದ್ಯೋಗಗಳ ಅವಕಾಶವನ್ನು ಒದಗಿಸಬಲ್ಲ ವರ್ತುಲಗಳೇ ಕ್ರಮೇಣವಾಗಿ ಕುಗ್ಗುತ್ತಿರುವ ಬಗ್ಗೆಯೂ ಸರ್ಕಾರಕ್ಕೆ ನೈಜ ಕಾಳಜಿಯಿದ್ದಂತಿಲ್ಲ. ಜನತೆಯ ಆಶೋತ್ತರಗಳೆಲ್ಲಾ ಆಡಳಿvಸೇವೆಯಂಥಾ ಒಂದೆರಡು ಕ್ಷೇತ್ರಗಳಿಗೆ ಪ್ರವೇಶ ಪಡೆಯುವುದರ ಸುತ್ತಾ ಕೇಂದ್ರೀಕರಣಗೊಳ್ಳುತ್ತಿರುವ ಅನಾರೋಗ್ಯಕರ ಬೆಳವಣಿಗೆಯ ಬಗ್ಗೆಯೂ ಸರ್ಕಾರಕ್ಕೆ ಲಕ್ಷ್ಯವಿಲ್ಲ. ಆದರೆ ಮತ್ತೊಂದು ಕಡೆ ದೇಶಾದ್ಯಂತ ಅಣಬೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಿಗೆ ಅನುಮತಿ ಕೊಡುವುದರಲ್ಲಿ ಮಾತ್ರ ಸರ್ಕಾರಕ್ಕೆ ಎಲ್ಲಿಲ್ಲದ ಉತ್ಸಾಹ ಎದ್ದುಕಾಣುತ್ತದೆ

 

ಅದೇನೇ ಇದ್ದರೂ ಇಂಥಾ ಪರೀಕ್ಷೆಗಳಲ್ಲಿ ನಪಾಸಾಗುತ್ತಾ ಅತ್ಯಂತ ಹತಾಷರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಆಯಾ ವ್ಯಕ್ತಿಗಳ ವೈಫಲ್ಯವೆಂದು ಖಂಡಿತಾ ನೋಡಲಾಗದು. ಏಕೆಂದರೆ ಅಂಥಾ ಧೋರಣೆಯು ಆಯಾ ಸ್ಪರ್ಧಿಗಳನ್ನೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆಯೇ ವಿನಃ ಘನತೆಯುಳ್ಳ ವಿವಿಧ ಬಗೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ ವ್ಯವಸ್ಥೆಯ ವ್ಯಫಲ್ಯವೇನೆಂದು ಪರಿಶೀಲಿಸುವಂತೆ ಮಾಡುವುದಿಲ್ಲ. ಅರ್ಹತೆಯುಳ್ಳ ಸ್ಪರ್ಧಿಗಳಿಗೆ ಘನತೆಯುಳ್ಳ ಉದ್ಯೋಗಗಳನ್ನು ದೊರಕಿಸಿಕೊಡುವಲ್ಲಿ ಸರ್ಕಾರವು ವಿಫಲವಾಗುತ್ತಲೇ ಬರುತ್ತಿದೆ. ಇಂಥಾ ಸಂದರ್ಭದಲ್ಲಿ ಆಂಥಾ ಆಶೋತ್ತರಗಳ ಒತ್ತಡವನ್ನು ಸದ್ಯಕ್ಕೆ ಕಡಿಮೆ ಇರುವ ಅಥವಾ ಇನ್ನೂ ಅಸ್ಥಿತ್ವಕ್ಕೆ ಬಾರದ ಇತರ ಘನತೆಯುಳ್ಳ ಉದ್ಯೋಗಾವಕಾಶಗಳ ವರ್ತುಲಗಳ ಮೇಲೂ ಹರಡುವಂತೆ ಮಾಡಬೇಕು. ಕೃಷಿ ಮತ್ತು ಕೈಗಾರಿಕೆಗಳಲ್ಲಿನ ಉದ್ಯೋಗಗಳ ಸಾರ ಮತ್ತು ಘನತೆಯನ್ನು ಸರ್ಕಾರವು ಪುನರ್ಸ್ಥಾಪಿಸಬೇಕು. ಇಂಥಾ ಮೂಲಭೂತ ಉದ್ಯೋಗ ಸೃಷ್ಟಿಯ ಕ್ಷೇತ್ರಗಳನ್ನು ಗಮನಿಸದಷ್ಟೂ ಕಾಲ ಆಡಳಿತಾತ್ಮಕ ಸೇವೆಗಳೇ ಎಲ್ಲರ ಕನಸಿನ ಗಮ್ಯ ಸ್ಥಾನವಾಗಿ ಮುಂದುವರೆಯುತ್ತದೆ. ಮತ್ತದು ಕೆಲವರಿಗೆ ಮಾತ್ರ ಅವಕಾಶವನ್ನೂ ಉಳಿದೆಲ್ಲರಿಗೂ ಹತಾಷೆಯನ್ನೂ ಹಂಚುತ್ತಾ ಹೋಗುತ್ತದೆ. ಗ್ರಾಹಕರನ್ನು ಆಧರಿಸಿದ ಉಪಭೋಗಿ ವಸ್ತುಗಳ ಉತ್ಪಾದನೆಯನ್ನು ಮಾತ್ರ ಆಧರಿಸಿರುವ ಬಂಡವಾಳಶಾಹಿ ವ್ಯವಸ್ಥೆಗೆ ಮೇಲೆ ಹೇಳಿದ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಘನತೆಯುಳ್ಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲ ಸಾಮರ್ಥ್ಯವಿರುವುದಿಲ್ಲ. ಮತ್ತೊಂದೆಡೆ ಅದು ಸೃಷ್ಟಿಸುವ ಉದ್ಯೋಗಾವಕಾಶಗಳು ತಮ್ಮ  ನೈತಿಕ ಘನತೆಗೆ ತಕ್ಕುದಾದುದಲ್ಲ ಎಂದು ಉನ್ನತಾಶಯಗಳನ್ನು ಇಟ್ಟುಕೊಂಡಿರುವ ಅಭ್ಯರ್ಥಿಗಳು ಭಾವಿಸುವಂತಿರುತ್ತದೆ. ಇಂಥಾ ಅಪಮಾನಕಾರಿ ಆಯ್ಕೆಗಳಿಂದ ಪಾರಾಗುವ ಅಗತ್ಯಗಳು ಆಡಳಿತ ಸೇವೆಯಂಥ ಸುಭದ್ರ ಉದ್ಯೋಗಾವಕಾಶಗಳ ಮೇಲೆ ಇನ್ನೂ ಹೆಚ್ಚಿನ ಒತ್ತಡವನ್ನು ಸೃಷ್ಟಿಸುತ್ತವೆ.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಸತತ ವೈಫಲ್ಯಗಳನ್ನು ತರ್ಕಬದ್ಧಗೊಳಿಸುವ ತಾತ್ವಿಕತೆಯಾಗಿ ಕೆಲಸಮಾಡುತ್ತದೆ. ಹಾಗೂ ತಾರ್ಕಿಕತೆಯು ಕೆಲವರ ಯಶಸ್ಸಿನ ವೈಭವೀಕರಣದಿಂದ ಮಾತ್ರ ರೂಪುಗೊಂಡಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...