ಅಯೋಧ್ಯಾ ತೀರ್ಪಿನ ತಾತ್ಪರ್ಯವೇನು?

Source: sonews | By Staff Correspondent | Published on 19th November 2019, 11:43 PM | Special Report | Don't Miss |

ನ್ಯಾಯಾಂಗದ ಸ್ವವಿವೇಚನೆ ಮತ್ತು ಅದನ್ನು ಆಧರಿಸಿ ನೀಡುವ ಆದೇಶಗಳು ಸಂಪೂರ್ಣ ನ್ಯಾಯವನ್ನು ಒದಗಿಸುತ್ತವೆಯೇ?

ಬಾಬ್ರಿಮಸೀದಿಯ ಒಡೆತನಕ್ಕೆ ಸಂಬಂಧಪಟ್ಟ ವ್ಯಾಜ್ಯದ ಬಗ್ಗೆ ಸುಪ್ರೀಂಕೋರ್ಟು ಕೊಟ್ಟಿರುವ ಆದೇಶದಷ್ಟೇ ದೊಡ್ಡಧ್ವನಿಯಲ್ಲಿ ಅದರೊಳಗಿರುವ ಮೌನವೂ ಮಾತಾಡುತ್ತದೆ. ಅಂದರೆ ಈ ವಿವಾದದ ಬಗ್ಗೆ ಕೋರ್ಟಿನ ಆದೇಶವೇನೆಂದು ತಿಳಿದುಕೊಳ್ಳಬೇಕೆಂದರೆ ಅದು ಏನನ್ನು ಹೇಳುತ್ತಿದೆ ಎಂಬಷ್ಟೇ ಮುಖ್ಯವಾಗಿ ಅದು ಏನನ್ನು ಹೇಳಲು ನಿರಾಕರಿಸುತ್ತಿದೆ ಎಂಬುದನ್ನೂ ಸಹ ಅರ್ಥಮಾಡಿಕೊಳ್ಳಬೇಕು.

ವಿವಾದಿತ ೨.೭೭ ಎಕರೆ ಜಮೀನಿನ ಒಡೆತನವನ್ನು ದೇವರಾದ ಭಗವಾನ್ ಶ್ರೀರಾಂ ವಿರಾಜ್‌ಮಾನ್ ಮತ್ತು ಅವರ ಪೋಷಕರಿಗೆ ನೀಡಿದ ನಂತರ ಕೋರ್ಟು ಉಳಿದ ಎಂಟು ನಿರ್ದೇಶನಗಳನ್ನು ಏಕೆ ಕೊಡಬೇಕಾಯಿತೆಂಬುದು ಆಶ್ಚರ್ಯಕರ. ಹಾಗೆ ನೋಡಿದರೆ ೧೯೪೯ರಿಂದಲೂ ನಡೆಯುತ್ತಿದ್ದ ಈ ವಿವಾದದಲ್ಲಿ ಅದರ ಒಡೆತನವನ್ನು ಆಗ್ರಹಿಸಿ ಹಲವಾರು ಹಿಂದೂ ಹಾಗೂ ಮುಸ್ಲಿಂ  ಕಕ್ಷಿದಾರರು ದಾವೆ ಹೂಡಿದ್ದರು. ಆದ್ದರಿಂದ ಒಮ್ಮೆ ವಿವಾದಿತ ಜಮೀನು ಭಗವಾನ್ ರಾಮನಿಗೆ ಸೇರಬೇಕೆಂದು ಆದೇಶಿಸಿದ ನಂತರದಲ್ಲಿ ಆ ಜಾಗದಲ್ಲಿ ಏನಾಗುತ್ತದೋ ಎಂಬುದರ ಬಗ್ಗೆ ನ್ಯಾಯಾಲಯವೇಕೆ ಚಿಂತಿಸಬೇಕಿತ್ತು ಎಂದು ನಾವು ಕೇಳಬೇಕಿದೆ.

೧೯೯೩ರ ಅಯೋಧ್ಯಾ ಕಾಯಿದೆಯನ್ವಯ ಕೇಂದ್ರ  ಸರ್ಕಾರವು ೧೯೯೩ರಲ್ಲಿ ಆ ಸ್ಥಳವನ್ನು ತನ್ನ ಸುಫರ್ದಿಗೆ ತೆಗೆದುಕೊಂಡಿದ್ದು ಕೆಲವು ಶರತ್ತಿಗೆ ಒಳಪಟ್ಟು ಅದನ್ನು ಯಾವ ಪ್ರಾಧಿಕಾರದ ಅಥವಾ ಟ್ರಸ್ಟಿನ ಸುಫರ್ದಿಗೆ ವಹಿಸುವ ಅಧಿಕಾರವನ್ನು ಪಡೆದುಕೊಂಡಿದೆ. ಅಯೋಧ್ಯಾ ಆದೆಶವನ್ನು ನೀಡಿದ ನಂತರದಲ್ಲಿ ೧೯೯೩ರ ಕಾಯಿದೆಯನ್ವಯ ಸರ್ಕಾರವು ಯಾವ ರೀತಿಯಲ್ಲಿ ಮಾಡುವುದು ಉಚಿತವೆಂದು ಭಾವಿಸುತ್ತದೋ ಆ ರೀತಿಯಲ್ಲಿ ಮಾಡಲು ಅವಕಾಶ ನೀಡದೆ ಅದನ್ನೂ ಹೀಗೆಯೇ ಮಾಡಬೇಕೆಂದು ಸುಪ್ರೀಂ ಕೋರ್ಟು ನಿರ್ದೇಶನವನ್ನು ನೀಡಿಬಿಟ್ಟಿದೆ. ನ್ಯಾಯಾಲಯವು ಈ ರೀತಿಯ ನಿರ್ದೇಶನ ಕೊಡುವ ಅಗತ್ಯವೇನಿತ್ತು ಎಂಬುದು ಸೋಜಿಗವಾಗಿದೆಯಲ್ಲದೆ ಕೇಂದ್ರ ಸರ್ಕಾರವು ನಿಜಕ್ಕೂ ಎಲ್ಲವನ್ನೂ ಕೋರ್ಟು ಹೇಳಿದಂತೆ ಮಾಡುತ್ತದೆಯೇ ಎಂಬುದನ್ನು ಸಹ ಕಾದು ನೋಡಬೇಕಿದೆ.

ಕಕ್ಷಿದಾರರಿಬ್ಬರಿಗೂ ಸಂಪೂರ್ಣ ನ್ಯಾಯ ಒದಗಿಸಬೇಕಾದ ಅಗತ್ಯವು ಕಂಡುಬಂದರೆ ಅದನ್ನು ಮಾಡಲು ಸುಪ್ರೀಂ ಕೋರ್ಟಿಗೆ ಅಧಿಕಾರ ನೀಡುವ ಸಂವಿಧಾನದ ೧೪೨ನೇ ಕಲಮಿನ ಪ್ರಕಾರ ಕೋರ್ಟು ಈ ನಿರ್ದೇಶನವನ್ನು ನೀಡಿದೆ. ಈ ನಿರ್ದೇಶನಗಳು ಗಾಳಿಯಲ್ಲೇನೂ ತೇಲಿ ಬಂದಿದ್ದಲ್ಲ. ಮಾನವ ಇತಿಹಾಸದ ಮತ್ತು ನಡವಳಿಕೆಗಳ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡಾಗ ಕೆಲವೊಮ್ಮೆ ಶಾಸನಾತ್ಮಕ ಕಾನೂನಿನಲ್ಲಿರುವ ಮೌನಗಳನ್ನು ಮೀರಬೇಕಾದ ಅಗತ್ಯ ಉದ್ಭವಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಲ್ಲಿ ಈ ಕಲಮನ್ನು ಸೇರಿಸಲಾಯಿತೆಂದು ಈ ನ್ಯಾಯಾದೇಶದಲ್ಲಿ ಕೋರ್ಟು ವಿವರವಾಗಿ ಹೇಳುತ್ತದೆ.

ಈ ನಿಟ್ಟಿನಲ್ಲಿ ನೋಡಿದಾಗ ಒಂದೆಡೆ ಹಿಂದೂ ಕಕ್ಷಿದಾರರು ವಿವಾದಿತ ಜಾಗದ ಮೇಲೆ ತಮ್ಮ ಒಡೆತನವನ್ನು ಕಾನೂನಾತ್ಮಕವಾಗಿ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದರೂ ಮುಸ್ಲಿಂ ಕಕ್ಷಿದಾರರಿಗೂ ಪರಿಹಾರ ನೀಡುವ ಮೂಲಕ ಮಾತ್ರ ಸರಿಸಮನಾದ ನ್ಯಾಯ ಒದಗಿಸಿದಂತಾಗುತ್ತಿತ್ತು ಎಂದು ಕೆಲವರು ಸಕಾರಣವಾಗಿ ಈ ಆದೇಶವನ್ನು ಸಮರ್ಥಿಸಿಕೊಳ್ಳಬಹುದು. ಹೀಗಾಗಿ ಕೋರ್ಟು ಅಯೋಧ್ಯಾ ಕಾಯಿದೆಯ ಭಾಗವಾಗಿ ಕೇಂದ್ರ  ಸರ್ಕಾರವು ಯಾವುದೇ ಯೋಜನೆಯನ್ನು ರೂಪಿಸಿದರೂ ಮಸೀದಿಯ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಡಿಗೆ ಜಮೀನನ್ನು ಕೊಡುವುದನ್ನು ಅದರ ಅಂತರ್ಗತ ಭಾಗವನ್ನಾಗಿಸಿದೆ.

ಆದರೂ ಒಂದು ಪ್ರಶ್ನೆ ಉಳಿದುಕೊಳ್ಳುತ್ತದೆ: ಇದನ್ನು ನ್ಯಾಯವೆನ್ನಬಹುದೇ? ಹಿಂದೂಗಳ ಒಡೆತನವು ಕಾನೂನಿನ ಪ್ರಕಾರ ಸಾಬೀತಾUದ್ದಲ್ಲಿ, ಮಾನವರ ಇತಿಹಾಸ ಮತ್ತು ನಡವಳಿಕೆಗಳ ಸಂಕೀರ್ಣತೆಯ ಯಾವ ನಿರ್ದಿಷ್ಟ ಅಂಶಗಳಿಂದಾಗಿ ಕೋರ್ಟು ಉತ್ತರಪ್ರದೇಶದ ಸುನ್ನಿ ವಕ್ಫ್ ಬೋರ್ಡಿಗೆ ಜಮೀನನ್ನು ಕೊಡಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡುವಂತೆ ಪ್ರೇರೇಪಿಸಿತು?

ಅದಕ್ಕೆ ಉತ್ತರ ಸಿಗುವುದು ಅಷ್ಟೇನೂ ಕಷ್ಟವಲ್ಲ. ಬಾಬ್ರಿ ಮಸೀದಿಯಲ್ಲಿ ೧೯೪೯ರ ಮಧ್ಯರಾತ್ರಿ ನಡುಗುಮ್ಮಟದ ಅಡಿಯಲ್ಲಿ ಮೂರ್ತಿಗಳನ್ನು ಸ್ಥಾಪಿಸುವ ಮೂಲಕ ಮತ್ತು ೧೯೯೨ರಲ್ಲಿ ಎಲ್ಲರೆದುರಿನಲ್ಲೇ ಕರಸೇವಕರ ಒಂದು ಗುಂಪು ಬಾಬ್ರಿ ಮಸೀದಿಯ ಗುಮ್ಮಟವನ್ನು ಕೆಡವಿ  ಬೀಳಿಸಿದಾಗ ಎರಡೆರಡು ಬಾರಿ ಮಸೀದಿಯನ್ನು ಅಪವಿತ್ರಗೊಳಿಸಲಾಗಿದೆಯೆಂಬುದನ್ನು ಕೋರ್ಟು ಎರಡು ಮಾತಿಲ್ಲದೆ ಒಪ್ಪಿಕೊಳ್ಳುತ್ತದೆ. ಆದರೆ ಈ ಎರಡೂ ಘಟನೆಗಳೂ ಆ ಜಾಗದ ಮೇಲೆ ಹಿಂದೂಗಳ ಒಡೆತನದ ದಾವೆಯ ಮಾನ್ಯತೆಗೇನೂ ಧಕ್ಕೆ ತರುವುದಕ್ಕೆ ಕೋರ್ಟು ಅವಕಾಶ ಮಾಡಿಕೊಟ್ಟಿಲ್ಲ. ಅದು ಬಾಬ್ರಿ ಮಸೀದಿಯ ನಡುಗುಮ್ಮಟದ ಕೆಳಗೆ ರಾಮ ಜನ್ಮಭೂಮಿಯಿದೆಯೆಂಬ ಹಿಂದೂಗಳ ನಂಬಿಕೆ ಹಾಗೂ ಶ್ರದ್ಧೆಗಳಿಗೆ ಹೆಚ್ಚಿನ ತೂಕವನ್ನು ಕೊಟ್ಟಿದೆಯೇ ವಿನಾ ೧೮೫೭ರ ನಂತರವೂ ಮುಸ್ಲಿಮರು ಬಾಬ್ರಿ ಮಸೀದಿಯಲ್ಲಿ ನಮಾಜು ಮಾಡುತ್ತಿದ್ದರು ಎಂಬ ಪ್ರತಿಪಾದನೆಗೆ ಯಾವ ತೂಕವನ್ನೂ ನೀಡಿಲ್ಲ.

ಆದ್ದgಂದ ನ್ಯಾಯಾಲಯವು ಬಾಯಿಬಿಟ್ಟು ಹೇಳದೇ ಇರುವುದೇನೆಂದರೆ: ೧೯೪೯ರ ಹಾಗೂ ೧೯೯೨ರ ಕಾನೂನು ಬಾಹಿರ ನಡವಳಿಕೆಗಳಿಂದ ಹಿಂದೂUಳ ಪ್ರvಪಾದನೆಗೆ ಇನ್ನೂ ಹೆಚ್ಚು ಪುಷ್ಟಿ ಸಿಕ್ಕಿರುವುದು ನಿಜ. ಆದರೂ ಆ ಲಾಭವನ್ನು ಹಿಂದೂಗಳು ಪಡೆಯುವುದನ್ನೇನೂ ನಾವು ನಿರ್ಬಂಧಿಸುವುದಿಲ್ಲ. ಮುಸ್ಲಿಂ ಕಕ್ಷಿದಾರರು ೧೯೪೯ ಮತ್ತು ೧೯೯೨ರಲ್ಲಿ ಅನುಭವಿಸಿದ ಅನ್ಯಾಯಗಳಿಗೆ ನಾವು ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಈ ಆದೇಶದಲ್ಲಿ ಅವರಿಗೆ ಏನೂ ನೀಡಿದ್ದೇವೆಯೋ ಅದರಿಂದ ಅವರು ತೃಪ್ತರಾಗುತ್ತಾರೆಂದು ನಾವು ನಿರೀಕ್ಷಿಸುತ್ತೇವೆ.

ಹೀಗಾಗಿ ಸುಪ್ರೀಂ ಕೋರ್ಟು ನೀಡಿರುವ ಆದೇಶವನ್ನು ಹೆಚ್ಚೆಂದರೆ ಒಂದು ನ್ಯಾಯಿಕ ದಾನಭಿಕ್ಷೆಯೆಂದಷ್ಟೇ ಅರ್ಥ ಮಾqಕೊಳ್ಳಬಹುದು. ಒಂದು ಸಂಪೂರ್ಣ ನ್ಯಾಂiiವು ಜಾಗದ ಒಡೆತನವನ್ನು ತೀರ್ಮಾನಿಸುವುದರ ಜೊತೆಗೆ ೧೯೯೨ರಲ್ಲಿ ನಡೆದ ಅನ್ಯಾಯಗಳಿಗೂ ಒಂದು ನೈಜವಾದ ಮತ್ತು ಅರ್ಥಪೂರ್ಣ ರೀತಿಯಲ್ಲಿ ಪರಿಹಾರವನ್ನು ಒಳಗೊಳ್ಳಬೇಕಿತ್ತು. ಈ ವಿಷಯದಲ್ಲಿ ಕೋರ್ಟಿನ ಇತಿಹಾಸವು ಅದರ ಹುಳುಕನ್ನು ಬಿಚ್ಚಿಡುವಂತಿದೆ. ತನ್ನ ಆದೇಶಕ್ಕೆ ವ್ಯತಿರಿಕ್ತವಾಗಿ ಮಸೀದಿಯನ್ನು ರಕ್ಷಿಸಲು ಯಾವ ಕ್ರಮಗಳನ್ನೂ ಕೈಗೊಳ್ಳದ ಅಂದಿನ ಉತ್ತರಪ್ರದೇಶದ ಮುಖ್ಯಮಂತ್ರಿಯ ಮೇಲೆ ಕೋರ್ಟು ಯಾವ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ. ಬಾಬ್ರಿ ಮಸೀದಿಯ ನಾಶ ಪ್ರಕರಣದ ಕ್ರಿಮಿನಲ್ ವಿಚಾರಣೆಯು ಬಸವನಹುಳುವಿನಂತೆ ತೆವಳುತ್ತಿದ್ದು ಕೋರ್ಟು ತಾನು ವಿಧಿಸಿದ ಗಡುವನ್ನು ತಾನೇ ಪದೇಪದೇ ವಿಸ್ತರಿಸುತ್ತಾ ಬಂದಿದೆ.

ಸಂವಿಧಾನದ ೧೪೨ನೇ ಕಲಮಿನನ್ವಯ ನೋಡುವುದಾದರೆ ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಆದೇಶವನ್ನು ಯಾವ ಅರ್ಥದಲ್ಲೂ ಸಂಪೂರ್ಣ ನ್ಯಾಯವೆಂದು ಹೇಳಲಾಗುವುದಿಲ್ಲ. ಅದು ಹೆಚ್ಚೆಂದರೆ ಅಪೂರ್ಣ ನ್ಯಾಯ ಅಥವಾ ಇನ್ನೂ ಹೇಳಬೇಕೆಂದರೆ ಸಂಪೂರ್ಣ ಅನ್ಯಾಯ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...