ಪ.ಬಂಗಾಳದಲ್ಲಿ ಟಿಎಂಸಿಗೆ ಹ್ಯಾಟ್ರಿಕ್ ಗೆಲುವು, ಕೇರಳದಲ್ಲಿ ಎಲ್‌ಡಿಎಫ್ ಹೊಸ ಇತಿಹಾಸ, ಅಸ್ಸಾಮಿನಲ್ಲಿ ಮತ್ತೆ ಬಿಜೆಪಿ, ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಜಯ, ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿ

Source: VB | By S O News | Published on 3rd May 2021, 2:02 PM | National News |

ಹೊಸದಿಲ್ಲಿ: ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರ ತೀರ್ಪು ರವಿವಾರ ಹೊರಬಿದ್ದಿದ್ದು, ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆಗೆ ಎಡಿಎಂಕೆ ತತ್ತರಿಸಿದ್ದು, ಡಿಎಂಕೆ ನಿಚ್ಚಳ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿ ಆಡಳಿತಾರೂಢ ಬಿಜೆಪಿ ಸ್ಪಷ್ಟ ಬಹುಮತಪಡೆದಿದ್ದು, ಸತತ ಎರಡನೇ ಬಾರಿಗೆ ಅಧಿಕಾರಕ್ಕೇರುವಲ್ಲಿ ಸಫಲವಾಗಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಪ್ರಚಂಡ ಗೆಲುವು ಸಾಧಿಸಿದೆ. ಕೇರಳದಲ್ಲಿ ಕಳೆದ ನಾಲ್ಕು ದಶಕಗಳಿಂದ ಪ್ರತಿ 5 ವರ್ಷಕ್ಕೊಮ್ಮೆ ಸರಕಾರಗಳು ಬದಲಾಗುತ್ತಿದ್ದು, ಈಗ ಸತತ ಎರಡನೇ ಸಲ ಅಧಿಕಾರಕ್ಕೇರುವ ಮೂಲಕ ಎಲ್‌ಡಿಎಫ್ ಹೊಸ ದಾಖಲೆ ಸೃಷ್ಟಿಸಿದೆ.

ಪಶ್ಚಿಮಬಂಗಾಳದಲ್ಲಿ ಚುನಾವಣೆ ನಡೆದ 292 ವಿಧಾನಸಭಾ ಕ್ಷೇತ್ರಗಳ

ಪಶ್ಚಿಮಬಂಗಾಳದಲ್ಲಿ ಟಿಎಂಸಿ ಗೆಲುವು ಜನತೆಯ ಗೆಲುವು ನನ್ನ ರಾಜ್ಯದ ಜನತೆ ದೇಶವನ್ನು ರಕ್ಷಿಸಿದರು' ಎಂದು ಹೇಳಲು ಹೆಮ್ಮೆಯಾಗುತ್ತದೆ.

 ಮಮತಾ ಬ್ಯಾನರ್ಜಿ, ಟಿಎಂಸಿ ವರಿಷ್ಠೆ

ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 215 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 75 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಎಡಪಕ್ಷಗಳು, ಕಾಂಗ್ರೆಸ್ ನೇತೃತ್ವದ ಮೈತ್ರಿರಂಗ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಪ್ರತಿಷ್ಠೆಯ ಕಣವಾಗಿದ್ದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಲಪ್ಪಿರುವುದು ಟಿಎಂಸಿಯ ಗೆಲುವಿನ ಸಂಭ್ರಮಕ್ಕೆ ತುಸು ಧಕ್ಕೆಯುಂಟು ಮಾಡಿದೆ.ಈ ಕ್ಷೇತ್ರದಲ್ಲಿ ಮಮತಾ ಅವರು ಕೇವಲ ಎರಡು ತಿಂಗಳ ಹಿಂದಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂಧು ಅವರ ಎದುರು ಪರಾಭವಗೊಂಡಿದ್ದಾರೆ.

ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಮತ ಎಣಿಕೆಯಲ್ಲಿ ವಂಚನೆ: ಮಮತಾ ಆರೋಪ

ಕೋಲ್ಕತಾ: ತನ್ನ ಒಂದು ಕಾಲದ ಆಪ್ತ ಸಹಾಯಕ ಹಾಗೂ ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿದ್ದ ನಂದಿಗ್ರಾಮದಲ್ಲಿ ಮತ ಎಣಿಕೆ ಪ್ರಕ್ರಿಯೆಯಲ್ಲಿ "ಲೂಟಿ ಹಾಗೂ ಮೋಸ" ನಡೆದಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಆರೋಪಿಸಿದ್ದಾರೆ.

ನಂದಿಗ್ರಾಮದಲ್ಲಿ ಜನಾದೇಶವನ್ನು ಒಪ್ಪಿಕೊಂಡಿರುವುದಾಗಿ ಅವರು ಹೇಳಿದರು. ಆದರೆ, ಮತ ಎಣಿಕೆ ಪ್ರಕ್ರಿಯೆ ಕುರಿತು ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ತಿಳಿಸಿದ್ದಾರೆ.

“ಅವರು (ಚುನಾವಣಾ ಆಯೋಗ) ಕಣ್ಗಾವಲು ನಿಲ್ಲಿಸಿದರು. ಅವರು ಜಯ (ಅಭ್ಯರ್ಥಿಯ)ವನ್ನು ಘೋಷಿಸಿದರು. ಆನಂತರ ಅವರು ಏನನ್ನೋ ಹೇಳಿದರು' ಎಂದ ಅವರು, “ಕೆಲವು ಲೂಟಿ ನಡೆಯುತ್ತಿದೆ, ಕೆಲವು ವಂಚನೆ ನಡೆಯುತ್ತಿದೆ. ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿದ್ದೇವೆ'' ಎಂದರು.

126 ಸ್ಥಾನಗಳಲ್ಲಿ 75ರಲ್ಲಿ ಕಮಲಪಕ್ಷ ಗೆಲುವಿನ ನಗೆ ಬೀರಿದೆ. ಒಂದು ಕಾಲದಲ್ಲಿ ತನ್ನ ಭದ್ರಕೋಟೆಯಾದ ಅಸ್ಸಾಮಿನಲ್ಲಿ ಮತ್ತೆ ಅಧಿಕಾರ ಹಿಡಿಯಲು ಹರಸಾಹಸಪಟ್ಟಿದ್ದ ಕಾಂಗ್ರೆಸ್‌ಗೆ ಈ ಸಲವೂ ನಿರಾಶೆಯಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 50 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, ನಿರಾಶಾದಾಯಕ ಸಾಧನೆ ಮಾಡಿದೆ. ಕೇರಳದಲ್ಲಿ ಎಡರಂಗ ವಿಜಯ ಪತಾಕೆ ಹಾರಿಸಿದೆ. ಆ ರಾಜ್ಯದಲ್ಲಿ ಎಲ್ಲಾ 140 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ 99 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 41 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ. ಕೇರಳದಲ್ಲಿ ಭರ್ಜರಿ ಸಾಧನೆಯ ಕನಸು ಕಂಡಿದ್ದ ಬಿಜೆಪಿಗೆ ಭಾರೀ ನಿರಾಶೆಯಾಗಿದ್ದು, ಒಂದು ಸ್ಥಾನವನ್ನೂ ಪಡೆಯಲೂ ಅದಕ್ಕೆ ಸಾಧ್ಯವಾಗಿಲ್ಲ. ಕಳೆದ ವಿಧಾನಸಭೆಯಲ್ಲಿ ಓರ್ವ ಶಾಸಕನನ್ನು ಹೊಂದಿದ್ದ ಬಿಜೆಪಿಗೆ ಈ ಚುನಾವಣೆ ಭಾರೀ ಆಘಾತ ನೀಡಿದೆ. ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆಯಿಂದಾಗಿ ಎಡಿಎಂಕೆಗೆ ಮುಖಭಂಗವಾಗಿದೆ. ಪ್ರತಿಪಕ್ಷವಾದ ಡಿಎಂಕೆ ಹತ್ತು ವರ್ಷಗಳ ಬಳಿಕ ಮತ್ತೆ ಗದ್ದುಗೆ ಹಿಡಿಯಲಿದೆ. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಕಾಂಗ್ರೆಸ್ ಸಹಿತ ಅದರ ಮಿತ್ರಪಕ್ಷಗಳು ಒಟ್ಟು 160 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಎಡಿಎಂಕೆ, ಬಿಜೆಪಿ ಮೈತ್ರಿಕೂಟಕ್ಕೆ 74 ಸ್ಥಾನಗಳು ದೊರೆತಿವೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗ್ರೆಸ್ ಆಡಳಿತ ಅಂತ್ಯಗೊಂಡಿದೆ. 30 ಸ್ಥಾನಗಳ ಪುದುಚೇರಿ ವಿಧಾನಸಭೆಯಲ್ಲಿ ಎನ್. ರಂಗಸ್ವಾಮಿ ಅವರ ಎಐಎನ್‌ಆರ್‌ಸಿ-ಬಿಜೆಪಿ ನೇತೃತ್ವದ ಮೈತ್ರಿಕೂಟ 16ರಲ್ಲಿ ಗೆಲುವು ಸಾಧಿಸಿದ್ದು, ಉಳಿದ 9 ಸ್ಥಾನಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟ ಗೆದ್ದಿದೆ. ಪ.ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಮತದಾನ ನಡೆದಿತ್ತು. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ದ್ದಾಜಿದ್ದಿಯ ಸ್ಪರ್ಧೆಗೆ ಸಾಕ್ಷಿಯಾದ ಪಶ್ಚಿಮಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು.
 

ನಂದಿಗ್ರಾಮದಲ್ಲಿ ಟಿಎಂಸಿಗೆ ಶಾಕ್; ಮಮತಾಗೆ ಸೋಲು

ಕೋಲ್ಕತಾ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿಗೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಸಫಲರಾದರೂ, ನಂದಿಗ್ರಾಮದಲ್ಲಿ ಸೋಲನ್ನಪ್ಪಿರುವುದು ಪಕ್ಷಕ್ಕೆ ಆಘಾತ ತಂದಿದೆ. ಮಮತಾ ಅವರು ಒಂದು ಕಾಲದ ತನ್ನ ನಿಕಟವರ್ತಿ, ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಎದುರು ಸೋಲನ್ನಪ್ಪಿದ್ದಾರೆ. ಸುವೇಂಧು ಅಧಿಕಾರಿ ಅವರು ಮಮತಾರನ್ನು 1,736 ಮತಗಳ ಅಂತರದಿಂದ ಸೋಲಿಸಿದ್ದಾರೆಂದು ಚುನಾವಣಾ ಆಯೋಗ ರವಿವಾರ ಸಂಜೆ ಘೋಷಿಸಿದೆ.

ಮತಎಣಿಕೆಯ ಆರಂಭಿಕ ಹಂತದಲ್ಲಿ ಮಮತಾ ಬ್ಯಾನರ್ಜಿ ಅವರು ಸುವೇಂಧು ಅಧಿಕಾರಿಯವರಿಗಿಂತ ಹಿಂದೆ ಬಿದ್ದಿದ್ದರು, ಆದರೆ ಮಧ್ಯಾಹ್ನದ ವೇಳೆ ಅವರು 1,200 ಮತಗಳಿಂದ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದರು. ಆದರೆ ಅಂತಿಮ ಹಂತದ ಮತಎಣಿಕೆಯಲ್ಲಿ ಅವರು 1736 ಮತಗಳಿಂದ ಹಿಂದೆ ಬಿದ್ದು,  ಸೋಲನ್ನಪ್ಪಿದ್ದಾರೆ.

2011ರಲ್ಲಿ ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೇರುವಲ್ಲಿ ನಂದಿಗ್ರಾಮ ಕ್ಷೇತ್ರವು ಮಹತ್ವದ ಪಾತ್ರ ವಹಿಸಿತ್ತು. ಸಿಂಗೂರ್ ನಲ್ಲಿ ಟಾಟಾ ಕಾರು ತಯಾರಿಕಾ ಘಟಕದ ಸ್ಥಾಪನೆಗಾಗಿ ರೈತರ ಭೂಸ್ವಾಧೀನವನ್ನು ವಿರೋಧಿಸಿ, ಎಡರಂಗ ಸರಕಾರದ ವಿರುದ್ಧ ನಡೆದ ಚಳವಳಿಗೆ ಮಮತಾ ಬ್ಯಾನರ್ಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭ ಸುವೇಂಧು ಅಧಿಕಾರಿ ಅವರು ಮಮತಾ ಜೊತೆ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದರು. ಆನಂತರ ಸುವೇಂಧು ಅಧಿಕಾರಿ ನಂದಿಗ್ರಾಮ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿದ್ದಾರೆ.

ಆದರೆ ಎರಡು ತಿಂಗಳ ಹಿಂದೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಟಿಎಂಸಿ ತೊರೆದ ಸುವೇಂದು ಅಧಿಕಾರಿ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.ನಂದಿಗ್ರಾಮದಲ್ಲಿ ಸುವೇಂಧು ಅಧಿಕಾರಿ ಅವರ ಕುಟುಂಬ ಭಾರೀ ಪ್ರಭಾವವನ್ನು ಹೊಂದಿದೆ. ನಂದಿಗ್ರಾಮದಲ್ಲಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಸುವೇಂಧು ಅವರು ಮಮತಾಗೆ ಸವಾಲೊಡ್ಡಿದ್ದರು. ಇದನ್ನು ಸ್ವೀಕರಿಸಿದ ಮಮತಾ ಆಕ್ಷೇತ್ರದಿಂದ ಸ್ಪರ್ಧಿಗಿಳಿದಿದ್ದರು.

ಸುವೇಂಧು ಅಧಿಕಾರಿ ನಿರ್ಗಮನದ ಬೆನ್ನಿಗೆ ಹಲವಾರು ಟಿಎಂಸಿ ನಾಯಕರು ಕೂಡಾ ಟಿಎಂಸಿ ತೊರೆದು ಬಿಜೆಪಿ ಪಾಳಯ ಸೇರಿದ್ದರು.

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...