ಚಪ್ಪಾಳೆಯಿಂದ ಹೊಟ್ಟೆ ತುಂಬುವುದಿಲ್ಲ; ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಸಂಘ ಆಗ್ರಹ

Source: sonews | By Staff Correspondent | Published on 29th September 2020, 9:53 PM | Coastal News |

ಉಡುಪಿ: ದೇಶಾದ್ಯಂತ ವ್ಯಾಪಿಸಿರುವ ಈ ಕೊರೋನ ಸೋಂಕಿನ ಸಮಯದಲ್ಲಿ ಕೊರೋನ ವಾರಿಯರ್ಸ್ ಆಗಿ ಕಳೆದ ಆರು ತಿಂಗಳಿನಿಂದ ಹಗಲಿರುಳು, ರಜೆಯೂ ಇಲ್ಲದೇ ಅವಿರತವಾಗಿ ದುಡಿಯುತ್ತಿರುವ ನಮಗೆ ನಿಮ್ಮ ಚಪ್ಪಾಳೆಯ ಪ್ರೋತ್ಸಾಹ ಬೇಡ, ಸೇವಾ ಭದ್ರತೆಯ ಸೌಲಭ್ಯ ನೀಡಿ ಎಂದು ಮನವಿ ಮಾಡುತ್ತೇವೆ ಎಂದು ಕಳೆದೊಂದು ವಾರದಿಂದ ರಾಜ್ಯಾದ್ಯಂತ ಮುಷ್ಕರ ನಿರತರಾಗಿರುವ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ರಾಜ್ಯದಲ್ಲಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ 30,000 ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನವೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಸೆ.24ರಿಂದ ಮುಷ್ಕರದಲ್ಲಿ ನಿರತರಾಗಿದ್ದಾರೆ. ಆದರೆ ಇಲಾಖೆಯಾಗಲಿ, ಸರಕಾರವಾಗಲಿ ನಮ್ಮ ಬೇಡಿಕೆಗಳ ಕುರಿತು ಯಾವುದೇ ಸ್ಪಂದನೆ ತೋರುತ್ತಿಲ್ಲ ಎಂದು ಆರೋಪಿಸಿದರು.

ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶೇ.70ರಷ್ಟು ನೌಕರರು ಗುತ್ತಿಗೆ ಆಧಾರಿತ ಕೆಲಸ ಮಾಡುತ್ತಾರೆ. ಕರ್ನಾಟಕದಲ್ಲಿ ಸುಮಾರು 30000 ಮಂದಿ ಮತ್ತು ಉಡುಪಿ ಜಿಲ್ಲೆಯಲ್ಲಿ 512 ಗುತ್ತಿಗೆ ಆಧಾರಿತ ನೌಕರರಿದ್ದಾರೆ. ವೇತನ ಹೆಚ್ಚಳ, ವಿವಿಧ ಭತ್ಯೆ ನೀಡಿಕೆ, ರಜೆ ಮಂಜೂರು, ವಿಮೆ, ಪದೋನ್ನತಿ ಸೇರಿದಂತೆ ನಮ್ಮ ನ್ಯಾಯಯುತ ಬೇಡಿಕೆಗಳ ಕುರಿತು ಸರಕಾರ ಯಾವುದೇ ಸ್ಪಂದನೆ ನೀಡುವ ಬದಲು, ಹೋರಾಟ ಮಾಡುತ್ತಿರುವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಶಿಸ್ತುಕ್ರಮ ತೆಗೆದುಕೊಳ್ಳುವ ಬೆದರಿಕೆ ಹಾಕುತಿದ್ದಾರೆ ಎಂದು ಅವರು ದೂರಿದರು.

ಕೊರೋನ ವೈರಸ್ ಹಾವಳಿ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಸರಕಾರದಿಂದ ಒಳ್ಳೆಯ ವೇತನ ಸೌಲಭ್ಯ ಸಿಕ್ಕಿಲ್ಲ. ನಮಗೆ ಜನರ ಚಪ್ಪಾಳೆ ಬೇಡ, ಸರಕಾರ ಸೌಲಭ್ಯ ಕೊಡಲಿ. ಕಳೆದ 15 ವರ್ಷಗಳಿಂದ ಬೇರೆ ಸರಕಾರಗಳಿಗೆ ಬೇಡಿಕೆ ಪೂರೈಸುವಂತೆ ಮನವಿ ಮಾಡಿದ್ದೇವೆ. ಆದರೆ ಯಾರಿಂದಲೂ ನಮಗೆ ಪೂರಕವಾದ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಕೊರೋನ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ವೈದ್ಯರ ಬೇಡಿಕೆಗಳನ್ನು ಈಡೇರಿಸಿರುವ ಸರಕಾರಕ್ಕೆ ಗುತ್ತಿಗೆ ಆಧಾರಿತ ನೌಕರರು ಎಂದರೆ ಯಾಕಿಷ್ಟು ತಾತ್ಸಾರ ತೋರಿಸುತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೋವೆಲ್ ಕೊರೋನ ವೈರಸ್ ಹಾವಳಿ ಸಂದರ್ಭದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ ನೌಕರರ ಪೈಕಿ ಒಳ ಮತ್ತು ಹೊರಗುತ್ತಿಗೆ ನೌಕರರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ ನಮ್ಮ ಸೇವೆಯನ್ನು ಪರಿಗಣಿಸದೇ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ಈಗ ನೋಟೀಸು ಜಾರಿಗೊಳಿಸುವ ಮೂಲಕ ನಮ್ಮ ನ್ಯಾಯಯುತ ಹಕ್ಕುಗಳು ಹಾಗೂ ಹೋರಾಟವನ್ನು ದಮನ ಮಾಡಲು ಪ್ರಯತ್ನಿಸುವ ಮೂಲಕ ನೌಕರರ ಆತ್ಮವಿಶ್ವಾಸದ ಮೇಲೆ ಗದಾಪ್ರಹಾರ ಮಾಡಲು ಮುಂದಾಗಿದೆ ಎಂದರು.

ಕೋವಿಡ್ ವಿರುದ್ಧ ಕೆಲಸ ಮಾಡಿಸಿಕೊಳ್ಳುವಾಗ ಕೊರೋನಾ ವಾರಿಯರ್ಸ್ ಎಂದು ಹೇಳಿ ಚಪ್ಪಾಳೆ ತಟ್ಟಿ ಕೈಬಿಟ್ಟರೆ ಬಡ ನೌಕರರ ಜೀವನದ ಪಾಡೇನು ಎಂಬುದನ್ನು ಅರಿಯದಂತೆ ಸರಕಾರ ವರ್ತಿಸುತ್ತಿದೆ. ಕೊರೋನದಿಂದ ಜಾರಿಗೆ ತಂದಿದ್ದ ಲಾಕ್‌ಡೌನ್‌ನಿಂದ ಅಲ್ಪವೇತನ (10,000ರಿಂದ 15ಸಾವಿರ)ದಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕೊರೋನ ವಾರಿಯರ್ಸ್‌ಗೆ ಸಮಾಜ ನೀಡುವ ಗೌರವ ಇಷ್ಟೆಯೇ ಎಂದು ನಾವು ಪ್ರಶ್ನಿಸಬೇಕಾಗಿದೆ ಎಂದು ಅವರು ಬೇಸರದಿಂದ ನುಡಿದರು.

ನಮಗೆ ಗುತ್ತಿಗೆ ನೌಕರರಿಗೆ ನೀಡುವ ನಿಗದಿತ ವೇತನ ಬಿಟ್ಟು ಬೇರೆ ಏನೂ ಸಿಗುವುದಿಲ್ಲ, ಎಷ್ಟೇ ವರ್ಷ ದುಡಿದರೂ ಯಾವುದೇ ಭತ್ಯೆಗಳಿಲ್ಲ. ರಜೆಗಳಿಲ್ಲ, ವರ್ಗಾವಣೆಯೂ ಇರುವುದಿಲ್ಲ, ಪದೋನ್ನತಿ ಸಿಗುವುದಿಲ್ಲ, ವಿಮೆಯೂ ಇಲ್ಲ. ಕಡಿಮೆ ಸಂಬಳ ಇದ್ದರೂ ಬಿಪಿಎಲ್ ಕಾರ್ಡ್ ನೀಡುವುದಿಲ್ಲ. ಮಹಿಳಾ ಸಿಬ್ಬಂದಿಗಳಿಗೆ ಯಾವುದೇ ರಜೆ ಇರುವುದಿಲ್ಲ ಎಂದು ಸಂಘದ ಸದಸ್ಯರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಗಾಣಿ, ಉಪಾಧ್ಯಕ್ಷ ಡಾ.ರೂಪಕ್ ನಾಗರಾಜ್, ಖಜಾಂಚಿ ಗಿರೀಶ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ರೇಷ್ಮಾ ಪೈ ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆ ಸೇವೆ ವ್ಯತ್ಯಯ

ಸದ್ಯ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕೊರೋನ ತಪಾಸಣೆ, ಕೊರೋನ ಕಾಲ್ ಸೆಂಟರ್‌ಗಳು, ಕೊರೋನ ವರದಿ ಸಲ್ಲಿಸುವುದು, ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ, ಅಂಧತ್ವ ಕಾರ್ಯಕ್ರಮ, ಒಳ ಮತ್ತು ಹೊರ ರೋಗಿಗಳ ತಪಾಸಣೆ, ಮಲೇರಿಯಾ ಸೇರಿದಂತೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ನಿರ್ವಹಿಸುವ ಇತರ ರಾಷ್ಟ್ರೀಯ ಕಾರ್ಯಕ್ರಮಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇಲಾಖೆಯಲ್ಲಿ ಅತಿ ಹೆಚ್ಚು ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಬಗ್ಗೆ ಸರಕಾರ ಹೀಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಯಾವ ನ್ಯಾಯ ಎಂದು ನೌಕರರು ಪ್ರಶ್ನಿಸಿದರು.

ಮುಂದಿನ ನಡೆ ಬುಧವಾರ ನಿರ್ಧಾರ

ಸರಕಾರ ಒಡೆದು ಆಳುವ ನೀತಿ ಅನುಸರಿಸಿದರೂ, ನಾವು ಒಗ್ಗಟ್ಟಾಗಿದ್ದು ಸರಕಾರದ ವಿರುದ್ಧ ಅಸಹಕಾರ ಚಳವಳಿ ಮುಂದುವರಿಸುತ್ತೇವೆ. ಶೋಕಾಸ್ ನೋಟೀಸಿಗೆ ನಾವು ಬಗ್ಗುವುದಿಲ್ಲ. ಜಿಲ್ಲೆಯಲ್ಲಿರುವ 512 ಎನ್‌ಎಚ್‌ಎಂ ನೌಕರರಲ್ಲಿ 22 ವೈದ್ಯರು, 110 ಸ್ಟಾಫ್ ನರ್ಸ್‌ಗಳು, 37 ಕ್ಷಯ ರೋಗ ಸಿಬ್ಬಂದಿಗಳು, ತಂತ್ರಜ್ಞರು, ತಾಂತ್ರಿಕ ಸಿಬ್ಬಂದಿಗಳು ಸೇರಿದ್ದೇವೆ ಎಂದರು.

ನಾಳೆಯವರೆಗೆ ನಾವು ಸರಕಾರದ ನಡೆಯನ್ನು ಗಮನಿಸುತ್ತೇವೆ. ಬುಧವಾರ ರಾಜ್ಯ ಸಂಘ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಅದರ ಆದೇಶದಂತೆ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಬೀದಿಗಿಳಿಯದೇ ಅಸಹಕಾರ ಚಳವಳಿ ಮುಂದುವರಿಯಲಿದೆ ಎಂದು ಮಂಜುನಾಥ್ ತಿಳಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...