ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನೀರಿಂಗಿಸುವಿಕೆ ಪ್ರತ್ಯಕ್ಷಿತೆ

Source: sonews | By Staff Correspondent | Published on 6th September 2020, 4:30 PM | Coastal News |

ಭಟ್ಕಳ: ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗೂ ಕೂಡಾ ಜೀವಜಲ ಅಗತ್ಯವಾಗಿದ್ದು ನಾವು ಜೀವಜಲವನ್ನು ಸಂರಕ್ಷಿಸಬೇಕಾಗಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಹೇಳಿದರು. 

ಅವರು ಇಲ್ಲಿನ ಕಸಲಗದ್ದೆಯ ಮಂಜುನಾಥ ದೇಶಭಂಡಾರಿಯವರ ಮನೆಯ ಆವರಣದಲ್ಲಿ ನೀರಿಂಗಿಸುವಿಕೆ ಪ್ರತ್ಯಕ್ಷಿತೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಭೂಮಿಯಲ್ಲಿ ಅಧಿಕ ಪ್ರಮಾಣದಲ್ಲಿ ನೀರಿದ್ದರೂ ಕೂಡಾ ನಮ್ಮ ಬಳಕೆಗೆ ದೊರೆಯುವುದು ಅತ್ಯಲ್ಪವಾಗಿದೆ. ಮಳೆಗಾದಲ್ಲಿ ಬೀಳುವ ಅಪಾರ ಪ್ರಮಾಣದ ನೀರನ್ನು ನಾವು ಸಂರಕ್ಷಿಸಿ ಮುಂದೆ ಬೇಸಿಗೆಯಲ್ಲಿ ಉಪಯೋಗ ಮಾಡಲು ನೀರಿಂಗಿಸುವಿಕೆಯು ಅತ್ಯಂತ ಪರಣಾಮಕಾರಿ ವಿಧಾನವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಿಂಗಿಸುವ ಕಾರ್ಯಕ್ಕೆ ಭಟ್ಕಳದಿಂದಲೇ ಚಾಲನೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ಇದನ್ನು ಪರಿಣಾಮಕಾರಿಯಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು. 

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆದೇಶದಂತೆ ಪ್ರತಿ ತಾಲೂಕಿನಲ್ಲಿ ಒಂದು ಕೆರೆಯನ್ನು ಹೂಳೆತ್ತಿ ಅಭಿವೃದ್ಧಿ ಮಾಡುವ ಯೋಜನೆಯನ್ನು ಕೂಡಾ ಮಾಡಲಾಗಿದ್ದು, ಸರಕಾರದ ಯೋಜನೆಗಳನ್ನು ಕೂಡಾ ಜನತೆಗೆ ತಲುಪಿಸುವ ಕಾರ್ಯ ಯೋಜನೆಯ ವತಿಯಿಂದ ಮಾಡಲಾಗುವುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಲಖಂಡ ಒಕ್ಕೂಟದ ಅಧ್ಯಕ್ಷ ಜಟ್ಟಪ್ಪ ನಾಯ್ಕ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಾರುತಿ ನಾಯ್ಕ ಹೊನ್ನಾವರ ಅವರು ಮಾತನಾಡಿ ಹಿಂದೆ ತೆರೆದ ಬಾವಿ ಇತ್ತು ನಂತರ ಕೊಳವೆ ಬಾವಿ ಬಂತು ಈಗ ಖಾಲಿ ಬಾವಿಯಾಗಿದೆ. ಇದಕ್ಕೆ ನಮ್ಮಲ್ಲಿ ನೀರಿನ ಅತಿ ಬಳಕೆ ಹಾಗೂ ಅರಣ್ಯ ನಾಶ ಕಾರಣವಾಗಿದೆ. ನಮ್ಮ ಕರಾವಳಿಯಲ್ಲಿ ಅತ್ಯಂತ ಹೆಚ್ಚು ಮಳೆ ಬಿದ್ದರೂ ಕೂಡಾ ನೀರಿನ ಸಂರಕ್ಷಣೆಯಾಗದೇ ಇರುವುದರಿಂದ ನೀರಿನ ಅಭಾವ ಕಾಣುತ್ತಿದೆ ಹಾಗೂ ಮಳೆಯ ಅನಿಶ್ಚಿತತೆಯೂ ಕೂಡಾ ಅಭಾವಕ್ಕೆ ಮುಖ್ಯ ಕಾರಣವಾಗಿದೆ. ನೀರಿನ ಅಭಾವದಿಂದ ಜೀವ ಸಂಕುಲಗಳಿಗೆ ತೊಂದರೆಯಾಗುವುದರೊಂದಿಗೆ ಆಹಾರೋತ್ಪನ್ನಕ್ಕೂ ಕೂಡಾ ತೊಂದರೆಯಗುತ್ತಿದೆ ಎಂದೂ ಹೇಳಿದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ನೀರಿಂಗಿಸುವಂತಹ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಡುತ್ತಿರುವುದರಿಂದ ಯಶಸ್ವೀಯಾಗಲಿದೆ. ಸರಕಾರ ಪ್ರತಿಯೊಂದು ಗ್ರಾಮದಲ್ಲಿರುವ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಮೂಲಕ ನೀರನ್ನು ಸಂಗ್ರಹಿಸುವ ಕಾರ್ಯ ಮಾಡಬೇಕು ಈ ದಿಶೆಯಲ್ಲಿ ರೈತರೂ ಕೂಡಾ ಮುಂದಾಗಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಟ್ಕಳ-ಹೊನ್ನಾವರ ಯೋಜನಾಧಿಕಾರಿ ಎಂ.ಎಸ್.ಈಶ್ವರ್, ಮಾವಿನಕುರ್ವೆ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ಖಾರ್ವಿ, ಮಂಜುನಾಥ ದೇಶಭಂಡಾರಿ ಮುಂತಾದವರು ಉಪಸ್ಥಿತರಿದ್ದರು. 

ತಾಲೂಕಾ ಮೇಲ್ವಿಚಾರಕ ಭರತ್ ಸ್ವಾಗತಿಸಿದರು. ತಾಲೂಕಾ ಕೃಷಿ ಅಧಿಕಾರಿ ಶಿವರಾಜ ಆಚಾರಿ ನಿರೂಪಿಸಿ, ವಂದಿಸಿದರು. ನಂತರ ಮನೆಯ ಟೆರೇಸ್‍ನಿಂದ ಬಾವಿಯಲ್ಲಿ ನೀರಿಂಗಿಸುವ ಕುರಿತು ಪ್ರಾತ್ಯಕ್ಷಿತೆಯನ್ನು ಮಾಡಿ ತೋರಿಸಲಾಯಿತು. 
 
                                

 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...