ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಸುಗಮ ಮತದಾನಕ್ಕೆ ಸರ್ವ ಸಿದ್ಧತೆ

Source: so news | Published on 5th December 2019, 12:26 AM | State News | Don't Miss |

ಹಾವೇರಿ: ಇಂದು ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಬೆಳಿಗ್ಗೆ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಜರುಗಲಿದೆ. ಮತದಾನ ಪ್ರಕ್ರಿಯೆಗೆ ಸಜ್ಜುಗೊಳಿಸಲಾಗಿದೆ.
ವ್ಯವಸ್ಥಿತ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸುಗಮ ಹಾಗೂ ನಿರ್ಭಯ ಮತದಾನಕ್ಕೆ ಎಲ್ಲ ವ್ಯವಸ್ಥೆ ಸೂಕ್ತ ಭದ್ರತೆಯನ್ನು ಒದಗಿಸಿದೆ. ರಾಣೇಬೆನ್ನೂರಿನಲ್ಲಿ 266 (54 ಸೂಕ್ಷ್ಮ) ಸೂಕ್ಷ್ಮ)ಮತಗಟ್ಟೆಗಳು ಹಾಗೂ ಹಿರೇಕೆರೂರಿನಲ್ಲಿ 229(46 ಸೂಕ್ಷ್ಮ) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಎರಡು ಕ್ಷೇತ್ರಗಳಲ್ಲಿ 100 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಈ ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಿದೆ. ರಾಣೇಬೆನ್ನೂರಿನಲ್ಲಿ 2,22,137 ಮತದಾರರು ಹಾಗೂ 1,83,481 ಮತದಾರರು ಮತ ಚಲಾಯಿಸಲಿದ್ದಾರೆ.
ಜಿಲ್ಲೆಯಲ್ಲಿ ಎರಡು ಮತ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಸಖಿ ಮತಗಟ್ಟೆ, ಮಾದರಿ ಮತಗಟ್ಟೆ, ವಿಕಲಚೇತನರ ಮತಗಟ್ಟೆಗಳನ್ನು ಸ್ಥಾಪಿಸಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಮತಗಟ್ಟೆಗಳನ್ನು ವಿಶೇಷ ಅಲಂಕಾರಗೊಳಿಸಿದೆ. ಮತಗಟ್ಟೆ ಸಿಬ್ಬಂದಿಗಳಿಗೆ ಸಮವಸ್ತ್ರ, ಮತದಾರರಿಗೆ ಕುಡಿಯುವನೀರು, ಶೌಚಾಲಯ ವ್ಯವಸ್ಥೆ, ಕೂರಲು ಆಸನ, ಮಕ್ಕಳಿಗೆ ಆಟೋಟ ವ್ಯವಸ್ಥೆ, ಸೆಲ್ಫಿ ಕಾರ್ನರ್, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ, ಮತದಾರರಿಗೆ ಸಹಾಯಕರು, ವ್ಹೀಲ್‍ಚೇರ್ ವ್ಯವಸ್ಥೆ, ಉರುಗೋಲು ಹಾಗೂ ಸಂಕೇತ ಫಲಕಗಳ ಸೌಲಭ್ಯ ಕಲ್ಪಿಸಲಾಗಿದೆ. ಅಂಧ ಮತದಾರರಿಗೆ, ಮಂದ ದೃಷ್ಟಿಯವರಿಗೆ ಬೂತ್‍ಕನ್ನಡಿ (ನಿಮ್ನಮಸೂರ) ವ್ಯವಸ್ತೆ ಮಾಡಲಾಗಿದೆ. ಸರತಿ ಸಾಲಿನ ಬದಲು ನೇರವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮತದಾನಕ್ಕೆ ದಾಖಲೆಗಳು: ಮತದಾರರು ಮತದಾನ ಮಾಡಲು ಭಾರತ ಚುನಾವಣೆ ಆಯೋಗ ನೀಡಿರುವ ಗುರುತಿನ ಚೀಟಿ ಇಲ್ಲವಾದಲ್ಲಿ ಪರ್ಯಾಯವಾಗಿ ಪಾಸ್ ಪೋರ್ಟ, ಡ್ರೈವಿಂಗ್ ಲೈಸೆನ್ಸ್, ಭಾವಚಿತ್ರಹೊಂದಿರುವ ಸೇವಾ ಗುರುತಿನ ಚೀಟಿ, ನರೇಗಾ ಜಾಬ್ ಕಾರ್ಡ, ಪಾನ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್ ಭಾವಚಿತ್ರವಿರುವ ಪಾಸ್ ಪುಸ್ತಕ, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆಕಾರ್ಡ, ಆರ್.ಜಿ.ಐ. ಅಡಿ ನೀಡಿರುವ ಎನ್.ಪಿ.ಆರ್. ಸ್ಮಾರ್ಟ್ ಕಾರ್ಡ್, ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ.ಗಳಿಗೆ ನೀಡಿರುವ ಗುರುತಿನ ಚೀಟಿ, ಆಧಾರ ಕಾರ್ಡ ಹಾಗೂ ಭಾವಚಿತ್ರವಿರುವ ಮತದಾರರ ಚೀಟಿಯನ್ನು ಭಾರತ ಚುನಾವಣಾ ಆಯೋಗದ ಗುರುತಿನ ಚೀಟಿಯ ಪರ್ಯಾಯವಾಗಿ ಬಳಸಿ ಮತದಾನ ಮಾಡಬಹುದು. ಆದರೆ ಕೇವಲ ಭಾವಚಿತ್ರವಿರುವ ವೋಟರ್ ಸ್ಲೀಪ್‍ನ್ನು ತೋರಿಸಿ ಮತದಾನ ಮಾಡಲು ಅವಕಾಶವಿಲ್ಲ.
ಮತದಾನಕ್ಕೆ ರಜೆ: ಮತದಾನ ಮಾಡಲು ಅನುಕೂಲವಾಗುವಂತೆ ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ದಿನ ಡಿಸೆಂಬರ್ 5 ರಂದು ಗುರುವಾರ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜು, ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ.
ಜಿಲ್ಲೆಯಾದ್ಯಂತ ನಿಷೇದಾಜ್ಞೆ: ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಈಗಾಗಲೇ ಜಿಲ್ಲಾಡಳಿತ ಡಿಸೆಂಬರ್ 3ರ ಸಂಜೆ 6 ಗಂಟೆಯಿಂದ ಡಿಸೆಂಬರ್ 5ರ ಸಂಜೆ 6 ಗಂಟೆವರೆಗೆ ಸಿ. ಆರ್.ಪಿ.ಸಿ. 1973ರ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ.
ಹಿರೇಕೆರೂರು ಮತ್ತು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಸುತ್ತ 100 ಮೀಟರ್ ಅಂತರದಲ್ಲಿ ಪ್ರಚಾರದ ಸಲುವಾಗಿ ಐದು ಅಥವಾ ದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆಗಳ ಸುತ್ತ 100 ಮೀಟರ್ ಅಂತರದಲ್ಲಿ ಮೊಬೈಲ್ ಪೋನ್, ಕಾಡ್ರ್ಲೇಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ(ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊರತುಪಡಿಸಿ). ಮತಗಟ್ಟೆ ಸುತ್ತ 100 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಅಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಪೊಲೀಸ್ ಭದ್ರತೆ: ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಇರುವ ಚೆಕ್ ಪೋಸ್ಟ್‍ಗಳಲ್ಲಿ ಹೊರಗಿನ ಜಿಲ್ಲೆಯಿಂದ ಬರುವ ಎಲ್ಲಾ ರೀತಿಯ ವಾಹನಗಳನ್ನು ಕಡ್ಡಾಯವಾಗಿ ಸೂಕ್ಷ್ಮವಾಗಿ ಪರಿಶೀಲಿಸಲು ಆದೇಶಿಸಲಾಗಿದೆ.
ಮತದಾನ ಪ್ರಕ್ರಿಯೆ ಶಾಂತಿ ಸುವ್ಯವಸ್ಥೆಗಾಗಿ 1453 ಪೊಲೀಸರು ಸಿ.ಆರ್.ಎಫ್., ಎಸ್.ಎಪಿ., ಜಿ.ಎಸ್.ಎ.ಪಿ., ಕೆ.ಆರ್.ಪಿ. ತುಕಡಿಗಳು ಸೇರಿದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ಗಂಟೆಗೊಮ್ಮೆ ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲನೆಗೆ ವಿಶೇಷ ಸಂಚಾರಿ ತಂಡ ರಚಿಸಲಾಗಿದೆ. ಎರಡು ಜನ ಎಸ್.ಪಿ., ನಾಲ್ಕು ಜನ ಡಿ.ವೈ.ಎಸ್.ಪಿ., 12 ಜನ ಇನ್ಸಪೆಕ್ಟರ್, 30 ಜನ ಸಬ್ ಇನ್ಸಪೆಕ್ಟರ್ 88 ಸಹಾಯಕ ಸಬ್ ಇನ್ಸಪೆಕ್ಟರ್, 276 ಜನ ಮುಖ್ಯ ಪೇದೆಗಳು, 537 ಪೊಲೀಸ್ ಕಾನ್ಸಟೇಬಲ್, 512 ಜನ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಹೆಚ್ಚುವರಿಯಾಗಿ ಗುಜರಾತ್ ಎಸ್.ಎ.ಪಿ ಯ 4 ಕಂಪನಿಗಳು ಜಿಲ್ಲೆಗೆ ಆಗಮಿಸಿದ್ದು ಈಗಾಗಲೇ ಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸಲಾಗಿದೆ ಇದಲ್ಲದೇ 1 ಸ್ಥಳೀಯ ಸಶಸ್ತ್ರಮೀಸಲು ಪಡೆಯ ತುಕಡಿಯ ಜೊತೆಗೆ ಗುಲ್ಬರ್ಗಾ ಜಿಲ್ಲೆಯಿಂದ 1 ಸಶಸ್ತ್ರ ಪಡೆ ಜಿಲ್ಲೆಗೆ ಆಗಮಿಸಿದೆ. ರಾಣೇಬೆನ್ನೂರಿಗೆ ಐದು ಹಾಗೂ ಹಿರೇಕೆರೂರಿಗೆ ಐದು ಡಿ.ಎ.ಆರ್ ಪಾರ್ಟಿಗಳು, ತಲಾ ನಾಲ್ಕರಂತೆ ಕೆ.ಎಸ್.ಆರ್.ಪಿ. ತುಕಡಿ, ತಲಾ ಎರಡಂತೆ ಗುಜರಾತ್ ಎಸ್.ಎ.ಪಿ. ಕಂಪನಿಗಳನ್ನು ನಿಯೋಜಿಸಲಾಗಿದೆ. ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...