ರಾಯಚೂರು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ.

Source: SO News | By Laxmi Tanaya | Published on 14th December 2020, 10:13 PM | State News | Don't Miss |

ರಾಯಚೂರು :   ನಗರದಿಂದ ವಿವಿಧ ಸ್ಥಳಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸರ್ಕಾರದಿಂದ ತುರ್ತು ಆದೇಶ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶ ಕುಮಾರ್  ಸೋಮವಾರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಅವರು ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕುಂದುಕೊರತೆಗಳನ್ನು ವಿಚಾರಿಸಿ ಪ್ರಯಾಣಿಕರ ಬೇಡಿಕೆಗೆ ತಕ್ಕಷ್ಟು ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಕ್ಕೆ ಎನ್‌ಇಕೆಎಸ್‌ಆರ್‌ಟಿಸಿ ರಾಯಚೂರು ವಿಭಾಗದ ನಿಯಂತ್ರಣಾಧಿಕಾರಿ ವೆಂಕಟೇಶ್ ಅವರಿಗೆ ಸೂಚನೆ ನೀಡಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ಬಸ್‌ಗಳನ್ನು ಬಿಡುವಂತೆ ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಇಂದು ಬೆಳಿಗ್ಗೆಯಿಂದ ೩೫ ಬಸ್ ಗಳು ವಿವಿಧೆಡೆ ಪ್ರಯಾಣಿಕರನ್ನು ಹೊತ್ತು ತೆರಳಿವೆ. ಪ್ರತಿದಿನದ ವೇಳಾಪಟ್ಟಿಯಂತೆ ಬಸ್‌ಗಳು ಸಂಚರಿಸುತ್ತಿವೆ. ಹೈದರಾಬಾದ್, ಕರ್ನೂಲ್ ಸೇರಿದಂತೆ ಅಂತರರಾಜ್ಯ ಪ್ರಯಾಣದ ಬಸ್ ಗಳು ಕೂಡಾ ಸಂಚರಿಸುತ್ತಿವೆ ಎಂದರು.

 ಈಗಾಗಲೇ ಬಸ್ ಚಾಲಕರು ಹಾಗೂ ನಿರ್ವಾಹಕರು ಸಾಕಷ್ಟು ಸಂಖ್ಯೆಯಲ್ಲಿ ಹಾಜರಾಗಿದ್ದಾರೆ. ನೌಕರರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಯವರಿಗೂ ಸೂಚಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಜನರಿಗೆ ಅನುಕೂಲ ಕಲ್ಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಬಸ್ ನಲ್ಲಿ ಒಬ್ಬರು ಕಾನ್ ಸ್ಟೇಬಲ್ ಸಂಚರಿಸಲು ತಿಳಿಸಲಾಗಿದೆ ಎಂದು ಹೇಳಿದರು.

 ಬಸ್‌ಗಳಿಗೆ ಕಲ್ಲು ಎಸೆಯುವುದು ಅಥವಾ ಇನ್ನಿತರೆ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಖಾಸಗಿ ವಾಹನಗಳು ಹೆಚ್ಚಿನ ಪ್ರಯಾಣ ವಸೂಲಿ ಮಾಡುತ್ತಿರುವುದನ್ನು ಪರಿಶೀಲಿಸಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ತಿಳಿಸಿದರು. 

 ಇನ್ನೂ ಜಿಲ್ಲೆಯ ಲಿಂಗಸೂಗೂರು, ಮಾನ್ವಿ, ದೇವದುರ್ಗ, ಸಿಂಧನೂರು ಸೇರಿದಂತೆ ಜಿಲ್ಲೆಯ ಎಲ್ಲಾ ಡಿಪೋಗಳಿಂದ ಮತ್ತು ಎಲ್ಲಾ ಮಾರ್ಗಗಳಲ್ಲಿ, ಜಿಲ್ಲೆ, ರಾಜ್ಯ, ಅಂತರ್ ರಾಜ್ಯ ಬಸ್ ಸಂಚಾರ ಆರಂಭ ಮಾಡಲಿವೆ ಎಂದರು. 
ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮೇಗೌಡ, ರಾಯಚೂರು ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಡಿ.ಟಿ.ಓ ಐ.ಸಿ ಹೊಸಮನಿ, ಎನ್‌ಇಕೆಎಸ್‌ಆರ್‌ಟಿಸಿಯ ರಾಯಚೂರು ವಿಭಾಗದ ನಿಯಂತ್ರಣಾಧಿಕಾರಿ ನಜೀರ್ ಅಹ್ಮದ್, ರಾಯಚೂರು ಸದರ್ ಬಜಾರ್ ಪೊಲೀಸ್ ಠಾಣೆ ಸಬ್‌ಇನ್ಸ್ಪೆಕ್ಟರ್ ಮಂಜುನಾಥ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.  

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...