ಸರಳ ವ್ಯಕ್ತಿಗೆ ಒಲಿದು ಬಂದ ಪಕ್ಷದ ದೊಡ್ಡ ಹುದ್ದೆ; ನೂತನ ಅಧ್ಯಕ್ಷರ ಮುಂದಿದೆ ಹಲವಾರು ಸವಾಲುಗಳು ಜಿಲ್ಲಾ ಬಿಜೆಪಿಗೆ ‘ನಾಯಕ’ರಾದ ‘ವೆಂಕಟೇಶ’

Source: S O News Service | By Office Staff | Published on 28th January 2020, 8:27 PM | Coastal News |

ಕಾರವಾರ: ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ಹೆಸರನ್ನು ಪ್ರಕಟಿಸಲಾಗಿದೆ. ಕುಮಟಾದ ವೆಂಕಟೇಶ್ ನಾಯಕ ಅವರನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಪಕ್ಷದ ಸಾರಥ್ಯವನ್ನು ಈ ಬಾರಿ ಕರಾವಳಿಗರಿಗೆ ನೀಡಿದ್ದಾರೆ.
ಕಳೆದ ಬಾರಿ ಜಿಲ್ಲಾಧ್ಯಕ್ಷರಾಗಿದ್ದ ಕೆ.ಜಿ.ನಾಯ್ಕರ ಅಧಿಕಾರಾವಧಿ ಮುಗಿದಿದ್ದರಿಂದ ಹೊಸ ಅಧ್ಯಕ್ಷ ಹುದ್ದೆ ಆಯ್ಕೆ ಪ್ರಕ್ರಿಯೆ ಕಳೆದ ಮೂರು ತಿಂಗಳಿನಿಂದ ನಡೆದಿತ್ತು. ಜಿಲ್ಲಾಧ್ಯಕ್ಷ ಹುದ್ದೆಗೆ ಈ ಬಾರಿ ಸಾಕಷ್ಟು ಪೈಪೆÇೀಟಿ ನಡೆದಿದ್ದು, ಜಿಲ್ಲೆಯ ಹದಿನೈದಕ್ಕೂ ಅಧಿಕ ಮುಖಂಡರು ಆಕಾಂಕ್ಷಿಗಳಾಗಿದ್ದರು. ಪ್ರಮುಖವಾಗಿ ಮಾಜಿ ಶಾಸಕ, ಹಳಿಯಾಳದ ಸುನೀಲ್ ಹೆಗಡೆ, ಕಾರವಾರದ ವಕೀಲ ನಾಗರಾಜ ನಾಯಕ, ಭಟ್ಕಳದ ಗೋವಿಂದ ನಾಯ್ಕ, ಕುಮಟಾದ ಕುಮಾರ ಮಾರ್ಕಾಂಡೇ ಸೇರಿದಂತೆ ಹಲವರು ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದರು.
ಕೆಲ ದಿನದ ಹಿಂದೆ ಶಿರಸಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ವೆಂಕಟೇಶ್ ನಾಯಕರ ಹೆಸರನ್ನು ಅಂತಿಮಗೊಳಿಸಿ ಹೈಕಮಾಡ್‍ಗೆ ಕಳುಹಿಸಲಾಗಿತ್ತು. ಎರಡೇ ಹೆಸರನ್ನು ಹೈಕಮಾಂಡ್‍ಗೆ ಕಳುಹಿಸಿದ್ದರಿಂದ ಪಕ್ಷದಲ್ಲಿ ಅಸಮಾಧಾನ ಸಹ ವ್ಯಕ್ತವಾಗಿದ್ದರಿಂದ, ವಕೀಲ ನಾಗರಾಜ ನಾಯಕ ಸೇರಿದಂತೆ ಹಲವರ ಹೆಸರನ್ನು ನಂತರ ರಾಜ್ಯ ಕಮಿಟಿಗೆ ಕಳುಹಿಸಲಾಗಿತ್ತು.
ಈ ನಡುವೆ ಮಾಜಿ ಶಾಸಕ ಸುನೀಲ್ ಹೆಗಡೆ ಪಕ್ಷವನ್ನು ಪ್ರಬಲವಾಗಿ ಕಟ್ಟಬಲ್ಲವರಾಗಿದ್ದರಿಂದ ಅವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿತ್ತು. ಇನ್ನೊಂದೆಡೆ ಸಂಘದ ಕೆಲ ಹಿರಿಯರು ವಕೀಲ ನಾಗರಾಜ್ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದಾರೆನ್ನಲಾಗಿತ್ತು. ಇದೆಲ್ಲದರ ನಡುವೆ ವೆಂಕಟೇಶ್ ನಾಯಕರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವೆಂಕಟೇಶ್ ನಾಯಕ, ಮೂಲತಃ ಆರ್‍ಎಸ್‍ಎಸ್‍ನಿಂದ ಬಂದವರು. ಸರಳ ವ್ಯಕ್ತಿತ್ವದ ವೆಂಕಟೇಶ್ ಅವರನ್ನು ಪಕ್ಷ ಗುರುತಿಸಿ ಜಿಲ್ಲಾಧ್ಯಕ್ಷ ಹುದ್ದೆಯನ್ನು ನೀಡಿದೆ. ಶೀಘ್ರದಲ್ಲಿಯೇ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಬರಲಿದ್ದು, ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಿಕೊಂಡು ಬರುವುದು ಹೊಸ ಅಧ್ಯಕ್ಷರ ಮೇಲಿನ ದೊಡ್ಡ ಜವಾಬ್ದಾರಿಯಾಗಿದೆ.

ಜಿಲ್ಲಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಅಸಮಾಧಾನ..?
ಜಿಲ್ಲಾಧ್ಯಕ್ಷರನ್ನಾಗಿ ವೆಂಕಟೇಶ್ ನಾಯಕರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಪಕ್ಷದ ಕೆಲವು ನಾಯಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಜಿಲ್ಲೆಯ ಸಂಸದರಾಗಿ, ಸ್ಪೀಕರ್ ಆಗಿ, ಜೊತೆಗೆ ಎರಡು ನಿಗಮ ಮಂಡಳಿಯ ಅಧ್ಯಕ್ಷರಾಗಿ ಬ್ರಾಹ್ಮಣ ಸಮುದಾಯದವರು ಇದ್ದಾರೆ. ಅಲ್ಲದೇ ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎನ್ನಲಾದ ಶಿವರಾಮ್ ಹೆಬ್ಬಾರ್ ಸಹ ಬ್ರಾಹ್ಮಣ ಸಮುದಾಯದವರಾಗಿದ್ದಾರೆ. ಇದೀಗ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ನಾಯಕ ಸಹ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಪಕ್ಷದಲ್ಲಿ ಹಿಂದುಳಿದ ನಾಯಕರುಗಳಿಗೆ ಅಧ್ಯಕ್ಷ ಸ್ಥಾನ ಕೊಡಬೇಕಾಗಿತ್ತು ಎನ್ನುವುದು ಕೆಲವು ನಾಯಕರ ಒತ್ತಾಯವಾಗಿತ್ತು.
ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರು ಬಿಜೆಪಿ ಜೊತೆ ಕೈ ಜೋಡಿಸಿದ್ದರಿಂದಲೇ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಕಾರಣವಾಗಿತ್ತು. ಇದೀಗ ಅಧ್ಯಕ್ಷ ಸ್ಥಾನವನ್ನಾದರೂ ಹಿಂದುಳಿದ ವರ್ಗದವರಿಗೆ ಕೊಟ್ಟಿದ್ದರೆ ಸಮತೋಲನ ಕಾಯ್ದುಕೊಳ್ಳಬಹುದಿತ್ತು. ಆದರೆ, ಒಂದೇ ಸಮುದಾಯದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆನ್ನುವ ಅಸಮಾಧಾನವನ್ನು ಕೆಲ ನಾಯಕರುಗಳು ವ್ಯಕ್ತಪಡಿಸಿದ್ದಾರೆ. 
ಇನ್ನೊಂದೆಡೆ ಸಂಸದ ಅನಂತಕುಮಾರ್ ಹೆಗಡೆಯವರ ಆಜ್ಞೆಯಂತೆಯೇ ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆ ನಡೆದಿದ್ದು, ಬೇರೆಯವರ ಅಭಿಪ್ರಾಯಕ್ಕೆ ಸಂಸದರು ಬೆಲೆ ಕೊಟ್ಟಿಲ್ಲ ಎನ್ನುವ ಅಸಮಾಧಾನ ಕೂಡ ಇದೆ. ಈ ಅಸಮಾಧಾನ ಹೋಗಲಾಡಿಸಲು ಪಕ್ಷದ ನಾಯಕರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...