ವ್ಯಾಟಿಕನಿ ಸಿಟಿ: ಮದರ್ ತೆರೆಸಾ ರಿಗೆ ಸಂತ ಪಟ್ಟ

Source: vb | By Arshad Koppa | Published on 5th September 2016, 8:41 AM | Global News |

ವ್ಯಾಟಿಕನಿ ಸಿಟಿ, ಸೆ.೪: ತನ್ನ ಇಡೀ ಜೀವಮಾನವನ್ನು ದೀನದಲಿತರು,ಅನಾಥ ರೋಗಿಗಳ ಸೇವೆಯಲ್ಲಿ ಮತ್ತು ನೊಂದವರ ಕಣ್ಣೀರೊರೆಸುವುದರಲ್ಲಿ ಕಳೆದು ಕೋಟ್ಯಂತರ ಜನರ ತಾಯಿಯೆನಿಸಿಕೊಂಡಿದ್ದ ಕೋಲ್ಕತಾದ ಕ್ರೈಸ್ತ ಸನ್ಯಾಸಿನಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಅವರಿಗೆ ರವಿವಾರ ವೆಟಿಕನ್‌ನಲ್ಲಿ ಸಂತ ಪದವಿಯನ್ನು ಘೋಷಿಸಲಾಯಿತು. ತೆರೇಸಾರ ೧೯ನೆ ಪುಣ್ಯತಿಥಿಯ ಮುನ್ನಾದಿನ ಬೆಳಗ್ಗೆ ಸೈಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಒಂದು ಲಕ್ಷ ಯಾತ್ರಿಕರ ಉಪಸ್ಥಿತಿಯಲ್ಲಿ ಪೋಪ್ -ನ್ಸಿಸ್ ಅವರು ಮದರ್‌ಗೆ ಸಂತ ಪದವಿಯನ್ನು ವಿದ್ಯುಕ್ತವಾಗಿ ಘೋಷಿಸಿದರು. ಈ ಐತಿಹಾಸಿಕ ಸಮಾರಂಭವನ್ನು ಕಣ್ಣಲ್ಲಿ ತುಂಬಿಕೊಳ್ಳಲು ಯಾತ್ರಿಗಳ ಬೇಡಿಕೆ ಎಷ್ಟಿತ್ತೆಂದರೆ ವೆಟಿಕನ್ ದುಪ್ಪಟ್ಟು ಪ್ರವೇಶಪತ್ರಗಳನ್ನು ವಿತರಿಸಬೇಕಿತ್ತು. ಆದರೆ ಜಾಗದ ಅಭಾವ ಮತ್ತು ಭದ್ರತಾ ನಿರ್ಬಂಧಗಳಿಂದಾಗಿ ಸಭಿಕರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಸೀಮಿತಗೊಳಿಸಲಾಗಿತ್ತು. ವೆಟಿಕನ್‌ನ ಆಗಸದಲ್ಲಿ ಹೆಲಿಕಾಪ್ಟರ್‌ಗಳು ಭದ್ರತಾ ವ್ಯವಸ್ಥೆಯ ಮೇಲೆ ನಿಗಾ ಇರಿಸಿದ್ದವು. ಸುಮಾರು ೩,೦೦೦ಕ್ಕೂ ಅಧಿಕ ಅಧಿಕಾರಿಗಳು ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ನೆರೆದವರಲ್ಲಿ ತೆರೇಸಾರ ಮಿಷನರೀಸ್ ಆಫ್ ಚ್ಯಾರಿಟಿಯ ಇಟಲಿಯ ಶಾಖೆಗಳು ನೋಡಿಕೊಳ್ಳುತ್ತಿರುವ ಸುಮಾರು ೧,೫೦೦ ಬಡವರೂ ಸೇರಿದ್ದು, ಪ್ರಾರ್ಥನಾ ಸಭೆಯ ಬಳಿಕ ಅವರೆಲ್ಲ ಪೋಪ್ ಅವರು ಆಯೋಜಿಸಿದ್ದ ಬೃಹತ್ ಪಿಜ್ಜಾ ಔತಣಕೂಟದಲ್ಲಿ ಅತಿಥಿಗಳಾಗಿದ್ದರು. ತನ್ನ ಹರೆಯದಲ್ಲಿಯೇ ಕೋಲ್ಕತಾಕ್ಕೆ ಬಂದಿದ್ದ ತೆರೇಸಾ ಮೊದಲು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಬಳಿಕ ದೀನದಲಿತರು ಮತ್ತು ಅನಾಥ ರೋಗಿಗಳ ಸೇವೆಯಲ್ಲಿಯೇ ತನ್ನ ಆಯುಷ್ಯವನ್ನು ಕಳೆದಿದ್ದರು. ಈ ಸೇವೆಯಿಂದಾಗಿ ಅವರು ಜಗತ್ತಿನಲ್ಲಿಯೇ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲೊಬ್ಬರಾಗಿದ್ದರು. 

ಆಗ ಒಟ್ಟೊಮನ್ ಸಾಮ್ರಾಜ್ಯದ ಭಾಗವಾಗಿದ್ದು ಈಗ ಮೆಸೆಡೋನಿಯಾದ ರಾಜಧಾನಿಯಾಗಿರುವ ಸ್ಕೋಪೆಯಲ್ಲಿ ಕೊಸೊವನ್ ಆಲ್ಬೇನಿಯನ್ ದಂಪತಿಯ ಪುತ್ರಿಯಾಗಿ ಜನಿಸಿದ್ದ ತೆರೇಸಾರನ್ನು ತ್ಯಾಗ ಮತ್ತು ಉದಾತ್ತಗಳ ಕ್ರೈಸ್ತ ಮೌಲ್ಯಗಳ ಸಂಕೇತವಾಗಿ ವಿಶ್ವಾದ್ಯಂತ ಆರಾಧಿಸಲಾಗುತ್ತಿದೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ತೆರೇಸಾ ಶೀಘ್ರವೇ ಸಂತ ಪದವಿಗೇರಿದ್ದಾರೆ. ೨೦೦೩ರಲ್ಲಿ ಆಗಿನ ಪೋಪ್ ಜಾನ್ ಪಾಲ್-೨ ಅವರು ತೆರೇಸಾರನ್ನು ಸಂತ ಪದವಿಗೇರಲು ಮೊದಲ ಸೋಪಾನವಾದ ‘ಮುಕ್ತಿವಂತೆ’ ಎಂದು ಘೋಷಿಸಿದ್ದರು. ವೆಟಿಕನ್ ತೆರೇಸಾರನ್ನು ಸಂತ ಪದವಿಗೇರಿಸಲು ಎರಡು ಪವಾಡಗಳು ಅಗತ್ಯವಾಗಿದ್ದವು. ಮೊದಲ ಪವಾಡ ೨೦೦೨ರಲ್ಲಿ ಸ್ಥಿರೀಕರಿಸಲ್ಪಟ್ಟಿತ್ತು. ತೆರೆಸಾರ ನಿಧನದ ಒಂದು ವರ್ಷದ ಬಳಿಕ ಅವರ ಆಶೀರ್ವಾದದಿಂದಾಗಿಯೇ ತಾನು ಗರ್ಭಕೋಶದ ಕ್ಯಾನ್ಸರ್‌ನಿಂದ ಗುಣಮುಖಳಾಗಿದ್ದೇನೆ ಎಂದು ಭಾರತೀಯ ಮಹಿಳೆ ಮೊನಿಕಾ ಬೆಸ್ರಾ ಹೇಳಿದ್ದರು. ಆದರೆ ಕೆಲವು ಸ್ಥಳೀಯ ಆರೋಗ್ಯಾಧಿಕಾರಿಗಳು ಪ್ರಾರ್ಥನೆಯ ಪವಾಡವನ್ನು ತಳ್ಳಿ ಹಾಕಿ, ಮಂದುವರಿದ ವೈದ್ಯಕೀಯ ಜ್ಞಾನ ಆಕೆ ಗುಣಮುಖಳಾಗಲು ಕಾರಣವೆಂದು ಪ್ರತಿಪಾದಿಸಿದ್ದರು. ಎರಡನೆ ಪವಾಡವನ್ನು ವೆಟಿಕನ್ ಕಳೆದ ವರ್ಷ ಒಪ್ಪಿಕೊಂಡಿತ್ತು. ತೆರೇಸಾರ ಪ್ರಾರ್ಥನೆಯಿಂದಾಗಿ ತನ್ನ ಪತ್ನಿ ಫೆರ್ನಾಂಡಾಳಲ್ಲಿ ಕಾಣಿಸಿಕೊಂಡಿದ್ದ ಮಿದುಳು ಗಡ್ಡೆ ಮಾಯವಾಗಿದೆ ಎಂದು ಬ್ರೆಝಿಲ್  ನಿವಾಸಿ ಮಾರ್ಸಿಲೊ ಹಡ್ಡಾದ್ ಆಂಡ್ರಿನೊ ಹೇಳಿದ್ದರು. ಅದಾದ ಎಂಟು ವರ್ಷಗಳ ಬಳಿಕ ಈ ದಂಪತಿ ಇಂದಿನ ಸಮಾರಂಭದಲ್ಲಿ ಭಾಗಿಯಾಗಿದ್ದರು.
 

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...