ಹೊಸದಿಲ್ಲಿ: ಲಸಿಕೀಕರಣ ನೀತಿ ಲೋಪಭರಿತ, ಕೇಂದ್ರಕ್ಕೆ ಸುಪ್ರೀಂ ತರಾಟೆ

Source: VB | By S O News | Published on 1st June 2021, 1:16 PM | National News |

ಹೊಸದಿಲ್ಲಿ: ಕೋವಿಡ್ ಲಸಿಕೆ ಪೂರೈಕೆ ವಿಷಯದಲ್ಲಿ ಸರಕಾರದ ನೀತಿಯ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. ಭೇದಾತ್ಮಕ ದರ, ಲಸಿಕೆಯ ಕೊರತೆ, ದೇಶದ ಗ್ರಾಮೀಣ ಭಾಗಕ್ಕೆ ಇನ್ನೂ ಸರಿಯಾಗಿ ತಲುಪದಿರುವುದು, ಹೀಗೆ ಹಲವು ಟೀಕೆಗಳನ್ನು ಎದುರಿಸುತ್ತಿರುವ ಲಸಿಕೀಕರಣ ಅಭಿಯಾನದಲ್ಲಿ ಅನೇಕ ಲೋಪಗಳಿವೆ ಎಂದು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆತ್ತಿಕೊಂಡಿದೆ.

ಈ ಸಮಸ್ಯೆ ಬಗ್ಗೆ 2 ವಾರದೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚಿಸಿದೆ.

2021ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಪ್ರಜೆಗಳಿಗೂ ಲಸಿಕೆ ನೀಡಲಾಗುವುದು. ರಸ್ತೆ ತಡೆ, ವಿಭಿನ್ನ ವಯೋಮಾನದವರಿಗೆ ಲಸಿಕೆ ಪೂರೈಸುವಲ್ಲಿ ಆಗಿರುವ ವ್ಯತ್ಯಾಸ ಈ ವಿಳಂಬಕ್ಕೆ ಕಾರಣ ಎಂದು ಕೇಂದ್ರ ಉತ್ತರಿಸಿತು.

45 ವರ್ಷಕ್ಕಿಂತ ಮೇಲಿನ ಜನರಿಗೆ ಕೇಂದ್ರ ಸರಕಾರ ಲಸಿಕೆಯನ್ನು ಒದಗಿಸುತ್ತಿದೆ, ಆದರೆ 18 ರಿಂದ 44 ವಯೋಮಾನ ವರ್ಗದವರಿಗೆ ಲಸಿಕೆ ಪೂರೈಕೆಯನ್ನು ವಿಭಜಿಸಲಾಗಿದ್ದು 50 ಶೇ.ರಷ್ಟನ್ನು ಉತ್ಪಾದಕರಿಂದ ರಾಜ್ಯಗಳು ಖರೀದಿಸುತ್ತವೆ ಮತ್ತು ಇದರ ಬೆಲೆಯನ್ನು ಕೇಂದ್ರ ಸರಕಾರ ನಿಗದಿಗೊಳಿಸುತ್ತದೆ, ಉಳಿದ 50 ಶೇ. ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ಇದಕ್ಕೆ ನಿಜವಾದ ಆಧಾರ ಯಾವುದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ನಿಮ್ಮ ವಿವರಣೆ ಪ್ರಕಾರ 45+ ವಯೋಮಾನದವರಲ್ಲಿ ಮರಣ ಪ್ರಮಾಣ ಹೆಚ್ಚಿದೆ, ಆದರೆ 2ನೇ ಅಲೆಯಲ್ಲಿ ಈ ಗುಂಪಿನವರ ಮೇಲೆ ಹೆಚ್ಚು ಪರಿಣಾಮವಾಗಿಲ್ಲ, ಆದರೆ 18ರಿಂದ 44 ವಯೋಮಾನದವರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.ಲಸಿಕೆ ಒದಗಿಸುವ ಉದ್ದೇಶವಾಗಿದ್ದರೆ ಕೇಂದ್ರವು 45 ವರ್ಷ ಮೀರಿದವರಿಗೆ ಮಾತ್ರ ಯಾಕೆ ಒದಗಿಸಬೇಕು, ಲಸಿಕೆಗೆ ರಾಜ್ಯ ಸರಕಾರಗಳು ಕೇಂದ್ರ ಸರಕಾರಕ್ಕಿಂತ ಹೆಚ್ಚಿನ ದರ ಯಾಕೆ ಪಾವತಿಸಬೇಕು. ಲಸಿಕೆಗೆ ದರ ನಿಗದಿಗೊಳಿಸುವುದನ್ನು ಉತ್ಪಾದಕರಿಗೆ ಯಾಕೆ ಬಿಡಲಾಗಿದೆ. ಒಂದು ದೇಶ ಒಂದು ಬೆಲೆ ಎಂಬ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಹೊಣೆ ಹೊರಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಪ್ರಶ್ನಿಸಿದೆ.

ಮೇ 1ರಂದು ಜಾರಿಗೆ ಬಂದಿರುವ ಕೇಂದ್ರ ಸರಕಾರದ ಹೊಸ ಉದಾರೀಕರಣ ನೀತಿಯ ಪ್ರಕಾರ, ರಾಜ್ಯ ಸರಕಾರಗಳು ತಮ್ಮ ಅಗತ್ಯದ 50ಶೇ. ಲಸಿಕೆಗಳನ್ನು ಉತ್ಪಾದಕರಿಂದ ಖರೀದಿಸಬೇಕು(ಈ ಬೆಲೆ ಕೇಂದ್ರ ಸರಕಾರ ಪಾವತಿಸುವ ಬೆಲೆಗಿಂತ ಅಧಿಕವಾಗಿದೆ). ಖಾಸಗಿ ಆಸ್ಪತ್ರೆಗಳು ಇನ್ನೂ ಹೆಚ್ಚಿನ ದರ ನೀಡಬೇಕಾಗಿದೆ. ಈ ವಿಭಿನ್ನ ದರದ ಬಗ್ಗೆ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾಗಿದೆ. ಲಸಿಕೆಯಲ್ಲೂ ಲಾಭ ಮಾಡುವುದರಲ್ಲಿ ಮಗ್ನವಾಗಿರುವ ಕೇಂದ್ರ ಸರಕಾರ ಒಂದು ದೇಶ, ಒಂದು ಬೆಲೆ ಎಂಬ ನೀತಿಯನ್ನು ಮರೆತಿದೆ ಎಂದು ವಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಕೇಂದ್ರ ಸರಕಾರಕ್ಕೆ ಒದಗಿಸುವ ಲಸಿಕೆಗೆ ನಿಗದಿಗೊಳಿಸಿದ ದರಕ್ಕಿಂತ ಬಹುತೇಕ ದುಪ್ಪಟ್ಟು ಬೆಲೆಯಲ್ಲಿ ರಾಜ್ಯ ಸರಕಾರಕ್ಕೆ ಲಸಿಕೆ ಒದಗಿಸಲು ನಿರ್ಧರಿಸಿದ್ದ ಲಸಿಕೆ ಉತ್ಪಾದಕ ಸಂಸ್ಥೆಗಳಾದ ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಲಸಿಕೆಯ ಬೆಲೆಯನ್ನು ಇಳಿಸಲು ಒಪ್ಪಿಕೊಂಡಿದ್ದರೂ ಈಗಲೂ ಪ್ರತೀ ಡೋಸ್ ಲಸಿಕೆ ಬೆಲೆಗೆ ರಾಜ್ಯಗಳು 150 ರೂ. ಅಧಿಕ ಪಾವತಿಸಬೇಕಿದೆ. ಕೊರೋನ ಸೋಂಕಿನಿಂದ ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ರಾಜ್ಯಗಳು ಭೇದ್ಮಾತಕ ದರದ ಬಗ್ಗೆ ತೀವ್ರ ಅಸಮಾಧಾನಸೂಚಿಸಿವೆ ಕಡಿಮೆ ದರದಲ್ಲಿಲಸಿಕೆ ಲಭ್ಯವಾಗಲು ಲಸಿಕೆಯ ಜಾಗತಿಕ ಟೆಂಡರ್ ಕರೆಯಲು ದಿಲ್ಲಿ ಸೇರಿದಂತೆ ಹಲವು ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಿವೆ. ಆದರೆ ಕೇಂದ್ರ ಸರಕಾರ ಇದಕ್ಕೆ ಒಪ್ಪಿಲ್ಲ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...