ಚುನಾವಣೆಗೆ ಉತ್ತರ ಕನ್ನಡ ಸಕಲ ಸಜ್ಜು: ಡಿಸಿ ಡಾ.ಹರೀಶ್‍ಕುಮಾರ್

Source: so news | By Manju Naik | Published on 14th April 2019, 12:35 AM | Coastal News | Don't Miss |

 

ಕಾರವಾರ: ಮತಗಟ್ಟೆಗಳಲ್ಲಿ ಶೇ.100ರಷ್ಟು ಕನಿಷ್ಠ ಮೂಲಸೌಲಭ್ಯಗಳನ್ನು ಕಲ್ಪಿಸಿರುವುದೂ ಸೇರಿದಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ ಕೈಗೊಂಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಪ್ರತಿ ಮತಗಟ್ಟೆಗಳಿಗೆ ಕನಿಷ್ಠ ಮೂಲ ಸೌಲಭ್ಯ, ದಿವ್ಯಾಂಗ ಮತದಾರರಿಗೆ ಮತದಾನಕ್ಕೆ ನೆರವು ಸೇರಿದಂತೆ ಭಾರತ ಚುನಾವಣಾ ಅಯೋಗದ ಮಾರ್ಗಸೂಚಿಯಂತೆ ಏಪ್ರಿಲ್ 23ರಂದು ನಡೆಯಲಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ವ್ಯವಸ್ಥಿತ ಮತದಾನದ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮತದಾರರಿಗೆ ವಿವಿಧ ಹಂತದಲ್ಲಿ ಜಾಗೃತಿ ಮೂಡಿಸಲಾಗಿದೆ. ಯುವ ಮತದಾರರನ್ನು ಪ್ರೋತ್ಸಾಹಿಸಲು ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮತದಾನದ ದಿನ ಮತ್ತು ಮತ ಎಣಿಕೆಗೆ ಅಗತ್ಯವಿರುವ ಎಲ್ಲ ಪೂರ್ವ ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ಮತದಾರರ ಅನುಕೂಲಕ್ಕಾಗಿ ಬಿಎಲ್‍ಒಗಳ ಮೂಲಕ ಮತಗಟ್ಟೆಯಲ್ಲಿ ಸಹಾಯಕೇಂದ್ರ ಇರಲಿದೆ. ಪ್ರತಿ ಮತದಾರರಿಗೂ ಮತದಾರರ ಚೀಟಿ ಹಾಗೂ ಮತದಾರರ ಮಾರ್ಗಸೂಚಿಯ ಮಡಿಕೆಪತ್ರವನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಮತದಾರರಿಗೆ ಮತಗಟ್ಟೆಯಲ್ಲಿನ ಸೌಲಭ್ಯ ಹಾಗೂ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಲಿದೆ ಎಂದರು.

ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ 30 ಸಂಯುಕ್ತ ಚೆಕ್‍ಪೋಸ್ಟ್‍ಗಳನ್ನು ರಚಿಸಲಾಗಿದೆ. 36 ಸಂಚಾರಿ ತನಿಖಾ ತಂಡಗಳನ್ನು ರಚಿಸಲಾಗಿದ್ದು ಮಾದರಿ ನೀತಿ ಸಂಹಿಂತೆ ಉಲ್ಲಂಘನೆಯನ್ನು ತಡೆಯುವ ನಿಟ್ಟಿನಲ್ಲಿ ಈ ತಂಡಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದರು.

ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ವಿಧಾನಸಭಾ ಕ್ಷೇತ್ರವಾರು ತರಬೇತಿ ನೀಡಲಾಗಿದೆ. ಮತ್ತೊಂದು ತರಬೇತಿಗೆ ದಿನಾಂಕ ನಿಗದಿಯಾಗಿದ್ದು ಮತಗಟ್ಟೆಗೆ ತೆರಳುವ ಮತ್ತು ಮತದಾನ ನಂತರದ ಡಿ-ಮಸ್ಟರಿಂಗ್‍ಗೆ ತರಬೇತಿ ನೀಡಲಾಗುವುದು. ಆಯೋಗದ ಮಾರ್ಗಸೂಚಿಯಂತೆ ಮತ ಎಣಿಕೆಗೆ ಕುಮಟಾ ಎ.ವಿ.ಬಳಿಗಾ ಕಾಲೇಜಿನಲ್ಲಿ ಭದ್ರತಾ ಕೊಠಡಿಯೂ ಸಿದ್ಧಗೊಂಡಿದೆ. ಚುನಾವಣಾ ವೀಕ್ಷಕರು ಉತ್ತರ ಕನ್ನಡ ಜಿಲ್ಲೆಯ ಚುನಾವಣಾ ಸಿದ್ಧತೆಗಳಿಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಗಟ್ಟೆಯಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ತಾಲೂಕಿಗೆ ಒಂದರಂತೆ ಮಹಿಳೆಯರನ್ನು ಪ್ರೋತ್ಸಾಹಿಸುವ 11 ಸಖಿ ಮತಗಟ್ಟೆಗಳು ಇರಲಿವೆ. ಈ ಮತಗಟ್ಟೆಗಳಲ್ಲಿ ಎಲ್ಲ ಸಿಬ್ಬಂದಿಗಳೂ ಮಹಿಳೆಯರೇ ಇರಲಿದ್ದಾರೆ. ಅಲ್ಲದೆ ಗಿರಿಜನರನ್ನು ಮತದಾನಕ್ಕೆ ಪ್ರೋತ್ಸಾಹಿಸಲು 2 ಮತಗಟ್ಟೆಗಳನ್ನು ಗಿರಿಜನರ ಗುಡಿಸಲಿನ ಮಾದರಿಯಲ್ಲಿ ರೂಪಿಸಲಾಗುವುದು ಮತ್ತು 2 ದಿವ್ಯಾಂಗರ ಮತಗಟ್ಟೆಗಳನ್ನು ರೂಪಿಸಲಿದ್ದು ಈ ಮತಗಟ್ಟೆಗಳಲ್ಲಿ ದಿವ್ಯಾಂಗ ಸಿಬ್ಬಂದಿ ಇದೇ ಮೊದಲ ಬಾರಿಗೆ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮತದಾರರನ್ನು ಪ್ರೋತ್ಸಾಹಿಸಲು ಈಗಾಗಲೇ ಎಲ್ಲ ರೀತಿಯ ಚಟುವಟಿಕೆಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಡಲಾಗಿದೆ. ಎಲ್ಲೆಡೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು ವಿಕಲಚೇತನ ಮತದಾರರಿಗಾಗಿ ಪ್ಯಾರಾ ಮೋಟಾರ್ ಗ್ಲೇಡಿಂಗ್ ಹಾಗೂ ಯುವ ಮತದಾರರಿಗಾಗಿ ಸ್ಕೂಬಾ ಡೈವಿಂಗ್ ಚಟುವಟಿಕೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ದಿವ್ಯಾಂಗ ಮತದಾರರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ನೆರವು ತಂತ್ರಾಂಶವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಿದ್ದಪಡಿಸಿ ಪ್ರತಿ ಮತದಾರರೂ ಮತ ಚಲಾಯಿಸಲು ಕ್ರಮ ವಹಿಸಲಾಗಿದೆ. ಈ ತಂತ್ರಾಂಶವನ್ನು ಗೂಗಲ್‍ನೊಂದಿಗೆ ಜೋಡಿಸಿರುವುದರಿಂದ ಮ್ಯಾಪ್‍ನಲ್ಲಿ ಈಗಾಗಲೇ ಗುರುತಿಸಿರುವ ದಿವ್ಯಾಂಗ ಮತದಾರರನ್ನು ಹಸಿರಿ ವೃತ್ತದಲ್ಲಿ ಗೋಚರಿಸಿ ಮತದಾನವಾದ ಬಳಿಕ ಅದು ನೀಲಿ ಬಣ್ಣಕ್ಕೆ ಕಾಣಸಿಗುತ್ತದೆ. ಇದರಿಂದ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬುದು ತಿಳಿಯುತ್ತದೆ. ಜಿಲ್ಲಾಡಳಿತದ ಈ ಸಾಧನೆಗೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಅಲ್ಲದೆ ವಿವ್ಯಾಂಗ ಮತದಾರರನ್ನು ಮತಗಟ್ಟೆಗಳಿಗೆ ಕರೆಯೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಭೂತಗನ್ನಡಿ, ವೀಲ್‍ಚೇರ್, ಅವಕಾಶವಿರುವೆಡೆ ನಿರೀಕ್ಷಣಾ ಕೊಠಡಿ ಮತ್ತು ಪ್ರತಿ ಮತಗಟ್ಟೆಯಲ್ಲಿ ಅಂಧ ಮತದಾರರ ಅನುಕೂಲಕ್ಕಾಗಿ ಬ್ರೈಲ್‍ಲಿಪಿಯಲ್ಲಿ ಬ್ಯಾಲೆಟ್ ಶೀಟನ್ನು ಗೋಡೆಯ ಮೇಲೆ ಅಂಟಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅಂಧ ಮತದಾರರು ಯಾವ ನಂಬರಿನಲ್ಲಿ ಯಾವ ಅಭ್ಯರ್ಥಿ, ಮತ್ತು ಗುರುತು ಇದೆ ಎಂದು ತಿಳಿಯಬಹುದಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ಐಎಎಸ್ ಪ್ರೊಬೇಷನರ್ ದಿಲೀಶ್ ಸಸಿ ಉಪಸ್ಥಿತರಿದ್ದರು.

Read These Next