ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಪ್ರತಿಭಟನೆ

Source: sonews | By Staff Correspondent | Published on 17th September 2019, 6:47 PM | Coastal News |

ಭಟ್ಕಳ: ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗವನ್ನು ಸೇರಿಸುವುದನ್ನು ಕೈಬಿಡುವ ಕುರಿತು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 

ಮನವಿಯಲ್ಲಿ ಈಗಾಗಲೆ ಅಸ್ಥಿತ್ವದಲ್ಲಿರುವ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆಯ 30 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸೇರ್ಪಡೆ ಮಾಡಿ ರಾಜ್ಯ ವನ್ಯಜೀವಿ ಅರಣ್ಯ ಇಲಾಖೆಯು ಅದೇಶ ಹೊರಡಿಸಿದ್ದರಿಂದ  ಅರಣ್ಯ ಭೂಮಿಯನ್ನು ವಾಸ್ತವ್ಯ, ಸಾಗುವಳಿ, ಅವಲಂಬನೆಗಾಗಿ ಸ್ಥಳಿಯ ಅರಣ್ಯವಾಸಿಗಳು ತಲೆತಲಾಂತರದಿಂದ ಅರಣ್ಯ ಪ್ರದೇಶಗಳ ಮೇಲೆ ಅವಲಂಬಿತವಾಗಿರುವವರಿಗೆ ತೀವ್ರ ತೊಂದರೆಯಾಗಲಿದೆ. ಅರಣ್ಯವಾಸಿಗಳ ಅನುಭೋಗ, ಸ್ವತಂತ್ರ ಹಾಗೂ ಭೂಮಿಯ ಹಕ್ಕಿನಿಂದ ವಂಚಿತರಾಗುವ ಸಂದರ್ಬ ಬಂದೊದಗಿದೆ.

ಜಿಲ್ಲೆಯ ಅಘನಾಶಿನಿ ಕಣಿವೆಯಲ್ಲಿನ ಅರಣ್ಯ ಪ್ರದೇಶ, ಶರಾವತಿ ಅಭಯಾರಣ್ಯ ಸಿಂಗಳೀಕ ಇನ್ನಿತರ ವಿನಾಶದ ಅಂಚಿನ ವನ್ಯ ಜೀವಿಗಳ ಉಳಿವಿನ ಸಲುವಾಗಿ ಶರಾವತಿ ಅಭ್ಯಾರಣ್ಯವನ್ನು 1978ರಲ್ಲೇ ರಚಿಸಲಾಗಿದೆ. ಇದರ ವ್ಯಾಪ್ತಿ 43 ಸಾವಿರ ಹೆಕ್ಟೇರ್ ಇದೆ. ಇದಕ್ಕೆ ಶಿವಮೊಗ್ಗ ಜಿಲ್ಲೆಯ 4 ಸಾವಿರ ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ 44 ಸಾವಿರ ಹೆಕ್ಟೇರ್ ಅರಣ್ಯ ಸೇರ್ಪಡೆ ಮಾಡುವುದರಿಂದ ಅರಣ್ಯ ವನ್ಯಜೀವಿ ಸಂರಕ್ಷಣೆಗೆ ಇನ್ನಷ್ಟು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. 

ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆಯ ಅರಣ್ಯ ಭೂಮಿಯನ್ನು ಅಘನಾಶಿನಿ ಸಿಂಗಳಿಕ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಶಿವಮೊಗ್ಗದಲ್ಲಿ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರದೇಶವನ್ನು ಸೇರ್ಪಡೆ ಮಾಡುವುದಕ್ಕೆ ಅರಣ್ಯವಾಸಿಗಳ ಸಂಪೂರ್ಣ ವಿರೋಧ ಇರುವುದಲ್ಲದೇ ಸದ್ರಿ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಹೋರಾಟಗಾರರ ವೇದಿಕೆ ಅಗ್ರಹಿಸುತ್ತಿದೆ ಎಂದು ತಿಳಿಸಲಾಗಿದೆ.  

ಮನವಿ ನೀಡುವ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅರಣ್ಯ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ಎ. ರವೀಂದ್ರ ನಾಯ್ಕ ಅವರು ನಮ್ಮ ಜಿಲ್ಲೆಯ ಅರಣ್ಯ ಭೂಮಿಯನ್ನು ಶಿವಮೊಗ್ಗ ಜಿಲ್ಲಾ ಶರಾವತಿ ಅಭಯಾರಣ್ಯಕ್ಕೆ ಸೇರಿಸುವುದರಿಂದ ಇಲ್ಲಿನ ಜನರ ಜನಜೀವನದ ಮೇಲೆ ತೀವ್ರವಾದ ಪರಿಸ್ಥಿತಿ ಎದುರಾಗುವುದಿದ್ದು ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ದೊರೆಯುವುದು ಕಷ್ಟಸಾಧ್ಯವಾಗುವುದು.  ಅಲ್ಲದೇ ಇನ್ನು ಮುಂದೆ ಯಾವುದೇ ಸಣ್ಣಪುಟ್ಟ ಪರವಾನಿಗೆ ಬೇಕೆಂದರೂ ಕೂಡಾ ಶಿವಮೊಗ್ಗಕ್ಕೆ ಅಲೆಯ ಬೇಕಾಗುವುದು.  ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕಿನಿಂದ ವಂಚಿತರಾಗಲಿದ್ದಾರೆ ಎಂದರಲ್ಲದೇ ಈ ಪ್ರದೇಶವು ಸಿಂಗಳೀಕ ಸಂರಕ್ಷಿತ ಪ್ರದೇಶವಾದ್ದರಿಂದ ಮತ್ತೆ ಅಭಯಾರಣ್ಯಕ್ಕೆ ಸೇರಿಸುವುದು ಅಗತ್ಯವಿಲ್ಲವಾಗಿದೆ. ಈ ರೀತಿಯಾಗಿ ಸರಕಾರ ಮುಂದುವರಿದರೆ ಮುಂದೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಅರಣ್ಯ ಅತಿಕ್ರಮಣದಾರರ ಹೊರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಅವರು ತಾಲೂಕಿನ ಅತಿಕ್ರಮಣದಾರರ ಮೂಲಭೂತ ಹಕ್ಕಿಗೇ ಕೊಡಲಿ ಏಟು ಕೊಡಲು ಹೊರಟಿರುವುದನ್ನು ಎಲ್ಲಾ ಅತಿಕ್ರಮಣದಾರರು ಒಕ್ಕೊರಲಿನಿಂದ ಖಂಡಿಸುತ್ತಾರೆ. ಇಲ್ಲಿಯ ತನಕ ಜನ ಪ್ರತಿನಿಧಿಗಳು, ಶಾಸಕರು, ಮಂತ್ರಿಗಳು ಯಾರೂ ಕೂಡಾ ಅತಿಕ್ರಮಣದಾರರ ಸಹಾಯಕ್ಕೆ ಬಂದಿಲ್ಲ. ಅತಿಕ್ರಮಣದಾರರ ಸಮಸ್ಯೆಗಳನ್ನು ಕೇಳಲಿಕ್ಕೂ ಕೂಡಾ ಜನ ಪ್ರತಿನಿಧಿಗಳಿಗೆ ಸಮಯವಿಲ್ಲ ಎನ್ನುವಂತಾಗಿದೆ ಎಂದರು. 

ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾ ಸಂಚಾಲಕ ದೇವರಾಜ ಮರಾಠಿ ಓದಿದರು. ಸಹಾಯಕ ಕಮಿಷನರ್ ಅವರ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕ ಎಲ್. ಎ. ಭಟ್ಟ ಅವರು ಮನವಿಯನ್ನು ಸ್ವೀಕರಿಸಿದರು. 

ಅತಿಕ್ರಮಣ ಹೋರಾಟಗಾರರ ವೇದಿಕೆಯ ಸುಲೇಮಾನ್ ಸಾಬ್, ಅಬ್ದುಲ್ ಖಯ್ಯೂಮ್, ರಿಜ್ವಾನ್, ಎಫ್.ಕೆ. ಮೊಗೇರ, ಇನಾಯತುಲ್ಲಾ ಶಾಬಂದ್ರಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...