ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್ಬಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಭೂಸ್ವಾಧೀನ ಸಮಸ್ಯೆ ಪ್ರಕರಣವನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಸದ್ಯದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಹೇಳಿದರು.
ಅವರು ಶನಿವಾರ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೆದ್ದಾರಿ ಕಾಮಗಾರಿಯಿಂದಾಗಿ ಅಲ್ಲಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಹರಿಸಿಕೊಡುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿನ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯ ಬಗ್ಗೆ ಇಲ್ಲಿನ ಅಧಿಕಾರಿಗಳೊಂದಿಗೆ ವಿಸಿ ಮೂಲಕ ಪ್ರತ್ಯೇಕ ಸಭೆಯನ್ನು ನಡೆಸುತ್ತೇವೆ. ಗಡಿ ಭಾಗದ ಬೆಳಕೆ, ಗೊರಟೆ ಭಾಗಗಳ ಜನರು ಟೋಲ್ಗೇಟ್ನಲ್ಲಿ ಎದುರಿಸುತ್ತಿರುವ ಕಷ್ಟಗಳ ಬಗ್ಗೆಯೂ ಗಮನ ಹರಿಸುತ್ತೇವೆ. ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು, ವಿವಿಧ ಇಲಾಖೆಗಳೊಂದಿಗಿನ ಹೊಂದಣಿಕೆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಕಾನೂನು ಸುವ್ಯವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಅಲ್ಲದೇ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಕೆಲ ಸಊಚನೆಯನ್ನು ನೀಡಲಾಗಿದೆ ಎಂದು ವಿವರಿಸಿದರು.
ಮೊಗೇರರ ಬಗ್ಗೆ ಶೀಘ್ರದಲ್ಲಿಯೇ ವರದಿ:
ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಭಟ್ಕಳದಲ್ಲಿ ಮೊಗೇರರು ಪ್ರತಿಭಟನೆಯನ್ನು ಮುಂದುವರೆಸಿರುವುದು ಗಮನಕ್ಕೆ ಬಂದಿದೆ. ಮೊಗೇರರಿಗೆ ಪರಿಶಿಷ್ಟ ಜಾತಿ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸರಕಾರ ಪ್ರತ್ಯೇಕ ಸಮಿತಿ ರಚಿಸಿದ್ದು, ಈಗಾಗಲೇ ಸಮಿತಿ, ಭಟ್ಕಳದ ವಿವಿದೆಡೆ ಭೇಟಿ ನೀಡಿ, ಮೊಗೇರರ ಜೀವನ ಪದ್ಧತಿ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಕಲೆ ಹಾಕಿದೆ. ಸಮಿತಿ ಈ ಹಿಂದೆ ವರದಿ ಸಲ್ಲಿಸಲು ಕಾಲಾವಕಾಶವನ್ನು ಕೇಳಿರುವ ಬಗ್ಗೆ ಮಾಹಿತಿ ಇದ್ದು, ಶೀಘ್ರದಲ್ಲಿಯೇ ಅಂತಿಮ ವರದಿ ಸರಕಾರಕ್ಕೆ ಸಲ್ಲಿಕೆಯಾಗುವ ವಿಶ್ವಾಸ ಇದೆ ಎಂದು ತಿಳಿಸಿದರು. ಸಹಾಯಕ ಆಯುಕ್ತೆ ಮಮತಾದೇವಿ, ತಹಶೀಲ್ದಾರ ಡಾ.ಸುಮಂತ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ತಂಝೀಮ್ ಮುಖಂಡರು:
ಭಟ್ಕಳ: ತಾಲೂಕಿನ ಹೆಚ್ಚಿನ ಮುಸ್ಲೀಮರ ಪ್ರಾತಿನಿಧಿಕ ಸಂಸ್ಥೆ ಮಜ್ಲಿಸೇ ಇಸ್ಲಾ ವ ತಂಝೀಮ್ ಮುಖಂಡರು, ಶನಿವಾರ ಸಂಜೆ ಜಿಲ್ಲಾಧಿಕಾರಿ ಪ್ರಭುಲಿಂಗ ಅವರನ್ನು ಭೇಟಿ ಮಾಡಿ ಸ್ವಾಗತ ಕೋರಿದರು. ಭಟ್ಕಳದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕೆ ಪರಿಹಾರ ರೂಪಿಸುವ ಸಂಬಂಧ ತಮ್ಮೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲು ಬಯಸುತ್ತೇವೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು ಎಂದು ವಿನಂತಿಸಿ ಕೊಂಡರು.
ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್ ಎಮ್.ಜೆ, ಮೊಹಿದ್ದೀನ್ ರುಕ್ನುದ್ದೀನ್ ಕೊಚ್ಚೊಬಾಪಾ ಮತ್ತಿತರರು ಉಪಸ್ಥಿತರಿದ್ದರು.