ನೀರಿನ ಒಡಂಬಡಿಕೆ ಮಾಡಿಕೊಳ್ಳದ ತಹಸೀಲ್ದಾರರಿಗೆ ಶೋಕಾಸ್ ನೋಟಿಸ್

Source: S O News Service | By I.G. Bhatkali | Published on 29th May 2019, 6:40 PM | Coastal News |

ಕಾರವಾರ: ನೀರಿನ ಲಭ್ಯತೆ ಇರುವ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿ ಈವರೆಗೆ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳದ ತಹಸೀಲ್ದಾರರ ಕಾರ್ಯ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ನಾಲ್ಕೂ ವಿಭಾಗದ ತಹಸೀಲ್ದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬರ ಪರಿಸ್ಥಿತಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದ್ದು ನೀರಿನ ಲಭ್ಯತೆ ಇರುವ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಂತೆ ಎಲ್ಲ ತಹಸೀಲ್ದಾರರಿಗೆ ಐದು ತಿಂಗಳ ಹಿಂದೆಯೇ ಸೂಚಿಸಲಾಗಿತ್ತು. ಆದರೆ ಈ ವರೆಗೆ ಒಂದೂ ಒಡಂಬಡಿಕೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದರು.

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಕೇವಲ ತಾತ್ಕಾಲಿಕ ವ್ಯವಸ್ಥೆಯಷ್ಟೆ. ಆದರೆ ನೀರಿನ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಖಾಸಗಿಯವರ ಜಮೀನುಗಳಲ್ಲಿ ನೀರು ಹೆಚ್ಚುವರಿಯಾಗಿದ್ದಲ್ಲಿ ಅವರಿಂದ ಒಡಂಬಡಿಕೆ ಮಾಡಿಕೊಂಡು ಕುಡಿಯುವ ಉದ್ದೇಶಕ್ಕೆ ನೀರು ಸರಬರಾಜು ಮಾಡುವುದು ಉತ್ತಮ. ಆದರೆ ಈವರೆಗೆ ಯಾವ ತಹಸೀಲ್ದಾರರೂ ಈ ಬಗ್ಗೆ ಕ್ರಮ ವಹಿಸದೆ ಇರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಜವಾಬ್ದಾರಿ ತಹಸೀಲ್ದಾರ ಅವರದ್ದೇ ಆಗಿದೆ. ಈ ಸಂಬಂಧದ ವೆಚ್ಚಕ್ಕಾಗಿ ಸದಾ ಪ್ರತಿ ತಾಲೂಕಿನಲ್ಲಿ ಕನಿಷ್ಠ 15 ಲಕ್ಷ ರೂ. ಅನುದಾನ ಲಭ್ಯವಿರಬೇಕು. ಕೊರತೆ ಇದ್ದಲ್ಲಿ ತಕ್ಷಣ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುದಾನ ಪಡೆಯಬೇಕು. ಜಿಲ್ಲಾಧಿಕಾರಿಗಳೂ ಕೂಡ ತಹಸೀಲ್ದಾರ ಅವರಿಂದ ಬೇಡಿಕೆ ಪತ್ರ ಬಂದ ಕೂಡಲೆ ಅಂದೇ ಅನುದಾನ ಬಿಡುಗಡೆ ಮಾಡುವಂತೆ ಅವರು ತಿಳಿಸಿದರು.

ಪ್ರತಿ ವ್ಯಕ್ತಿಗೆ ಪ್ರತಿದಿನ ಕನಿಷ್ಠ 40 ಲೀಟರ್ ನೀರಿನ ಸರಬರಾಜು ಆಗಬೇಕು. ಜಾನುವಾರುಗಳಿಗೆ ಮೇವು-ನೀರಿನ ಸರಬರಾಜು ಆಗಬೇಕು. ಜನರು ಗುಳೇ ಹೋಗದಂತೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬೇಕು. ಇವು ನಮ್ಮ ಪ್ರಮುಖ ಆದ್ಯತೆ ಆಗಬೇಕು. ಇದಕ್ಕಾಗಿ ಯಾವುದೇ ಹಣಕಾಸಿನ ಕೊರತೆಇಲ್ಲ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಕಾರ್ಯೋನ್ಮುಖವಾಗಬೇಕು ಎಂದರು.

ಕುಡಿಯುವ ನೀರಿಗಾಗಿ ಬೋರ್‍ವೆಲ್ ಕೊರೆಯಲು, ಇರುವ ಬೋರ್‍ವೆಲ್‍ಗಳನ್ನು ಮತ್ತಷ್ಟು ಆಳ ಕೊರೆಯಲು, ಕುಡಿಯುವ ನೀರಿನ ಪೈಪ್‍ಲೈನ್ ವಿಸ್ತರಿಸಲು, ಖಾಸಗಿ ಬೋರ್‍ವೆಲ್‍ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು, ಟ್ಯಾಂಕರ್ ಮೂಲಕ ನೀರಿ ಸರಬರಾಜು ಮಾಡಲು ಜಿಲ್ಲಾಧಿಕಾರಿಗಳ ಬಳಿ ಅನುದಾನ ಲಭ್ಯವಿದೆ. ಅದನ್ನು ಸದುಪಯೋಗಪಡಿಸಿಕೊಂಡು ನೀರಿನ ಸಮಸ್ಯೆ ಬಾರದಂತೆ ಕ್ರಮ ವಹಿಸಬೇಕು ಎಂದರು.

ಟ್ಯಾಂಕರ್ ನೀರು ಸರಬರಾಜು ಮಾಡುವುದು ಸರಿ, ಆದರೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿರಬೇಕು. ಟ್ಯಾಂಕರ್ ನೀರು ಸರಬರಾಜು ಮಾಡಿದವರಿಗೆ ಎರಡು ಮೂರು ದಿನಗಳಿಗೊಮ್ಮೆ ಹಣಸಂದಾಯ ಮಾಡುವ ಬದಲು ವಾರಕ್ಕೊಮ್ಮೆ ಮಾಡಿದರೆ ಎಷ್ಟು ಟ್ಯಾಂಕರ್ ಸರಬರಾಜಾಗಿದೆ ಎಂಬುದು ಲೆಕ್ಕ ಸಿಗಲಿದೆ. ಇದಲ್ಲದೆ ಟ್ಯಾಂಕರ್ ಸರಬರಾಜಿನಲ್ಲಿ ಅವ್ಯವಹಾರಗಳು ನಡೆದ ಬಗ್ಗೆ ಕಂಡುಬಂದಲ್ಲಿ ಅಧಿಕಾರಿಗಳ ತಲೆದಂಡವಾಗಲಿದೆ ಎಂದು ಅವರು ಎಚ್ಚರಿಸಿದರು.

ನಗರ ಪ್ರದೇಶದಲ್ಲಿ ಟ್ಯಾಂಕರ್ ಸರಬರಾಜು ಮಾಡಿದ ಹಣಸಂದಾಯಕ್ಕೆ ಅನುದಾನದ ಕೊರತೆ ಇದ್ದಲ್ಲಿ ಕೂಡಲೇ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ಮಾಣ ಮಾಡುವಂತಹ ಹೂಳೆತ್ತುವ, ಕಾಲುವೆ ನಿರ್ಮಾಣ ಮಾಡುವ, ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.

ಗೋಶಾಲೆ ತೆರೆಯಲು ಆಸಕ್ತಿ ತೋರುವ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವಂತೆ ತಿಳಿಸಿದ ಅವರು, ಮುಂಗಾರು ಪೂರ್ವದಲ್ಲಿ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಚರಂಡಿಗಳ ಸ್ವಚ್ಚತೆ, ರಸ್ತೆ ಇಕ್ಕೆಲಗಳಲ್ಲಿ ಮರಗಳ ಕಪಾತು ಮಾಡುವ ಕೆಲಸವನ್ನು ನಿರ್ವಹಿಸಬೇಕು. ಇದರಿಂದ ಮಳೆಗಾಲದಲ್ಲಿ ಸಂಭವಿಸಬಹುದಾದ ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಭೆಯಲ್ಲಿ ಶಾಸಕ ದಿನಕರಶೆಟ್ಟಿ, ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಉಪಸ್ಥಿತರಿದ್ದರು.
    
ಫೋಟೋ ಶೀರ್ಷಿಕೆ.


ಜಿಲ್ಲಾ ಸಾಂಖ್ಯಿಕ ಇಲಾಖೆ ಹೊರತಂದಿರುವ 2019ನೇ ಸಾಲಿನ ಜಿಲ್ಲೆಯ ಅಂಕಿ ಸಂಖ್ಯೆಗಳ ಮಾಹಿತಿ ಪುಸ್ತಕವನ್ನು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬಿಡುಗಡೆ ಮಾಡಿದರು. ಶಾಸಕ ದಿನಕರಶೆಟ್ಟಿ, ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಅಣ್ವೇಕರ್ ಇದ್ದರು. ಈ ಸಾಲಿನ ಮಾಹಿತಿ ಪುಸ್ತಕದ ಮುಖಪುಟವನ್ನು ಭಾರತೀಯ ಯೋಧರಿಗೆ ಅರ್ಪಿಸಿರುವ ಹಿನ್ನೆಲೆಯಲ್ಲಿ ಛತ್ತಿಸ್‍ಗಢದಲ್ಲಿ ಮೃತಪಟ್ಟ ಕಾರವಾರದ ವೀರಯೋಧ ವಿಜಯಾನಂದ ನಾಯ್ಕ್ ಅವರ ತಂದೆ-ತಾಯಿ ಉಪಸ್ಥಿತರಿದ್ದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...