ಕಟೆಕಟೆಯಲ್ಲಿ ಉತ್ತರಪ್ರದೇಶದ ಆಡಳಿತ

Source: sonews | By Staff Correspondent | Published on 8th January 2020, 10:10 PM | Special Report | Don't Miss |

ಪೊಲೀಸರ ಆಕ್ರಮಣಕಾರಿ ಮತ್ತು ಭಯೋತ್ಪಾದಕ ಧೋರಣೆಗಳು ಒಂದು ಸಭ್ಯ ಸಮಾಜಕ್ಕೆ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಗೆ ತಕ್ಕುದಾದುದಲ್ಲ.

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ)ಗಳ ವಿರುದ್ಧದ ಹೋರಾಟಗಳು ಅಚಲವಾಗಿ ಮುಂದುವರೆಯುತ್ತಿರುವಂತೆ ಬಿಜೆಪಿಯು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಅತ್ಯಂತ ದಮನಕಾರಿ ಮತ್ತು ಹಿಂಸಾತ್ಮಕ ಧೋರಣೆಗಳನ್ನು ಅನುಸರಿಸುತ್ತಿದ್ದಾರೆ. ಪೊಲೀಸ್ ಫೈರಿಂಗ್ ಕಾರಣದಿಂದಾಗಿ ಹಲವರ ಪ್ರಾಣ ತೆಗೆದ ಪ್ರಕರಣಗಳೂ ವರದಿಯಾಗಿರುವುದು ಇದೇ ರಾಜ್ಯಗಳಿಂದ ಎಂಬುದು ಆಳುವ ಸರ್ಕಾರಕ್ಕೆ ನಾಚಿಕೆ ತರಬೇಕು. ಆದರೆ ಈ ಬಗ್ಗೆ ಯಾವುದೇ ಪಶ್ಚಾತ್ತಾಪ ತೋರದ ಆಳುವ ಪಕ್ಷ  ಮತ್ತವರ ಬೆಂಬಲಿಗರು ಇದನ್ನೇ ಒಂದು ಬಲಿಷ್ಟ ನಾಯಕತ್ವದ ಪುರಾವೆ ಎಂಬಂತೆ ಕೊಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಂತೂ ೨೦೧೯ರ ಡಿಸೆಂಬರ್ ೧೯ರ ಪ್ರತಿಭಟನಾಕಾರರ ವಿರುದ್ಧ  ಸೇಡು ತೀರಿಸಿಕೊಳ್ಳುವುದಾಗಿ ಅತ್ಯಂತ ಹೀನಾಯವಾಗಿ ಬಹಿರಂಗವಾಗಿಯೇ ಘೋಷಿಸಿದ್ದರು. ಆಗಿನಿಂದಲೂ ಆ ರಾಜ್ಯದಲ್ಲಿ ಪ್ರತಿಭಟನಾಕಾರರು ಪೊಲೀಸ್ ಕ್ರೌರ್ಯಗಳನ್ನೂ, ಬೇಕಾಬಿಟ್ಟಿ ಬಂಧನಗಳನ್ನು ಹೆಚ್ಚೆಚ್ಚು ಅನುಭವಿಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿ ಬೆದರಿಸಲೆಂದೇ ಪೊಲೀಸರು ಮನೆಗಳನ್ನು ಧ್ವಂಸ ಮಾಡಿರುವ, ಆಸ್ತಿಪಾಸ್ತಿಗಳನ್ನು ನಾಶಮಾಡಿರುವ ವರದಿಗಳೂ ಬರುತ್ತಿವೆ. ಬೇಕೆಂದಲೇ ಅಮಾಯಕ ವ್ಯಕ್ತಿಗಳನ್ನು ಬಂಧಿಸಿ ಇಡೀ ಸಮುದಾಯದ ಮೇಲೆ ಅಪರಾಧಿತ್ವದ ಗೂಬೆ ಕೂರಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಅಪ್ರಾಪ್ತ ವಯಸ್ಕರನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸಿಸಿರುವ ಹೃದಯವಿದ್ರಾವಕ ವರದಿಗಳು ಬರುತ್ತಿವೆ.

ಈವರೆಗೆ ಉತ್ತರ ಪ್ರದೇಶವೊಂದರಲ್ಲೇ ೧೯ ಜೀವಗಳು ಬಲಿಯಾಗಿದ್ದು ಸರ್ಕಾರವು ಅದರ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವುದಿರಲಿ, ಶಾಂತಿ-ಸಂಧಾನಗಳ ಕ್ರಮಗಳಿಗೂ ಸಹ ಮುಂದಾಗುತ್ತಿಲ್ಲ. ಮೊದಲಿಗೆ ಪೊಲೀಸರು ತಾವು ಗುಂಡನ್ನು ಹಾರಿಸಲೇ ಇಲ್ಲವೆಂದು ಹೇಳುತ್ತಾ ಅದನ್ನು ಪ್ರತಿಭಟನಾಕಾರರ ತಲೆಗೇ ಕಟ್ಟಲು ಹವಣಿಸಿದರು. ಆದರೆ ಪೊಲೀಸರ ಕೃತ್ಯಗಳನ್ನು ಬಯಲು ಮಾಡುವಂತಹ ವಿಡಿಯೋ ದೃಶ್ಯಾವಳಿಗಳು ಬಯಲಾಗುತ್ತಿದ್ದಂತೆ ಪೊಲೀಸರು ಒಪ್ಪಿಕೊಳ್ಳಲೇ ಬೇಕಾಯಿತಾದರೂ ಅದನ್ನು ಸ್ವರಕ್ಷಣಾ ಕ್ರಮವೆಂಬಂತೆ ಸಮರ್ಥಿಸಿಕೊಂಡರು. ಮನುಷ್ಯ ಜೀವಗಳು ಬಲಿಯಾಗುವುದು ಒಂದು ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರದ ವೈಫಲ್ಯವಾಗಿದೆ ಅಥವಾ ಒಂದು ಗಂಭೀರ ನೈತಿಕ ಬಿಕ್ಕಟ್ಟಾಗಿದೆ. ಆದ್ದರಿಂದ ಇದರ ಬಗ್ಗೆ ಸೂಕ್ತ ತನಿಖೆ ನಡೆದು ಆಕ್ರಮಣಕಾರರಿಗೆ ಶಿಕ್ಷೆಯಾಗುವುದು ಅತ್ಯಗತ್ಯವಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅದಕ್ಕೆ ತದ್ವಿರುದ್ಧವಾಗಿವೆ. ವಾಸ್ತವಿಕ ವರದಿಗಳು ಸ್ಪಷ್ಟಪಡಿಸುತ್ತಿರುವಂತೆ ಈ ದಾಳಿಗಳಲ್ಲಿ ಪೊಲೀಸರು ಮತ್ತು ಆಡಳಿತ ಯಂತ್ರಾಂಗವು ಕೈಗೂಡಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಹಾಗೂ ಅದೇ ಕಾರಣಕ್ಕಾಗಿಯೇ ಆಕ್ರಮಣಕಾರರನ್ನು ಸರ್ಕಾರವು ರಕ್ಷಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಉತ್ತರ ಪ್ರದೇಶ ಪೊಲೀಸರು ತಾವಿರುವುದು ನಾಗರಿಕ ಸೇವೆಯಲ್ಲೇ ವಿನಾ ಮಿಲಿಟರಿ ಸೇವೆಯಲ್ಲಲ್ಲ ಎಂಬ ಅತ್ಯಂತ ಪ್ರಾಥಮಿಕ ವಿಷಯವನ್ನೇ ಮರೆತುಹೋಗಿರುವಂತಿದೆ. ಉತ್ತರ ಪ್ರದೇಶವನ್ನು ಒಂದು ಗಲಭೆ ಪೀಡಿತ ಅಥವಾ ಸಂಘರ್ಷ ಸಿಕ್ತ ಪ್ರದೇಶವೆಂದು ಘೋಷಿತವಾಗಿಲ್ಲವಾದ್ದರಿಂದ ಪೊಲೀಸರು ಅನುಸರಿಸುತ್ತಿರುವ ಸೇನಾತ್ಮಕ ಧೋರಣೆಗೆ ಯಾವುದೆ ಸಮರ್ಥನೆಯಿಲ್ಲ. ಒಂದು ಸಭ್ಯ ಸಮಾಜದಲ್ಲಿ ಪೊಲೀಸರು ಪ್ರಚೋದಿಸಲ್ಪಟ್ಟರೂ ಅತಿ ಹೆಚ್ಚು ತಾಳ್ಮೆಯನ್ನು ತೋರಬೇಕಿರುತ್ತದೆ. ಆದರೆ ಉತ್ತರ ಪ್ರದೇಶ ಪೊಸರು ಕ್ಷುಲ್ಲಕವಾದ ಅಥವಾ ಪ್ರತಿಭಟನಾಕಾರರು ಹಿಂಸಾಚಾರದ ತೊಡಗುತ್ತಿದ್ದರು ಎಂಬ ಅನುಮಾನಾಸ್ಪದ  ಕಾರಣಗಳನ್ನು ಮುಂದಿಟ್ಟುಕೊಂಡು ಒಂದು ನಿರ್ದಿಷ್ಟ ಸಮುದಾಯವನ್ನೇ ದಾಳಿಗೆ ಗುರಿಯಾಗಿಸಿಕೊಂಡಿರುವುದು ಕಂಡುಬರುತ್ತದೆ. ಹೀಗಾಗಿ ಪೊಲೀಸರ ಈ ಸಮರ್ಥನೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮುಸುಕುಧಾರಿ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ಒಂದು ನಿಷ್ಪಕ್ಷಪಾತ ತನಿಖೆ ನಡೆಯುವುದು ಅತ್ಯಗತ್ಯವಾಗಿದೆ.

ಉತ್ತರಪ್ರದೇಶದ ಬುಲಂದ್‌ಶಹರಿನಲ್ಲಿ ಇನ್‌ಸ್ಪೆಕ್ಟರೊಬ್ಬರು ತಾವು ಯಂತ್ರಣಕ್ಕೆ ತರುತ್ತಿದ್ದ ಗುಂಪಿಗೇ ಬಲಿಯಾದ ಪ್ರಕರಣದಲ್ಲಿ ಮಾತ್ರ ಇದೇ ಬಗೆಯ ಉತ್ಸಾಹವನ್ನು ಏಕೆ ಪ್ರದರ್ಶಿಸಲಿಲ್ಲ ಎಂಬುದು ಆಶ್ಚರ್ಯಕರ. ಆಗ ಒಬ್ಬ ಪೊಲೀಸ್ ಅಧಿಕಾರಿಯು ಗುಂಪನ್ನು ನಿಯಂತ್ರಿಸುವಾಗ ಪ್ರಾಣ ಕಳೆದುಕೊಂಡರೆ ಈಗ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಪೊಲೀಸರೇ ಒಂದು ಪುಂಡುಗುಂಪಾಗಿ ಆಕ್ರಮಣ ನಡೆಸುತ್ತಿರುವುದು ಆ ರಾಜ್ಯದ ಕಾನೂನು-ಸುವ್ಯವಸ್ಥೆಯ ಯಂತ್ರಾಂಗವು ಎದುರಿಸುತ್ತಿರುವ ವಿಪರ್ಯಾಸವನ್ನು ಸೂZಸುತ್ತದೆ. ಇಂತಹ ಪ್ರಕರಣಗಳಲ್ಲಿ ಪೊಲೀಸ್ ಮಿತ್ರರೆಂಬ ಕೇವಲ ಮೂರು ದಿನಗಳ ಕ್ಷಿಪ್ರ ತರಬೇತಿಂiನ್ನು ಪಡೆದಿರುವ ಅಶಿಕ್ಷಿತ ನಾಗರಿಕ ಪಡೆಗಳೂ ಸಹ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ವಿರೋಧ ಪಕ್ಷಗಳು ಆರೋಪಿಸುವಂತೆ ಅವರಲ್ಲಿ ಬಹುಪಾಲು ಜನರನ್ನು ಉಗ್ರ್ರ ಬಲಪಂಥೀಯ ಸಂಘಟನೆಗಳಿಂದ ನೊಂದಾಯಿಸಿಕೊಂಡಿರುವ ಅನುಮಾನವಿದೆ.

ಉತ್ತರ ಪ್ರದೇಶದಲ್ಲಿರುವ ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿ ಬೆದರಿಸಲೆಂದೇ ಪೊಲೀಸರು ಮನೆಗಳನ್ನು ಧ್ವಂಸ ಮಾಡಿರುವ, ಆಸ್ತಿಪಾಸ್ತಿಗಳನ್ನು ನಾಶಮಾಡಿರುವ ವರದಿಗಳೂ ಬರುತ್ತಿವೆ. ಬೇಕೆಂದಲೇ ಅಮಾಯಕ ವ್ಯಕ್ತಿಗಳನ್ನು ಬಂಧಿಸಿ ಇಡೀ ಸಮುದಾಯದ ಮೇಲೆ ಅಪರಾಧಿತ್ವದ ಗೂಬೆ ಕೂರಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಅಪ್ರಾಪ್ತ ವಯಸ್ಕರನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸಿಸಿರುವ ಹೃದಯವಿದ್ರಾವಕ ವರದಿಗಳು ಬರುತ್ತಿವೆ. ಪೊಲೀಸರೇ ಹೀಗೆ ಪ್ರಾಣ ಹಾಗೂ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುತ್ತಿದ್ದರೂ ಪ್ರತಿಭಟನಾಕಾರರು ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸದ ಮುಸ್ಲಿಮರೂ ಸಹ ಸಾರ್ವಜನಿಕ ಆಸ್ತಿಪಾಸ್ತಿಗಳಿಗಾದ ನಷ್ಟಗಳನ್ನು ಕಟ್ಟಿಕೊಡಬೇಕೆಂದು ಕೇಳುತ್ತಿರುವುದು ಸಂದರ್ಭದ ಕ್ರೂರ ವಿಪರ್ಯಾಸವೇ ಆಗಿದೆ. ಈ ಎಲ್ಲಾ ಅನಾಹುತಗಳು ಆಡಳಿತರೂಢ ರಾಜಕೀಯ ನಾಯಕರ ಕೃಪಾಶೀರ್ವಾದವಿಲ್ಲದೆ ಆಗುತ್ತಿತ್ತೆಂದು ಭಾವಿಸುವುದು ಅಸಾಧ್ಯ. ಆ ಸರ್ಕಾರವೂ ಸಹ ಹಲವಾರು ಸಂದರ್ಭಗಳಲ್ಲಿ ಅತ್ಯಂತ ಪ್ರತಿಗಾಮಿ ಗುಣಲಕ್ಷಣಗಳನ್ನು ಪ್ರದರ್ಶಿಸಿದೆ.

 

ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಅಲ್ಲಿನ ಸರ್ಕಾರವು ಒಂದು ಮತೀಯ ಒಲವಿರುವ ಪೊಲೀಸ ಪ್ರಭುತ್ವವಾಗುತ್ತಿದೆಯೆಂದು ಹೇಳುತ್ತಿದೆ. ಅಂತ ಒಂದು ಪ್ರಭುತ್ವದಡಿಯಲ್ಲಿ ಮಾನವ ಹಕ್ಕುಗಳಿಗೆ ಯಾವ ಬೆಲೆಯೂ ಇರುವುದಿಲ್ಲ. ಆದ್ದರಿಂದಲೇ ಯಾವುದೇ ಬುನಾದಿ ಇಲ್ಲದಿದ್ದರೂ ಗಂಭೀರ ಸ್ವರೂಪದ ಆರೊಪಗಳನ್ನು ಹೊರಿಸಿ ಹಲವಾರು  ಹೆಸರಾಂತ ಮಾನವ ಹಕ್ಕು ಕಾರ್ಯಕರ್ತರನ್ನು ಸೆರೆಗೆ ದೂಡಲಾಗಿದೆ. ಬಂಧಿತರಾದ ಕೆಲವು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ ಅವರಿಗೆ ಕನಿಷ್ಟ ಮೂಲಭೂತ ಹಕ್ಕುಗಳನ್ನೂ ಸಹ ನಿರಾಕರಿಸಲಾಗಿದೆ. ಈವರೆಗೆ ಸಮಾಜದ ಅತ್ಯಂತ ಕೆಳಸ್ತರಗಳಲ್ಲಿರುವ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಸೆರೆಗೆ ದೂಡುವ ಮೂಕ ಇತರ ಯಾರೂ ಪೊಲೀಸ್ ದೌರ್ಜನ್ಯಗಳಿಗೂ ಹೆದರದೆ ಬೀದಿಗೆ ಬರಲು ಹೆದರುವಂತೆ ಮಾಡುವುದೇ ಸರ್ಕಾರದ ಉದ್ದೇಶವಿದ್ದಂತಿದೆ.

ಉತ್ತರ ಪ್ರದೇಶ ಸರ್ಕಾರದ ದಮನಕಾರಿ ಕ್ರಮಗಳನ್ನು ನೋಡಿದರೆ ಜೀವಿಸುವ, ಶಾಂತಿಯುತವಾಗಿ ಸಭೆ ಸೇರಿ ಪ್ರತಿಭಟಿಸುವ ಹಕ್ಕೂಗಳನ್ನೂ ಕಿತ್ತುಕೊಂಡು ತಮ್ಮನ್ನು ಎರಡನೆ ದರ್ಜೆ ನಾಗರಿಕರನ್ನಾಗಿ ಮಾಡಬಹುದೆಂಬ ಮುಸ್ಲಿಮರ ಆತಂಕ ನಿಜವೆಂದು ಸಾಬೀತಾಗುವಂತೆ ಕಂಡುಬರುತ್ತಿದೆ. ಕೆಲವು ಅಪವಾದಗಳನ್ನು ಬಿಟ್ಟರೆ ಇಂತಹ ಸ್ವರೂಪಗಳನ್ನುಳ್ಳ ಕ್ರಮಗಳು ಮಾಧ್ಯಮಗಳಲ್ಲಿ ವರದಿಯೂ ಆಗುವುದಿಲ್ಲ. ಆದರೂ ಅತ್ಯಂತ ಪೂರ್ವಗ್ರಹಗಳಿಂದ ಕೂಡಿರುತ್ತದೆ. ಈಬಗೆಯ ಭೀತಿ ಮತ್ತು ದಮನದ ವಾತಾವರಣಗಳು ಒಂದು ಪ್ರಜಾತಾಂತ್ರಿಕ ಸಮಾಜಕ್ಕೆ ತದ್ವಿರುದ್ಧವಾದ ಸಂಗತಿಗಳಾಗಿವೆ. ಆದ್ದರಿಂದಲೇ ಸಮಾಜದ ಎಲ್ಲಾ ವರ್ಗಗಳ ಜನರು ತಮ್ಮ ಹಕ್ಕುಗಳಿಗಾಗಿ ಮತ್ತು ಪ್ರಜಾತಂತ್ರದ ರಕ್ಷಣೆಗಾಗಿ ಧ್ವನಿ ಎತ್ತಬೇಕಿದೆ. ಸಾಮಾಜಿಕ ಧೃವೀಕರಣವು ಸಮಾಜದ ಶಾಶ್ವತ ಲಕ್ಷಣವಾಗದಂತೆ ತಡೆಗಟ್ಟಲು ಉತ್ತರಪ್ರದೇಶದಲ್ಲಿನ ವಿರೋಧ ಪಕ್ಷಗಳು ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸಬೇಕಿದೆ.

ಕೃಪೆ: Economic and Political Weekly  ಅನು: ಶಿವಸುಂದರ್ 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...