ಕೋವಿಡ್ ಆದಷ್ಟು ಶೀಘ್ರ ನಮ್ಮ ಜಿಲ್ಲೆ ಹಸಿರು ಪಟ್ಟಿಯತ್ತ ಹೋಗುವುದು ನಮ್ಮ ಗುರಿಯಾಗಿದೆ:ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್

Source: S.O. News Service | By MV Bhatkal | Published on 10th June 2021, 8:08 PM | Coastal News |

ಭಟ್ಕಳ: ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಆಗುವ ತೊಂದರೆಗಳ ಕುರಿತು ಈಗಾಗಲೇ ಕ್ರಮ ಕೈಗೊಂಡಿದ್ದು ಭಟ್ಕಳ ಮತ್ತು ಹೊನ್ನಾವರಗಳಲ್ಲಿ ನೆರೆಯಿಂದ ತೊಂದರೆಯಾಗುವ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಿಳಿಸಿದ್ದಾರೆ. 
ಭಟ್ಕಳದ ಮಿನಿ ವಿಧಾನ ಸೌಧದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಗತ್ಯವಿರುವ ಎಲ್ಲಾ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಮಳೆಯಿಂದ ಮರಗಳು ಬಿದ್ದರೆ, ರಸ್ತೆ ತೊಂದರೆಯಾದರೆ ತಕ್ಷಣ ಸರಿಪಡಿಸಲು ಯಂತ್ರೋಪಕರಣಗಳ ಲಭ್ಯತೆ ಸೇರಿದಂತೆ ತುರ್ತು ಕಾಮಗಾರಿಯನ್ನು ಮಾಡಲು ಜನ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಹೊನ್ನಾವರ ತಾಲೂಕಿನ ಗುಂಡಬಾಳ, ಹಡೀನಬಾಳ, ಚಿಕ್ಕನಕೋಡ, ಭಟ್ಕಳ ತಾಲೂಕಿನ ಬಸ್ತಿ, ಕಾಯ್ಕಿಣಿಗಳಲ್ಲಿನ ಪರಿಸ್ಥಿತಿಯ ಕುರಿತು ಅವಲೋಕನ ಮಾಡಿದ್ದು ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು. \
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾವು ಸಾಕಷ್ಟು ಮೊದಲು ಮನೆ ಮನೆ ಸರ್ವೆ ಮಾಡಿದ್ದಲ್ಲದೇ ಕೋವಿಡ್ ಟೆಸ್ಟ್‍ಗಳನ್ನು ಹೆಚ್ಚು ಮಾಡಿದ್ದರಿಂದ ನಮ್ಮ ಪೊಸಿಟಿವಿಟಿ ಹೆಚ್ಚಾಗಿ ಬಂದಿತ್ತು. ಆಗ ನಾವು ಹೆಚ್ಚು ಟೆಸ್ಟ್ ಮಾಡಿಸಿ ಕ್ರಮ ಕೈಗೊಂಡಿದ್ದರಿಂದ ಈಗ ನಮ್ಮ ಪೊಸಿಟಿವಿಟಿ ದರ ಶೇ.7, 6ಕ್ಕೆ ಇಳಿದಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಆದಷ್ಟು ಶೀಘ್ರ ನಮ್ಮ ಜಿಲ್ಲೆ ಹಸಿರು ಪಟ್ಟಿಯತ್ತ ಹೋಗುವುದು ನಮ್ಮ ಗುರಿಯಾಗಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಮನೆ ಮನೆ ಕೋವಿಡ್ ಪರೀಕ್ಷೆಗಳನ್ನು ಆರಂಭಿಸಿದ್ದು 1843 ಗ್ರಾಮಗಳಲ್ಲಿ 657 ಗ್ರಾಮಗಳಲ್ಲಿ ಮಾತ್ರ ಸೋಂಕು ಇದೆ. ಉಳಿದವುಗಳಲ್ಲಿ ಸೋಂಕು ಇಲ್ಲ, ಆದರೆ ನಮ್ಮದು ಝೀರೋ ಕೋವಿಡ್ ಗ್ರಾಮಗಳತ್ತ ಹೆಚ್ಚು ಗಮನ ಎಂದರು. 
ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಸರಕಾರ ಅಗತ್ಯವಿದ್ದಷ್ಟು ವ್ಯಾಕ್ಸಿನ್ ನೀಡಿದೆ. 45 ವರ್ಷ ಮೇಲ್ಪಟ್ಟವರ ಮತ್ತು 45 ವರ್ಷಕ್ಕಿಂತ ಕಡಿಮೆ ಇರುವವರು, ಆದ್ಯತಾರಂಗದಲ್ಲಿರುವವರಿಗೆ ಕೂಡಾ ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ. ವಿಶೇಷ ಚೇತನರಿಗೆ ಎಲ್ಲರಿಗು ಕೂಡಾ ಲಸಿಕೆ ಹಾಕುವ ಪ್ರಯತ್ನ ಸಾಗಿದ್ದು ಪ್ರತಿಯೋರ್ವರಿಗೂ ಲಸಿಕೆ ಹಾಕಿಸಲು ಸೂಚಿಸಲಾಗಿದೆ. ಈಗಾಗಲೇ ಲಸಿಕೆ ಪಡೆದವರಿಗೆ 2ನೇ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮ ಕೂಡಾ ನಡೆದಿದೆ ಎಂದರು. ಭಟ್ಕಳದಲ್ಲಿ ಈ ಹಿಂದೆ ಲಸಿಕಾಕರಣ ತೀರಾ ಕಡಿಮೆ ಇತ್ತು. ಆದರೆ ಈಗ ಜಾಸ್ತಿಯಾಗುತ್ತಿರುವುದರಿಂದ ಹೆಚ್ಚು ಲಸಿಕೆಯನ್ನು ಭಟ್ಕಳಕ್ಕೆ ನೀಡಲಾಗಿದೆ. ಟೋಕನ್ ಪದ್ಧತಿ ಮಾಡಿದ್ದರಿಂದ ಯಾವುದೇ ತೊಂದರೆ ಇಲ್ಲದೇ ಲಸಿಕೆ ಪಡೆಯಲು ಸಾಧ್ಯವಾಗುತ್ತಿದೆ ಎಂದರು. 
ಸರಕಾರ ಘೋಷಿಸಿದ ಸಹಾಯಧನ ಎರಡು ಸಾವಿರನ್ನು ಪಡೆಯಲು ಅಸಂಘಟಿತ ಕಾರ್ಮಿಕರು ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸ್ವ ಉದ್ಯೋಗ ಮಾಡುವವರಿದ್ದರೆ ಅವರು ಸಂಬಂಧ ಪಟ್ಟ ಅಧಿಕಾರಿಗಳಿಂದ ದೃಢೀಕರಣ ಪಡೆದು ಲಗತ್ತಿಸಬೇಕು ಎಂದರು. ಸುದ್ದಿಗೋಷ್ಟಿಯಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ಶಾಸಕ ಸುನಿಲ್ ನಾಯ್ಕ ಉಪಸ್ಥಿತರಿದ್ದರು.

Read These Next