ತ್ವರಿತ ನ್ಯಾಯಕ್ಕಾಗಿ ಖಾಯಂ ಜನತಾ ನ್ಯಾಯಾಲಯ ಉಪಯೋಗಿಸಿಕೊಳ್ಳಿ: ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ

Source: so news | By MV Bhatkal | Published on 3rd April 2019, 12:26 AM | State News | Don't Miss |


ಧಾರವಾಡ:ದಿನನಿತ್ಯದ ಸಾಮಾನ್ಯ ಸೇವೆಗಳಲ್ಲಿ ಉಂಟಾಗುವ ಸಮಸ್ಯೆ ತೊಂದರೆಗಳನ್ನು ನ್ಯಾಯಾಲಯದ ಮೂಲಕ ಪರಿಹಾರ ಕಾಣಬಯಸುವ ನಾಗರಿಕರು, ಸರಳ ಮತ್ತು ತ್ವರಿತ ನ್ಯಾಯಕ್ಕಾಗಿ ಖಾಯಂ ಜನತಾ ನ್ಯಾಯಾಲಯದಲ್ಲಿ ನೇರವಾಗಿ ತಮ್ಮ ಅರ್ಜಿ ಸಲ್ಲಿಸುವ ಮೂಲಕ ಸಕಾಲದಲ್ಲಿ ನ್ಯಾಯ ಪಡೆಯಬಹುದು. ಅದಕ್ಕಾಗಿ ಖಾಯಂ ಜನತಾ ನ್ಯಾಯಾಲಯದ ಸೌಲಭ್ಯ ಉಪಯೋಗಿಸಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಹೇಳಿದರು.

ಅವರು  ಬೆಳಿಗ್ಗೆ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಿದ್ದ ಖಾಯಂ ಜನತಾ ನ್ಯಾಯಾಲಯದ ಕಾರ್ಯಚಟುವಟಿಕೆಗಳ ವಿಡಿಯೋ ಸಂವಾದದ ಬಳಿಕ ಪಕ್ಷಗಾರರನ್ನು ಉದ್ದೆಶಿಸಿ ಮಾತನಾಡಿದರು.
ಜನತಾ ನ್ಯಾಯಾಲಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಯಂ ಜನತಾ ನ್ಯಾಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಖಾಯಂ ಜನತಾ ನ್ಯಾಯಾಲಯಗಳು ರಾಷ್ಟçದಾದ್ಯಂತ ೨೦೦೨ ರಿಂದಲೇ ಆರಂಭಗೊಂಡಿವೆ. ಸಾರ್ವಜನಿಕರು ಖಾಯಂ ಜನತಾ ನ್ಯಾಯಾಲಯ ಕುರಿತ ಮಾಹಿತಿ ಕೊರತೆಯಿಂದ ಅವುಗಳ ಹೆಚ್ಚಿನ ಬಳಕೆ ಆಗುತ್ತಿಲ್ಲ. ಬ್ಯಾಂಕ್‌ಗಳು ತಮ್ಮ ಪಕ್ಷಗಾರರೊಂದಿಗೆ ರಾಜಿ ಸಂಧಾನಕ್ಕಾಗಿ ಹೆಚ್ಚಿನ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಧಾರವಾಡದ ಖಾಯಂ ಜನತಾ ನ್ಯಾಯಾಲಯ ವ್ಯಾಪ್ತಿಗೆ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬರುತ್ತವೆ. ಈ ಏಳು ಜಿಲ್ಲೆಗಳ ಸಾರ್ವಜನಿಕರು ಪ್ರಮಾಣೀಕರಣ ಅಥವಾ ಸರಕು ಸಾಗಾಣಿಕೆ, ಅಂಚೆ-ಟೆಲಿಗ್ರಾಫ್-ದೂರವಾಣಿ, ವಿದ್ಯುತ್, ಬೆಳಕು-ನೀರಿನ ಸರಬರಾಜು, ಸಾರ್ವಜನಿಕ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಆಸ್ಪತ್ರೆ-ವಿಚಾರಣೆ, ವಿಮೆ, ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು, ವಸತಿ, ರಿಯಲ್ ಎಸ್ಟೆಟ್ ಹಾಗೂ ಶಿಕ್ಷಣ ಸೇವೆಗಳು ಸೇರಿ ಮುಂತಾದ ಒಂಭತ್ತು ವಿಷಯ ಹಾಗೂ ಇವುಗಳಿಗೆ ಸಂಬಂಧಿತ ಯಾವುದೇ ಅಡಚಣೆ, ಸಮಸ್ಯೆಗಳಿದ್ದರೆ ನೇರವಾಗಿ ಅಥವಾ ನ್ಯಾಯವಾದಿಗಳ ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಹೇಳಿದರು.

ನ್ಯಾಯಕ್ಕಾಗಿ ಖಾಯಂ ಜನತಾ ನ್ಯಾಯಾಲಯಕ್ಕೆ ಬರುವ ಅರ್ಜಿದಾರ ಯಾವುದೇ ರೀತಿಯ ನ್ಯಾಯಾಲಯ ಶುಲ್ಕ ಪಾವತಿಸದೇ ನೇರವಾಗಿ ನ್ಯಾಯಾಧೀಶರ ಮುಂದೆ ಸ್ವತ: ತನ್ನ ತೊಂದರೆ ನಿವೇದಿಸಿಕೊಳ್ಳಬಹುದು.
ಬಾಧಿತರು ಹಾಗೂ ಸಾರ್ವಜನಿಕರು ತಮ್ಮ ದೂರನ್ನು ಖಾಯಂ ಜನತಾ ನ್ಯಾಯಾಲಯ, ಎ.ಡಿ.ಆರ್. ಕಟ್ಟಡ, ಸಿವಿಲ್ ನ್ಯಾಯಾಲಯಗಳ ಆವರಣ, ಕೋರ್ಟ್ ಸರ್ಕಲ್ ಹತ್ತಿರ, ಧಾರವಾಡ ಇವರಿಗೆ ಖುದ್ದಾಗಿ ಅಥವಾ ದೂರವಾಣಿ ೦೮೩೬-೨೪೪೨೨೮೨, ಉಚಿತ ಸಹಾಯವಾಣಿ ೧೮೦೦-೪೨೫೯೦೯೦೦ ಮೂಲಕ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯಗಳಾಗಿರುವ ಸಂಜೀವಕುಮಾರ ಹಂಚಾಟೆ ಅವರು ವಿಡಿಯೋ ಸಂವಾದದಲ್ಲಿ ಮಾತನಾಡಿ, ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿ ಖಾಯಂ ಜನತಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆಯಾ ನಗರದ ಸುತ್ತಲಿನ ಜಿಲ್ಲೆಗಳನ್ನು ಅವುಗಳ ವ್ಯಾಪ್ತಿಗೆ ಸೇರಿಸಲಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಖಾಯಂ ಜನತಾ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಅವರೊಂದಿಗ ಕಾನೂನು ಆಡಳಿತ ತಜ್ಞತೆ ಹೊಂದಿರುವ ಇಬ್ಬರು ಸದಸ್ಯರು ಕಾರ್ಯ ನಿರ್ವಹಿಸುತ್ತಾರೆ. ಖಾಯಂ ಜನತಾ ನ್ಯಾಯಾಲಯ ನೀಡುವ ತೀರ್ಪು ಸಿವಿಲ್ ನ್ಯಾಯಾಲಯಕ್ಕೆ ಸಮಾನವಾಗಿರುತ್ತದೆ. ಅದನ್ನು ಉಚ್ಛನ್ಯಾಯಾಲಯದಲ್ಲಿ ಮಾತ್ರ ಪ್ರಶ್ನಿಸಲು ಬರುತ್ತದೆ. ಶಿಕ್ಷಣ, ಆರೋಗ್ಯ, ವಸತಿ ರಿಯಲ್ ಎಸ್ಟೆಟ್‌ಗಳಲ್ಲಿ ಉಂಟಾಗುವ ಸರಬರಾಜು ಸೇರಿದಂತೆ ಮೂಲಭೂತ ಸೌಕರ್ಯಗಳಲ್ಲಿ ಉಂಟಾಗುವ ವ್ಯತ್ಯಯ ಅಥವಾ ತೊಂದರೆಯನ್ನು ಖಾಯಂ ಜನತಾ ನ್ಯಾಯಾಲಯಗಳ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
ಧಾರವಾಡ ಕೇಂದ್ರಿತವಾಗಿರುವ ಖಾಯಂ ಜನತಾ ನ್ಯಾಯಾಲಯದ ಸದಸ್ಯರಾದ ಎಂ. ವಿಜಯಲಕ್ಷಿö್ಮ ಮತ್ತು ಗೀತಾ ಯಾದಪ್ಪನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...