ಅಮೆರಿಕ ಅಧ್ಯಕ್ಷೀಯ ಚುನಾವಣೆ : ಸ್ಪರ್ಧೆಯಲ್ಲಿ ಬೈಡನ್ ಮುಂದೆ

Source: sonews | By Staff Correspondent | Published on 3rd November 2020, 11:43 PM | Global News |

ವಾಶಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತದಾನ ಮಂಗಳವಾರ ಬೆಳಗ್ಗೆ (ಭಾರತೀಯ ಕಾಲಮಾನ ಮಂಗಳವಾರ ರಾತ್ರಿ) ಆರಂಭಗೊಂಡಿದ್ದು, ಮತದಾನ ಪ್ರಗತಿಯಲ್ಲಿದೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಾಲ್ಕು ವರ್ಷಗಳ ಆಡಳಿತದ ಜನಮತಗಣನೆ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ಈ ಚುನಾವಣೆಯ ಹೆಚ್ಚಿನ ಸಮೀಕ್ಷೆಗಳು ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ರ ಪರವಾಗಿವೆ.

ಒಂದು ವೇಳೆ ಫಲಿತಾಂಶವು ತನ್ನ ವಿರುದ್ಧ ಬಂದರೆ, ಟ್ರಂಪ್ ಅದನ್ನು ಒಪ್ಪಿಕೊಳ್ಳಲಾರರು ಹಾಗೂ ದೇಶದಲ್ಲಿ ಅನಿರ್ದಿಷ್ಟಾವಧಿ ಕಾಲ ಅನಿಶ್ಚಿತತೆ ನೆಲೆಸಬಹುದು ಎನ್ನುವ ಭೀತಿ ಅಮೆರಿಕನ್ನರನ್ನು ಕಾಡುತ್ತಿದೆ.

ಈ ಚುನಾವಣೆಯು ಅಧ್ಯಕ್ಷರ ಜೊತೆಗೆ, ಉಪಾಧ್ಯಕ್ಷರನ್ನೂ ಆರಿಸುತ್ತಿದೆ. ಟ್ರಂಪ್‌ರ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಸ್ಪರ್ಧಿಸಿದರೆ, ಬೈಡನ್‌ರ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಸ್ಪರ್ಧಿಸುತ್ತಿದ್ದಾರೆ.

ನ್ಯೂಯಾರ್ಕ್, ನ್ಯೂಜರ್ಸಿ, ವರ್ಜೀನಿಯ, ಕನೆಕ್ಟಿಕಟ್ ಮತ್ತು ಮೇನ್ ಮುಂತಾದ ಪೂರ್ವದ ರಾಜ್ಯಗಳಲ್ಲಿ ಸ್ಥಳೀಯ ಸಮಯ ಬೆಳಗ್ಗೆ 6 ಗಂಟೆಗೆ ಮತದಾನ ಆರಂಭವಾಗಿದೆ.

ಫಲಿತಾಂಶ ಯಾವಾಗ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಯಾವಾಗ ಪ್ರಕಟಗೊಳ್ಳುತ್ತದೆ ಎಂಬ ಬಗ್ಗೆ ಅನಿಶ್ಚಿತತೆಯಿದೆ. ಈ ಬಾರಿ ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಅಂಚೆ ಮತಪತ್ರಗಳು ಚಲಾವಣೆಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಲೆಕ್ಕಮಾಡಲು ಹೆಚ್ಚಿನ ಸಮಯ ಬೇಕಾಗಬಹುದು.

ಆದಾಗ್ಯೂ, ಯಾರು ಬಹುಮತವನ್ನು ಪಡೆಯುತ್ತಾರೆ ಎಂಬ ಬಗ್ಗೆ ಸ್ಪಷ್ಟ ಸೂಚನೆ ಚುನಾವಣೆಯ ರಾತ್ರಿಯೇ (ಭಾರತದಲ್ಲಿ ಬುಧವಾರ ಬೆಳಗ್ಗೆ) ಸಿಗುವ ಸಾಧ್ಯತೆಯೂ ಇದೆ ಎಂದೂ ವರದಿಗಳು ಹೇಳುತ್ತವೆ.

ಮಂಗಳವಾರ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 6:30) ಅಮೆರಿಕದಾದ್ಯಂತ ಮತದಾನ ಮುಕ್ತಾಯಗೊಳ್ಳುತ್ತದೆ. ಆ ಬಳಿಕವಷ್ಟೇ ಮತ ಎಣಿಕೆ ಕಾರ್ಯ ಆರಂಭಗೊಳ್ಳುತ್ತದೆ.

10 ಕೋಟಿ ಅಂಚೆ ಮತದಾನ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 10 ಕೋಟಿ ಅಮೆರಿಕನ್ನರು ಈಗಾಗಲೇ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಇದೊಂದು ದಾಖಲೆಯಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಈ ಬಾರಿ ಅವಕಾಶ ಮಾಡಿಕೊಡಲಾಗಿದೆ.

ಉಳಿದ 6 ಕೋಟಿ ಮತದಾರರು ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಬಹುದಾಗಿದೆ.

ದೇಶದಲ್ಲಿ 23.9 ಕೋಟಿ ಅರ್ಹ ಮತದಾರರಿದ್ದಾರೆ.

ಮೊದಲ ಫಲಿತಾಂಶ: ಎಲ್ಲ 5 ಮತ ಬೈಡನ್‌ಗೆ!

ದೇಶದಲ್ಲೇ ಮೊದಲ ಮತಗಟ್ಟೆಗಳು ತೆರೆದಿದ್ದು ನ್ಯೂಹ್ಯಾಂಪ್‌ಶೈರ್ ರಾಜ್ಯದ ಗ್ರಾಮಗಳಾದ ಡಿಕ್ಸ್‌ವಿಲ್ ನಾಚ್ ಮತ್ತು ಮಿಲ್ಸ್‌ಫೀಲ್ಡ್‌ಗಳಲ್ಲಿ. ಅಲ್ಲಿ ಸೋಮವಾರ ಮಧ್ಯರಾತ್ರಿಯೇ ಮತದಾನ ಆರಂಭವಾಯಿತು.

ಡಿಕ್ಸ್‌ವಿಲ್ ನಾಚ್‌ನಲ್ಲಿ 12 ನಿವಾಸಿಗಳಿದ್ದು, ಅವರ ಪೈಕಿ 5 ಮಂದಿ ಮತ ಚಲಾಯಿಸಿದ್ದಾರೆ. ಅವರೆಲ್ಲರೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ಗೆ ಮತ ಹಾಕಿದ್ದಾರೆ.

ಅಲ್ಲಿ ಮತ ಚಲಾವಣೆ ಮತ್ತು ಎಣಿಕೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಬೈಡನ್ 5 ಮತಗಳನ್ನು ಗಳಿಸಿದರೆ, ಅಧ್ಯಕ್ಷ ಟ್ರಂಪ್ ಖಾತೆ ತೆರೆಯಲು ವಿಫಲರಾದರು.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...