ಭಟ್ಕಳ ಪುರಸಭಾ ಕಚೇರಿಯ ಉರ್ದು ಫಲಕ ತೆರವು; ನಾವು ಕನ್ನಡ ವಿರೋಧಿ ಅಲ್ಲ ಎಂದ ತಂಜೀಮ್

Source: S O News | By I.G. Bhatkali | Published on 1st July 2022, 12:18 PM | Coastal News |

ಭಟ್ಕಳ: ಜಿಲ್ಲಾಧಿಕಾರಿಗಳ ಆದೇಶದಂತೆ ಭಟ್ಕಳ ಪುರಸಭಾ ಕಚೇರಿಯ ಮುಂದೆ ಕನ್ನಡ, ಇಂಗ್ಲೀಷ್ ಭಾಷೆಯೊಂದಿಗೆ ಅಳವಡಿಸಲಾಗಿದ್ದ ಉರ್ದು ಫಲಕವನ್ನು ಗುರುವಾರ ಮಧ್ಯಾಹ್ನ ತೆರವುಗೊಳಿಸಲಾಯಿತು.

ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಪುರಸಭಾ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಉರ್ದು ತೆರವು ನಿರ್ಣಯ ಪ್ರಕಟಿಸುತ್ತಿದ್ದಂತೆಯೇ, ಪುರಸಭಾ ಮುಖ್ಯಾಧಿಕಾರಿ ಸುರೇಶ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ತೆರವು ಕಾರ್ಯ ಕೈಗೊಂಡರು. 

ಪೌರಾಡಳಿತ ಸಚಿವಾಲಯದ ಆದೇಶದಂತೆ ಕ್ರಮ:


ಭಟ್ಕಳ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು, ಮಜ್ಲಿಸೇ ಇಸ್ಲಾ ವ ತಂಜೀಮ್ ಮುಖಂಡರು, ಸಂಘ ಪರಿವಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಗುರುವಾರ ಮಧ್ಯಾಹ್ನದವರೆಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪ್ರಚಲಿತದಲ್ಲಿರುವ ಕರ್ನಾಟಕ ಸರಕಾರ ಪೌರಾಡಳಿತ ಸಚಿವಾಲಯ ನಿರ್ದೇಶನದ ಪ್ರಕಾರ ಸರಕಾರಿ ಕಚೇರಿಯ ಮುಂದೆ ಕನ್ನಡ ಹಾಗೂ ಇಂಗ್ಲೀಷ್ ನಾಮಫಲಕ ಬಳಸಲಷ್ಟೇ ಅವಕಾಶ ಇದ್ದು, ಭಟ್ಕಳ ಪುರಸಭಾ ಕಚೇರಿಯ ಮುಂದೆ ಅಳವಡಿಸಲಾದ ಉರ್ದು ಭಾಷಾ ಫಲಕವನ್ನು ತೆರವುಗೊಳಿಸಲು ಆದೇಶಿಸಲಾಗಿದೆ ಎಂದು ಹೇಳಿದರು.

ಕಳೆದ 2018 ಫೆಬ್ರುವರಿ 22ರಂದು ಕನ್ನಡ, ಇಂಗ್ಲೀಷ್‍ನೊಂದಿಗೆ ಸರಕಾರಿ ಕಚೇರಿಯಲ್ಲಿ ಬೇರೆ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಪೌರಾಡಳಿತ ಸಚಿವಾಲಯ ನೀಡಿದ ಆದೇಶ ಹಾಗೂ ಪುರಸಭೆಯ ಸಭೆಯಲ್ಲಿ ಉರ್ದು ಅಳವಡಿಕೆಗೆ ಸಂಬಂಧಪಟ್ಟಂತೆ ಯಾವುದೇ ಠರಾವು ಮಾಡದಿರುವುದರ ಬಗ್ಗೆ ಮುಖ್ಯಾಧಿಕಾರಿಗಳು ನೀಡಿರುವ ಮಾಹಿತಿಯನ್ನು ಆಧರಿಸಿ ಭಟ್ಕಳ ಪುರಸಭೆಯ ನಾಮಫಲಕದ ವಿಷಯದಲ್ಲಿ ಜಿಲ್ಲಾಡಳಿತ ಈ ಕ್ರಮವನ್ನು ಕೈಗೊಂಡಿದೆ. ಇದು ಸರಕಾರದ ಆಡಳಿತದ ವಿಷಯಕ್ಕೆ ಸಂಬಂಧ ಪಟ್ಟದ್ದಾಗಿದ್ದು, ಯಾವುದೇ ಒತ್ತಡಕ್ಕೆ ಸಿಲುಕಿ ನಿರ್ಣಯಿಸಿದ್ದಲ್ಲ.

ಪುರಸಭಾ ಮುಖ್ಯಾಧಿಕಾರಿಗಳು ಉರ್ದು ಭಾಷಾ ಬಳಕೆಯ ವಿಷಯದಲ್ಲಿ ಸ್ಪಷ್ಟೀಕರಣ ನೀಡುವಂತೆ ಕೇಳಿಕೊಂಡಿದ್ದು, ಜಿಲ್ಲಾಧಿಕಾರಿಯಾಗಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ಉತ್ತರಕನ್ನಡ ಜಿಲ್ಲೆ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದು, ಕಾನೂನು ಪಾಲನೆಗೆ ಎಲ್ಲರೂ ಸಹಕರಿಸಬೇಕು. ಉರ್ದು ಅಥವಾ ಬೇರೆ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಯಾರಿಗಾದರೂ ಅನ್ನಿಸಿದ್ದಲ್ಲಿ ಜಿಲ್ಲಾಡಳಿತದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ, ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ, ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ, ತಹಸೀಲ್ದಾರ ಸುಮಂತ್ ಮೊದಲಾದವರು ಉಪಸ್ಥಿತರಿದ್ದರು. 

ನಾವು ಕನ್ನಡ ವಿರೋಧಿ ಅಲ್ಲ ಎಂದ ತಂಜೀಮ್:
ದುಬೈನಲ್ಲಿ ಕನ್ನಡ ಸಂಘವನ್ನು ಕಟ್ಟಿದವರು ನಾವು, ಭಟ್ಕಳದ ಮುಸ್ಲೀಮರು ಯಾವತ್ತೂ ಕನ್ನಡ ವಿರೋಧಿಯಲ್ಲ, ಭಟ್ಕಳ ಪುರಸಭೆಯಲ್ಲಿ ಕನ್ನಡ, ಇಂಗ್ಲೀಷ್ ನಾಮಫಲಕದೊಂದಿಗೆ ಉರ್ದು ಫಲಕ ಅಳವಡಿಸಿರುವುದಕ್ಕೆ ನಮ್ಮನ್ನು ಕನ್ನಡ ವಿರೋಧಿ ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಮುಖಂಡರು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳೊಂದಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಜೀಮ್ ಅಧ್ಯಕ್ಷ ಎಸ್.ಎಮ್.ಫರ್ವೇಜ್, ಇನಾಯಿತುಲ್ಲಾ ಶಾಬಂದ್ರಿ ಮತ್ತಿತರರು, ಭಟ್ಕಳ ಪುರಸಭೆಯಲ್ಲಿ ಉರ್ದು ಫಲಕ ತೆರವು ಪ್ರಯತ್ನ ಆರಂಭವಾಗಿದ್ದೇ ಬೇರೆ ಕಾರಣದಿಂದ, ಆದರೆ ಆ ವಿಷಯ ಗೊತ್ತಿಲ್ಲದೇ ಕೆಲವರು ಫಲಕ ತೆರವಿಗೆ ಕೈ ಜೋಡಿಸಿದರು.

ಈಗ ಪುರಸಭಾ ಠರಾವು ಇಲ್ಲದ ಕಾರಣ ನೀಡಿ ಜಿಲ್ಲಾಧಿಕಾರಿಗಳು ಉರ್ದು ತೆರವಿಗೆ ಆದೇಶ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಮೀನುಮಾರುಕಟ್ಟೆ ಸ್ಥಳಾಂತರ, ಹೆದ್ದಾರಿ ಅತಿಕ್ರಮಣ ತೆರವು, ಅನಧಿಕೃತ ಶೆಡ್‍ಗಳ ತೆರವುಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಭಟ್ಕಳ ಪುರಸಭೆಯ ಮುಂದಿನ ನಿರ್ಣಯ ಏನು ಎನ್ನುವುದನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು. 

ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಕಾನೂನು ಹೋರಾಟ:


ಉರ್ದು ನಾಮಫಲಕ ತೆರವುಗೊಳಿಸುತ್ತಿದ್ದಂತೆಯೇ ಗುರುವಾರ ಸಂಜೆ ಸಭೆ ನಡೆಸಿರುವ ಪುರಸಭಾ ಸದಸ್ಯರು, ಜಲ್ಲಾಧಿಕಾರಿಗಳ ಆದೇಶದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಫರ್ವೇಜ್ ಮತ್ತಿತರರು, ಜಿಲ್ಲಾಧಿಕಾರಿಗಳು ನಮೂದಿಸಿರುವ ಕಲಬುರಗಿ ಪ್ರಕರಣದಲ್ಲಿ ಇನ್ನೂ ಉರ್ದು ಫಲಕವನ್ನು ತೆರವುಗೊಳಿಸಿಲ್ಲ.

ಭಟ್ಕಳಕ್ಕೆ ಮಾತ್ರ ಪೌರಾಡಳಿತ ಇಲಾಖೆಯ ಆದೇಶ ಅನ್ವಯಿಸುವುದು ತಾರತಮ್ಯದ ಪರಮಾವಧಿಯಾಗಿದೆ. ಇದರ ವಿರುದ್ಧ ಸರಕಾರ ಮಟ್ಟದಲ್ಲಿ ಅಥವಾ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ನಾಮನಿರ್ದೇಶನ ಸದಸ್ಯ ಶ್ರೀಕಾಂತ ಮತ್ತಿತರರು ಜಿಲ್ಲಾಧಿಕಾರಿಗಳ ಆದೇಶವನ್ನು ಸ್ವಾಗತಿಸಿ, ಕನ್ನಡ, ಇಂಗ್ಲೀಷ್ ಬಿಟ್ಟು ಬೇರೆ ಭಾಷೆಯ ಫಲಕ ಬಳಸಲು ಅವಕಾಶ ನೀಡದಂತೆ ಮನವಿ ಮಾಡಿದರು. ಕಾಂಗ್ರೆಸ್ ಪುರಸಭಾ ಸದಸ್ಯೆ ಪ್ರಿಯಾ ಫರ್ನಾಂಡೀಸ್ ಸಹ ಬಿಜೆಪಿ ಸದಸ್ಯರ ಮನವಿಯನ್ನು ಬೆಂಬಲಿಸಿದ್ದು ವಿಶೇಷವಾಗಿತ್ತು.

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...