ಗಂಗಾ ನದಿಯಲಿ ಇನ್ನಷ್ಟು ಶವಗಳು ಪತ್ತೆ, ಕೊರೋನ ಸಹಿತ ಇನ್ನಿತರ ಸಾಂಕ್ರಾಮಿಕ ಸೋಂಕು ಹರಡುವ ಭೀತಿ

Source: VB | By JD Bhatkali | Published on 12th May 2021, 4:12 PM | National News |

ಲಕ್ನೋ: ಉತ್ತರಪ್ರದೇಶದ ಘಾಝಿಪುರದ ಗಂಗಾ ನದಿ ತೀರಕ್ಕೆ ಮಂಗಳವಾರ ಹಲವು ಮೃತದೇಹಗಳು ತೇಲಿ ಬಂದಿವೆ. ಸೋಮವಾರ 100ಕ್ಕೂ ಅಧಿಕ ಮೃತದೇಹಗಳು ತೇಲಿ ಬಂದ ಬಿಹಾರದ ಬಾಕ್ಸರ್ ನಿಂದ 55 ಕಿ.ಮೀ. ದೂರದಲ್ಲಿ ಈ ಮೃತದೇಹಗಳು ಕಂಡು ಬಂದಿದ್ದವು. ಇದರಿಂದಾಗಿ ಜನರಲ್ಲಿ ಕೊರೋನ ಸಹಿತ ಇನ್ನಿತರ ಸಾಂಕ್ರಾಮಿಕ ಸೋಂಕು ಹರಡುವ ಭೀತಿ ಎದುರಾಗಿದೆ. ನದಿ ದಡ ಸೇರಿರುವ ಕೆಲವು ಮೃತದೇಹಗಳನ್ನು ನಾಯಿಗಳು ಎಳೆದಾಡುತ್ತಿರುವ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಕೊರೋನ ಸೋಂಕು ಉತ್ತರಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಹರಡುತ್ತಿದ್ದು, ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹಗಳು ಕೋವಿಡ್ ಸೋಂಕಿನಿಂದ ಮೃತಪಟ್ಟವರದ್ದೆಂದು ಶಂಕಿಸಲಾಗಿದೆ. ಗ್ರಾಮೀಣ ಪ್ರದೇಶದ ಚಿತಾಗಾರಗಳಲ್ಲಿ ಯಾವುದೇ ಕೋವಿಡ್ ಶಿಷ್ಟಾಚಾರ ಇಲ್ಲದೇ ಇರುವುದರಿಂದ ಸೋಂಕು ಹರಡುವ ಭೀತಿಯಿಂದ ಕುಟುಂಬಿಕರು ಮೃತದೇಹವನ್ನು ನದಿಯಲ್ಲಿ ತೇಲಿಬಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೃತದೇಹಗಳಿಂದ ನದಿ ನೀರು ಮಲಿನಗೊಂಡಿದ್ದು, ಕೊರೋನ ಸೋಂಕು

ಆ್ಯಂಬುಲೆನ್ಸ್‌ನಿಂದ ಮೃತದೇಹಗಳನ್ನು ಎಸೆಯುತ್ತಿರುವ ವೀಡಿಯೊ ವೈರಲ್

ಪಾಟ್ನಾ: ಉತ್ತರಪ್ರದೇಶ ಹಾಗೂ ಬಿಹಾರ ನಡುವಿನ ಗಡಿಯ ಸಮೀಪದ ನದಿಯ ಸೇತುವೆ ಅಡಿಯಲ್ಲಿ ಮತ್ತಷ್ಟು ಮೃತದೇಹಗಳು ತೇಲುತ್ತಿರುವುದು ಮಂಗಳವಾರ ಕಂಡು ಬಂದಿದ್ದು, ಈ ಮೃತ ದೇಹಗಳನ್ನು ಆ್ಯಂಬುಲೆನ್ಸ್‌ಗಳು ನದಿಗೆ ಎಸೆಯುತ್ತಿರುವ ವೀಡಿಯೊ ಕೂಡ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಸೇತುವೆಯ ಮೇಲಿನಿಂದ ಆ್ಯಂಬುಲೆನ್ಸ್ ಚಾಲಕರು ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಶೇರ್ ಆಗಿದ್ದು, ಕೊರೋನದಿಂದ ಮೃತಪಟ್ಟವರು ಹಾಗೂ ಅವರ ಕುಟುಂಬದವರ ಬಗ್ಗೆ ಕಾಳಜಿ ಇಲ್ಲದಿರುವ ಬಗ್ಗೆ ಪೋಸ್ಟ್ಗಳು ಕಳವಳ ವ್ಯಕ್ತಪಡಿಸಿವೆ.

ಉತ್ತರಪ್ರದೇಶದ ಬಲ್ಲಿಯಾದ ಗಡಿಯ ಬಿಹಾರ್‌ನ ಸರನ್ ಸಮೀಪ ಇರುವ ಜೈಪ್ರಭಾ ಸೇತು ಎಂದು ಕರೆಯಲಾಗುವ ಸೇತುವೆಯಿಂದ ಆ್ಯಂಬುಲೆನ್ಸ್ ಚಾಲಕರು ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ಎಸೆದಿದ್ದಾರೆ ಎಂದು ಬಿಹಾರ ಬಿಜೆಪಿಯ ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲ್ ಅವರು ಆರೋಪಿಸಿದ್ದಾರೆ.

ಅಲ್ಲಿ ಮೃತದೇಹಗಳನ್ನು ಎಸೆಯದಂತೆ ಆ್ಯಂಬುಲೆನ್ಸ್ ಚಾಲಕರಿಗೆ ಸೂಚನೆ ನೀಡುವಂತೆ ಬಿಹಾರದ ಸರಣ್ ಜಿಲ್ಲಾಡಳಿತವನ್ನು ಸಿಗ್ರಿವಾಲ್ ಆಗ್ರಹಿಸಿದ್ದಾರೆ.

ಕೊರೋನ ಸೋಂಕಿತರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಬಗ್ಗೆ ಎರಡೂ ರಾಜ್ಯಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.

ಈ ನಡುವೆ ಉತ್ತರಪ್ರದೇಶ ಹಾಗೂ ಬಿಹಾರ್ ಎರಡೂ ರಾಜ್ಯಗಳು ತಪ್ಪೆಸಗುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. “ಉತ್ತರಪ್ರದೇಶ ಹಾಗೂ ಬಿಹಾರದ ಆ್ಯಂಬುಲೆನ್ಸ್ ಚಾಲಕರು ಮೃತದೇಹಗಳನ್ನು ನದಿಗೆ ಎಸೆಯುತ್ತಿದ್ದಾರೆ" ಎಂದು ಇಲ್ಲಿನ ನಿವಾಸಿ ಅರವಿಂದ ಸಿಂಗ್ ಹೇಳಿದ್ದಾರೆ.

ತೀವ್ರವಾಗಿ ಹರಡುವ ಭೀತಿಯ ನಡುವೆ ಸ್ಥಳೀಯಾಡಳಿತ, "ಈ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಹೇಳಿದೆ.

“ನಾವು ಮಾಹಿತಿ ಪಡೆದುಕೊಂಡಿದ್ದೇವೆ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತನಿಖೆ ನಡೆಯುತ್ತಿದೆ. ಮೃತದೇಹಗಳು ಎಲ್ಲಿಂದ ತೇಲಿ ಬಂದವು ಎಂದು ಶೋಧಿಸುತ್ತಿದ್ದೇವೆ" ಎಂದು ಗಾಝಿಪುರದ ಜಿಲ್ಲಾ ದಂಡಾಧಿಕಾರಿ ಎಂ.ಪಿ. ಸಿಂಗ್ ಹೇಳಿದ್ದಾರೆ.

“ಈ ವಿಷಯದ ಕುರಿತು ನಾವು ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ. ಆದರೆ, ಅವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಈ ಪರಿಸ್ಥಿತಿ ಮುಂದುವರಿದರೆ, ನಾವು ಕೂಡ ಕೊರೋನ ಸೋಂಕಿಗೆ ತುತ್ತಾಗುವ ಭೀತಿ ಎದುರಾಗಿದೆ" ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

ಬಾಕ್ಸರ್ ಘಟನೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ಸಂಬಂಧಿತ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ನಿಮಗೆ ಸೆಂಟ್ರಲ್ ವಿಸ್ತಾ ಮಾತ್ರ ಕಾಣುತ್ತಿದೆ ಮೋದಿಗೆ ರಾಹುಲ್ ತರಾಟೆ

ಹೊಸದಿಲ್ಲಿ: ನದಿಯಲ್ಲಿ ತೇಲಿ ಬರುತ್ತಿರುವ ಮೃತದೇಹಗಳು ಹಾಗೂ ರೋಗಿಗಳನು ಬಸವಳಿಯುವಂತೆ ಮಾಡುವ ಸರತಿ ಸಾಲುಗಳ ಬಗ್ಗೆ ಮಂಗಳವಾರ ತನ್ನ ಟ್ವಿಟ್‌ನಲ್ಲಿ ಬೆಳಕು ಬೀರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೊರೋನ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ನಡುವೆ ಸೆಂಟ್ರಲ್ ವಿಸ್ತಾ ಯೋಜನೆಯ ಕಾಮಗಾರಿಯನ್ನು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನದಿಯಲ್ಲಿ ಅಸಂಖ್ಯಾತ ಮೃತದೇಹಗಳು ತೇಲಿ ಬರುತ್ತಿವೆ. ಆಸ್ಪತ್ರೆಗಳ ಎದುರು ಮೈಲುಗಟ್ಟಲೆ ಸರತಿ ಸಾಲಿದೆ. ಬದುಕುವ ಹಕ್ಕಿನ ಭದ್ರತೆ ಇಲ್ಲದಾಗಿದೆ ! ಪ್ರಧಾನಿ ಅವರು ತನ್ನ ಪಿಂಕ್ ಕನ್ನಡಕವನ್ನು ತೆಗೆಯದೇ ಇದ್ದರೆ, ಸೆಂಟ್ರಲ್ ವಿಸ್ತಾ ಹೊರತುಪಡಿಸಿ ಬೇರೇನೂ ಕಾಣಿಸದು'' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟೀಟ್ ಮಾಡಿದ್ದಾರೆ.
 

Read These Next

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...