ಲಾಕ್‍ಡೌನ್ 2.0 ಮುಕ್ತಾಯಗೊಳ್ಳುವವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ : ಜೆ ಸಿ ಮಾಧುಸ್ವಾಮಿ

Source: sonews | By Staff Correspondent | Published on 30th April 2020, 9:58 PM | State News |

ಬೆಂಗಳೂರು: ಮೇ 3 ರ ವರೆಗೆ ಅಂದರೆ ಲಾಕ್‍ಡೌನ್ 2.0 ಅವಧಿ ಮುಕ್ತಾಯವಾಗುವವರೆಗೆ ಮದ್ಯ ಮಾರಾಟ ಮಾಡಲು  ಹಾಗೂ ಕೇಶ ಶೃಂಗಾರಕ್ಕೆ ಸೆಲೂನ್‍ಗಳನ್ನು ತೆರೆಯಲು ಅವಕಾಶ ಇರುವುದಿಲ್ಲ. ಅಲ್ಲದೆ, ರಾಜ್ಯದಲ್ಲಿ ಲಾಕ್‍ಡೌನ್ ಮುಂದುವರೆಸುವುದು ಅಥವಾ ಸಡಿಲಗೊಳಿಸುವುದು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರ ಹಾಗೂ ಸನ್ನಿಹಿತದಲ್ಲಿಯೇ ಹೊರಡಿಸುವ ಮಾರ್ಗಸೂಚಿಗಳನ್ನು ಅವಲಂಬಿಸಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಇಲ್ಲಿ ಇಂದು ಪ್ರಕಟಿಸಿದರು.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಕೋವಿಡ್ – 19 ಹಿನ್ನೆಲೆಯಲ್ಲಿ ಅಂತಾರಾಜ್ಯ, ಅಂತರ ಜಿಲ್ಲೆ ಸಂಚಾರಕ್ಕೆ  ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಒಂದು ನೀತಿಯನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ. ಅದರಂತೆ ಒಮ್ಮೆಗೆ ಸೀಮಿತವಾಗಿ ( ಒಂದು ಬಾರಿಗೆ ಮಾತ್ರ ) ಅಂತಾರಾಜ್ಯ ಹಾಗೂ ಅಂತರ ಜಿಲ್ಲಾ ಸಂಚಾರಕ್ಕೆ ಅನುವುಮಾಡಿಕೊಡಲು ಸಂಪುಟ ನಿರ್ಣಯಿಸಿದೆ. ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಉಳಿದು ಕೊಂಡಿರುವ ಹಾಗೂ ತಮ್ಮ ಮೂಲ ಸ್ಥಳಗಳಿಗೆ ತೆರಳ ಬಯಸುವ ಹೊರ ರಾಜ್ಯದ ಜನರಿಗೆ ಅನುಮತಿ ನೀಡಲು ಸಂಪುಟ ನಿರ್ಧರಿಸಿದೆ. ಆದರೆ, ಪ್ರಯಾಣದ ವೆಚ್ಚವನ್ನು ಸಂಬಂಧಿಸಿದವರೇ ಭರಿಸಬೇಕಾಗುತ್ತದೆ. ಹೊರ ರಾಜ್ಯಕ್ಕೆ ಹೋಗುವ ಮುನ್ನ ಅವರು ಆರೋಗ್ಯ ತಪಾಸಣೆಗೆ ಒಳಗಾಗುವುದು ಕಡ್ಡಾಯ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿನ ಧಾರಕ ಅಥವಾ ನಿರ್ಬಂಧಿತ ವಲಯ ( ಕಂಟೈನ್‍ಮೆಂಟ್ ಜೋನ್ ) ಹೊರತು ಪಡಿಸಿ ಉಳಿದೆಡೆಗಳಲ್ಲಿ ಕನಿಷ್ಠ ನೌಕರರೊಂದಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಲು ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯಕ್ಕೆ ಸಂಬಂಧಿಸಿದಂತೆ ರೂಪಿಸಿರುವ ನೂತನ ಮರಳು ನೀತಿಗೆ ಸಂಪುಟ ಅನುಮೋದನೆ ನೀಡಿದೆ. ಈವರೆಗೂ, ವಿಶೇಷವಾಗಿ ನದಿ ಪಾತ್ರದಲ್ಲಿ ಕೆಲವು ಬ್ಲಾಕ್ಸ್ ಪತ್ತೆ ಮಾಡಿ ಹರಾಜು ಮಾಡಲಾಗುತ್ತಿತ್ತು. ಆದರೆ ಈ ಮರಳು ನೀತಿಯಲ್ಲಿ ಕೆಲವು ಕಚ್ಚಾ ಪ್ರದೇಶಗಳಲ್ಲಿ ಕೆರೆ ಅಥವಾ ಗ್ರಾಮೀಣ ಪ್ರದೇಶದ ಹಳ್ಳ ಕೊಳ್ಳಗಳಲ್ಲಿ ಮರಳು ಇದ್ದರೆ ಅದನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯವರೇ ಗುರುತಿಸಿ ಸ್ಥಳೀಯವಾಗಿ ಯಾರಿಗೆ ಮರಳು ಅವಶ್ಯಕತೆ ಇದೆಯೋ ಅವರಿಗೆ ಮೆಟ್ರಿಕ್ ಟನ್‍ಗೆ ಅಂದಾಜು 700 ರೂ ನಂತೆ ನಿಗದಿಪಡಿಸಿ ಜನತಾ ಮನೆ ನಿಮಾಣ ಅಥವಾ ಸಣ್ಣ-ಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಲು ನೀಡಬಹುದು ಎಂದು ಸಂಪುಟ ತೀರ್ಮಾನಿಸಿದೆ.

ಇದನ್ನು ಆಯಾ ತಾಲ್ಲೂಕು ದಂಡಾಧಿಕಾರಿಗಳು ಮತ್ತು ಸಹಾಯಕ ಕಾರ್ಯಪಾಲಕ  ಅಭಿಯಂತರರು ಸಮನ್ವಯ ಮಾಡುವ ಮೂಲಕ ವಿತರಿಸಲುನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮರಳು ದಂಧೆಯನ್ನು ತಡೆಗಟ್ಟಲು ಅನುಕೂಲವಾಗಲಿದೆ. ಅಲ್ಲದೆ, ರಾಜ್ಯ ಸರ್ಕಾರಕ್ಕೆ 60 ಕೋಟಿ ರೂ ನಿಂದ 70 ಕೋಟಿ ರೂ ರಾಜಸ್ವ ನಿರೀಕ್ಷಿಸಲಾಗಿದೆ ಎಂದು ಅವರು ವಿವರಿಸಿದೆರು.

ಕರ್ನಾಟಕ ನಾಗರೀಕ ಸೇವಾ ನಿಯಂತ್ರಣ ನಿಯಮಗಳಲ್ಲಿ ಶಿಕ್ಷೆಯ ಪ್ರ-ವರ್ಗ ( ಪೆನಾಲ್ಟಿ ಕ್ಲಾಜ್ ) ಇತ್ತು ಅದನ್ನು ವರ್ಗೀಕರಣ ( ಕ್ಯಾಟಗರೈಜ್ ) ಮಾಡಿರಲಿಲ್ಲ. ಶಿಕ್ಷೆ ಸಾಬೀತಾದಲ್ಲಿ ಯಾರು ಯಾವ ದಂಡನೆಗೆ ಗುರಿಯಾಗಬೇಕು ಎಂಬ ಬಗ್ಗೆ ಕರ್ನಾಟಕ ನಾಗರೀಕ ಸೇವಾ ವರ್ಗೀಕರಣದಲ್ಲಿ, ಶಿಕ್ಷೆ ಸಾಬೀತಾದಲ್ಲಿ ಯಾವ ವರ್ಗೀಕರಣಕ್ಕೆ ಯಾವ ಶಿಕ್ಷೆ ಅಥವಾ ಯಾವ ದಂಡನೆಯನ್ನು ವಿಧಿಸಬಹುದು ಎಂಬುದನ್ನು ನಿರ್ಧರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಶಿಕ್ಷಣ ಇಲಾಖೆಯಲ್ಲಿ ನಾಲ್ಕು ಅಧಿಕಾರಿಗಳು ಲೆಕ್ಕ ಶೀರ್ಷಿಕೆ ( ಹೆಡ್ ಆಫ್ ಅಕೌಂಟ್ ) ಬದಲಾವಣೆ ಮಾಡಿ ಸಂಬಳ ಡ್ರಾ ಮಾಡಿದ್ದಾರೆ ಎಂಬ ಬಗ್ಗೆ ಲೋಕಾಯುಕ್ತ ತನಿಖೆ ಆಗಿತ್ತು. ಅದನ್ನು ಮತ್ತೊಮ್ಮೆ ಲೋಕಾಯುಕ್ತ ತನಿಖೆಗೆ ಆದೇಶಿಸಲು ಒತ್ತಾಯ ಬರುತ್ತಿತ್ತು. ಅದಕ್ಕೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಠಿಯಿಂದ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸದೆ ಲೆಕ್ಕ ಶೀರ್ಷಿಕೆ ಬದಲಾವಣೆ ಮಾಡಿ ಸಂಬಳ ಡ್ರಾ ಮಾಡಲಾಗಿದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ವಿವರಿಸಿದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...