ಮುರುಡೇಶ್ವರ ಬಸ್ತಿಯಲ್ಲಿ ಅಂಡರ್‍ಪಾಸ್ ನಿರ್ಮಾಣಕ್ಕೆ ಪಟ್ಟು; ಎಸಿ ಮಮತಾದೇವಿ ಭೇಟಿ; ಬೇಡಿಕೆ ಈಡೇರಿಸುವ ಭರವಸೆ

Source: S O News service | By I.G. Bhatkali | Published on 6th May 2021, 1:49 PM | Coastal News |

ಭಟ್ಕಳ: ತಾಲೂಕಿನ ಮುರುಡೇಶ್ವರ ಬಸ್ತಿಯಲ್ಲಿ ಅಂಡರ್‍ಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಮುಂದುವರೆಸಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದು, ಬುಧವಾರ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡರು, ಕೈಕಿಣಿ ಗ್ರಾಮ ಪಂಚಾಯತ ಪ್ರದೇಶವು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಂಚಿ ಹೋಗಿದೆ. ನಿತ್ಯದ ಕೆಲಸ ಕಾರ್ಯಗಳಿಗಾಗಿ ಹೆದ್ದಾರಿಯನ್ನು ದಾಟುವುದು ಅನಿವಾರ್ಯವಾಗಿದೆ. ಕೃಷಿ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನವೂ ಅಲ್ಲಿಂದ ಇಲ್ಲಿಗೆ ಹೋಗಬೇಕಾಗಿದೆ. ಊರಿನ ಸ್ಮಶಾನವು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಇದ್ದು, ಅಂಡರ್ ಪಾಸ್ ನಿರ್ಮಿಸದೇ ಇದ್ದರೆ ಹೆದ್ದಾರಿ ದಾಟುವುದೇ ಕಷ್ಟಕರವಾಗಲಿದೆ. ಅಲ್ಲದೇ ಹೆದ್ದಾರಿಯ ಪೂರ್ವ ಭಾಗದಲ್ಲಿ ಉತ್ತರಕೊಪ್ಪ ಗ್ರಾಮ ಇದ್ದು, ಪ್ರತಿ ದಿನ ನೂರಾರು ಜನರು ಹೆದ್ದಾರಿ ದಾಟಿಕೊಂಡೇ ಕೈಕಿಣಿ, ಶಿರಾಲಿ, ಮುರುಡೇಶ್ವರ, ಭಟ್ಕಳಕ್ಕೆ ಆಗಮಿಸುತ್ತಾರೆ. ಇಂತಹ ಪರಿಸ್ಥಿತಿಯನ್ನು ಮನಗಂಡು ಈ ಹಿಂದೆಯೇ ಸ್ಥಳೀಯ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ವತಿಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಅಂಡರ್ ಪಾಸ್ ನಿರ್ಮಾಣದ ಸಂಬಂಧ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಜನರ ಬೇಡಿಕೆಯನ್ನು ನಿರ್ಲಕ್ಷಿಸಿ ಐಆರ್‍ಬಿ ಕಂಪನಿಯವರು ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಮುಂದುವರೆಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಇಲ್ಲಿನ ಜನರು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು. ಅಲ್ಲದೇ ಹೆದ್ದಾರಿಯ ಅಕ್ಕಪಕ್ಕದಲ್ಲಿ ಸಮರ್ಪಕ ಚರಂಡಿ ಸಂಪರ್ಕವು ಇಲ್ಲದಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ, ಬಸ್ತಿ, ಮೂಡಭಟ್ಕಳ ಸೇರಿದಂತೆ ಅಂಡರ್‍ಪಾಸ್ ಅಗತ್ಯ ಇರುವ ಪ್ರದೇಶಗಳನ್ನು ಜಿಲ್ಲಾಧಿಕಾರಿಗಳು ಗುರುತಿಸಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ. ಮತ್ತೊಮ್ಮೆ ಸದರಿ ಕಾಮಗಾರಿಗಳ ಅಗತ್ಯವನ್ನು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣದ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ ಎಸ್. ರವಿಚಂದ್ರ, ಸಿಪಿಐ ದಿವಾಕರ, ಐಆರ್‍ಬಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಮೋಹನದಾಸ, ಐಆರ್‍ಬಿ ಯೋಜನಾ ವ್ಯವಸ್ಥಾಪಕ ಪ್ರಮೋದ, ಸ್ಥಳೀಯ ಮುಖಂಡರಾದ ತಾಪಂ ಮಾಜಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಜಿಪಂ ಮಾಜಿ ಸದಸ್ಯ ಆಲ್ಬರ್ಟ್ ಡಿ,ಕೊಸ್ತಾ, ತಾಪಂ ಮಾಜಿ ಸದಸ್ಯ ವಿಷ್ಣು ದೇವಡಿಗ, ಭಾಸ್ಕರ ನಾಯ್ಕ, ಸುರೇಶ ನಾಯ್ಕ, ದೀಪಕ ನಾಯ್ಕ, ವೆಂಕಟೇಶ ದೇವಡಿಗ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...