ಮಹಾರಾಷ್ಟ ಬಿಕ್ಕಟ್ಟು; ವಿಶ್ವಾಸ ಮತಕ್ಕೆ ಮುನ್ನವೇ ಉದ್ಧವ್ ರಾಜೀನಾಮೆ

Source: Vb | By I.G. Bhatkali | Published on 30th June 2022, 9:20 AM | National News |

ಮುಂಬೈ:ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಯಾಚಿಸುವಂತೆ ಎಂವಿಎ ಸರಕಾರಕ್ಕೆ ರಾಜ್ಯಪಾಲ ಭಗತಸಿಂಗ್ ಕೋಶಿಯಾರಿ ಅವರ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ರಾತ್ರಿ ಎತ್ತಿಹಿಡಿದ ಬೆನ್ನಿಗೇ ಮುಖ್ಯಮಂತ್ರಿ ಉದ್ದವ ಠಾಕ್ರೆ ಅವರು ತನ್ನ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಅವರು ತನ್ನ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸಾರ್ವ ಜನಿಕರನ್ನುದ್ದೇಶಿಸಿ ಭಾಷಣ ಮಾಡಿದ ಠಾಕ್ರೆ,'ಹುದ್ದೆಯ ಬಗ್ಗೆ ನನಗೆ ಮೋಹವಿಲ್ಲ, ನನಗೆ ನನ್ನ ಶಿವಸೈನಿಕರ ಬೆಂಬಲದ ಬಗ್ಗೆ ಕಾಳಜಿಯಿದೆ. ನಾನು ಹೆದರುವ ವ್ಯಕ್ತಿಯಲ್ಲ, ಆದರೆ ಶಿವಸೈನಿಕರ ರಕ್ತವನ್ನು ಬೀದಿಗಳಲ್ಲಿ ಚೆಲ್ಲುವ ಬದಲು ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ' ಎಂದು ಪ್ರಕಟಿಸಿದರು.

ನಾಳೆಯಿಂದ ಹೊಸ ಪ್ರಜಾಪ್ರಭುತ್ವ ಆರಂಭವಾಗಲಿದೆ. ಯಾವುದೇ ಶಿವಸೈನಿಕ ಅವರ ದಾರಿಗೆ ಅಡ್ಡ ಬರುವುದಿಲ್ಲ ಎಂದರು.

ಬಂಡುಕೋರ ಶಾಸಕರಿಗೆ ಇನ್ನೂ ಒಂದು ಮನವಿಯನ್ನು ಮಾಡಿದ ಠಾಕ್ರೆ, ಅವರು ಸೂರತ್ ಅಥವಾ ಗುಜರಾತಿಗೆ ತೆರಳುವ ಬದಲು ನೇರವಾಗಿ 'ವರ್ಷಾ(ಮುಖ್ಯಮಂತ್ರಿಗಳ ಅಧಿಕೃತ ನಿವಾಸ)' ಅಥವಾ 'ಮಾತೋಶ್ರೀ (ಮುಖ್ಯಮಂತ್ರಿಗಳ ಕುಟುಂಬದ ನಿವಾಸ)'ಗೆ ಬರಬೇಕಿತ್ತು. ಅವರ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಅವರು ನನ್ನ ಬಳಿ ಬರಬೇಕಿತ್ತು' ಎಂದು ಹೇಳಿದರು.

ಶಿವಸೈನಿಕರನ್ನು ಬಂಧಿಸಲಾಗುತ್ತಿದೆ, ಕೇಂದ್ರೀಯ ಪಡೆಗಳನ್ನು ಮುಂಬೈಗೆ ರವಾನಿಸಲಾಗುತ್ತಿದೆ. ಅವರು ಗಡಿಗಳಲ್ಲಿಯ ಪಡೆಗಳನ್ನೂ ಹಿಂದೆಗೆದುಕೊಂಡು ಮುಂಬೈಗೆ ಕಳುಹಿಸಲಿದ್ದಾರೆ ಎಂದು ಠಾಕ್ರೆ ಹೇಳಿದರು.

'ನಾನು ರಾಜ್ಯಪಾಲರಿಗೂ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಸದನದಲ್ಲಿ ಬಲಾಬಲ ಪರೀಕೆಗೆ ಪತ್ರವನ್ನು ನೀಡಿದ ತಕ್ಷಣ ಕಾರ್ಯಾಚರಿಸಲು ಅವರು ನಿರ್ಧರಿಸಿದ್ದರು. ಆದರೆ ಅವರು ನಾಮಕರಣಗೊಂಡಿರುವ 12 ಹೆಸರುಗಳಿಗೆ ಅಂಗೀಕಾರ ನೀಡಿದರೆ ಅವರ ಬಗ್ಗೆ ನಮ್ಮ ಗೌರವ ಹೆಚ್ಚುತ್ತದೆ ಎಂದರು. ಸೇನೆ ಮುಖ್ಯಸ್ಥರು ಸಣ್ಣಪುಟ್ಟ ಸಾಮಾನ್ಯ ಜನರನ್ನು ಬೆಳೆಸಿದ್ದರು ಇಂದು ಅವರು ತಳಮಳಗೊಂಡಿದ್ದಾರೆ ಎಂದು ಠಾಕ್ರೆ ಹೇಳಿದರು. ಮತ್ತು

'ಔರಂಗಾಬಾದ್ ಮತ್ತು ಉಸ್ತಾನಾಬಾದ್‌ಗಳಿಗೆ ಮರುನಾಮಕರಣ ಮಾಡುವ ಐತಿಹಾಸಿಕ ನಿರ್ಧಾರವನ್ನು ನಾವು ಇಂದು ಕೈಗೊಂಡಾಗ ರಾಜ್ಯ ಸಂಪುಟದ ಕೇವಲ ನಾಲ್ವರು ಶಿವಸೇನೆ ಸದಸ್ಯರು ಉಪಸ್ಥಿತರಿದ್ದರು. ಕಾಂಗ್ರೆಸ್ ಮತ್ತು ಎನ್‌ಸಿಪಿ ಎಂದಿಗೂ ವಿರೋಧಿಸಿರಲಿಲ್ಲ. ಪ್ರಸ್ತಾವವನ್ನು ವಿರೋಧಿಸಿ ಎಂದು ಹೇಳಲ್ಪಟ್ಟಿದ್ದವರು ಇಂದು ನನ್ನ ಜೊತೆಯಲ್ಲಿದ್ದಾರೆ ಎಂದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಠಾಕ್ರೆ, ಒಂದು ಸರಕಾರವಾಗಿ ನಾವು ಮಾಡಿದ್ದ ಮೊದಲ ಕೆಲಸವೆಂದರೆ ರಾಯಗಡದ ಸಂರಕ್ಷಣೆಗಾಗಿ ಹಣವನ್ನು ಒದಗಿಸಿದ್ದು, ರಾಜ್ಯದ ರೈತರನ್ನೂ ನಾವು ಸಾಲಮುಕ್ತಗೊಳಿಸಿದ್ದೇವೆ 'ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?: ದೇಶಾದ್ಯಂತ ಭಾರೀ ಕುತೂಹಲವನ್ನು ಕೆರಳಿಸಿರುವ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಬುಧವಾರ ರಾತ್ರಿ ಹೊಸ ತಿರುವನ್ನು ಪಡೆದುಕೊಂಡಿತ್ತು. ಗುರುವಾರ ಪೂರ್ವಾಹ್ನ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಎಂಪಿಎ ಸರಕಾರಕ್ಕೆ ನೀಡಿದ್ದ ನಿರ್ದೇಶವನ್ನು ಪ್ರಶ್ನಿಸಿ ಶಿವಸೇನೆಯು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ. ತನ್ಮೂಲಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಗುರುವಾರವೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯಲೇಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ ಮತ್ತು ಜೆ.ಬಿ.ಪರ್ಡಿವಾಲಾ ಅವರ ರಜಾಕಾಲದ ಪೀಠವು ಎಂವಿಎ ಸರಕಾರಕ್ಕೆ ತಾಕೀತು ಮಾಡಿದೆ.

ಇದಕ್ಕೂ ಮುನ್ನ ವಿಚಾರಣೆ ಸಂದರ್ಭದಲ್ಲಿ ಗುರುವಾರ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಉದ್ದವ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸರಕಾರಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ನಿರ್ದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಶಿವಸೇನೆಯ ಮುಖ್ಯ ಸಚೇತಕ ಸುನಿಲ ಪ್ರಭು ಅವರು, ಸೂಪರ್‌ಸಾನಿಕ್ (ಶಬ್ದಾತೀತ) ವೇಗದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಆದೇಶವು ಕುದುರೆಯ ಮುಂದೆ ಗಾಡಿಯನ್ನು ಕಟ್ಟುವುದಕ್ಕೆ ಸಮನಾಗಿದೆ ಎಂದು ಹೇಳಿದರು.

ಎನ್‌ಸಿಪಿಯ ಇಬ್ಬರು ಶಾಸಕರು ಕೋವಿಡ್ ಪೀಡಿತರಾಗಿದ್ದರೆ ಇಬ್ಬರು ಕಾಂಗ್ರೆಸ್ ಶಾಸಕರು ವಿದೇಶದಲ್ಲಿದ್ದಾರೆ ಮತ್ತು ಗುರುವಾರ ಬಲಾಬಲ ಪರೀಕ್ಷೆ ವೇಳೆ ಸದನದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಪ್ರಭು ಪರ ಹಿರಿಯ ನ್ಯಾಯವಾದಿ ಎ.ಎಂ.ಸಿಂಫ್ಟಿಯವರು ಪೀಠಕ್ಕೆ ತಿಳಿಸಿದರು.

ಬಲಾಬಲ ಪರೀಕ್ಷೆಗೆ ಅವಕಾಶ ನೀಡುವುದು ಸಂವಿಧಾನದ ಹತ್ತನೇ ಅನುಸೂಚಿಯನ್ನು ಮೃತದಾಖಲೆಯನ್ನಾಗಿಸುತ್ತದೆ ಎಂದು ಸಿಂಫ್ಟಿ ವಾದಿಸಿದರು. ಹತ್ತನೇ ಅನುಸೂಚಿಯು ಸದೃಢ ನಿಬಂಧನೆಗಳಲ್ಲಿ ಒಂದಾಗಿದೆ ಮತ್ತು ನ್ಯಾಯಾಲಯವು ಅದನ್ನು ಬಲಗೊಳಿಸಬೇಕು ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

ಗುರುವಾರ ಪೂರ್ವಾಹ್ನ 11 ಗಂಟೆಗೆ ಬಹುಮತವನ್ನು  ಸಾಬೀತು ಗೊಳಿಸುವಂತೆ ರಾಜ್ಯಪಾಲ ಭಗತಸಿಂಗ್ ಕೋಶ್ಯಾರಿ ಅವರು ಎಂವಿಎ ಸರಕಾರಕ್ಕೆ ನಿರ್ದೇಶ ನೀಡಿರುವ ಹಿನ್ನೆಲೆಯಲ್ಲಿ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಬುಧವಾರ ಬೆಳಿಗ್ಗೆ ಸಿಂಘಿ ಯವರು ಮಾಡಿಕೊಂಡಿದ್ದ ನಿವೇದನೆಯನ್ನು ಪುರಸ್ಕರಿಸಿದ ಪೀಠವು ಸಂಜೆ ಐದು ಗಂಟೆಗೆ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

Read These Next

ಬೆಲೆಯೇರಿಕೆ, ಜಿಎಸ್‌ಟಿ ಹೆಚ್ಚಳ, ನಿರುದ್ಯೋಗದ ವಿರುದ್ಧ ದಿಲ್ಲಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಸೇರಿದಂತೆ ಹಲವಾರು ನಾಯಕರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು

ನಿರುದ್ಯೋಗ, ಬೆಲೆಯೇರಿಕೆ ಮತ್ತು ಜಿಎಸ್‌ಟಿ ಹೆಚ್ಚಳದ ವಿರುದ್ಧ ಶುಕ್ರವಾರ ಬೆಳಗ್ಗೆ ಇಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಸಂಸದ ...