ಪೊನ್ನಂಪೇಟೆಯಲ್ಲಿ ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ; ಸರಕಾರ ಜೀವಂತವಿದೆಯೇ? ಸಿದ್ದರಾಮಯ್ಯ ಆಕ್ರೋಶ

Source: Vb | By I.G. Bhatkali | Published on 18th May 2022, 1:41 AM | State News |

ಬೆಂಗಳೂರು: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ಬಜರಂಗದಳ ನಡೆಸಿದ ಬಂದೂಕು ತರಬೇತಿಯಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸೋಮವಾರ ಸರಣಿ ಟ್ವಿಟ್ ಮಾಡಿರುವ ಅವರು, ಶಸ್ತ್ರಾಸ್ತ್ರ ತರಬೇತಿ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣವೇ ಬಜರಂಗದಳದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದ್ದಾರೆ.

ಬಜರಂಗ ದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಎಂ.ಎ.ಅಪ್ಪಚ್ಚು, ಕೆ.ಜಿ.ಬೋಪಯ್ಯ ಮತ್ತು ಸುಜಾ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೊ ಬಜರಂಗದಳಕ್ಕೊ ? ಮಡಿಕೇರಿಯ ಶಾಲೆಯಲ್ಲಿ ಬಜರಂಗದಳ ಯುವಜನರಿಗೆ ಶಸ್ತ್ರ ತರಬೇತಿ ನೀಡಿ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಖಾತೆಗೆ ಸಚಿವರಿದ್ದಾರೆಯೇ? ಸರಕಾರ ಜೀವಂತವಾಗಿದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಆತ್ಮರಕ್ಷಣೆಗಾಗಿ ಏರ್‌ಗನ್ ತರಬೇತಿ:
ಶಾಲಾ ಮಕ್ಕಳಿಗೆ ಯಾವುದೇ ತರಬೇತಿ ನೀಡಿಲ್ಲ. ಬಜರಂಗದಳ ಅಭ್ಯಾಸ ವರ್ಗ ಪ್ರತಿವರ್ಷ ತರಬೇತಿ ನಡೆಸುತ್ತದೆ. ಹಾಗೆ ರಾಜ್ಯ ಮತ್ತು ಜಿಲ್ಲೆಯಿಂದ ತರಬೇತಿ ನೀಡುತ್ತಾರೆ. ಆತ್ಮರಕ್ಷಣೆಗಾಗಿ ಪೊಲೀಸ್ ಇಲಾಖೆಯೂ ತರಬೇತಿ ನೀಡುತ್ತದೆ. ಇದು ಹಾಗೆಯೇ ಆತ್ಮರಕ್ಷಣೆಗಾಗಿ ಏರ್‌ಗನ್ ತರಬೇತಿ ಕೊಟ್ಟಿರುವುದು. ಬಜರಂಗದಳದ ಅಭ್ಯಾಸ ಎಕೆ-47 ಅಲ್ಲ, ಬಾಂಬ್ ಹಾಕುವ ತರಬೇತಿಯೂ ಅಲ್ಲ, ಆತ್ಮರಕ್ಷಣೆಗಾಗಿ ಏರ್‌ಗನ್ ತರಬೇತಿ ನೀಡಿದೆ.
ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತನಿಖೆ ನಡೆಯುತ್ತಿದೆ:
ಪೊನ್ನಂಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದವರು ಅವರ ಕಾರ್ಯಕರ್ತರಿಗೆ ಒಂದು ಶಿಬಿರ ನಡೆಸಿದ್ದಾರೆ. ಅವರು ಪ್ರತಿ ವರ್ಷ ನಡೆಸುತ್ತಾರೆ. ಶಾಲೆಯಿಂದ ಅನುಮತಿ ಪಡೆದುಕೊಂಡು ಮಾಡಿದ್ದಾರೆ. ಅಲ್ಲಿ ಏರ್‌ಗನ್ ಬಳಸಿರುವ ಕುರಿತು ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ. ಏರ್ ಗನ್ ಬಳಕೆ ಹಾಗೂ ಖರೀದಿಗೆ ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳ ಪ್ರಕಾರ ಯಾವುದೇ ಅನುಮತಿ ಬೇಡ.
ಎಂ.ಎ.ಅಯ್ಯಪ್ಪ, ಕೊಡಗು ಎಸ್ಪಿ 

ತ್ರಿಶೂಲ ನೀಡುವ ಸಂಪ್ರದಾಯವಿದೆ: ಶಾಲೆಗೆ ರಜೆ ಇದ್ದುದರಿಂದ ಕೊಡಗು ಜಿಲ್ಲೆ ಪೊನ್ನಂಪೇಟೆಯ ಶಾಲೆಯನ್ನು ಬಜರಂಗದಳ ಕಾರ್ಯಕರ್ತರಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗಿತ್ತು. ತರಬೇತಿ ಸಂದರ್ಭದಲ್ಲಿ ಆಯುಧ ಬಳಕೆ ತರಬೇತಿ ನೀಡುವುದಿಲ್ಲ. ಚಾಕುವಿಗಿಂತ ಸಣ್ಣ ಗಾತ್ರದ ತ್ರಿಶೂಲ ನೀಡುವ ಸಂಪ್ರದಾಯ ಬಜರಂಗ ದಳದಲ್ಲಿದೆ.
ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಕೋಮುವಾದದ ಉಚ್ಛಾಯ ಸ್ಥಿತಿ: ಈ ಮೊದಲೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಯುವಕರ ಕೈಗೆ ತ್ರಿಶೂಲ ಕೊಡುವುದನ್ನು ಬಿಜೆಪಿ ಮಾಡಿತ್ತು. ಈಗ ಈ ಟ್ರೆಂಡ್ ಕರ್ನಾಟಕದಲ್ಲಿ ಶುರು ಮಾಡುವ ಮೂಲಕ ಮುಂದಿನ ಚುನಾವಣೆಗೆ ನಾಂದಿ ಹಾಡಿದೆ. ಇದು ಕೋಮುವಾದದ ಉಚ್ಛಾಯ ಸ್ಥಿತಿ. ಆ ಮೂಲಕ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ಭಾವಿಸಿದ್ದರೆ, ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಇನ್ನು ಗೃಹಮಂತ್ರಿ ಇದನ್ನು ನೋಡಿಯೂ ನೋಡದಂತೆ ಇರುವುದು ದುರದೃಷ್ಟಕರ. ಇಂತಹ ಗೃಹಮಂತ್ರಿಯನ್ನು ರಾಜ್ಯ ಇಲ್ಲಿಯವರೆಗೆ ಕಂಡಿದ್ದಿಲ್ಲ. ಬಿಜೆಪಿಯವರು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹವಣಿಸಿದರೆ ರಾಜ್ಯದ ಜನ ಖಂಡಿತ ಬುದ್ಧಿ ಕಲಿಸುತ್ತಾರೆ.
ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

ರಾಷ್ಟ್ರದ್ರೋಹದಡಿ ಕೇಸೆ ದಾಖಲಿಸಿ:
ವಿದ್ಯಾರ್ಥಿಗಳ ಕೈಗೆ ಮಾರಕಾಸ್ತ್ರಗಳನ್ನು ಕೊಡುವುದು ರಾಷ್ಟ್ರದ್ರೋಹದ ಕೆಲಸ. ಇದನ್ನು ಮೊದಲಿಗೆ ಬ್ಯಾನ್ ಮಾಡಬೇಕು ಹಾಗೂ ಮಾರಕಾಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟವರು ಯಾರೇ ಆಗಿರಲಿ, ಅವರನ್ನು ರಾಷ್ಟ್ರದ್ರೋಹದಡಿ ಕೇಸ್ ದಾಖಲಿಸಿ ಜೈಲಿಗೆ ಅಟ್ಟಬೇಕು. ಮೋದಿಯವರು ನಿರುದ್ಯೋಗಿಗಳಿಗೆ ಪಕೋಡ ಮಾರಿ ಅಂದರು. ಈಗ ಅವರಿಗೆ ಸರಕಾರ ಕೆಲಸ ಕೊಡದೆ ಕೈಗೆ ಚಾಕು ಚೂರಿ ಕೊಡುತ್ತಿದೆ. ಇದು ದೇಶದ ದುರ್ದೈವ ಜನ ಎಚ್ಚೆತ್ತುಕೊಂಡು ಬಿಜೆಪಿಗೆ ಪಾಠ ಕಲಿಸಿದರೆ ದೇಶ ಉಳಿಯುತ್ತದೆ. ಗೃಹಮಂತ್ರಿ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಒಳ್ಳೆಯದು.
ಎಸ್.ರವಿ,ವಿಧಾನ ಪರಿಷತ್ ಸದಸ್ಯರು

ಸರಿಯಾದ ಕ್ರಮವಲ್ಲ: ಜೆಡಿಎಸ್ ಆಕ್ಷೇಪ:
ಪೊನ್ನಂಪೇಟೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಏರ್‌ಗನ್ ಮೂಲಕ ತರಬೇತಿ ನೀಡಿರುವುದು ಕಾನೂನು ಸರಿಯಾದ ಕ್ರಮವಲ್ಲವೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಆಕ್ಷೇಪ ವ್ಯಕ್ತಪಡಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್‌, ದೇಶದ ಕಾನೂನಿನ ಪ್ರಕಾರ ರಕ್ಷಣಾ ಕಾರ್ಯ ನಿರ್ವಹಿಸುವವರಿಗೆ ಮಾತ್ರ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತದೆ. ಖಾಸಗಿಯಾಗಿ ಎಲ್ಲರೂ ತರಬೇತಿ ನೀಡಲು ಅಥವಾ ಪಡೆಯಲು ಮುಂದಾದರೆ ಅದು ಅಶಾಂತಿಗೆ ಕಾರಣವಾಗುತ್ತದೆ ಎಂದು ಅಭಪ್ರಾಯಪಟ್ಟರು.  ಪೊನ್ನಂಪೇಟೆ  ಪರ್ಕರಣದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕರ್ಮ ಕೊಳ್ಳುಬೇಕಂದು ಒತ್ತಾಯಿಸಿದರು. ಶಾಂತಿಪ್ರಿಯ ರಾಷ್ಟ್ರ ಭಾರತದಲ್ಲಿ ಈ ರೀತಿಯ ಬೆಳವಣಿಗೆಗಳಿಗೆ ಅವಕಾಶ ನೀಡಬಾರದೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಮಂಜುನಾಥ್, ಎಸ್.ಸಿ. ಘಟಕದ ಅಧ್ಯಕ್ಷ ಎಚ್.ಎ. ರವಿ ಕುಮಾರ್ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರಾಧ್ಯಕ್ಷೆ ಸುನಂದ ಹಾಗೂ ನಗರ ಘಟಕದ ಉಪಾಧ್ಯಕ್ಷ ಬಿ.ಆರ್.ಕುಮಾರ್ ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...