ಅಯೋಧ್ಯೆಯಲ್ಲಿ ದಲಿತರ ಜಮೀನು ಅಕ್ರಮವಾಗಿ ಟ್ರಸ್ಟ್‌ಗೆ ವರ್ಗಾವಣೆ; ಎಆರ್‌ಒ ನ್ಯಾಯಾಲಯ ತೀರ್ಪು

Source: vb | By I.G. Bhatkali | Published on 7th January 2022, 3:11 PM | National News |

ಹೊಸದಿಲ್ಲಿ: ದಲಿತರಿಗೆ ಸೇರಿದ 52 ಸಾವಿರ ಚ.ಮೀ, ಜಮೀನನ್ನು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ಗೆ ವರ್ಗಾಯಿಸಿ ಉ.ಪ್ರ. ಸರಕಾರ ಹೊರಡಿಸಿದ ಆದೇಶ ಕಾನೂನುಬಾಹಿರವೆಂದು ಆಯೋಧ್ಯೆಯ ಸಹಾಯಕ ದಾಖಲೆ ಅಧಿಕಾರಿ (ಎಆರ್‌ಒ)ಯವರ ನ್ಯಾಯಾಲಯ ಗುರುವಾರ ಘೋಷಿಸಿದೆ. ಈ ಜಮೀನನ್ನು ನ್ಯಾಯಾಲಯವು ಎಲ್ಲಾ ರೀತಿಯ ಬಾಧ್ಯತೆಗಳಿಂದ ಮುಕ್ತಗೊಳಿಸಿ ರಾಜ್ಯ ಸರಕಾರದ ವಶಕ್ಕೊಪ್ಪಿಸಿದೆ.

ಆದರೆ ಜಮೀನು ವರ್ಗಾವಣೆಯಲ್ಲಿ ಯಾವುದೇ ಫೋರ್ಜರಿ ನಡೆದಿಲ್ಲವಾದ್ದರಿಂದ ಟ್ರಸ್ಟ್ ವಿರುದ್ಧ ಯಾವುದೇ ಕಾನೂನುಕ್ರಮವನ್ನು ಕೈಗೊಳ್ಳುವುದಕ್ಕೆ ನ್ಯಾಯಾಲಯ ಶಿಫಾರಸು ಮಾಡಿಲ್ಲವೆಂದು ತಿಳಿದುಬಂದಿದೆ. ಈ ಜಮೀನನ್ನು 1996ರ ಆಗಸ್ಟ್ 22ರಂದು ಮಹರ್ಷಿ ರಾಮಾಯಣ ವಿದ್ಯಾಪೀಠಕ್ಕೆ ಹಸ್ತಾಂತರಿಸಲಾಗಿತ್ತು.

ಶ್ರೀರಾಮ ದೇಗುಲ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ ಬಳಿಕ ಅಯೋಧ್ಯೆಯಲ್ಲಿ ರಿಯಲ್  ಎಸ್ಟೇಟ್ ಬೆಲೆ ಗಗನಕ್ಕೇರಿದೆ. ಇದರ ಲಾಭವನ್ನು ಪಡೆದುಕೊಳ್ಳಲು ಸ್ಥಳೀಯ ಶಾಸಕರು, ಉನ್ನತ ಸರಕಾರಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ನಿಕಟ ಸಂಬಂಧಿಗಳು ಜಮೀನನ್ನು ಖರೀದಿಸುತ್ತಿದ್ದಾರೆಂದು 'ಇಂಡಿಯನ್ ಎಕ್ಸ್‌ಪ್ರೆಸ್' ಆಂಗ್ಲ ದೈನಿಕವು 2021ರ ಡಿಸೆಂಬರ್ 22ರಂದು ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಎಆರ್‌ಒ ನ್ಯಾಯಾಲಯ ಈ ತೀರ್ಪು ನೀಡಿದೆ.

ದಲಿತರಿಗೆ ಸೇರಿದ ಕೃಷಿ ಭೂಮಿಯನ್ನು ದಲಿತೇತರರು ಖರೀದಿಸುವುದನ್ನು ಭೂಕಾಯ್ದೆಯು ನಿಷೇಧಿಸಿರುವ ಹಿನ್ನೆಲೆಯಲ್ಲಿ ಎಂವಿಆರ್ ಟ್ರಸ್ಟ್ ತನ್ನ ನೌಕರನಾದ ರೊಂಘಾಯ್ ಎಂಬ ದಲಿತ ವ್ಯಕ್ತಿಯನ್ನು ಬಳಸಿಕೊಂಡು 1992ರಲ್ಲಿ ಬರ್‌ಹತಾ ಮಾಂಝಾ ಗ್ರಾಮದಲ್ಲಿ ದಲಿತರಿಂದ ಜಮೀನುಗಳನ್ನು ಖರೀದಿಸಿತ್ತು.

2019ರಲ್ಲಿ ಎಂವಿಆರ್‌ಟಿ ಈ ಜಮೀನುಗಳನ್ನು ಮಾರಾಟ ಮಾಡಲು ಆರಂಭಿಸಿದಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಎಂಆರ್‌ವಿಟಿಗೆ ಜಮೀನು ಮಾರಾಟ ಮಾಡಿದ ದಲಿತರಲ್ಲೊಬ್ಬಾತ ತನ್ನ ಜಮೀನು ಟ್ರಸ್ಟ್‌ಗೆ ಆಕ್ರಮವಾಗಿ ವರ್ಗಾವಣೆಯಾ ಗಿರುವ ಬಗ್ಗೆ ಉತ್ತರ ಪ್ರದೇಶ ಕಂದಾಯ ನಿಗಮಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಜಮೀನು ವರ್ಗಾವಣೆಯ ಬಗ್ಗೆ ತನಿಖೆಯನ್ನು ನಡೆಸಲು ಹೆಚ್ಚುವರಿ ಆಯುಕ್ತ ಶಿವ ಪೂಜನ್ ಹಾಗೂ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೋರೆಲಾಲ್ ಶುಕ್ಲಾ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.

ಪರಿಶಿಷ್ಟ ಜಾತಿಯ ವ್ಯಕ್ತಿಗೆ ಸೇರಿದ ಜಮೀನನ್ನು ನೋಂದಣಿಯಾಗದ ದೇಣಿಗೆ ಕರಾರುಪತ್ರದ ಮೂಲಕ ಅಕ್ರಮವಾಗಿ ವರ್ಗಾಯಿಸಿದ್ದಕ್ಕಾಗಿ ಎಂಆರ್‌ಐಟಿ ಹಾಗೂ ಕೆಲವು ನಿರ್ದಿಷ್ಟ ಸರಕಾರಿ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂಬ ಸಮಿತಿಯ ಶಿಫಾರಸಿಗೆ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಪಿ. ಅನುಜ್ ಕುಮಾರ್ ಝಾ ಅನುಮೋದನೆ ನೀಡಿದ್ದರು.

ಅಯೋಧ್ಯೆಯ ವಿಭಾಗೀಯ ಆಯುಕ್ತ ಎಂ.ಪಿ.ಅಗರ್ವಾಲ್ ಕೂಡಾ 2021ರ ಮಾರ್ಚ್18ರಂದು ವರದಿಗೆ ಅನುಮೋದನೆ ನೀಡಿದ್ದರು. ಅಂತಿಮವಾಗಿ 2021ರ ಆಗಸ್ಟ್ 6ರಂದು ಎಆರ್‌ಓ  ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...