ತಂಬಾಕು ದುಷ್ಪರಿಣಾಮ ಮತ್ತು ಕೋಟ್ಪಾ ಕಾಯ್ದೆ ಕುರಿತು ತರಬೇತಿ ಕಾರ್ಯಕ್ರಮ. ಮಕ್ಕಳನ್ನು ಸರಿದಾರಿಗೆ ತರುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ : ಎಸ್‍ಪಿ

Source: SO News | By Laxmi Tanaya | Published on 15th September 2021, 9:54 AM | State News | Don't Miss |

ಶಿವಮೊಗ್ಗ : ಪ್ರಸ್ತುತ ದಿನಮಾನಗಳಲ್ಲಿ ಹದಿ ವಯಸ್ಸಿನ ಮಕ್ಕಳೇ ತಂಬಾಕು ಉತ್ಪನ್ನಗಳ ಚಟಕ್ಕೆ ಒಳಗಾಗುತ್ತಿದ್ದು, ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಶಾಲೆಗಳ ಶಿಕ್ಷಕರು ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಕರೆ ನೀಡಿದರು.

      ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003 ರ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನ ಕುರಿತು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಇಂದು ನಗರದ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದ ಅಭಿವೃದ್ದಿಗೆ ಬುನಾದಿಯಾಗಿರುವ ಇಂದಿನ ಮಕ್ಕಳು ಮತ್ತು ಯುವಜನತೆ ತಂಬಾಕು ಉತ್ಪನ್ನಗಳ ಚಟ, ಡ್ರಗ್ಸ್ ನಂತಹ ಮಾದಕ ದ್ರವ್ಯಗಳ ವ್ಯಸನಕ್ಕೆ ಗುರಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಮಕ್ಕಳು ಈ ರೀತಿ ಮಾದಕ ದ್ರವ್ಯಗಳಿಗೆ ಒಳಗಾಗಲು ಕಾರಣವನ್ನು ಕಂಡು ಹಿಡಿದು, ಮೂಲದಲ್ಲಿಯೇ ಇದರಿಂದ ಅವರನ್ನು ರಕ್ಷಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ.

     ಆದ ಕಾರಣ ಮಾದಕ ವ್ಯಸನಕ್ಕೆ ಮುಖ್ಯದ್ವಾರವಾಗಿರುವ ಸಿಗರೇಟ್ ಅಥವಾ ಯಾವುದೇ ತಂಬಾಕು ಸೇವನೆಗೆ ಮಕ್ಕಳು ತುತ್ತಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಹದಿವಯಸ್ಸಾದ 14 ರಿಂದ 18 ವಯಸ್ಸಿನಲ್ಲಿ ರೂಢಿಸಿಕೊಂಡ ಹವ್ಯಾಸಗಳೇ ಅವರ ಜೀವನದ ಪೂರ್ತಿ ಉಳಿಯುವ ಕಾರಣ ಈ ವಯಸ್ಸಿನಲ್ಲಿ ಅವರು ಮಾದಕ ವ್ಯಸನಕ್ಕೆ ಒಳಗಾಗದಂತೆ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ನಿಗಾ ವಹಿಸಬೇಕು.

       ಮಕ್ಕಳು ಸಾಮಾನ್ಯವಾಗಿ ಒಂದು ಹೊಸ ಅನುಭವ, ಸ್ವಾದ ಅನುಭವಿಸಲು ಹಾಗೂ ಇತರೆ ಕಾರಣಗಳಿಂದ ಸಿಗರೇಟ್ ಅಥವಾ ತಂಬಾಕು ಸೇವನೆಗೆ ಪ್ರವೇಶಿಸುತ್ತಾರೆ. ಮುಂದೆ ಅದು ಡ್ರಗ್ಸ್, ಕುಡಿತ ಇತರೆ ಮಾದಕ ದ್ರವ್ಯಗಳ ಸೇವನೆಯೆಡೆ ಕರೆದುಕೊಂಡು ಹೋಗುತ್ತದೆ. ಆದ ಕಾರಣ ಮೂಲದಲ್ಲಿಯೇ ಈ ವ್ಯಸನಕ್ಕೆ ತಡೆ ಹಾಕಬೇಕು. 

     ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಚಲನವಲನ, ಚಟುವಟಿಕೆಗಳನ್ನು ಗಮನಿಸಬೇಕು. ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಒಂದು ಪಕ್ಷ ಮಕ್ಕಳು ಮಾತು ಕೇಳುತ್ತಿಲ್ಲವೆಂದಾದರೆ ಪೊಲೀಸ್ ಇಲಾಖೆಗೆ ತಿಳಿಸಿ, ನಾವು ಸಹಕರಿಸುತ್ತೇವೆ. ಈಗ ಶಾಲೆಗಳು ಆರಂಭವಾಗಿದ್ದು ಇಲಾಖೆ ವತಿಯಿಂದ ಶಾಲೆಗಳ ಭೇಟಿ ನೀಡಿ ಮಕ್ಕಳಿಗೆ ಮಾದಕ ವ್ಯಸನ ದುಷ್ಪರಿಣಾಮ ಕುರಿತು ಮನವರಿಕೆ ಮಾಡಲಾಗುವುದು ಎಂದರು.

    ಬಹುತೇಕ ಅಪರಾಧ ಪ್ರಕರಣಗಳ ಅಪರಾಧಿಗಳು ಮಾದಕ ವ್ಯಸನಿಗಳಾಗಿರುತ್ತಾರೆ. ಹಾಗೂ ವಾರ್ಷಿಕವಾಗಿ ಸರಾಸರಿ 5500 ಅಪರಾಧ ಪ್ರಕರಣ ದಾಖಲಾಗುತ್ತಿದ್ದು ಈ ಪೈಕಿ ಶೇ.90 ಅಪರಾಧಿಗಳು, ಶಾಲೆ ಬಿಟ್ಟ ಮಕ್ಕಳಾಗಿರುತ್ತಾರೆ. ಆದ ಕಾರಣ ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕವಾಗಿ ಮುಂದುವರೆಯುಂತೆ ಶಿಕ್ಷಕರು, ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕು. ಹಾಗೂ ಶಾಲಾ ಸುತ್ತಮುತ್ತ ಮತ್ತು ಎಲ್ಲೆಡೆ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದರು.

            ಎನ್.ಟಿ.ಪಿ.ಸಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಮಲ್ಲಪ್ಪ.ಓ ಪ್ರಾಸ್ತಾವಿಕ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಶಿಕ್ಷಕರು, ಆರೋಗ್ಯ ಇಲಾಖೆಯ ವೈದ್ಯರು, ಪೊಲೀಸರು, ಸಿಬ್ಬಂದಿಗಳು, ಹೋಟೆಲ್, ಬಾರ್, ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ವಿವಿಧ ವಲಯದ ಅಧಿಕಾರಿ/ಸಿಬ್ಬಂದಿಗಳಿಗೆ ಕಾಯ್ದೆ ಮತ್ತು ತಂಬಾಕು ದುಷ್ಪರಿಣಾಮದ ಬಗ್ಗೆ ನಿಯಮಿತವಾಗಿ ತರಬೇತಿ ನೀಡಲಾಗುವುದು.

      ಪ್ರತಿ ವರ್ಷ ಶೇ.17 ರಿಂದ 20 ರಷ್ಟು ಹದಿವಯಸ್ಸಿನ ಮಕ್ಕಳು ತಂಬಾಕು ಚಟಕ್ಕೆ ಬಲಿಯಾಗುತ್ತಿದ್ದು, ಇದನ್ನು ತಡೆಯಲು ಮುಖ್ಯವಾಗಿ ಶಾಲಾ ಕಾರ್ಯಕ್ರಮದಡಿ ಮಕ್ಕಳಿಗೆ ತಂಬಾಕಿನ ದುಷ್ಪರಿಣಾಮ ಕುರಿತು ಚಿತ್ರಕಲೆ, ಪ್ರಬಂಧ ಇತರೆ ಚಟುವಟಿಕೆ ಹಮ್ಮಿಕೊಂಡು ಪ್ರಶಸ್ತಿ, ಬಹುಮಾನ ನೀಡಲಾಗುತ್ತಿದೆ.

    ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನಿಯಮಿತವಾಗಿ ತಂಬಾಕು ದಾಳಿ ನಡೆಸಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ಶಾಲೆಗಳ 100 ಗಜದೊಳಗೆ ಯಾವುದೇ ತಂಬಾಕು ಅಂಗಡಿ, ಕೇಂದ್ರಗಳು ಇರದಂತೆ, ತಂಬಾಕುಮುಕ್ತ ಶಾಲೆ ನಾಮಫಲಕ, ಸಾರ್ವಜನಿಕ ಧೂಮಪಾನ, ಪ್ರದರ್ಶನ ನಿಷೇಧ ಸೇರಿದಂತೆ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2016 ನೇ ಸಾಲಿನಿಂದ ಈವರೆಗೆ 7400 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ರೂ.4,34,000 ದಂಡ ಸಂಗ್ರಹಿಸಲಾಗಿದೆ. 

       ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಆರಂಭಿಸಲಾಗಿದ್ದು ಇಲ್ಲಿ ತಂಬಾಕು ಗೀಳಿನಿಂದ ಬಿಡುಗಡೆ ಪಡೆಯಲು ಆಪ್ತಸಮಾಲೋಚನೆ, ಚಿಕಿತ್ಸೆ ನೀಡಲಾಗುತ್ತಿದ್ದು ಈವರೆಗೆ 8 ಸಾವಿರಕ್ಕೂ ಅಧಿಕ ಜನರು ಇದರ ಅನುಕೂಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

     ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ್.ಎನ್.ಎಂ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಮಾದರಿಯಾಗುವಂತೆ ಇದ್ದು ಉತ್ತಮ ಮಾರ್ಗದರ್ಶನ ನೀಡಿದಲ್ಲಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದು ತಪ್ಪುತ್ತದೆ. ನಗರದ ಶಾಲೆಗಳು ಮಾದಕ ವಸ್ತುಗಳಿಗೆ ಹತ್ತಿರವಾಗಿದ್ದು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.

     ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ತಂಬಾಕು ಉತ್ಪನ್ನಗಳಲ್ಲಿ 6 ಸಾವಿರ ಮಾರಣಾಂತಿಕ ಮತ್ತು ಕ್ಯಾನ್ಸರ್‍ಕಾರಕ ರಾಸಾಯನಿಕ ಅಂಶಗಳಿದ್ದು ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಶಾಲೆಗಳಲ್ಲಿ ಪ್ರಾರ್ಥನೆ ವೇಳೆಯಲ್ಲಿ ಮಕ್ಕಳಿಂದಲೇ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಹೇಳುವ ಪರಿಪಾಠವಾಗಬೇಕು ಆಗ ಅವರಲ್ಲಿ ಅರಿವು ಹೆಚ್ಚಾಗುತ್ತದೆ ಎಂದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...