ಸಕಾಲದಲ್ಲಿ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯ

Source: sonews | By Staff Correspondent | Published on 29th May 2020, 8:08 PM | State News |

ಕೋಲಾರ ; ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಣೆ ಮಾಡಿ ಇದರಿಂದ ಸಕಾಲದಲ್ಲಿ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್. ವೆಂಕಟೇಶ್ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಬಿತ್ತನೆ ಬೀಜಗಳ ವಿತರಣೆಯಲ್ಲಿ ಯಾವುದೇ ಕೊರತೆ ಉಂಟಾಗಬಾರದು ಹಾಗೂ ಕಳಪೆ ಬಿತ್ತನೆ ಬೀಜಗಳು ವಿತರಣೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಶಿಥಲಗೊಂಡಿರುವ ಸುಮಾರು 50-60 ಓವರ್ ಹೆಡ್ ಟ್ಯಾಂಕರ್‍ಗಳಿದ್ದು, ಇವುಗಳು ಬಿದ್ದು ಪ್ರಾಣಹಾನಿ ಹಾಗೂ ಆಸ್ತಿ ಹಾನಿ ಆಗುವ ಸಂಭವವಿರುತ್ತದೆ.  ಆದ್ದರಿಂದ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್‍ಗಳನ್ನು ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸುವಂತೆ ಸೂಚಿಸಿದರು. 

ಶಿಕ್ಷಣ ಇಲಾಖೆಯಲ್ಲಿ 2018-19ನೇ ಸಾಲಿನಲ್ಲಿ 30 ಲಕ್ಷ ಅನುದಾನ ಬಳಕೆ ಆಗದೆ ವಾಪಸ್ಸು ಹೋಗಿದೆ.  ಇದಕ್ಕೆ ಕಾರಣರಾದವರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ಅನುದಾನಗಳು ಬಳಕೆಯಾಗದೆ ವಾಪಸ್ಸು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಜಿಲ್ಲೆಯ ಮಾಲೂರು, ಬಂಗಾರಪೇಟೆ ಹಾಗೂ ಕೆ.ಜಿ.ಎಫ್. ತಾಲ್ಲೂಕುಗಳ ಗಡಿಗಳಲ್ಲಿ ಆನೆ ಮತ್ತು ಚಿರತೆ ಹಾವಳಿಗಳು ಹೆಚ್ಚಿದ್ದು, ಆನೆಗಳ ಹಾವಳಿಯಲ್ಲಿ ಶಾಶ್ವತ ಪರಿಹಾರ ಕಂಡು ಕೊಳ್ಳಲು ಆನೆ ಕಾರಿಡಾರ್ ನಿರ್ಮಿಸುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದೆ.  ಕರೋನಾ ತಡೆಯುವಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, 48 ದಿನಗಳ ಕಾಲ ಜಿಲ್ಲೆಯೂ ಹಸಿರು ವಲಯದಲ್ಲಿದ್ದು, ನಂತರ ಹೊರ ರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಬಂದ 19 ಜನರಿಗೆ ಪಾಸಿಟಿವ್ ಬಂದಿದೆ.  ಇದರಲ್ಲಿ ಹೆಚ್ಚಾಗಿ ಚಾಲಕರೇ ಇದ್ದಾರೆ ಎಂದರು.

ಕೃಷಿ ಹೊಂಡಗಳಲ್ಲಿ ಬಿದ್ದು ಸಾವುಗಳು ಸಂಭವಿಸುತ್ತಿದ್ದು, ಹೊಂಡಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.  ಕೃಷಿ ಹೊಂಡಗಳಿಗೆ ಹಗ್ಗಗಳನ್ನು ಕಟ್ಟಿ ಬಿಡುವುದರಿಂದ ಆಕಸ್ಮಿಕವಾಗಿ ಬಿದ್ದವರು ಹಗ್ಗದ ನೆರವಿನಿಂದ ಮೇಲೆ ಬರಲು ಸಹಾಯವಾಗುತ್ತದೆ.  ಸರ್ಕಾರಿ ಸವಲತ್ತುಗಳ ವಿತರಣೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಿಷ್ಠಾಚಾರವನ್ನು ಪಾಲನೆ ಮಾಡಬೇಕು ಇಲ್ಲದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.

ಕೆಲವು ಪಂಚಾಯಿತಿಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ವಾಟರ್‍ಮೆನ್ ಹುದ್ದೆಗಳು ಇದ್ದು, ಇವರಲ್ಲಿ ಯಾರನ್ನು ಕೆಲಸದಿಂದ ತೆಗೆದಿಲ್ಲ.   ಇವರಿಗೆ ವರ್ಗ-1 ರಲ್ಲಿ ಸಂಬಳ ನೀಡಲಾಗುತ್ತಿದ್ದು, ಕೆಲವು ಪಂಚಾಯಿತಿಗಳಲ್ಲಿ ಕಂದಾಯ ವಸೂಲಾತಿ ಕಡಿಮೆ ಇರುವುದರಿಂದ ವೇತನ ವಿಳಂಬವಾಗಿದೆ.  ಕನಿಷ್ಠ ವೇತನ 10,800/- ರೂ.ಗಳನ್ನು ನೀಡಲಾಗುತ್ತಿದೆ.   ಜಿಲ್ಲೆಯ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಜಾನುವಾರು ಮೇವು ಕೊರತೆ ಆಗದಂತೆ ಎಸ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಸಿ ಉಚಿತವಾಗಿ ವಿತರಿಸಲಾಗಿದೆ.  ಶಿಷ್ಠಾಚಾರ ಪಾಲನೆ ಮಾಡಿ ಜನಪ್ರತಿನಿಧಿಗಳಿಗೆ ಆಹ್ವಾನ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ,  ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ತೂಪಲ್ಲಿ ಆರ್.ಚೌಡರೆಡ್ಡಿ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next