ಭಟ್ಕಳದಲ್ಲಿ ತೌಕ್ತೆ ಚಂಡಮಾರುತಕ್ಕೆ ಬೆದರಿ ದಡ ಸೇರಿದ ಮೀನುಗಾರಿಕಾ ಬೋಟುಗಳು; ಕಡಲ ತಡಿಯಲ್ಲಿ ಕಟ್ಟೆಚ್ಚರ

Source: S O News service | By I.G. Bhatkali | Published on 15th May 2021, 12:42 AM | Coastal News |

ಭಟ್ಕಳ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಸೃಷ್ಟಿಯಾಗಿರುವ ತೌಕ್ತೆ ಚಂಡಮಾರುತ ಪರಿಣಾಮ ತಾಲೂಕಿನ ಕಡಲ ತಡಿಯನ್ನು ತಲ್ಲಣಗೊಳಿಸಿದೆ.
  ಸಮುದ್ರದಲ್ಲಿ ನಿಧಾನಕ್ಕೆ ರಕ್ಕಸದಲೆಗಳು ಸೃಷ್ಟಿಯಾಗುತ್ತಿದ್ದು, ದಡದತ್ತ ನುಗ್ಗುತ್ತಿರುವುದು ಕಂಡು ಬಂದಿದೆ. ಅಲೆಗಳು ಭೋರ್ಗರೆಯುತ್ತ ಕಲ್ಲಿಗೆ ಅಪ್ಪಳಿಸಿ ನಭಕ್ಕೆ ನೆಗೆಯುತ್ತಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೀನುಗಾರಿಕೆ ಗಳಿಕೆ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈಗ ಉಳಿದ ಅವಧಿಯಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸಲು ಸಾಧ್ಯ ಇಲ್ಲ. 
   - ರವಿ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು

ಪಾತಿದೋಣಿ, ಯಾಂತ್ರಿಕೃತ ದೋಣಿ, ಬೋಟುಗಳು ತಮ್ಮ ಕಸುಬುಗಳಿಗೆ ವಿಶ್ರಾಂತಿ ಹೇಳಿ ದಡಕ್ಕೆ ಲಂಗರು ಹಾಕಿ ನಿಂತಿವೆ. ಈಗಾಗಲೇ ಚಂಡಮಾರುತ ಮಾಹಾರಾಷ್ಟ್ರ ದಾಟಿಕೊಂಡು ಗುಜರಾತ್ ಕಡೆ ವಾಲಿದೆ ಎಂಬ ಮಾಹಿತಿ ಇದ್ದು, ಇನ್ನೂ ಒಂದೆರಡು ದಿನ ಕರ್ನಾಟಕ ಕರಾವಳಿಯಲ್ಲಿ ಅದರ ಪರಿಣಾಮಗಳ ಸಾಧ್ಯತೆಯನ್ನು ತಳ್ಳಿ ಹಾಕುವಂತೆ ಇಲ್ಲ. ಭಟ್ಕಳ ತೀರದುದ್ಧಕ್ಕೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಭಟ್ಕಳ ಕರಾವಳಿ ಕಾವಲು ಪಡೆಯ ಎಸೈ ಅಣ್ಣಪ್ಪ ತಿಳಿಸಿದ್ದಾರೆ. 

ಮೀನುಗಾರರ ಸಂಕಷ್ಟ ತಪ್ಪಿಲ್ಲ:
ಭಟ್ಕಳದಲ್ಲಿ ಏನಿಲ್ಲವೆಂದರೂ 3820 ಕುಟುಂಬಗಳು ಮೀನುಗಾರಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿವೆ. 227 ಯಾಂತ್ರೀಕೃತ ಬೋಟುಗಳು, 621 ಯಾಂತ್ರಿಕೃತ ದೋಣಿಗಳು, 1562 ಪಾತಿ ದೋಣಿಗಳು ಇಲ್ಲಿ ಮೀನುಗಾರಿಕಾ ಕೆಲಸದಲ್ಲಿ ನಿರತವಾಗಿವೆ. ಸರಿಸುಮಾರು 24700 ಜನರು ಮೀನುಗಾರಿಕೆಯಲ್ಲಿಯೇ ಅನ್ನ ಕಾಣುತ್ತಿದ್ದಾರೆ. ಆದರೆ ಕಳೆದೆರಡು ವರ್ಷದಿಂದ ಪೃಕೃತಿ ವಿಕೋಪಗಳು ಮೀನುಗಾರರನ್ನು ಹೈರಾಣಾಗುವಂತೆ ಮಾಡಿದೆ. 2019ರಲ್ಲಿ ಒಂದರ ಹಿಂದೊಂದರಂತೆ ಬೆನ್ನಟ್ಟಿ ಬಂದ ಚಂಡಮಾರುತಗಳು ಮೀನುಗಾರರಿಗೆ ನೀರಿಗೆ ಇಳಿಯಲು ಅವಕಾಶವನ್ನೇ ನೀಡಲಿಲ್ಲ. 2020ರಲ್ಲಿ ಕೊನೆಯ 3 ತಿಂಗಳ ಮೀನುಗಾರಿಕೆ ದುಡಿಮೆಯನ್ನು ಕೊರೊನಾ ಮಹಾಮಾರಿ ನುಂಗಿ ಹಾಕಿತು. ಈ ವರ್ಷವೂ ಮೀನುಗಾರಿಕೆಯ ಗಳಿಕೆ ಅಷ್ಟಕ್ಕಷ್ಟೇ ಎಂಬಂತಾಗಿದೆ. ಒಂದೆಡೆ ಮತ್ಸ್ಯಕ್ಷಾಮ, ಇನ್ನೊಂದೆಡೆ ಕೊರೊನಾ, ಇದೀಗ ಮತ್ತೆ ಚಂಡಮಾರುತ ಒಂದರ ಹಿಂದೆ ಒಂದರಂತೆ ನುಗ್ಗಿ ಬರುತ್ತಿದೆ. ಹೆಚ್ಚಿನ ಬೋಟುಗಳು ಅವಧಿ ಮುಗಿಯುವ ಮುನ್ನವೇ ವರ್ಷದ ದುಡಿಮೆಯನ್ನು ಮುಗಿಸಿ ದಡಕ್ಕೆ ಬಂದ ಕುಳಿತಿವೆ. 
  ಕಳೆದ 15 ದಿನಗಳ ಅವಧಿಯಲ್ಲಿ ಮೀನು ಮಾರುಕಟ್ಟೆ ಮೊದಲಿನ ಚೈತನ್ಯವನ್ನು ಕಳೆದುಕೊಂಡಿದೆ. ಬೆಳಿಗ್ಗೆಯ ವ್ಯಾಪಾರ ಹೊಟ್ಟೆ ಹಿಟ್ಟಿಗೆ ಸಾಕಾಗುತ್ತಿಲ್ಲ. ಈ ವರ್ಷದ ಮೀನುಗಾರಿಕೆ ಮುಕ್ತಾಯ ಕಾಣಲು ಇನ್ನೂ 15 ದಿನಗಳು ಬಾಕಿ ಇವೆ. ಆದರೆ ಈ ವರ್ಷವೂ ಚಂಡ ಮಾರುತ 3-4 ದಿನಗಳ ಕಾಲ ರಜೆ ನೀಡಿದೆ, ಉಳಿದ ದಿನಗಳಲ್ಲಿಯೂ ಕೊರೊನಾ ಕರಿ ಛಾಯೆ ತಪ್ಪುವ ಲಕ್ಷಣ ಕಾಣಿಸುತ್ತಿಲ್ಲ. ನಂತರ ಬರುವುದು ಮಳೆಗಾಲ. ಒಂದೆಡೆ ಹೆಚ್ಚಿರುವ ಸಾಲ, ಇನ್ನೊಂದೆಡೆ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಒದ್ದಾಡುತ್ತಿರುವ ಮೀನುಗಾರರು ಭವಿಷ್ಯವನ್ನು ನೆನೆದು ಕಂಗಾಲಾಗಿದ್ದಾರೆ. ದೇಶದ ಆರ್ಥಿಕತೆಗೆ ಬಲ ತಂದು ಕೊಡುತ್ತ ಬಂದ ಕರ್ನಾಟಕ ಕರಾವಳಿಯ ಮೀನುಗಾರಿಕೆ ವರ್ಷದಿಂದ ವರ್ಷಕ್ಕೆ ದಯನೀಯ ಸ್ಥಿತಿಯತ್ತ ವಾಲುತ್ತಿರುವುದು ಸಾಮಾನ್ಯ ವಿಷಯವಲ್ಲ. ಸರಕಾರ ಈಗಲಾದರೂ ನಮ್ಮ ನೆರವಿಗೆ ಬರಲಿ ಎಂಬ ಆಗ್ರಹ ಮೀನುಗಾರರದ್ದಾಗಿದೆ. 
           

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...