ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ !

Source: S.O. News Service | By V. D. Bhatkal | Published on 10th December 2020, 9:18 PM | Coastal News | Special Report |

ಭಟ್ಕಳ: ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ಉರುಳಿ ಹೋಗಿವೆ. ಬ್ರಿಟೀಷರ ಸರ್ವೇ ಕಾರ್ಯಕ್ಕೆ ಹೆಗಲುಕೊಟ್ಟು ಕಾಡು ಪ್ರದೇಶವನ್ನು ಬಳುವಳಿಯಾಗಿ ಪಡೆದು, ಕಾಡಿನಲ್ಲಿಯೇ ಬೇಸಾಯ ಮಾಡಿ ಕುಮ್ರಿ ಮರಾಠಿಗಳಾದ ಮರಾಠಿಗರು ದುಡಿದುಡಿದು ದಣಿವಾಗಿದ್ದಾರೆ. ಕಾಡಿನಿಂದ ನಾಡಿಗೆ ಅಳುಕುತ್ತಲೇ ಹೆಜ್ಜೆ ಹಾಕುತ್ತಿರುವ ಮರಾಠಿಗಳ ಪಾದ ಸವೆದು ಹೋಗಿದೆ. ಇಂತಹ ಮರಾಠಿಗಳ ಪಾಲಿಗೆ ಸಾಮಾಜಿಕ, ರಾಜಕೀಯ ಆಸರೆ ಎಂದರೆ ಊರ ನಡುವಿನ ಪಂಚಾಯತಗಳು. ಆದರೆ ಅಲ್ಲಿ ಕುಮ್ರಿ ಮರಾಠಿಗರು ಅನುಭವಿಸುತ್ತಿರುವ ಸಂಕಟ ಬೇರೆ ತೆರನಾದದ್ದು.

 ಉತ್ತರಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 21 ಸಾವಿರ ಕುಮ್ರಿ ಮರಾಠಿಗಳಿದ್ದಾರೆ. ಬೇಸಾಯವೇ ಈಗಲೂ ಬಹುತೇಕ ಮರಾಠಿಗರ ಬದುಕೂ ಆಗಿದೆ. ಕಾಡಿನ ಹೊರಗಿನ ಜನರೊಂದಿಗೆ ತಲೆ ಎತ್ತಿ ನಿಂತು ಮಾತನಾಡಲೂ ಹೆದರುತ್ತಿದ್ದ ಮರಾಠಿಗರು ಇತ್ತೀಚಿನ ದಿನಗಳಲ್ಲಿ ಶಿಕ್ಷಣವನ್ನು ಪಡೆದುಕೊಂಡು ಜನರೊಂದಿಗೆ ಬರೆಯುವ ಪ್ರಯತ್ನ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಪದವಿ ಶಿಕ್ಷಣ ಪಡೆಯುವ ಮರಾಠಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮಣ್ಣಿನ ಮನೆಗಳು, ಹುಲ್ಲಿನ ಮೇಲ್ಛಾವಣಿಗಳು ಸಮಾಧಾನಕ್ಕಾದರೂ ಬಣ್ಣ ಬದಲಾಯಿಸಿಕೊಳ್ಳುತ್ತಲೇ ಇವೆ. ಮರಾಠಿ ಕೇರಿಯ ನಡುವೆ ರಸ್ತೆ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಊರಿನ ಸಂಪರ್ಕವೇ ಕಳೆದುಕೊಳ್ಳುತ್ತಿದ್ದ ಮರಾಠಿಗರಿಗಾಗಿ ಅಲ್ಲಲ್ಲಿ ಸೇತುವೆಯನ್ನೂ ನಿರ್ಮಿಸಿ ಕೊಡಲಾಗಿದೆ. ಬಹಳ ಕಡೆ ಕುಡಿಯುವ ನೀರಿನ ಕೊರತೆಯೂ ನೀಗಿದೆ. ಈ ಬದಲಾವಣೆಯ ಹಿಂದೆ ಮರಾಠಿಗಳ ಪಂಚಾಯತ ಪ್ರವೇಶವನ್ನು ಪರಿಗಣಿಸಲೇ ಬೇಕಾಗಿದೆ. 

ಮರಾಠಿಗರಿಗೆ ಚುನಾವಣಾ ಮೀಸಲಾತಿ ಇಲ್ಲ:

 ವಾಸ್ತವದಲ್ಲಿ ಕುಮ್ರಿ ಮರಾಠಿಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಹಿಂದುಳಿದ ವರ್ಗದ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸ್ಪರ್ಧೆಗೆ ಸಂಬಂಧಿಸಿದಂತೆ ಕುಮ್ರಿ ಮರಾಠಿಗರಿಗೆ ಸಾಮಾನ್ಯ ವರ್ಗದಲ್ಲಿ ಅವಕಾಶ ನೀಡಲಾಗುತ್ತಿದೆ. ಈ ತಾರತಮ್ಯ ಹೋಗಲಾಡಿಸಲು ಸರಕಾರ, ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕು
 - ರವೀಂದ್ರನಾಥ ನಾಯ್ಕ, ನ್ಯಾಯವಾದಿಗಳು ಶಿರಸಿ

ಪ್ರತಿವರ್ಷ ಆಯಾ ಪ್ರದೇಶದ ಜನಸಂಖ್ಯೆಗನುಗುಣವಾಗಿ ಕುಮ್ರಿ ಮರಾಠಿಗರಿಗೂ ಪಂಚಾಯತ ಪ್ರತಿನಿಧಿಯಾಗುವ ಯೋಗ ಒಲಿದು ಬರುತ್ತಿದೆ. ಒಟ್ಟಾಗಿ ದುಡಿದು ತಿನ್ನುತ್ತಿದ್ದ ಮರಾಠಿ ಕೇರಿಯಲ್ಲಿ ಈಗ ಬುದವಂತ (ಹಿರಿಯ) ಮಾತ್ರ ಅಲ್ಲ, ರಾಜಕೀಯ ನಾಯಕರೂ ಹುಟ್ಟಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸಲು ಹೆಚ್ಚು ಮರಾಠಿಗರು ಉತ್ಸುಕರಾಗುತ್ತಿದ್ದಾರೆ. ಆದರೆ ಮೀಸಲಾತಿ ಸಮಸ್ಯೆ ಮರಾಠಿಗರನ್ನು ಬಾಧಿಸುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಕುಮ್ರಿ ಮರಾಠಿಗರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ 2 ದಶಕಗಳೇ ಕಳೆದು ಹೋಗಿದ್ದರೂ, ( ಸರಕಾರ ಆರ್‍ಡಿಪಿ5 ಜಿ.ಪ.ಸ.95 ಬೆಂಗಳೂರು ಗೆಜೆಟ್ ನೊಟೀಫಿಕೇಶನ್ ದಿನಾಂಕ 13-1-1995, 2001ರಲ್ಲಿ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ) ಚುನಾವಣೆಯಲ್ಲಿ ಮಾತ್ರ ಸಾಮಾನ್ಯ ಮೀಸಲಾತಿಯಡಿಯಲ್ಲಿಯೇ ಸ್ಪರ್ಧಿಸಬೇಕಾಗಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಚುನಾವಣಾ ಆಯೋಗ ಹೊರಡಿಸಿರುವ 1995ರ ನೊಟಿಫಿಕೇಶನ್‍ನಂತೆ ಚುನಾವಣೆ ನಡೆಸುತ್ತಿರುವುದಾಗಿ ಹೇಳುತ್ತಿದ್ದಾರೆ. ಪರಿಣಾಮವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಕುಮ್ರಿ ಮರಾಠಿಗಳು ಮೇಲ್ಜಾತಿಯ ಮತ್ತು ಬಹುಸಂಖ್ಯಾತ ಜನರೊಂದಿಗೆ ಚುನಾವಣೆಯಲ್ಲಿ ಸೆಣೆಸಬೇಕಾಗಿದೆ. ಸರಕಾರದ ಮುಂದೆ ಕೂಗಿ ಕೊಳ್ಳಲು ಕುಮ್ರಿ ಮರಾಠಿಗಳ ಧ್ವನಿ ಸಾಕಾಗುತ್ತಿಲ್ಲ. ಹೋರಾಟವಂತೂ ದೂರದ ಮಾತು. ಇವೆಲ್ಲದರ ಒಟ್ಟೂ ಪರಿಣಾಮ ಎಂಬಂತೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹಿಂಡಿನ ಹಿಂದೆ ನಿಂತು ಕುಮ್ರಿ ಮರಾಠಿಗಳು ತಮಗೆ ಯಾರಾದರೂ ಕರೆಯುವರೇ ಎಂದು ಅತ್ತಿತ್ತ ಕತ್ತನ್ನು ಹೊರಳಿಸಿ ಮೌನಕ್ಕೆ ಜಾರುತ್ತಿದ್ದಾರೆ.

Read These Next

ಕಾರವಾರ: ಭ್ರಷ್ಟಾಚಾರ ಆರೋಪ-ಸಂಚಾರಿ ನಿಯಮ ಉಲ್ಲಂಘನೆ ಆರ್‌ಟಿಓ, ಟ್ರಾಫಿಕ್ ಅಧಿಕಾರಿಗಳಿಗೆ ಬಾಡಿ ಕ್ಯಾಮರಾ

ಪೊಲೀಸ್ ಸಂಚಾರಿ ವಿಭಾಗ ಹಾಗೂ ಆರ್.ಟಿ.ಓ. ಅಧಿಕಾರಿ ಗಳ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾ ರದ ಆರೋಪ ಹಾಗೂ ನಾಗರಿಕರು ಸಂಚಾರಿ ...

ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು

ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ...

ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ !

ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ...